ಮೀಸಲಾತಿ ಪಟ್ಟಿಯ 2(ಎ) ಕ್ಯಾಟಗರಿಯ ಹಿಂದುಳಿದ ಜಾತಿಗಳ ತಳಮಳ-ದಿ‌ನೇಶ್ ಅಮೀನಮಟ್ಟು

ಮೀಸಲಾತಿ ಪಟ್ಟಿಯ 2(ಎ) ಕ್ಯಾಟಗರಿಯಲ್ಲಿರುವ ಹಿಂದುಳಿದ ಜಾತಿಗಳು ತಳಮಳಕ್ಕೀಡಾಗಿವೆ. ಒಂದೆಡೆ ಈ ಕ್ಯಾಟಗರಿಯಲ್ಲಿ ನಾಯಕನ ಸ್ಥಾನದಲ್ಲಿದ್ದ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಬೇಕೆಂದು ಹೊರಗಡಿಯಿಟ್ಟಿದ್ದಾರೆ. ಇನ್ನೊಂದೆಡೆ ಲಿಂಗಾಯತ ಪಂಚಮಸಾಲಿಗಳು ತಮ್ಮನ್ನು 3(ಬಿ)ಯಿಂದ 2(ಎ)ಗೆ ಸೇರಿಸಬೇಕೆಂದು ಬಾಗಿಲು ಬಡಿಯುತ್ತಿದ್ದಾರೆ.

ಈ ಒಳ-ಹೊರ ಜಗಳದಲ್ಲಿ 2(ಎ) ನಲ್ಲಿರುವ ಇತರ 101 ಹಿಂದುಳಿದ ಜಾತಿಗಳ ಜನ ದಿಕ್ಕೆಟ್ಟು ಹೋಗಿದ್ದಾರೆ. ಸುಮಾರು ಶೇಕಡಾ ಆರರಷ್ಟಿರುವ ಕುರುಬರು 2(ಎ)ನಲ್ಲಿರುವ ದೊಡ್ಡ ಜಾತಿ. ನಂತರದ ಸ್ಥಾನ ಶೇಕಡಾ ಎರಡುವರೆಯಷ್ಟಿರುವ ಈಡಿಗರು. ರಾಜ್ಯದಲ್ಲಿ ಹಿಂದುಳಿದ ಜಾತಿಗಳು ಒಂದು ಸಂಘಟಿತ ಶಕ್ತಿಯ ರೂಪ ಪಡೆದದ್ದು ಸಿದ್ದರಾಮಯ್ಯನವರು ಅಹಿಂದ ಸಂಘಟನೆಗೆ ಕೈ ಹಾಕಿದ ನಂತರ.

ಸಮಾಜವಾದಿ ಚಳುವಳಿಯ ಹಿನ್ನೆಲೆಯಿಂದ ಬಂದಿದ್ದ ಬಂಗಾರಪ್ಪನವರು ಹಿಂದುಳಿದ ಜಾತಿಗಳನ್ನೇ ಗುರಿಯಾಗಿಟ್ಟುಕೊಂಡು ಸಂಘಟನೆ ಮಾಡಿದವರಲ್ಲ. ಅವರು ಮುಖ್ಯಮಂತ್ರಿಯಾಗಲು ಹಿಂದುಳಿದ ಜಾತಿಗಳ ಸಂಘಟಿತ ಪ್ರಯತ್ನ ಕೂಡಾ ಕಾರಣ ಅಲ್ಲ. ಅದರ ನಂತರ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದು ಕೂಡಾ ಕಾಂಗ್ರೆಸ್ ಹೈಕಮಾಂಡ್ ಕೃಪಕಟಾಕ್ಷದಿಂದ.

ಆದರೆ ಸಿದ್ದರಾಮಯ್ಯನವರ ರಾಜಕೀಯದ ಒಟ್ಟಾರೆ ಶಕ್ತಿ ಅಹಿಂದವಾದರೂ ನಿರ್ದಿಷ್ಠವಾಗಿ ಅದು ಹಿಂದುಳಿದ ಜಾತಿಗಳ ಬೆಂಬಲ. ಅವರು ಮುಖ್ಯಮಂತ್ರಿಯಾಗಲು ಹಿಂದುಳಿದ ಜಾತಿಗಳ ಬೇಷರತ್ ಬೆಂಬಲದ ಪಾತ್ರ ಕೂಡಾ ಇದೆ. ಈಡಿಗರನ್ನು ಹೊರತುಪಡಿಸಿ 2(ಎ)ನಲ್ಲಿರುವ ಹೆಚ್ಚಿನ ಹಿಂದುಳಿದ ಜಾತಿಗಳ ಸಂಖ್ಯೆ ಶೇಕಡಾ ಎರಡನ್ನೂ ಮೀರಿಲ್ಲ. ಈ ಜಾತಿಗಳಿಗೆಲ್ಲ ಸಿದ್ದರಾಮಯ್ಯನವರೇ ನಾಯಕರು. ಏನೇ ಕಷ್ಟಗಳು ಎದುರಾದರೂ ಸಿದ್ದರಾಮಯ್ಯನವರು ನಮ್ಮ ರಕ್ಷಣೆಗೆ ಇದ್ದಾರೆ ಎಂದು ಅವರು ಈಗಲೂ ನಂಬಿದ್ದಾರೆ.

ಕುರುಬರು ತಮ್ಮನ್ನು ಎಸ್ ಟಿಗೆ ಸೇರಿಸಬೇಕೆಂದು ನಡೆಸುತ್ತಿರುವ ಹೋರಾಟದಿಂದ ಕುರುಬರನ್ನು ಹೊರತುಪಡಿಸಿ 2(ಎ)ನಲ್ಲಿರುವ ಇತರ 101 ಜಾತಿಗಳನ್ನು ಅನಾಥ ಪ್ರಜ್ಞೆ ಕಾಡುತ್ತಿದೆ. ಒಂದೆಡೆ ಕುರುಬರನ್ನು ಎಸ್ ಟಿಗೆ ಸೇರಿಸಿದರೆ 2(ಎ)ನಲ್ಲಿರುವ ಶೇಕಡಾ 15ರ ಮೀಸಲಾತಿಯನ್ನು ಅಲ್ಲಿಗೆ ಕೊಂಡೊಯ್ಯಬಹುದು ಎಂಬ ಆತಂಕ ಇನ್ನೊಂದೆಡೆ ಪ್ರಬಲ ಜಾತಿಯಾದ ಪಂಚಮಸಾಲಿಗಳು ಒಳಗೆ ಬಂದರೆ ಏನು ಗತಿ ಎಂಬ ಅಸುರಕ್ಷತೆ.

ಇಂತಹ ಪರಿಸ್ಥಿತಿಯನ್ನು 2(ಎ)ನಲ್ಲಿರುವ ಜಾತಿಗಳು ಹಿಂದೆಂದೂ ಎದುರಿಸಿರಲಿಲ್ಲ, ಕುರುಬರು ಹೊರ ಹೋದರೆ ತಮಗಾಗುವ ಅನ್ಯಾಯದ ವಿರುದ್ದ ದನಿ ಎತ್ತುವ ಶಕ್ತಿಯೂ ಈ ಸಣ್ಣಪುಟ್ಟ ಜಾತಿಗಳಿಗಿಲ್ಲ. ಇದರಿಂದಾಗಿ ಕುರುಬರೇ ನಮ್ಮ ನಾಯಕರು ಎಂದು ನಂಬಿದ್ದ ಮತ್ತು ಹಾಗೆಯೇ ನಡೆದುಕೊಂಡಿದ್ದ ಇತರ ಹಿಂದುಳಿದ ಜಾತಿಗಳು ಅನಾಥವಾಗಿವೆ.

‘ನಿಮ್ಮನ್ನೇ ಈ ವರೆಗೆ ನಂಬಿದ್ದ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕೆಂದು ಬಯಸಿ ಬೆಂಬಲಿಸಿದ್ದ ನಮ್ಮನ್ನು ಈ ರೀತಿ ಕೈಬಿಟ್ಟು ಹೋಗುವುದು ಸರಿಯೇ ?’ ಎಂದು ಈ 101 ಹಿಂದುಳಿದ ಜಾತಿಗಳು ಪ್ರಶ್ನಿಸಿದರೆ, ಎಸ್ ಟಿಗೆ ಸೇರಿಸಲು ನಡೆದ ಪಾದಯಾತ್ರೆಯಲ್ಲಿ ಸ್ವಾಮಿಗಳು ಮತ್ತು ರಾಜಕಾರಣಿಗಳನ್ನು ಹಿಂಬಾಲಿಸಿ ಹೊರಟಿರುವ ಕುರುಬರಲ್ಲಿ ಉತ್ತರ ಇದೆಯೇ?

ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟವಿದೆ, ಅದಕ್ಕೂ ಕುರುಬ ಸಮುದಾಯಕ್ಕೆ ಸೇರಿರುವ ಬಿ.ಕೆ.ರವಿ ಅವರೇ ಇತ್ತೀಚಿನ ವರೆಗೆ ಅಧ್ಯಕ್ಷರಾಗಿದ್ದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಜಾತಿಗಳ ಏನೇ ಬೇಡಿಕೆಗಳಿದ್ದರೂ ಎಚ್.ಎಂ.ರೇವಣ್ಣ ಮತ್ತು ಬಿ.ಕೆ.ರವಿ ಅವರದ್ದೇ ನಾಯಕತ್ವ. ಇವರಿಬ್ಬರು ಕೂಡಾ 2(ಎ)ನಲ್ಲಿರುವ ಇತರ ಹಿಂದುಳಿದ ಜಾತಿಗಳ ಈಗಿನ ಸಂಕಟಕ್ಕೆ ತಲೆಕೆಡಿಸಿಕೊಂಡ ಹಾಗೆ ಕಾಣುತ್ತಿಲ್ಲ.
~ Dinesh Amin (ದಿನೇಶ್ ಅಮೀನ್ ಮಟ್ಟು )

Please follow and like us: