-ಸಂಗಮೇಶ ಮೆಣಸಿನಕಾಯಿ
‘ನಾನೊಬ್ಬ ಸಾಬೂನು-ಶಾಂಪೂ ತ್ಯಜಿಸಿದರೆ ಏನೂ ಆಗಲ್ಲ’ ಎಂಬ ಅವಜ್ಞೆ ಬೇಡ. ‘ನನ್ನಿಂದಲೇ ಶುರುವಾಗಲಿ’ ಎಂಬ ಧನಾತ್ಮಕ ಚಿಂತನೆ ಇರಲಿ. ನಾನೀಗಾಗಲೇ ಐದಾರು ವರ್ಷದಿಂದ, ಗುಂಪಿನಲ್ಲೇ ಏಕಾಂಗಿಯಾಗಿ ಪಾಲಿಸಿ, ಈ ಪೋಸ್ಟ್ ಟೈಪ್ ಮಾಡುತ್ತಿರುವೆ.
ಪ್ರತಿ ವರ್ಷ ಸಂಕ್ರಾಂತಿಯಂದು ಸಾವಿರಾರು, ಲಕ್ಷಾಂತರ ಜನ ಹಂಪಿ, ಧರ್ಮಸ್ಥಳ, ಕೂಡಲ ಸಂಗಮ, ನಂಜನಗೂಡು, ಕುಕ್ಕೆ, ತಲಕಾಡಿ ಮುಂತಾದೆಡೆ ನದಿಸ್ನಾನಕ್ಕೆ ತೆರಳುತ್ತೇವೆ; ‘ಪುಣ್ಯಸ್ನಾನ’ ಮಾಡುತ್ತೇವೆ. ಅದರೆ ಪುಣ್ಯಸ್ನಾನದ ಹೆಸರಿನಲ್ಲಿ ಅಸಂಖ್ಯ ಜಲಚರಗಳಿಗೆ ಆ ಮೂಲಕ ಪರಿಸರಕ್ಕೆ ಹಾನಿ ಮಾಡಿಬಂದರೆ ನಮಗೆ ಸಿಗೋದು ಪ್ರವಾಹ, ಬರಗಾಲ ಮತ್ತು ಕೊರೋನಾದಂಥ ‘ಪುಣ್ಯಗಳೇ!’
ನಾವು ಅಲ್ಲಿ ಸ್ನಾನ ಮಾಡುವಾಗ ಟೂಥ್ ಪೆಸ್ಟ್, ಸಾಬೂನು, ಶಾಂಪೂ ಇತ್ಯಾದಿಗಳನ್ನು ಬಳಸಿ ಸ್ನಾನ ಮಾಡಿದಾಗ ಅವುಗಳ ಅವುಗಳ ರಾಸಾಯನಿಕಗಳು ಮೀನು, ಮೊಸಳೆಯಂಥ ಜಲಚರ ಜೀವಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಸಾಕಷ್ಟು ಸೂಕ್ಷ್ಮ ಜೀವಿಗಳು ಸತ್ತೇ ಹೋಗುತ್ತವೆ. ಇಂಥ ರಾಸಾಯನಿಕ ಸೇರಿರುವ ನೀರನ್ನೇ ನಾವು ಮತ್ತೆ ಕುಡಿಯಲು, ಪೂಜೆ ಮಾಡಲು ಮತ್ತಿತರ ಕೆಲಸ ಕಾರ್ಯಗಳಿಗೆ ಬಳಸುತ್ತೇವೆ. ಇದೇ ರಾಸಾಯನಿಕ ಸೇರಿರುವ ಮೀನು ಹಿಡಿದು ತಿನ್ನುತ್ತೇವೆ! ಶಾಂಪೂದ ಕವರ್ಗಳನ್ನು ಅಲ್ಲಿಯೇ ಬಿಸಾಡುವುದರಿಂದ ಅಂಥ ತ್ಯಾಜ್ಯಗಳು ನದಿಗಳ ಬುಡವನ್ನೇ ಮಲೀನಗೊಳಿಸುತ್ತವೆ.
‘ಸಾಬೂನು ಹಚ್ಚಿಕೊಳ್ಳದಿದ್ದರೆ ಸ್ನಾನ ಮಾಡಿದಂತೆ ಆಗುವುದೇ ಇಲ್ಲ’ ಎಂಬುದು ಉಡಾಫೆಯ ಮನಃಸ್ಥಿತಿಯೇ ಸರಿ. ಒಂದು ದಿನ ಸಾಬೂನು-ಶಾಂಪೂ ಇಲ್ಲದೇ ಸ್ನಾನ ಮಾಡಿದರೆ ಯಾವುದೇ ಹಾನಿ ಇಲ್ಲ. ಅದರ ಬದಲು ಎಳ್ಳು-ಅರಿಷಿಣ, ಕಡಲೆ ಹಿಟ್ಟು, ಬೇವಿನ ಎಲೆಯನ್ನು ಮೈಗೆ ಉಜ್ಜಿಕೊಂಡು ಸ್ನಾನ ಮಾಡಿದರೆ ತಮ್ಮ ತ್ವಚೆಗೆ ಸಾಕಷ್ಟು ಲಾಭಗಳಿವೆ. ತಲೆಗೆ ಅಂಟುವಾಳಕಾಯಿ ನೆನೆಸಿ ಹಚ್ಚಿಕೊಂಡರೆ ತುಂಬಾ ಒಳ್ಳೆಯದು. ಇಂಥವುಗಳನ್ನು ಬಳಸಿ ಸ್ನಾನ ಮಾಡಿದರೆ, ನೀರಿನಲ್ಲಿರುವ ಜೀವಿಗಳೂ ಹಬ್ಬ ಆಚರಿಸುತ್ತವೆ.
ಹಿಂದಿನ ಕಾಲದಲ್ಲಿ ‘ದೇವಸ್ಥಾನದ ಬಳಿ ಇರುವ ನದಿ, ಕೆರೆಗಳಲ್ಲಿ ಸ್ನಾನ ಮಾಡಿದರೆ ಅನಾರೋಗ್ಯ ದೂರಾಗುತ್ತದೆ’ ಅಂತ ನಮ್ಮ ಹಿರಿಯರು ಹೇಳುತ್ತಿದ್ದರು. ಅಲ್ಲಿ ಹೂವು, ಬಿಲ್ವಪತ್ರೆ, ಅರಿಷಿಣ, ಗಂಧದಂಥ ವಸ್ತುಗಳಲ್ಲಿರುವ ಔಷಧಿ ಗುಣಗಳಿಂದ ಅದು ತಕ್ಕಮಟ್ಟಿಗೆ ನಿಜವಿತ್ತು.
ಇಂದು ಅಲ್ಲಿ ಸ್ನಾನ ಮಾಡಿದರೆ ಇರುವ ಆರೋಗ್ಯವನ್ನೂ ಕೆಡಿಸಿಕೊಳ್ಳುವ ಸ್ಥಿತಿಯನ್ನು ನಾವೇ ನಿರ್ಮಿಸಿಕೊಂಡಿದ್ದೇವೆ.
ಈ ದಿಸೆಯಲ್ಲಿ ತಮ್ಮ ತಮ್ಮ ಭಕ್ತರಲ್ಲಿ ಜಾಗೃತಿ ಮೂಡಿಸಲು ಸ್ವಾಮಿಗಳು, ಧಾರ್ಮಿಕ ಮುಖಂಡರು, ಮಠ-ಮಂದಿರಗಳ ಆಡಳಿತ ಮಂಡಳಿಗಳು ಮುಂದಾಗಬೇಕಿದೆ. ಸಂಕ್ರಾಂತಿ ದಿನ ಅಷ್ಟೇ ಅಲ್ಲ, ಶ್ರಾವಣ ಮಾಸದಂಥ ಇನ್ನಿತರ ಸಂದರ್ಭಗಳಲ್ಲೂ ಪರಿಸರ ಸ್ನೇಹಿ ಸ್ನಾನ, ಪೂಜಾವಿಧಿ, ಆಚರಣೆಗಳಲ್ಲೂ ರಾಸಾಯನಿಕ ಮುಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಿದೆ.

ಈ ಸಂಕ್ರಾಂತಿಯಂದು ನದಿಸ್ನಾನಕ್ಕೆ ತೆರಳುವ ಎಲ್ಲರಿಗೂ ಈ ಪೋಸ್ಟ್ ತಲುಪಲಿ. ಸ್ವಾಮಿಗಳು, ಧರ್ಮಾಧಿಕಾರಿಗಳು, ಮಠ-ಮಂದಿರಗಳ ಆಡಳಿತ ಮಂಡಳಿಗಳ ಗಮನಕ್ಕೂ ಈ ವಿಷಯ ಬರಲಿ…