ಅಮಿತಾಬ್ ಬಚ್ಚನ್, ಅನಂತ್ ನಾಗ್ ರ ವಿಕೃತಿಗಳನ್ನು ನೋಡಿದರೆ ಅಸಹ್ಯವೆನಿಸುತ್ತೆ

ದಿನೇಶಕುಮಾರ್

ಪೇಜಾವರ ಸ್ವಾಮೀಜಿಯಂಥವರು ರಾಮಮಂದಿರ ನಿರ್ಮಾಣ ಆಗುತ್ತೆ ಅಂತ ಸಂತೋಷ ಪಡೋದು, ಕಾಶ್ಮೀರದಲ್ಲಿ 370ನೇ ವಿಧಿ ತೆಗೆದುಹಾಕಲಾಯಿತೆಂದು ಸಂಭ್ರಮಿಸೋದು ಸಹಜ. ಅವರು ಜೀವಮಾನಕಾಲ ಅದಕ್ಕಾಗಿ ಹೋರಾಟ ಮಾಡಿದವರು. ನಾವು ಅವರನ್ನೆಲ್ಲ ಸೈದ್ಧಾಂತಿಕವಾಗಿ ಪ್ರಶ್ನಿಸುತ್ತೇವೆ, ಅಷ್ಟೆ. ಆದರೆ ಈ ಅನಂತ್ ನಾಗ್ ಥರದವರು ಈಗೀಗ ಮಾತಾಡುವುದನ್ನು ಕೇಳಿದರೆ ಹೇಸಿಗೆ ಅನಿಸುತ್ತದೆ. ಅನಂತ್ ನಾಗ್ ಕೇವಲ ನಟನಾಗಿ ಗುರುತಿಸಿಕೊಂಡ ವ್ಯಕ್ತಿ ಅಲ್ಲ. ರಾಜಕಾರಣದಲ್ಲಿದ್ದು, ಕರ್ನಾಟಕ ಸರ್ಕಾರದ ಮಂತ್ರಿಯೂ ಆಗಿದ್ದಾತ.‌ ರಾಮಕೃಷ್ಣ ಹೆಗಡೆ ಹೇಳಿದರೆ ಹಾಳು ಬಾವಿಗೂ ಬೀಳುತ್ತೇನೆ ಎಂದು ಹೇಳಿದ್ದ ಮನುಷ್ಯ. ತನ್ನ ಸಾರ್ವಜನಿಕ ಜೀವನದಲ್ಲಿ ಆತ ಎಂದೂ ರಾಮಮಂದಿರ ಅಲ್ಲೇ ನಿರ್ಮಾಣವಾಗಬೇಕು, ಅದು ಕೋಟಿಕೋಟಿ ಹಿಂದೂಗಳ ಕನಸು ಎಂದು ಎಂದೂ ಹೇಳಿರಲಿಲ್ಲ. ಕಾಶ್ಮೀರದ ವಿಷಯವನ್ನೂ ಎಂದೂ ಮಾತನಾಡಿರಲಿಲ್ಲ. ತನ್ನ ಕುಲಬಾಂಧವರು ಕಾಶ್ಮೀರದಿಂದ ಹೊರಗೆ ಅಟ್ಟಲ್ಪಟ್ಟ ವಿಷಯವನ್ನೂ ಎಂದೂ ಸಾರ್ವಜನಿಕವಾಗಿ ಹೇಳಿದಾತ ಅಲ್ಲ.

ಇತ್ತೀಚಿಗೆ ಅನಂತ್ ನಾಗ್ ಮಾತಾಡಿರುವ ವಿಡಿಯೋದಲ್ಲಿ ತನ್ನ ಅಂತರಂಗವನ್ನೆಲ್ಲ ಬಹಿರಂಗ ಮಾಡಿಕೊಂಡ ಹಾಗೆ ಕಾಣುತ್ತದೆ. ಇದೆಲ್ಲ ಮಾತಾಡಲು ಮೋದಿ ಪ್ರಧಾನಿಯಾಗಬೇಕಿತ್ತಾ? ಅದಕ್ಕೂ ಮುಂಚೆ ಮಾತಾಡಲು ಬಾಯಿ ಇರಲಿಲ್ಲವೇ? ಇದನ್ನೇ ನಯವಂಚಕತನ, ಸಮಯಸಾಧಕತನ ಅನ್ನೋದು. ಒಬ್ಬ ಅತ್ಯುತ್ತಮ ಕಲಾವಿದ ಒಬ್ಬ ಅತ್ಯುತ್ತಮ ಮನುಷ್ಯನೂ ಆಗಿರಬೇಕಿಲ್ಲ. ಅಮಿತಾಬ್ ಬಚ್ಚನ್, ಅನಂತ್ ನಾಗ್ ರಂಥವರ ವಿಕೃತಿಗಳನ್ನು ನೋಡಿದರೆ ಅಸಹ್ಯವೆನಿಸುತ್ತದೆ. ವಯಸ್ಸಾದಂತೆ ಮನುಷ್ಯತ್ವ, ವಿವೇಕ, ಪ್ರೀತಿಯ ಭಾವಗಳು ಹೆಚ್ಚಬೇಕು. ಇವರಿಗೆ ದ್ವೇಷ, ಸ್ವಜಾತಿಪ್ರೇಮ, ಅಸಹನೆ ಹೆಚ್ಚುತ್ತಿದೆ. ಇಂಥವರ ಬಗ್ಗೆ ನಿಜಕ್ಕೂ ಮರುಕ ಹುಟ್ಟುತ್ತದೆ.

Please follow and like us: