ವಿರೋಧಿಗಳ ಅಪಪ್ರಚಾರಕ್ಕೆ ರೈತರು ಕಿವಿಗೊಡಬೇಡಿ : ಸಿಎಂ ಯಡಿಯೂರಪ್ಪ

ಕೇಂದ್ರದ ಕೃಷಿ ಮಸೂದೆಗಳಿಂದಾಗಿ ರೈತರ ಆದಾಯ ದ್ವಿಗುಣ: ಸಿಎಂ ಯಡಿಯೂರಪ್ಪ

: ಕೇಂದ್ರ ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸದುದ್ದೇಶದಿಂದ ಕೃಷಿ ಮಸೂದೆಗಳಿಗೆ ತಿದ್ದುಪಡಿ ತಂದಿದೆ. ಈ ಕೃಷಿ ಮಸೂದೆಗಳಿಂದ ರೈತ ಸಮುದಾಯಕ್ಕೆ ಯಾವ ನಷ್ಟ, ತೊಂದರೆಯೂ ಆಗುವುದಿಲ್ಲ. ವಿರೋಧಿಗಳ ಅಪಪ್ರಚಾರಕ್ಕೆ ರೈತರು ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಶುಕ್ರವಾರ ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೈತರ ಬದುಕನ್ನು ಹಸನುಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರದ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ನೂತನ ಕೃಷಿ ಮಸೂದೆಗಳನ್ನು ಜಾರಿ ಮಾಡಿದೆ. ಈ ಕಾಯ್ದೆಗಳ ವಿರುದ್ಧ ವಿರೋಧ ಪಕ್ಷಗಳು ಅಪಪ್ರಚಾರ ಮಾಡಿರುವುದರಿಂದ ರೈತರು ಚಳವಳಿ ಮಾಡುತ್ತಿದ್ದಾರೆ. ಆದರೆ ಈ ಕಾಯ್ದೆಗಳಿಂದಾಗಿ ರೈತರ ಆದಾಯ ದ್ವಿಗುಣವಾಗಲಿದೆಯೇ ಹೊರತು ರೈತರಿಗೆ ಯಾವ ರೀತಿಯಲ್ಲೂ ಅನ್ಯಾಯವಾಗುವುದಿಲ್ಲ ಎಂದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆಯಾಗಲಿದ್ದು, ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಎಂದಿನಂತೆ ಮುಂದುವರಿಯಲಿದೆ. ಭೂಸುಧಾರಣೆ ಕಾಯ್ದೆಯಿಂದಾಗಿ ಸಣ್ಣ ಹಿಡುವಳಿದಾರರ ಕೃಷಿಕರ ಆದಾಯ ಹೆಚ್ಚಲಿದ್ದು, ಕೃಷಿ ಕ್ಷೇತ್ರದಲ್ಲಿ ಕೃಷಿಕರಲ್ಲದವರೂ ಉತ್ಪಾದನೆಯಲ್ಲಿ ತೊಡಗಲು ಸಾಧ್ಯವಾಗಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದಾಗಿ ರಾಜ್ಯಾದ್ಯಂತ ಇರುವ ಒಣ ಭೂಮಿಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದ ಮುಖ್ಯಮಂತ್ರಿ ಯಡಿಯೂರಪ್ಪ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಮೋದಿ ನೂತನ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ 9 ಕೋಟಿ ರೈತರ ಖಾತೆಗೆ 18 ಕೋಟಿ ರೂ. ಅನ್ನು ನೇರವಾಗಿ ಜಮೆ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ರೈತರು ಸೇರಿದಂತೆ ಎಲ್ಲ ಸಮುದಾಯದ ಜನರ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು.

ಕೊರೋನಾ ಸೋಂಕಿನಿಂದಾಗಿ ರಾಜ್ಯ ಸರಕಾರ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲೂ ಅಭಿವೃದ್ಧಿ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ 1063 ಕೋ. ರೂ. ಅನುದಾನ ನೀಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾಲೇಜನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಇದೇ ಅನುದಾನದಲ್ಲಿ ಜಿಲ್ಲಾಸ್ಪತ್ರೆಯನ್ನು 1 ಸಾವಿರ ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಇನ್ನೂ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದು, ಹಣಕಾಸಿನ ಪರಿಸ್ಥಿತಿ ಆಧಾರದ ಮೇಲೆ ಮುಂದಿನ ಬಜೆಟ್‍ನಲ್ಲಿ ಅನುದಾನ ನೀಡಲಾಗುವುದು ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಸಮಾಜದ ಕಣ್ಣು. ಕೇಂದ್ರ ಹಾಗೂ ರಾಜ್ಯ ಸರಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಆದ್ಯತೆ ನೀಡಿದೆ. ಕೇಂದ್ರ ಸರಕಾರ ರಾಜ್ಯಕ್ಕೆ 4 ವೈದ್ಯಕೀಯ ಕಾಲೇಜು ನೀಡಿದ್ದು, ಮೋದಿ ಪ್ರಧಾನಿಯಾದ ಮೇಲೆ ದೇಶಾದ್ಯಂತ 157 ಮೆಡಿಕಲ್ ಕಾಲೇಜು ಆರಂಭವಾಗಿವೆ ಎಂದ ಅವರು, ರಾಜ್ಯಾದ್ಯಂತ ಇರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಎಲ್ಲ ರೀತಿಯ ಸೌಲಭ್ಯ ಸೇರಿದಂತೆ ದಿನದ 24ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲು ಮುಂದಿನ ಬಜೆಟ್‍ನಲ್ಲಿ ಕ್ರಮವಹಿಸಲಾಗುವುದು. ಚಿಕ್ಕಮಗಳೂರು ನಗರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ 20ರಿಂದ 24 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಪ್ರತಿಯೊಬ್ಬರಿಗೂ ಸೂರು ಕಲ್ಪಿಸಸಲು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದು, ಅದರಂತೆ ರಾಜ್ಯ ಸರಕಾರ 20 ಲಕ್ಷ ಮನೆಗಳನ್ನು ವಸತಿ ರಹಿತರಿಗೆ ನೀಡಿದೆ. ಈ ಪೈಕಿ 7 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ಬಾಕಿ ಇದೆ. ಮುಂದಿನ ಬಜೆಟ್‍ನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗುವುದು ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿದರು. ಮಾಜಿ ಸಚಿವ ಜೀವರಾಜ್, ಶಾಸಕರಾದ ಕುಮಾರಸ್ವಾಮಿ, ಡಿ.ಎಸ್.ಸುರೇಸ್, ಬೆಳ್ಳಿಪ್ರಕಾಶ್, ಟಿ.ಡಿ.ರಾಜೇಗೌಡ, ವಿಪ ಸದಸ್ಯರಾದ ಭೋಜೇಗೌಡ, ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ಪಿ ಅಕ್ಷಯ್ ಮಚೀಂದ್ರ, ಜಿಪಂ ಸಿಇಒ ಪೂವಿತಾ ಸೇರಿದಂತೆ ತಾಪಂ, ಜಿಪಂ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸಿಎಂ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು

Please follow and like us: