ಯಾರಿದ್ದಾರೆ ಸಾರ್, ನಾಲ್ಕು ಹೆಸರು ಹೇಳಿ…

ದಿನೇಶ್ ಅಮೀನಮಟ್ಟು

ದೆಹಲಿಯ ಜೆಎನ್ ಯುವಿನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಾವೆಲ್ಲರೂ ದನಿಗೂಡಿಸುತ್ತಿದ್ದೇವೆ, ಕೆಲವರು ಬೀದಿಗಳಲ್ಲಿ, ಇನ್ನು ಕೆಲವರು ಫೇಸ್ ಬುಕ್ ಪುಟಗಳಲ್ಲಿ. ಇಷ್ಟು ಮಾಡಿದರೆ ನರೇಂದ್ರಮೋದಿ ವಿರುದ್ಧ ಪ್ರತಿರೋಧವನ್ನು ದಾಖಲಿಸಿದೆವಲ್ಲಾ ಎಂದು ನಮಗೂ ಸಮಾಧಾನ. ದೆಹಲಿ ಕಡೆ ನೋಡಿ ಆಯಿತಲ್ಲಾ, ನಮ್ಮ ಸುತ್ತಮುತ್ತ ಇರುವ ವಿಶ್ವವಿದ್ಯಾಲಯಗಳ ಕಡೆ ಸ್ವಲ್ಪ ಇಣುಕಿ ನೋಡುವುದು ಬೇಡ್ವಾ?

ರಾಜ್ಯದಲ್ಲಿ ನಮ್ಮದೇ ತೆರಿಗೆ ಹಣದಲ್ಲಿ ನಡೆಯುತ್ತಿರುವ 29 ವಿಶ್ವವಿದ್ಯಾಲಯಗಳಿವೆ. ಅವುಗಳ ಸ್ಥಿತಿ ಏನು? ಅವುಗಳು ಎಂತಹ ವಿದ್ಯಾರ್ಥಿಗಳನ್ನು ತಯಾರಿ ಮಾಡಿ ಸಮಾಜಕ್ಕೆ ಬಿಡುತ್ತಿವೆ? ವಿದ್ಯಾರ್ಥಿಗಳನ್ನು ನಂತರ ನೋಡೋಣ, ಅಲ್ಲಿರುವ ಪ್ರಾಧ್ಯಾಪಕರು ಏನು ಮಾಡ್ತಿದ್ದಾರೆ? ಇವರೆಲ್ಲ ಜೆಎನ್ ಯು ಪ್ರೊಪೆಸರ್ ಗಳಷ್ಟೇ ಸಂಬಳ ತೆಗೆದುಕೊಳ್ಳುವವರು, ಸೌಲಭ್ಯಗಳನ್ನು ಅನುಭವಿಸುವವರು. ಇವರಲ್ಲಿ ಎಷ್ಟು ಪ್ರೊಪೆಸರ್ ಗಳನ್ನು ಜೆಎನ್ ಯು ಪ್ರೊಪೆಸರ್ ಗಳ ಪಕ್ಕ ನಿಲ್ಲಿಸಿ ನೋಡಲು ಸಾಧ್ಯ?

ಈ ಪ್ರೊಪೆಸರ್ ಗಳೋ… ಅವರು ಗೈಡ್ ಮಾಡುತ್ತಿರುವ ವಿಷಯಗಳೋ… ಅವುಗಳ ಮೇಲೆ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳೋ… ಇದನ್ನೆಲ್ಲ ಜೆಎನ್ ಯು ಜೊತೆ ಹೋಲಿಸಲಿಕ್ಕಾದರೂ ಸಾಧ್ಯವೇ? ಪುರುಷೋತ್ತಮ ಬಿಳಿಮಲೆ ಅವರು ಹಂಪಿ ವಿಶ್ವವಿದ್ಯಾಲಯದಿಂದ ಓಡಿಹೋಗುವಂತೆ ಮಾಡಿದವರ್ಯಾರು ಎಂದು ಒಂದು ದಿನ ಅವರೇ ಹೇಳಬಹುದೇನೋ? ಎಲ್ಲವನ್ನೂ ಅನುಭವಿಸಿ ಈಗ ನಿವೃತ್ತ ಜೀವನವನ್ನು ಹಾಯಾಗಿ ಕಳೆಯುತ್ತಿರುವ ಒಂದಷ್ಟು ವಿಶ್ರಾಂತ ಕುಲಪತಿಗಳು, ಪ್ರೊಪೆಸರ್ ಗಳಿದ್ದಾರೆ, ಅವರನ್ನು ನೀವು ಒಂದು ಕಾರ್ಯಕ್ರಮಕ್ಕೆ ಕರೆಯಿರಿ, ಬರಲಿ ನೋಡೋಣ.

ನನಗೆ ತಿಳಿದ ಹಾಗೆ ನಮ್ಮ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನಿಷ್ಠ 60 ಪ್ರೊಪೆಸರ್ ಗಳಿದ್ದಾರೆ. ನನಗೆ 10 ಪ್ರೊಪೆಸರ್ ಗಳಿಗಿಂತ ಹೆಚ್ಚು ಹೆಸರು ಗೊತ್ತಿಲ್ಲ. ನಾನು ಕಳೆದ ಹತ್ತು ವರ್ಷಗಳಿಂದ ಮೈಕೈ ನುಜ್ಜುಗುಜ್ಜು ಮಾಡಿಕೊಂಡು ರಾಜ್ಯದಾದ್ಯಂತ ಸಭೆ, ಸೆಮಿನಾರ್, ಪ್ರತಿಭಟನೆ ಎಂದೆಲ್ಲ ಸುತ್ತಾಡುತ್ತಿದ್ದೇನೆ. ಅಲ್ಲೆಲ್ಲ ನಾನು ಬಹಳ ಮಂದಿ ಪ್ರೊಪೆಸರ್ ಗಳನ್ನು ಕಂಡಿಲ್ಲ. ನನ್ನನ್ನು ಯಾರಾದರೂ ಆಹ್ಹಾನಿಸಿದರೆ ‘’ನೋಡ್ರಿ ಆ ಯುನಿವರ್ಸಿಟಿಗಳಲ್ಲಿ ದಂಡಿಯಾಗಿ ಪ್ರೊಪೆಸರ್ ಗಳಿದ್ದಾರೆ, ಅವರನ್ನು ಕರೆಯಿರಿ, ನಮಗ್ಯಾಕ್ರಿ ಹಿಂಸೆ ಕೊಡ್ತೀರಿ’’ ಎಂದು ಹೇಳ್ತಿರ್ತೇನೆ. ‘’ ಯಾರಿದ್ದಾರೆ ಸಾರ್, ನಾಲ್ಕು ಹೆಸರು ಹೇಳಿ’’ ಎಂದು ಅವರೇ ನನ್ನ ಬಾಯಿಮುಚ್ಚಿಸ್ತಾರೆ. ಹೌದು, ನಮಗೆ-ನಿಮಗೆ ಗೊತ್ತಿರುವ ಒಂದು ಹತ್ತು ಮಂದಿ ಇದ್ದಾರೆ, ಅವರ ಹೆಸರನ್ನೇ ಮತ್ತೆಮತ್ತೆ ಹೇಳಬೇಕಾಗಿದೆ.

ಟಿಪ್ಪು, ಸಾವರ್ಕರ್, ಆರ್ ಸಿಇಪಿ ಬಗ್ಗೆ ಇಷ್ಟೆಲ್ಲ ಚರ್ಚೆಯಾಯಿತು. ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಇದರ ಬಗ್ಗೆ ಮಾತನಾಡಲು ವಿಷಯ ತಜ್ಞರು ಬೇಕು. ನಮ್ಮ ತೆರಿಗೆ ಹಣದಿಂದಲೆ ಯುಜಿಸಿ ಸ್ಕೇಲ್ ಪಡೆಯುತ್ತಿರುವ ಕನಿಷ್ಠ 300 ಪ್ರೊಪೆಸರ್ ಗಳು ವಿಶ್ವವಿದ್ಯಾಲಯಗಳಲ್ಲಿದ್ದಾರೆ. ಇವರೆಲ್ಲ ವಿವಿಧ ವಿಷಯಗಳ ತಜ್ಞರು. ಇವರಲ್ಲಿ ಎಷ್ಟು ಮಂದಿ ಈ ವಿಷಯಗಳ ಬಗ್ಗೆ ಮಾತನಾಡಿದ್ದಾರೆ?

ನಮ್ಮ ಎಂ.ಎಂ.ಕಲಬುರ್ಗಿಯವರದ್ದೂ ಹುಚ್ಚುತನ, ಉಳಿದವರಂತೆ ಸುಮ್ಮನಿದ್ದು ಬಿಟ್ಟಿದ್ದರೆ ಈಗಲೂ ನಮ್ಮ ನಡುವೆ ಇರುತ್ತಿದ್ದರೇನೋ? ಕನಿಷ್ಠ ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಂಡು ನಮ್ಮ ಕಣ್ಣು ತೆರೆಸುತ್ತಿದ್ದರು.

ಯುವಜನತೆ ಹಾದಿ ತಪ್ಪುತ್ತಿದ್ದಾರೆ, ಅವರಿಗೆ ಆಸಕ್ತಿ ಇಲ್ಲ ಎಂದೆಲ್ಲ ಹೇಳಬೇಡಿ. ಹಾಗಿದ್ದರೆ ನಮ್ಮಂತಹವರನ್ನು ಯಾಕೆ ಹೋದಲ್ಲಿ ಬಂದಲ್ಲಿ ಅವರು ಕಾಡುತ್ತಾರೆ? ಚರ್ಚಿಸುತ್ತಾರೆ? ಜಗಳ ಮಾಡ್ತಾರೆ? ಪಕ್ಕದಲ್ಲಿ ಬಂದು ನಿಂತುಕೊಳ್ಳಲು, ಒಂದು ಸೆಲ್ಪಿಗಾಗಿ ಹಂಬಲಿಸುತ್ತಾರೆ? ಅಲ್ಲಿಯೇ ಪಕ್ಕದಲ್ಲಿ ನಿಂತಿರುವ ಪ್ರೊಪೆಸರ್ ಬಳಿ ಅವರು ಹೋಗುವುದಿಲ್ಲ. ಒಂದು ಕಾಲದಲ್ಲಿ ಈ ಪ್ರೊಪೆಸರ್ ಗಳಿಗೆ ಇರುವ ಶಿಷ್ಯ ಗಣ ನೋಡಿ ನಮಗೆಲ್ಲ ಅಸೂಯೆಯಾಗುತ್ತಿತ್ತು. ಅನಂತಮೂರ್ತಿ ವಿರುದ್ಧ ಮಾತನಾಡಿದಾಗ ನನ್ನ ಮೈಮೇಲೇರಿ ಬಂದವರಿದ್ದಾರೆ. ಈಗ ಅದೇ ಗುರುಗಳ ಬಗ್ಗೆ ಮಾತನಾಡಿದರೆ ಶಿಷ್ಯರೇ ದನಿಗೂಡಿಸುತ್ತಾರೆ.

ನಾನು ಮಾಧ್ಯಮ ಸಲಹೆಗಾರನಾಗಿದ್ದಾಗ ಕುಲಪತಿ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಲು ನನ್ನನ್ನು ಬಹಳ ಮಂದಿ ಕಾಡಿದ್ದಾರೆ. ಮೊದಮೊದಲು ತಲೆಯಾಡಿಸುತ್ತಿದ್ದ ಸಿದ್ದರಾಮಯ್ಯನವರು ನಂತರದ ದಿನಗಳಲ್ಲಿ ‘’ ಏನ್ರಿ ನೀವೆಲ್ಲ ಪ್ರಗತಿಪರರು, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರ ಎಂದೆಲ್ಲ ಹೇಳಿಕೊಂಡು ಬರ್ತೀರಿ, ಅಲ್ಲಿ ಹೋಗಿ ಕೂತ ನಂತರ ಅದೇನು ನೆನಪಲ್ಲಿ ಇರುವುದಿಲ್ಲ, ನಿಮ್ಮಲ್ಲಿ ಕೆಲವರು ನೇರವಾಗಿ ಆರ್ ಎಸ್ ಎಸ್ ಸಭೆಯಲ್ಲಿ ಹೋಗಿ ಕೂರ್ತೀರಿ. ಅಲ್ಲಿಗೆ ಹೋಗಬಾರದೆಂದು ನಾನೇನು ಷರತ್ತು ಹಾಕುವುದಿಲ್ಲ, ಅದನ್ನೆಲ್ಲ ಮೊದಲು ಯಾಕೆ ಹೇಳೋದಿಲ್ಲ, ಸುಳ್ಳು ಯಾಕೆ ಹೇಳ್ತೀರಿ’?’’ ಎಂದು ಅಸಮಾಧಾನ ಹೊರಹಾಕ್ತಿದ್ದರು. ಈ ಮಾತುಗಳಲ್ಲಿ ಸತ್ಯವೂ ಇದೆ.

‘’ನೀವ್ಯಾಕೆ ಬಾಯಿ ಬಿಡುತ್ತಿಲ್ಲ’’ ಎಂದು ಈ ಯುನಿವರ್ಸಿಟಿ ಪ್ರೊಪೆಸರ್ ಗಳನ್ನು ಪ್ರಶ್ನಿಸಿದರೆ ‘’ನಾವು ಸರ್ಕಾರಿ ನೌಕರರು, ಹಾಗೆಲ್ಲ ಮಾತನಾಡಕ್ಕಾಗುತ್ತಾ?’’ ಎಂದು ಸಬೂಬು ಹೇಳುವವರಿದ್ದಾರೆ. ಜೆಎನ್ ಯು ಪ್ರೊಪೆಸರ್ ಗಳು ಸರ್ಕಾರಿ ನೌಕರರಲ್ವಾ? ನಮ್ಮ ರಾಜ್ಯದಲ್ಲೊಬ್ಬರು ಐಎಎಸ್ ಅಧಿಕಾರಿ ಇದ್ದಾರೆ, ಅವರು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷದ ವಿರುದ್ಧವೇ ಇಂಗ್ಲೀಷ್ ನಲ್ಲಿ ಟೈಮ್ಸ ಆಫ್ ಇಂಡಿಯಾದಲ್ಲಿ ಲೇಖನ ಬರೆಯುತ್ತಿದ್ದರು, ರಾಜ್ಯ ಸರ್ಕಾರದ ವಿರುದ್ಧವೂ ಬರೆಯುತ್ತಿದ್ದರು. ಅವರನ್ನು ಯಾರಾದರೂ ಜೈಲಿಗೆ ಹಾಕಿದ್ದಾರಾ? ಇಲ್ಲಿ, ಕರ್ನಾಟಕದಲ್ಲಿಯೇ ಸಾರ್ವಜನಿಕವಾಗಿ ಮಾತನಾಡುತ್ತಿರುವ ಯುನಿವರ್ಸಿಟಿ ಪ್ರೊಪೆಸರ್ ಗಳಿದ್ದಾರೆ. ಹೆಸರು ಬರೆದರೆ ಅವರನ್ನು ಎತ್ತಿ ತೋರಿಸಿದ ಹಾಗಾಗುತ್ತದೆ. ಅವರ್ಯಾರು ಕೆಲಸ ಕಳೆದುಕೊಂಡಿಲ್ಲ. ಖಂಡಿತ ಸಂಸ್ಥೆಯೊಳಗೆ ಒಂದಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ.

ನಮ್ಮ ಸುತ್ತಲಿರುವ ಸತ್ತಂತಿರುವ ವಿಶ್ವವಿದ್ಯಾಲಯಗಳಿಗೆ ಒಂದಿಷ್ಟು ಜೀವ ತುಂಬಲು ಸಾಧ್ಯವಾದರೆ, ಜೆಎನ್ ಯುವಿನಲ್ಲಿ ಉಪವಾಸ ಬಿದ್ದು, ಲಾಠಿ-ಬೂಟು ಏಟುಗಳಿಂದ ಗಾಯಮಾಡಿಕೊಂಡು ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ಹರಿಸುತ್ತಿರುವ ಬೆವರು-ನೆತ್ತರಿಗೆ ಬೆಲೆ ಕೊಟ್ಟಂತಾಗುತ್ತದೆ.
-Dinesh Amin (22.11.2019)

Please follow and like us: