ನೆಹರೂ ಭಾರತದ ಪರಿಕಲ್ಪನೆ ಏನಿತ್ತು? -ರಹಮತ್ ತರಿಕೆರೆ

Rahamath Tarikere

ಕರ್ನಾಟಕ ಕಂಡ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾದ ಕಡಿದಾಳು ಮಂಜಪ್ಪನವರ ಆತ್ಮಕಥೆಯಲ್ಲಿ ಸ್ವಾರಸ್ಯಕರ ಪ್ರಸಂಗವೊಂದಿದೆ. ವಿಶ್ವೇಶ್ವರಯ್ಯನವರ ಜನ್ಮಶತಾಬ್ದಿ ಕಾರ್ಯಕ್ರಮಕ್ಕೆಂದು ನೆಹರೂ ಬೆಂಗಳೂರಿಗೆ ಬಂದಿರುತ್ತಾರೆ. ಕಾರ್ಯಕ್ರಮದ ಬಳಿಕ ಸರ್ ಎಂವಿ ಮನೆಗೆ ಭೇಟಿಕೊಡುವ ಆಶಯವನ್ನು ಅವರು ವ್ಯಕ್ತಪಡಿಸುತ್ತಾರೆ. ಕಾರ್ಯಕ್ರಮ ಮುಗಿವ ಹೊತ್ತಿಗೆ ಕಡಿದಾಳರು ಬಂದು ನೆಹರೂಗೆ ಇದನ್ನು ನೆನಪಿಸುತ್ತಾರೆ. ಆಗ ನೆಹರೂ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು:

“ಯಾವುದೊ ಯೋಚನೆಯಲ್ಲಿ ಮಗ್ನರಾಗಿದ್ದ ನೆಹರೂರವರು ನನ್ನ ಮೇಲೆ ಬಹಳ ಕುಪಿತರಾಗಿ `ವಾಟ್ ಡು ಯು ಮೀನ್’ ಎಂದು ಗದರಿಸಿದರು. ನನಗೂ ಬಹಳ ಕೋಪಬಂತು. ನಾನು ಸುತ್ತಮುತ್ತಲಿದ್ದವರಿಗೆಲ್ಲ ಕೇಳಿಸುವಂತೆ `ಇದು ನನ್ನ ಸಲಹೆಯಲ್ಲ. ತಾವು ದಾರಿಯಲ್ಲಿ ಬರುತ್ತಿದ್ದಾಗ ಹೇಳಿದ್ದ ವಿಚಾರವನ್ನು ಜ್ಞಾಪಕಕ್ಕೆ ತಂದೆ’ ಎಂದು ಇಂಗ್ಲೀಷಿನಲ್ಲಿ ಗಟ್ಟಿಯಾಗಿ ಹೇಳಿ, ಹಿಂದುಗಡೆ ಸಾಲಿಗೆ ಹೋಗಿ ಕುಳಿತುಕೊಂಡೆ. ನನಗೆ ಅವಮಾನವಾದಂತಾಗಿತ್ತು. ನೆಹರೂರವರು ಪ್ರಧಾನಿಯೆಂಬುದನ್ನು ಲೆಕ್ಕಿಸದೆ ಅವರ ಸಮ್ಮುಖದಲ್ಲೇ ಕೋಪ ಪ್ರದರ್ಶಿಸಿದೆ. ಸುಮಾರು ಐದು ನಿಮಿಷಗಳ ನಂತರ ನೆಹರೂ ತಾವು ಹೇಳಿದ್ದು ತಪ್ಪೆಂದು ಮನಗಂಡು ನನ್ನನ್ನು ಕರೆದುಕೊಂಡು ಬರುವಂತೆ ಬದಿಯಲ್ಲಿದ್ದವರಿಗೆ ಸೂಚಿಸಿದರು. ನಾನು ಬಳಿಗೆ ಹೋಗಿ ಕರೆದಿದ್ದ ಉದ್ದೇಶವೇನೆಂದು ಕೇಳಿದೆ. ಅವರು ನಗುತ್ತ `ವಿಶ್ವೇಶ್ವರಯ್ಯನವರ ಮನೆಗೆ ಹೋಗೋಣ’ ಎಂದು ಹೇಳಿದರು. ಆದರೆ ವಿಶ್ವೇಶ್ವರಯ್ಯನವರ ಮನೆಗೆ ನಾನು ಅವರ ಜೊತೆ ಹೋಗಲಿಲ್ಲ.’’

ತಪ್ಪಾದರೆ ತಿದ್ದಿಕೊಳ್ಳಬಲ್ಲ ರಾಷ್ಟ್ರನಾಯಕನ ನಮ್ರತೆ ಹಾಗೂ ಸ್ವಾಭಿಮಾನದ ಜತೆ ರಾಜಿಮಾಡಿಕೊಳ್ಳದೆ ವ್ಯವಹರಿಸಬಲ್ಲ ಪ್ರಾದೇಶಿಕ ನಾಯಕನ ದಿಟ್ಟತನವುಳ್ಳ ಈ ಪ್ರಸಂಗ, ಭಾರತದ ಫೆಡರಲ್ ಸಂಬಂಧದ ಸಣ್ಣ ಸೂಕ್ಷ್ಮವೊಂದನ್ನು ಸಹ ಧ್ವನಿಸುವಂತಿದೆ. ನೆಹರೂ ಅವರೊಂದಿಗೆ ಕೆಂಗಲ್ ಹನುಮಂತಯ್ಯ ಮುಂತಾದವರು ಸಹ ದಿಟ್ಟವಾಗಿ ವರ್ತಿಸುತ್ತಿದ್ದರು. ನೆಹರೂ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ನೆಹರೂ ಜತೆ ತೀಕ್ಷ್ಣವಾದ ಭಿನ್ನಮತ ಹಂಚಿಕೊಳ್ಳುತ್ತಿದ್ದರು. ತಾವು ಮಂಡಿಸಿದ ಹಿಂದೂಕೋಡ್ ಮಸೂದೆಗೆ ನೆಹರೂ ಬೆಂಬಲಿಸದೆ ಹೋದಾಗ ರಾಜಿನಾಮೆ ಕೊಟ್ಟು ಹೊರಬಂದರು. ಇಂತಹ ದಿಟ್ಟತನಕ್ಕೆ ಸೈದ್ಧಾಂತಿಕ ಬದ್ಧತೆ ಮಾತ್ರವಲ್ಲ, ವೈಯಕ್ತಿಕವಾದ ನೈತಿಕತೆಯೂ ಬೇಕಾಗುತ್ತದೆ.

ನೆಹರೂ ಕೊಟ್ಟ ಪ್ರೀತಿಯನ್ನು ಮತ್ತೆಮತ್ತೆ ನೆನಪಿಸಿಕೊಳ್ಳುವ ಕಡಿದಾಳರು, ಅವರು ತೀರಿಕೊಂಡಾಗ ಮಗುವಿನಂತೆ ಬಿಕ್ಕಿಬಿಕ್ಕಿ ಅಳುತ್ತಾರೆ. ಕಾಶ್ಮೀರ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದೇ ಹೋಗಿದ್ದು, ಮಗಳನ್ನು ಉತ್ತರಾಧಿಕಾರಿಯಾಗಿ ಬೆಳೆಸಿದ್ದು, ಬಡವರ ಮೇಲೆ ಅನುಕಂಪವಿದ್ದರೂ ಬಡವರ ಕಷ್ಟಗಳ ಬಗ್ಗೆ ವಾಸ್ತವಿಕ ತಿಳುವಳಿಕೆ ಇರದಿದ್ದುದು, ನೆಹರೂ ದೋಷಗಳೆಂದು ನಿಷ್ಠುರ ನುಡಿಯುತ್ತಾರೆ. ಅದೇ ಹೊತ್ತಿಗೆ ನೆಹರೂ “ಈ ದೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಗೊಳ್ಳುವಂತೆ ಮಾಡಲು ಸತತವಾಗಿ ಶ್ರಮಿಸಿದರು’’ ಎಂದು ಹೇಳಿಕೆ ಮಾಡುತ್ತಾರೆ. ಪ್ರಜಾಪ್ರಭುತ್ವ ಪದ್ಧತಿ ನೆಲೆಗೊಳಿಸುವುದು ಎಂದರೇನು? ಅದು ನೆಲೆಗೊಳ್ಳುವುದು ಒಬ್ಬ ನಾಯಕನಿಂದಲೊ ಜನ ಸಮುದಾಯದಿಂದಲೊ? ಅಂತಿಮವಾಗಿ ಜನರಿಂದಲೇ ಆದರೂ ಅವರನ್ನು ಪ್ರೇರಿಸುವ ನಾಯಕರ ಪಾಲೂ ಅದರಲ್ಲಿರುತ್ತದೆ. ಪ್ರಜಾಪ್ರಭುತ್ವವನ್ನು ಓಟಿನ ಪರಿಭಾಷೆಯಲ್ಲಿ ನೋಡುವುದಾದರೆ, ಸಮಸ್ತ ಪ್ರಜೆಗಳಿಗೂ ತರಮವಿಲ್ಲದೆ ಮತದಾನದ ಹಕ್ಕನ್ನು ದೊರಕಿಸಿದ್ದು 1947ರ ನಂತರ ಭಾರತದ ದೊಡ್ಡ ಸಾಧನೆ ಎನ್ನುವರುಂಟು. ಇದರಲ್ಲಿ ಕೊಂಚ ನಿಜವಿದೆ. ಯಾಕೆಂದರೆ, ಇದೇ ಹೊತ್ತಲ್ಲಿ ಎರಡು ಶತಮಾನಗಳಷ್ಟು ಹಿರಿತನವಿದ್ದ ಅಮೇರಿಕದ ಪ್ರಜಾಪ್ರಭುತ್ವದಲ್ಲಿ, ಕರಿಯರಿಗೆ ಮತದಾನದ ಹಕ್ಕು ಇರಲಿಲ್ಲ. ಆದರೆ ಈ ಓಟುಪದ್ಧತಿ ದಮನಿತ ದಲಿತರ ಬಡವರ ಮಹಿಳೆಯರ ಬಾಳನ್ನು ನಾಟಕೀಯವಾಗಿಯೇನೂ ಬದಲಿಸಲಿಲ್ಲ. ಎಂತಲೇ ದಲಿತರು ಸಹಜವಾಗಿ `ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಎಂದು ಕೇಳಬೇಕಾಯಿತು. ಈಗ ಇದೇ ಪ್ರಶ್ನೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗಾಗಿ ತಮ್ಮ ಭೂಮಿ ನದಿ ಕಾಡು ಬೆಟ್ಟಗಳನ್ನು ಕಳೆದುಕೊಳ್ಳಬೇಕಾಗಿರುವ ಭಾರತದ ರೈತರೂ ಆದಿವಾಸಿಗಳೂ ಕೇಳುತ್ತಿದ್ದಾರೆ. ಮತೀಯ ಹಲ್ಲೆಯಿಂದ ನಲುಗುತ್ತಿರುವ ಮುಸ್ಲಿಮರೂ ಪುರುಷವಾದಿಗಳಿಂದ ಬಸವಳಿದಿರುವ ಮಹಿಳೆಯರೂ ಕೇಳುವಂತಾಗಿದೆ.

ಆದ್ದರಿಂದ ಪ್ರಜಾಪ್ರಭುತ್ವ ನೆಲೆಗೊಳಿಸುವ ನಿಜವಾದ ವಿಧಾನವೆಂದರೆ, ದೇಶದ ದಮನಿತರು ಘನತೆಯಿಂದ ಬದುಕುವ ಪರಿಸರ ನಿರ್ಮಿಸುವುದು. ಈ ದಿಸೆಯಲ್ಲಿ ನೆಹರೂ ಒಳಗೊಂಡಂತೆ ಅಂಬೇಡ್ಕರ್ ಗಾಂಧಿ ಲೋಹಿಯಾ ಮುಂತಾದವರು, ತಮ್ಮೆಲ್ಲ ತಾತ್ವಿಕ ಭಿನ್ನಮತ ಮತ್ತು ವಾಗ್ವಾದಗಳ ಜತೆಗೆ ಭಾರತವನ್ನು ರೂಪಿಸಲು ಮಾಡಿದ ಚಿಂತನೆ ಮತ್ತು ಕ್ರಿಯೆಗಳನ್ನು ಪರಿಶೀಲಿಸಬೇಕಿದೆ. ಇವರ ಪೈಕಿ ನೆಹರೂ ನಾಯಕತ್ವದ ಜತೆಗೆ ಅಧಿಕಾರ ಚಲಾಯಿಸುವ ಅವಕಾಶವನ್ನೂ ಹದಿನೇಳು ವರ್ಷ ಕಾಲ ಪಡೆದಿದ್ದರು. ಅನೇಕ ಸಲ ಪ್ರಬಲ ನಾಯಕತ್ವವೆನ್ನುವುದು ಪ್ರಜಾಪ್ರಭುತ್ವಕ್ಕೆ ಕಸುವಾಗಿರುವಂತೆ, ನಾಯಕರು ಕಾಣುವ ಕಣ್ಣು ಕೇಳುವ ಕಿವಿ ಕಳೆದುಕೊಂಡಾಗ ಹಗೆಯೂ ಆಗಬಲ್ಲದು. ಇದಕ್ಕೆ ನೆಹರೂ ಖುದ್ದಾಗಿ ಬೆಳೆಸಿದ ಇಂದಿರಾ ಸಾಕ್ಷಿ. ಈಗ ಇಂದಿರಾರನ್ನು ಮೀರಿಸುವ ಸರ್ವಾಧಿಕಾರಿಗಳು ಭಾರತದ ರಾಜಕಾರಣದಲ್ಲಿ ಉದಿಸಿ ಮುನ್ನಿಂತಿದ್ದಾರೆ. ಅವರು ತಮ್ಮ ಸಹೋದ್ಯೋಗಿಗಳನ್ನು ಮಾಸ್ತರನು ಶಾಲೆಯ ಹುಡುಗರನ್ನು ನಿಲ್ಲಿಸಿ ವಿಚಾರಣೆ ನಡೆಸುವಂತೆ ವರ್ತಿಸಬಲ್ಲರು; ಅದೊಂದು ಅಪಮಾನವೆಂದು ಭಾವಿಸಿ ಪ್ರತಿಭಟಿಸಬಲ್ಲ ಕಡಿದಾಳರ ಆತ್ಮಗೌರವ ಅವರ ಸಹವರ್ತಿಗಳಲ್ಲಿಲ್ಲ. ಭಿನ್ನಮತಗಳನ್ನು ಸಹಿಸದ ಮತ್ತು ಅದನ್ನು ಹೆಸರಿಲ್ಲದಂತೆ ಹೊಸಕಿ ಹಾಕಬಲ್ಲ ಸರ್ವಾಧಿಕಾರಿತನವೇ ನಾಯಕತ್ವ ಎಂಬ ಗ್ರಹಿಕೆ ಈಚೆಗೆ ಚಾಲ್ತಿಗೆ ಬರುತ್ತಿದೆ. ಇದಕ್ಕೆ ತಕ್ಕಂತೆ ತಾವೊಪ್ಪದ ಏನೂ ಲೋಕದಲ್ಲಿ ಇರಬಾರದು ಎಂಬ ಧೋರಣೆಯ ಅಗ್ನಿಭಕ್ಷಕರು ಹುಟ್ಟಿಕೊಂಡಿದ್ದಾರೆ. ನ್ಯೂಯಾರ್ಕಿನಲ್ಲಿ ವಿಶ್ವವ್ಯಾಪಾರ ಸಂಸ್ಥೆಯ ಜೋಡಿಕಟ್ಟಡಗಳನ್ನು ಉಗ್ರಗಾಮಿಗಳು ಕೆಡವಿದಾಗ, ಅಮೆರಿಕದ ಅಧ್ಯಕ್ಷ ಜಾರ್ಜ್‍ಬುಶ್ `ನೀವೀಗ ನಮ್ಮ ಜತೆಯಿಲ್ಲದಿದ್ದರೆ ನಮ್ಮ ವಿರುದ್ಧವಿದ್ದಂತೆ’ ಎಂದು ಚೀತ್ಕರಿಸಿದ್ದು ಇದೇ ಪರಿಭಾಷೆಯಲ್ಲಿ. `ಪ್ರಜಾಪ್ರಭುತ್ವ’ ದೇಶಗಳಲ್ಲಿ ಹುಟ್ಟಿರುವ ಈ ಸರ್ವಾಧಿಕಾರದ ಪರಿಭಾಷೆ ಮೆರೆಯುವುದು ಒಂದು ವೈರುಧ್ಯ.

ತಾತ್ವಿಕ ಭಿನ್ನಮತ ಹೇಳಬಲ್ಲ ದಿಟ್ಟತನ ಮತ್ತು ಅದನ್ನಾಲಿಸಿ ಸ್ವವಿಮರ್ಶೆ ಮಾಡಿಕೊಳ್ಳುವ ಅಧಿಕಾರಸ್ಥರ ವಿನಯಗಳು, ಶಕ್ತಿರಾಜಕಾರಣಕ್ಕೆ ಮಾತ್ರ ಸಂಬಂಧಪಟ್ಟಿಲ್ಲ. ಇವು ಚಲನಶೀಲತೆ ಕಳೆದುಕೊಳ್ಳಬಯಸದ ಎಲ್ಲ ಜೀವಂತ ಸಮಾಜ, ಧರ್ಮ, ಸಂಸ್ಕøತಿ ಹಾಗೂ ಕುಟುಂಬಗಳಲ್ಲಿ ಕೂಡ ಇರಬೇಕಾದ ಮೌಲ್ಯಗಳಾಗಿವೆ. ಹಲವು ಧರ್ಮ ಭಾಷೆ ಸಂಸ್ಕøತಿಗಳಿರುವ ದೇಶಗಳಲ್ಲಿ ಭಿನ್ನಮತ ಮತ್ತು ಅನ್ಯಾಯ ಪ್ರಜ್ಞೆಯಿಂದ ಹುಟ್ಟುವ ಪ್ರತಿರೋಧಗಳು ತೀರ ಸಹಜ. ಅವನ್ನು ಆ ದೇಶದ ಸಮಾಜ ಹೇಗೆ ನಿಭಾಯಿಸುತ್ತದೆ ಎಂಬುದು ಅದರ ಪ್ರಬುದ್ಧತೆಯ ಅಳತೆಗೋಲು. ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ, ಅಮೆರಿಕ ಭಾರತ ಪಾಕಿಸ್ತಾನ ಬಾಂಗ್ಲಾ ಶ್ರೀಲಂಕೆಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿಯಿದೆ. ಆದರೆ ಅದರ ತಿರುಳಾಗಿರುವ ಪ್ರಜಾಪ್ರಭುತ್ವೀಯ ಮನೋಭಾವ ಅಲ್ಲಿನ ಸಮಾಜಗಳಲ್ಲಿ ಬೇರೂರಿದೆಯೇ? ಭಿüನ್ನವಾದ ಅಭಿಪ್ರಾಯ, ಮತ, ಪಂಥ, ಆಹಾರದ ಮೇಲೆ ಹಲ್ಲೆಗಳು ಸತತ ನಡೆಯುತ್ತಿವೆ. ಈ ಸಂವಾದರಹಿತ ಅಸಹನೆ ಹಿಂಸೆ ಮತ್ತು ಕ್ರೌರ್ಯಕ್ಕೆ ಕಾರಣವಾಗಿದೆ. ಜಾತೀಯ ರಾಜಕೀಯ ಹಿಂಸೆಯ ಮೂಲವು ಧರ್ಮದಲ್ಲಿರುವುದಿಲ್ಲ, ಹಿಂಸೆಗೆ ತಕ್ಕಂತೆ ಮಾಡಿಕೊಳ್ಳಲಾಗುವ ಧರ್ಮದ ವ್ಯಾಖ್ಯಾನದಲ್ಲಿರುತ್ತದೆ.

ನೆಹರೂ ಅವರಷ್ಟು ಆರಾಧನೆಗೂ ಟೀಕೆಗೂ ಗುರಿಯಾದ ನಾಯಕರು ಬಹುಶಃ ಬೇರೆಯಿಲ್ಲ. ಅವರ ಪ್ರಬಲ ಟೀಕಾಕಾರರಾಗಿದ್ದ ಲೋಹಿಯಾ, ಬಡಭಾರತದ ಪ್ರಧಾನಮಂತ್ರಿಯ ಸಿರಿವಂತ ಶೋಕಿಗಳನ್ನು ಗೇಲಿ ಮಾಡುತ್ತಿದ್ದರು. ಸನಾತನವಾದಿಗಳು ಅವರನ್ನು ಸೆಕ್ಯುಲರ್‍ವಾದದ ಮೂಲಕ ಹಿಂದೂಧರ್ಮ ನಾಶಮಾಡುವ ನಾಸ್ತಿಕನೆಂದು ದ್ವೇಷಿಸಿದರು. ಮುಸ್ಲಿಂಲೀಗಿನಲ್ಲಿದ್ದ ಮೂಲಭೂತವಾದಿಗಳು ಸಹ ನೆಹರೂರನ್ನು ಇಷ್ಟಪಡಲಿಲ್ಲ. ಕಮ್ಯುನಿಸ್ಟರು ಸಮಾಜವಾದದ ಹೆಸರಲ್ಲಿ ಸೋವಿಯತ್ ಪ್ರಿಯರೆಂಬ ಕಾರಣಕ್ಕೆ ಬೆಂಬಲಿಸಿದರೂ ನಂತರ ದೂರಸರಿದರು. ಯಾಕೆಂದರೆ ಜಗತ್ತಿನಲ್ಲೇ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ ಮೊಟ್ಟಮೊದಲ ಕಮ್ಯುನಿಸ್ಟ್ ಸರ್ಕಾರವನ್ನು ಕೇರಳದಲ್ಲಿ ನೆಹರೂ ದೊಡ್ಡ ಕಾರಣಗಳಿಲ್ಲದೆ ವಜಾ ಮಾಡಿದ್ದರು. ತೆಲಂಗಾಣದಲ್ಲಂತೂ ಸರ್ದಾರ್ ಪಟೇಲರ ಹುಕುಮಿನ ಮೇರೆಗೆ ಭಾರತೀಯ ಸೈನ್ಯ ಲಕ್ಷಾಂತರ ಕಮ್ಯುನಿಸ್ಟ್ ಚಳುವಳಿಯಲ್ಲಿದ್ದ ರೈತರನ್ನು ಕೊಂದುಹಾಕಿತು. ಆಗ ಸ್ವತಃ ನೆಹರೂ ಪ್ರಧಾನಮಂತ್ರಿಯಿದ್ದರು.
ಸೋಜಿಗವೆಂದರೆ, ತಮ್ಮ ಧಾರ್ಮಿಕ ಪ್ರಜ್ಞೆಗೆ ಪ್ರತಿಯಾಗಿ ದೇವರ ಅಸ್ತಿತ್ವದಲ್ಲಿ ನಂಬಿಕೆಯಿಲ್ಲದ, ತಮ್ಮ ಪಾಶ್ಚಿಮಾತ್ಯ ನಾಗರಿಕತೆಯ ಟೀಕೆಗೆ ಪ್ರತಿಯಾಗಿ ಪಾಶ್ಚಿಮಾತ್ಯವಾದಿ ವೈಚಾರಿಕತೆಯನ್ನು ವಿಜ್ಞಾನವನ್ನೂ ನಂಬಿದ, ತಮ್ಮ ಗ್ರಾಮಸ್ವರಾಜ್ಯದ ಕಲ್ಪನೆಗೆ ವ್ಯತಿರಿಕ್ತವಾಗಿ ಬೃಹತ್ ಉದ್ಯಮಗಳ ಮೂಲಕ ಭಾರತ ಕಟ್ಟುವ ಕನಸನ್ನು ಹೊತ್ತಿದ್ದ ಕೇಂಬ್ರಿಜ್ ಪದವೀಧರ ನೆಹರೂರನ್ನು, ಗಾಂಧಿ ತಮ್ಮ ಉತ್ತರಾಧಿಕಾರಿಯನ್ನಾಗಿ ಬೆಳೆಸಿದ್ದು. ಇದಕ್ಕೆ ನೆಹರೂ ಅವರಲ್ಲಿದ್ದ ಉದಾರವಾದವೂ ಒಂದು ಕಾರಣವಾಗಿತ್ತೇ? ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದವರಾಗಿದ್ದರೂ ನೆಹರೂ ಬ್ರಾಹ್ಮಣವಾದಿಯಾಗಿರಲಿಲ್ಲ. ಧರ್ಮ ಮತ್ತು ಜಾತಿಗಳ ವಿಷಯದಲ್ಲಿ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್, ರಾಜಗೋಪಾಲಾಚಾರಿ ಮುಂತಾದವರಿಗೆ ಹೋಲಿಸಿದರೆ ಹೆಚ್ಚು ವೈಚಾರಿಕತೆ ಹಾಗೂ ಮುಕ್ತಮನಸ್ಸು ಹೊಂದಿದ್ದರು. ಹಿಟ್ಲರನನ್ನು ಸೋಲಿಸಲು ಭಾರತೀಯರು ಬ್ರಿಟಿಶರ ಜತೆ ಕೈಜೋಡಿಸಬೇಕು ಎಂದು ಗಾಂಧಿ ಕರೆಗೊಡುವಾಗ, ಬೋಸರು ಹಿಟ್ಲರನ ಕೈಕುಲುಕಲು ಜರ್ಮನಿಗೆ ಹೋಗಿದ್ದರು. ಆದರೆ ಇಟಲಿಗೆ ಹೋಗಿದ್ದ ನೆಹರೂ, ಮುಸಲೋನಿ ಬಯಸಿದರೂ ಅವನ ಭೇಟಿಗೆ ನಿರಾಕರಿಸಿದರು. ರಾಜಕೀಯ ಸರ್ವಾಧಿಕಾರವು ಎಸಗುವ ಕೇಡುಗಳ ಬಗ್ಗೆ ಅವರಿಗೆ ತಾತ್ವಿಕ ಖಚಿತತೆಯಿತ್ತು.

ನಿಜ, ನೆಹರೂಗೆ ತಮ್ಮ ಸಮಕಾಲೀನರಾದ ಅಂಬೇಡ್ಕರ್ ಅವರ ಆಳವಾದ ವಿದ್ವತ್ತು ಮತ್ತು ದಲಿತರ ಪ್ರಜ್ಞೆ ಇರಲಿಲ್ಲ; ಲೋಹಿಯಾಗಿದ್ದಂತೆ ಭಾರತದ ಚರಿತ್ರೆ ಪುರಾಣಗಳನ್ನು ವಿಶ್ಲೇಷಿಸುವ ಹರಿತವಾದ ಬೌದ್ಧಿಕತೆಯಾಗಲಿ ನೈತಿಕ ನಿಷ್ಠುರತೆಯಾಗಲಿ ಇರಲಿಲ್ಲ; ಭಗತಸಿಂಗರಿಗಿದ್ದ ವರ್ಗನೆಲೆಯಿಂದ ಹುಟ್ಟಿದ ಆಳವಾದ ಸಮಾಜವಾದಿ ಪ್ರಜ್ಞೆಯಿರಲಿಲ್ಲ. ಅವರ ಬರೆಹ ಮತ್ತು ಭಾಷಣವುಳ್ಳ ಕೃತಿಗಳಾದರೂ ದೊಡ್ಡ ವಿದ್ವತ್‍ಕೃತಿಗಳಲ್ಲ. ಆದರೆ ಅವರಲ್ಲಿ ಖಂಡಿತವಾಗಿ, ಭಾರತದಂತಹ ಬಹುಸಾಂಸ್ಕøತಿಕ ನಾಡನ್ನು ಮುನ್ನಡೆಸಲು ಒಬ್ಬ ರಾಜಕಾರಣಿಗೆ ಇರಬೇಕಾದ ಕಲ್ಪನೆಯಿತ್ತು. ದೇಶದ ಚರಿತ್ರೆ ಪರಂಪರೆ ಸಂಸ್ಕøತಿಗಳ ತಕ್ಕ ತಿಳುವಳಿಕೆ ಮತ್ತು ಸಂವೇದನೆಯಿತ್ತು. ಅವರ ಕೃತಿಗಳಲ್ಲಿ ವಸಾಹತುಶಾಹಿ ವಿರೋಧಿ ಚಳುವಳಿ ಕಾಲದಲ್ಲಿ ನಡೆದ ರಾಜಕೀಯ ಸೈದ್ಧಾಂತಿಕ ವಾಗ್ವಾದಗಳಿವೆ; ಸಮಕಾಲೀನ ವಿದ್ಯಮಾನಗಳ ಅಪೂರ್ವ ಮಾಹಿತಿಗಳಿವೆ; ಮುಖ್ಯವಾಗಿ ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮತೀಯವಾದ ಎರಡನ್ನೂ ಖಂಡಿಸುತ್ತ ಮಾಡಿರುವ ತೀಕ್ಷ್ಣ ಪ್ರತಿಕ್ರಿಯೆಗಳಿವೆ. ಇವುಗಳಲೆಲ್ಲ ನೆಹರೂರ ಭಾರತದ ಕಲ್ಪನೆಯೊಂದು ಮಂಡಿತವಾಗಿದೆ. ಧರ್ಮದ ವಿಕಾರಗಳು ಭಾರತೀಯ ಸಮಾಜವನ್ನು ಕಟ್ಟುವುದಕ್ಕೆ ಮತ್ತು ಡೆಮಾಕ್ರಸಿಯನ್ನು ಅರ್ಥಪೂರ್ಣವಾಗಿಸುವುದಕ್ಕೆ ದೊಡ್ಡ ತೊಡಕು ಎಂಬುದನ್ನು ಅವರು ಮತ್ತೆಮತ್ತೆ ಹೇಳುತ್ತಾರೆ. ಅವರ ವೈಚಾರಿಕತೆಗೆ ಪಾಶ್ಚಿಮಾತ್ಯ ಶಿಕ್ಷಣ ಕಾರಣವೆನ್ನುವುದು ಅರ್ಧಸತ್ಯ. ಅಂಬೇಡ್ಕರರ ಸಾಮಾಜಿಕ ಬದ್ಧತೆ, ಟಾಗೂರರ ಮಾನವತಾವಾದ, ಗಾಂಧಿಯ ಧಾರ್ಮಿಕ ಸಹನಶೀಲತೆ, ಲೋಹಿಯಾರ ನೈತಿಕ ಪ್ರಜ್ಞೆಗಳು ಕೂಡ ಅವರ ಚಿಂತನೆಯನ್ನು ರೂಪಿಸಿದವು. ಮುಖ್ಯವಾಗಿ ಹಿಂದೂ ಮತ್ತು ಮುಸ್ಲಿಂ ಮತೀಯವಾದಿಗಳ ವರ್ತನೆಗಳು ಅವರನ್ನು ನಿಲುವನ್ನು ರೂಪಿಸಿದವು. ಇದು ಇನ್ನರ್ಧ ಸತ್ಯ.

ಈ ಹಿನ್ನೆಲೆಯಲ್ಲಿ ಗಾಂಧಿಯವರ ಜತೆ ಅಂಬೇಡ್ಕರ್, ಟಾಗೂರ್, ನೆಹರೂ ನಡೆಸಿದ ಮುಖಾಮುಖಿಗಳನ್ನು ಅಥವಾ ನೆಹರೂ ವಿರುದ್ಧ ಲೋಹಿಯಾ ಮಾಡಿದ ಕಟುಪ್ರಹಾರಗಳನ್ನು ಗಮನಿಸಬೇಕು. ಇವೆಲ್ಲವೂ ಭವಿಷ್ಯದ ಭಾರತವನ್ನು ಹೇಗೆ ರೂಪಿಸಬೇಕೆಂಬ ಬಗ್ಗೆ ತಾತ್ವಿಕ ಮತ್ತು ರಾಜಕೀಯ ಪ್ರಶ್ನೆಗಳನ್ನು ಒಳಗೊಂಡಿವೆ. ವರ್ತಮಾನದ ನಾವು ಇವರ ವಾಗ್ವಾದಗಳನ್ನು ಕೇವಲ ಬಣಜಗಳವನ್ನಾಗಿ ಗ್ರಹಿಸಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ. ಅವು ಆಯಾ ಚಾರಿತ್ರಿಕ ಕಾಲಘಟ್ಟದ ವಾಗ್ವಾದಗಳಾಗಿದ್ದವು; ಭಾರತ ಕಟ್ಟುವ ಆಶಯದಲ್ಲಿ ಹುಟ್ಟಿದ ಆರೋಗ್ಯಕರ ಭಿನ್ನಮತಗಳಾಗಿದ್ದವು ಎಂದು ನೋಡಬೇಕು. ಮೇಲ್ಕಾಣಿಸಿದ ದಾರ್ಶನಿಕರಲ್ಲಿ ಎಷ್ಟೇ ಭಿನ್ನಮತವಿದ್ದರೂ, ಮತೀಯವಾದಿಗಳು ಬಯಸುತ್ತಿದ್ದ ಭಾರತದ ಕಲ್ಪನೆಯನ್ನು ನಿರಾಕರಿಸುವ ವಿಷಯದಲ್ಲಿ ಸಹಮತವಿತ್ತು.

ಈ ಹಿನ್ನೆಲೆಯಲ್ಲಿ ಕನ್ನಡ ಕವಿಗಳಲ್ಲಿ ಕಾಣುವ ನೆಹರೂ ವಿಮರ್ಶೆ ಸ್ವಾರಸ್ಯಕರವಾಗಿದೆ. ಅಡಿಗರು `ನೆಹರೂ ನಿವೃತ್ತರಾಗುವುದಿಲ್ಲ’ ಕವನದಲ್ಲಿ ನೆಹರೂರನ್ನು ವಾಗ್‍ರೂಪದ ಹಾಲಿನಹಳ್ಳ ಹರಿಸುವ, ನೆಲದ ಸಂಪರ್ಕವಿಲ್ಲದೆ ಮುಗಿಲನಳೆಯುವ, ಭೂಗೋಳದ ಕಷ್ಟಹೊತ್ತು ಅನಗತ್ಯ ಸುತ್ತಾಡುವ, ಮಾತಿನ ಮೋಡಿಯಿಂದ ಜನರನ್ನು ಮೋಹಕ್ಕೊಳಪಡಿಸುವ ನಾಯಕನೆಂದು ಟೀಕಿಸುತ್ತಾರೆ; ದೀರ್ಘಕಾಲ ಪ್ರಧಾನಿಯಾಗಿದ್ದ ಅವರನ್ನು `ತೆರೆಬಿದ್ದರೂ ರಂಗಬಿಡದ ಚಿರಯುವಕ’ ಎಂದು ವಿಡಂಬಿಸುತ್ತಾರೆ. ಕುವೆಂಪು ತಮ್ಮ `ಸ್ವಾತಂತ್ರ್ಯೋದಯ ಮಹಾಪ್ರಗಾಥಾ’ದಲ್ಲಿ ಆಗಸ್ಟ್ ಹದಿನೈದರ ಮುಂಜಾವಿನಲ್ಲಿ ನೆಹರೂರ ಮಾಡಿದ ಚಾರಿತ್ರಿಕ ಭಾಷಣದಿಂದ ಪ್ರೇರಿತರಾಗಿ `ಲೋಕ ಮಲಗಿದಂದು ನೀ ನಟ್ಟನಡೂರಾತ್ರಿ ಎಚ್ಚರಾಂತೆ’ ಎಂದು ಮೆಚ್ಚುಗೆಯಾಡುತ್ತಾರೆ. ನೆಹರೂರ ಆರ್ಥಿಕ ನೀತಿಯನ್ನು ಅವರು ಪೂರ್ಣವಾಗಿ ಒಪ್ಪಲಿಲ್ಲ. ಆದರೂ ನೆಹರೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಹಾಗೂ ಸಮಾಜವಾದಿ ಪ್ರಜ್ಞೆಗಳ ಬಗ್ಗೆ ಅವರಿಗೆ ಆಕರ್ಷಣೆಯಿತ್ತು. ಈ ಹಿನ್ನೆಲೆಯಲ್ಲಿ ನೆಹರೂ ಬೃಹತ್ ಕೈಗಾರಿಕೆ ಮತ್ತು ಅಣೆಕಟ್ಟುಗಳನ್ನು ಭಾರತದ ಹೊಸ ಗುಡಿಗಳೆಂದು ಕರೆದದ್ದು ಮಾರ್ಮಿಕವಾಗಿದೆ. ದೇಹವನ್ನು ದೇಗುಲವಾಗಿ ನೋಡುವ, ಗುಡಿಚರ್ಚು ಮಸಜೀದುಗಳನ್ನು ಬಿಟ್ಟು ಹೊರಬರಲು ಕರೆಗೊಡುವ ಚಿಂತನೆಗಳಲ್ಲಿ ಇರುವಂತೆ, ಇಲ್ಲೂ ಸಾಂಸ್ಥಿಕ ಧರ್ಮದ ಕುರುಹುಗಳಿಗೆ ಪರ್ಯಾಯಗಳನ್ನು ಮಂಡಿಸುವ ಯತ್ನವಿದೆ. ನಿಸಾರರ `ನೆಹರು’ ಪದ್ಯದ ಆರಾಧನೆಗೆ ಹೋಲಿಸಿದರೆ, ಬಹುತೇಕ ಕವಿತೆಗಳಲ್ಲಿ ನೆಹರೂ ವಿಮರ್ಶೆಯಿದೆ. ದ್ವೇಷವಿಲ್ಲ.

ನೆಹರೂ ದೇಶದ ತುಂಬ ಸ್ಥಾಪಿಸಿದ ವಿಜ್ಞಾನ ಸಂಶೋಧನ ಸಂಸ್ಥೆಗಳನ್ನು, ಅಮೆರಿಕಕ್ಕೆ ವಾಲದೆ ಉಳಿದಿದ್ದನ್ನು ದೊಡ್ಡ ಸಾಧನೆ ಎನ್ನುವವರಿದ್ದಾರೆ; ಆದರೆ ಅಮೆರಿಕದ ಹಾಗೂ ಬಂಡವಾಳವಾದ ಪರವಾಗಿದ್ದವರು ನೆಹರೂ ಭಾರತವನ್ನು ವ್ಯಕ್ತಿಸ್ವಾತಂತ್ರ್ಯ ಕಳೆದುಹಾಕುವ ಕಮ್ಯುನಿಸ್ಟ್ ದೇಶವನ್ನಾಗಿ ಮಾಡಿಬಿಡುತ್ತಾರೆಂದು ತಪ್ಪಾಗಿ ಭಾವಿಸಿದರು. ನೆಹರೂರ ಅನೇಕ ರಾಜಕೀಯ ಆರ್ಥಿಕ ನೀತಿ ನಿರ್ಧಾರಗಳ ಬಗ್ಗೆ ಈಗಲೂ ವಿಮರ್ಶೆ ಸಾಧ್ಯ. ಆದರೆ ಇಂದಿರಾ, ನರಸಿಂಹರಾವ್, ಮನಮೋಹನ್, ನರೇಂದ್ರ ಮೋದಿ ಮುಂತಾಗಿ ಹೊಸನಾಯಕರು ಬಂದಂತೆಲ್ಲ ಅವರ ವ್ಯಕ್ತಿತ್ವ ಮಹತ್ವದ್ದಾಗಿ ಉಜ್ವಲವಾಗಿ ಕಾಣುತ್ತಿದೆ.

ನೆಹರೂ, ಭಾರತದ ವಸಾಹತುಶಾಹಿ ವಿರೋಧಿ ಚಳುವಳಿ ಹಾಗೂ ಪ್ರಜಾಪ್ರಭುತ್ವದ ಪ್ರಯೋಗಗಳು ತಮ್ಮೆಲ್ಲ ಏಳುಬೀಳುಗಳಲ್ಲಿ ಹುಟ್ಟಿಸಿದ ಚಿಂತನಶೀಲ ನಾಯಕ. ಅವರು ಮೊದಲ ಪ್ರಧಾನಿಯಾಗಿ(1947-64) ಭಾರತವನ್ನು ಧರ್ಮನಿರಪೇಕ್ಷ ನಾಡನ್ನಾಗಿ ರೂಪಿಸಲು ಭದ್ರಬುನಾದಿ ಹಾಕಿದರು. ಈ ಬುನಾದಿಯ ಮಹತ್ವ, ಜಿನ್ನಾ ಪ್ರಥಮ ಪ್ರಧಾನಿಯಾಗಿ ರೂಪಿಸಿದ ಪಾಕಿಸ್ತಾನ ಕಾಣುತ್ತಿರುವ ಅಧಃಪತನವನ್ನು ಕಾಣುವಾಗ ಸ್ಪಷ್ಟವಾಗುತ್ತದೆ. ಅವರು ಧಾರ್ಮಿಕತೆಯ ಹೆಸರಲ್ಲಿ ಹುಟ್ಟುವ ಮತೀಯ ರಾಜಕಾರಣ, ಮೌಢ್ಯ ಮತ್ತು ಸಾಂಸ್ಕøತಿಕ ಅಸಹನೆ ಇರುವ ಸಮಾಜ ಮುನ್ನಡೆ ಸಾಧಿಸಲಾರದು ಎಂದು ಗಾಢವಾಗಿ ನಂಬಿದ್ದರು. ಇದಕ್ಕೆ ಅವರು ಕಂಡ ಧರ್ಮದ ಹೆಸರಲ್ಲಿ ದೇಶ ವಿಭಜನೆಗೊಂಡ ದುರಂತ ಹಾಗೂ ಗಾಂಧೀಹತ್ಯೆ ಪುರಾವೆಯಾಗಿದ್ದವು.
ಅಂಬೇಡ್ಕರ್, ನೆಹರೂ, ಬಸವಲಿಂಗಪ್ಪ, ಜ್ಯೋತಿಬಸು, ದೇವರಾಜ ಅರಸು, ನಜೀರ್‍ಸಾಬ್, ಗೋವಿಂದೇಗೌಡ, ಕಡಿದಾಳ್, ಕರ್ಪೂರಿ ಠಾಕೂರ್ – ತಮ್ಮೆಲ್ಲ ಮಿತಿಗಳಲ್ಲೂ ಭಾರತದ ಲಿಬರಲ್ ಡೆಮಾಕ್ರಸಿಯ ಚೌಕಟ್ಟಿನೊಳಗೆ ದೇಶಕಟ್ಟುವ ಮುತ್ಸದ್ದಿತನ ವಿವೇಕ ದಿಟ್ಟತನ ದೂರದರ್ಶಿತ್ವ ತೋರಿದವರು. ಈಗಲೂ ಭಾರತದ ಹೊಸಹೊಸ ಪರಿಕಲ್ಪನೆಗಳ ಮಂಡನೆಯಾಗುತ್ತಿದೆ. ಆದರೆ ಇದಕ್ಕಾಗಿ ಹೊಸಹೊಸ ಪ್ರತಿಮೆಗಳ ನಿರ್ಮಾಣ ಮತ್ತು ನಾಶದ ಪ್ರಕ್ರಿಯೆ ಶುರುವಾಗಿದ್ದು, ಅದು ನಾಲ್ಕು ಮಾದರಿಗಳಲ್ಲಿದೆ:
ನೆಹರೂಗೆ ಪ್ರತಿಯಾಗಿ ಅವರ ಜತೆ ಭಿನ್ನಮತವಿದ್ದ ಪಟೇಲರನ್ನು ಪರ್ಯಾಯವಾಗಿ ಮುಂದಿಡಲಾಗುತ್ತಿದೆ. ಇದಕ್ಕಾಗಿ ಅವರ ಕಬ್ಬಿಣದ ಪ್ರತಿಮೆ ನಿಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಾಂಧಿಯ ಕೊಲೆಗಾರರನ್ನು ದೈವೀಕರಿಸಲಾಗುತ್ತಿದೆ. ಗಾಂಧಿ ಹತ್ಯೆಯ ರೂವಾರಿಗಳಲ್ಲಿ ಒಬ್ಬರಾಗಿದ್ದ ಸಾವರ್ಕರರ ಚಿತ್ರಪಟವನ್ನು ಪಾರ್ಲಿಮೆಂಟಿನಲ್ಲಿ ಸ್ಥಾಪಿಸಲಾಗಿದೆ. ಇದು ತಮ್ಮ ರಾಜಕೀಯ ಸಿದ್ಧಾಂತಕ್ಕೆ ಬೇಕಾದ ಪ್ರತಿಮೆಗಳನ್ನು ಪ್ರಧಾನಧಾರೆಯ ಭಾಗವಾಗಿಸುವ ಕ್ರಿಯೆ; ಜನಪರ ಚಿಂತಕರಾದ ಬಸವಣ್ಣ ಭಗತಸಿಂಗ್ ವಿವೇಕಾನಂದ ಅಂಬೇಡ್ಕರ್ ಅವರನ್ನು ಉಪಾಯವಾಗಿ ತೆಕ್ಕಿಸಿಕೊಂಡು ಜೀರ್ಣಸಿಕೊಳ್ಳಲಾಗುತ್ತಿದೆ. ಇದು ಪ್ರತಿತತ್ವದ ಜನಪ್ರಿಯ ಪ್ರತೀಕಗಳನ್ನು ಪಳಗಿಸುವ ಕ್ರಿಯೆ; ಕೆಲವು ಪ್ರತಿಮೆಗಳನ್ನು ಕರಗಿಸಿ ಹೊಸ ಅಚ್ಚಿಗೆ ಸುರಿದು ಇಷ್ಟದೇವತೆಗಳ ಆಕಾರ ಕೊಡಲಾಗುತ್ತಿದೆ. ಗಾಂಧಿಯನ್ನು ಕಸತೆಗೆಯುವ ಕಾರ್ಯಕ್ಕೆ ಸಂಕೇತವಾಗಿಸಿರುವುದು ಇದಕ್ಕೆ ಸಾಕ್ಷಿ. ಈ. ಕೆಲವು ಪ್ರತಿಮೆಗಳನ್ನು ಭಗ್ನಗೊಳಿಸಲಾಗುತ್ತಿದೆ ಅಥವಾ ದುರಳೀಕರಿಸಲಾಗುತ್ತಿದೆ. ಅವುಗಳಲ್ಲಿ ನೆಹರೂ ಅವರದೂ ಒಂದು.

ಚರಿತ್ರೆಯ ಯಾವುದೇ ವ್ಯಕ್ತಿತ್ವ ಅಥವಾ ತತ್ವಸಿದ್ಧಾಂತ ಎಷ್ಟೇ ಹಿರಿದಾಗಿರಲಿ, ಅದು ಮರುಹುಟ್ಟು ಪಡೆಯಲು ಸಮಕಾಲೀನ ಸಮಾಜಗಳ ವಿಮರ್ಶೆಯ ಅಗ್ನಿದಿಬ್ಯ ಹಾಯಲೇಬೇಕು. ಆದರೆ ಜತೆಯಲ್ಲೇ ವ್ಯಕ್ತಿತ್ವ ಅಥವಾ ತತ್ವಸಿದ್ದಾಂತದ ವಿಮರ್ಶೆಯನ್ನು ಯಾವ ಬದಲಿ ಸಿದ್ಧಾಂತದ ಪ್ರತಿಷ್ಠಾಪನೆಗಾಗಿ ಮಾಡಲಾಗುತ್ತಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು. ಸದ್ಯ ಬಲಪಂಥೀಯರಿಂದ ಜರುಗುತ್ತಿರುವ ನೆಹರೂ ಪ್ರತಿಮಾ ನಾಶದಲ್ಲಿ ವಿಮರ್ಶೆಯಿಲ್ಲ. ಅವರು ಪ್ರತಿನಿಧಿಸುತ್ತಿದ್ದ ವೈಚಾರಿಕತೆ ಜಾತ್ಯತೀತತೆ ಧಾರ್ಮಿಕ ಸಹನಶೀಲತೆಗಳ ಆಶಯಗಳನ್ನು ಮತೀಯ ರಾಜಕಾರಣದ ಸ್ಥಾಪನೆಗಾಗಿ ಗುಡಿಸಿಹಾಕುವ ಇರಾದೆಯಿದೆ.
ಭಾರತವೀಗ ಜಾಗತೀಕರಣದ ಘಟ್ಟದಲ್ಲಿ ಬಲಿಷ್ಠ ದೇಶಗಳ ಗುಲಾಮಗಿರಿಯತ್ತ, ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ರೈತರನ್ನು ಬಲಿಕೊಡುವುದೇ ಅಭಿವೃದ್ಧಿ ಎಂಬತ್ತ ಚಲಿಸುತ್ತಿದೆ. ಹಿಂದೆ ಶಕ್ತಿ ರಾಜಕಾರಣಕ್ಕೆ ಪ್ರವೇಶ ಜನಪರ ಚಳುವಳಿಗಳ ಮೂಲಕವಾಗಿತ್ತು; ಈಗ ಅದಕ್ಕೆ ಹತ್ಯಾಕಾಂಡಗಳ ಇಲ್ಲವೇ ಕಾರ್ಪೊರೇಟ್ ಸಂಸ್ಥೆಗಳು ಕೊಡಮಾಡುವ ರೊಕ್ಕದಿಂದ ಹಾದಿ ನಿರ್ಮಾಣಗೊಳ್ಳುತ್ತಿದೆ. ಅಕ್ರಮವಾಗಿ ಸಂಪತ್ತು ಗಳಿಸಿದವರು ಅದನ್ನು ನ್ಯಾಯಬದ್ಧಗೊಳಿಸಲು ರಾಜಕೀಯ ಅಧಿಕಾರ ಹಿಡಿಯುತ್ತಿದ್ದಾರೆ; ಉದ್ಯಮಿಗಳು ರಾಜಕಾರಣಗಳಾಗಿ ರಾಜಕಾರಣಿಗಳು ಉದ್ಯಮಿಗಳಾಗಿ ರೂಪಾಂತರ ಆಗುತ್ತಿದ್ದಾರೆ; ಚುನಾವಣಾ ವಿಜಯಗಳಿಗಾಗಿ ಧರ್ಮದ ಹೆಸರಲ್ಲಿ ಜನರ ನೆತ್ತರನ್ನು ಹರಿಸಬಲ್ಲ ಯುದ್ಧತಂತ್ರವು, ಸಮರ್ಥ ನಾಯಕತ್ವದ ಕುರುಹಾಗಿ ಮಾನ್ಯವಾಗುತ್ತಿದೆ; ಶಾಲೆಗೆ ಹೋಗಬಯಸುವ ಚಿಕ್ಕಬಾಲೆಯನ್ನು ತುಪಾಕಿಯಲ್ಲಿ ಸುಡುವ, ಮಹಿಳೆಯರನ್ನು ಸಾರ್ವಜನಿಕ ಬದುಕಿಗೆ ಹೋಗುವುದನ್ನು ವಿರೋಧಿಸುವ ದುಷ್ಟರು ಜನಾಭಿಪ್ರಾಯ ರೂಪಿಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ನೆಹರೂರ ಧರ್ಮನಿರಪೇಕ್ಷತೆ, ಲೋಹಿಯಾರ ನೈತಿಕತೆ, ಗಾಂಧಿಯ ಧಾರ್ಮಿಕತೆ, ಅಂಬೇಡ್ಕರರ ಸಾಮಾಜಿಕ ಬದ್ಧತೆಗಳು ಹಾಗೂ ಅಸಂಖ್ಯಾತ ಜನಪರ ಚಳುವಳಿಗಳು ರೂಪಿಸಬಯಸಿದ ಭಾರತದ ಪರಿಕಲ್ಪನೆಯ ಮರುಚರ್ಚೆ ಜರೂರಾಗಿ ಕಾಣುತ್ತಿದೆ.

(ಅಭಿನವ ಪ್ರಕಟಿಸಿರುವ `ನೆತ್ತರಸೂತಕ’ ಕೃತಿಯಿಂದ)

Please follow and like us: