ರವಿ ಬೆಳಗೆರೆ ಬಗ್ಗೆ ಬಳ್ಳಾರಿಯ ಬರಹಗಾರರ ಎರಡು ಲೇಖನಗಳು

ಅಲೋಚನೆಯ ಪರಾವಲಂಬಿ ವರ್ಗವನ್ನು ಸೃಷ್ಟಿಸಿದ ರವಿಬೆಳಗೆರೆ -ಅರುಣ್ ಜೋಳದ ಕೂಡ್ಲಿಗಿ

“ನೀನು ಹಂದಿ ಮಾಂಸ ತಿಂತೀ ಏನಯ್ಯಾ” ಎಂದು ಕೇಳಿದ್ದ ರವಿ ಬೆಳಗೆರೆಯನ್ನು ನೆನೆದು-ಬಿ.ಪೀರ್ ಬಾಷಾ

 

ಅಲೋಚನೆಯ ಪರಾವಲಂಬಿ ವರ್ಗವನ್ನು ಸೃಷ್ಟಿಸಿದ ರವಿಬೆಳಗೆರೆ -ಅರುಣ್ ಜೋಳದ ಕೂಡ್ಲಿಗಿ

ಲಂಕೇಶ್ ಅವರು ತಮ್ಮ ಪತ್ರಿಕೆ ಮೂಲಕ ಒಂದು ಪ್ರಜ್ಞಾವಂತ ಯುವಜನತೆಯ ಜಾಣಜಾಣೆಯರನ್ನು ರೂಪಿಸಿದ್ದರು. ಈ ರೂಪಿಸುವಿಕೆಯಲ್ಲಿ ಓದುಗರೂ ಸಹ ಪ್ರಜ್ಞಾವಂತಿಕೆಯಿಂದ ಸ್ವತಃ ಬರಹ ಮಾಡುವ ಸ್ವಂತ ಆಲೋಚಿಸುವ, ತನ್ನ ಸುತ್ತಮುತ್ತಣ ಸಂಗತಿಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ, ಪ್ರಭುತ್ವವನ್ನು ಪ್ರಶ್ನಿಸುವ, ಸ್ವವಿಮರ್ಶೆ ಮಾಡಿಕೊಂಡು ಮುನ್ನಡೆಯುವ ಮಾದರಿಯನ್ನು ಕಟ್ಟಿಕೊಟ್ಟರು. ರವಿ ಬೆಳಗೆರೆಯವರು ‘ಹಾಯ್ ಬೆಂಗಳೂರು’ ಮೂಲಕ  ಮನುಷ್ಯರಲ್ಲಿ ಸದಾ ಕುತೂಹಲ ತಾಳುವ ದೌರ್ಬಲ್ಯಗಳಾದ ಸೆಕ್ಸ್ ಮತ್ತು ಕ್ರೈಂ ವಿಜೃಂಬಣೆಯ ಮೂಲಕ

ದುಡಿವ ವರ್ಗದ ಯುವಜನತೆಯಲ್ಲಿ ಒಂದು ಬಗೆಯ ರುಚಿಕಟ್ಟಾದ ಮಸಾಲೆಯಂತಹ ಲಘು ಬರಹವನ್ನು ಪರಿಚಯಿಸಿದರು‌. ಹಾಗಾಗಿ ಈ ಬರಹಕ್ಕೆ ಡ್ರಗ್ಸ್ ತರಹ ಅಡಿಕ್ಟ್ ಆಗುವ ಗುಣವಿತ್ತು.  ಹೀಗಾಗಿ ಒಂದು ಕಾಲಕ್ಕೆ ಆಟೋ ಚಾಲಕರಿಂದಿಡಿದು ದುಡಿವ ವರ್ಗದ ಯುವಜನತೆ ಹುಚ್ಚೆದ್ದು ರವಿ ಬೆಳಗೆರೆ ಅವರ ಅಭಿಮಾನಿಗಳಾದರು. ಇವರಾರೂ ಸ್ವತಂ ಆಲೋಚಿಸುವ ಪ್ರಜ್ಞಾವಂತರಾಗದೆ ಎಲ್ಲದರ ಬಗ್ಗೆ ರವಿ ಅವರು ಬರೆಯುತ್ತಾರೆ ನಾವು ಓದಬೇಕಷ್ಟೆ ಎನ್ನುವ ಆಲೋಚನೆಯಲ್ಲಿ ಪರಾವಲಂಬಿಗಳಾದರು. ಎಲ್ಲದರ ಬಗ್ಗೆ ಸೂಕ್ಷ್ಮರಾಗದರೆ  ಅಸೂಕ್ಷ್ಮವಾದ ಹೀರೋಯಿಸಮ್ ಬೆಳೆಸಿಕೊಂಡದ್ದೆ ಹೆಚ್ಚು. ಮಹಿಳೆಯನ್ನು ನೋಡುವ  ಗಂಡಾಳ್ವಿಕೆಯ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಿದರು.

ರವಿ ಬೆಳೆಗೆರೆಯ ಹಾಯ್ ಬೆಂಗಳೂರ್ ಮಾದರಿಯು ಎಲ್ಲಾ ಜಿಲ್ಲೆ ತಾಲೂಕು‌ ಮಟ್ಟದಲ್ಲಿ ಬ್ಲಾಕ್ ಟ್ಯಾಬ್ಲೆಡ್ ನ ದೊಡ್ಡ ಪ್ರಭಾವ ಬೀರಿತು. ಈ ಲೋಕಲ್ ಬ್ಲಾಕ್ ಟ್ಯಾಬ್ಲೆಡ್ ಆರಂಭಿಸಿದ ಯುವ ಜನತೆ ಸೆಕ್ಸ್ ಕ್ರೈಮ್ ಮತ್ತು ಬ್ಲಾಕ್ ಮೇಲನ್ನೆ ತಮ್ಮ ವೃತ್ತಿಯನ್ನಾಗಿಸಿಕೊಂಡರು. ಎಷ್ಟೋ ಮಹಿಳೆಯರ ಮಾನ ಹರಾಜುಮಾಡಿದರು. ಅದಕ್ಕೆ ರವಿ ಬೆಳೆಗೆರೆ ಅವರನ್ನು ಮಾದರಿಯನ್ನಾಗಿಸಿಕೊಂಡರು. ಅವುಗಳೆಲ್ಲಾ ಬಹಳ ದಿನ ನಡೆಯಲಿಲ್ಲ ಎನ್ನುವುದು ಬೇರೆಯ ಮಾತು. ನಾನು ಡಿಗ್ರಿಯಲ್ಲಿ ರವಿ ಬೆಳಗೆರೆಯ ಬರಹ ಚೂರುಪಾರು ಓದಿದ್ದೆ. ಹಾಯ್

ಮತ್ತು ಓ ಮನಸೆಯಲ್ಲಿ ನನ್ನ ಒಂದೆರಡು ಪದ್ಯಗಳು ಪ್ರಕಟವಾಗಿದ್ದವು. ಡಿಗ್ರಿ ನಂತರ ಎಂ.ಎ ಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಗೆ ಬಂದ ಕಾರಣ ನಿಧಾನಕ್ಕೆ ಶುರುವಾದ ಓದು ಚಿಂತನೆ ರವಿ ಬೆಳೆಗೆರೆ ಅವರ ಬರಹದ ಮಿತಿಗಳನ್ನು ಸ್ಪಷ್ಟವಾಗಿ ಕಾಣಿಸಿತು. ಹಾಗಾಗಿ ಅಲ್ಲಿಂದ ರವಿ ಬೆಳೆಗೆರೆ ಬರಹವನ್ನು ಓದುವುದನ್ನು ಪೂರ್ತಿ ಕೈಬಿಟ್ಟೆ. ಅವರೊಂದಿಗೆ ನೇರ ಮಾತಾಡಿದ್ದು ಒಂದೇ ಸಲ..

ಸಂಡೂರು ಭೂ ಹೋರಾಟ ಪುಸ್ತಕ ಬರೆವ ಸಂದರ್ಭದಲ್ಲಿ ಸಂಡೂರಿಗೆ ಸಂಬಂಧಪಟ್ಟ ವಿಷಯವೊಂದನ್ನು ತಿಳಿಯಲು ಅವರಿಗೆ ಕಾಲ್ ಮಾಡಿ ವಿಚಾರಿಸಿದ್ದೆ. ಒಂದಷ್ಟು ಮಾಹಿತಿ ಕೊಟ್ಟಿದ್ದರು. ನೀನು ಗೊತ್ತು ನನಗೆ ಅಂತ ಅಚ್ಚರಿ ಮೂಡಿಸಿದ್ದರು. ಮತ್ತಷ್ಟು ಪರಿಶೀಲಿಸಿದಾಗ ಅವರು ಕೊಟ್ಟ ಮಾಹಿತಿ ತಪ್ಪಿತ್ತು. ಹಾಗಾಗಿ ಸುಮ್ಮನಾದೆ. ಅದು‌ ಬಿಟ್ಟರೆ ಬೇರೆ ಯಾವ ತರಹದ ಒಡನಾಟವೂ ಇರಲಿಲ್ಲ.

ರವಿ ಬೆಳಗೆರೆ ಅವರು ಒಬ್ಬ ಪತ್ರಕರ್ತ ಹೇಗಿರಬಾರದು, ಒಂದು ಪತ್ರಿಕೆಯನ್ನು ಹೇಗೆ ನಡೆಸಬಾರದು, ಯುವಜನತೆಯ ತಲೆಗೆ ಸೆಕ್ಸ್ ಕ್ರೈಂ ನಂತಹ ರೋಚಕ ಸಂಗತಿಗಳನ್ನೆ ತುರುಕಿದರೆ ಹೇಗೆ ಒಂದು ತಲೆಮಾರು ಅಂಧಾಭಿಮಾನಿಗಳಾಗುತ್ತಾರೆ ಎನ್ನುವುದಕ್ಕೂ ಒಂದು ಮಾದರಿಯನ್ನು ಸೃಷ್ಟಿಸಿದ್ದಾರೆ.

ಕನ್ನಡದ ಸಂದರ್ಭದಲ್ಲಿ ಒಬ್ಬ ವರ್ಣರಂಜಿತ ವ್ಯಕ್ತಿಯಾಗಿ ಬಾಳಿ ಹೊರಟಿದ್ದಾರೆ.. ಹೋಗಿ ಬನ್ನಿ, ನಮಸ್ಕಾರ. ಅಜೋ

 

ನೀನು ಹಂದಿ ಮಾಂಸ ತಿಂತೀ ಏನಯ್ಯಾಎಂದು ಕೇಳಿದ್ದ ರವಿ ಬೆಳಗೆರೆಯನ್ನು ನೆನೆದು-ಬಿ.ಪೀರ್ ಬಾಷಾ

ಬಿ.ಟಿ.ಎಸ್ ಬಸ್ಸಿನಲ್ಲಿ ಅವತ್ತು ತುಂಬಿಕೊಂಡ ಜನ. ಗದ್ದಲ. ಬಗಲ ಬ್ಯಾಗು ಅತ್ತಿತ್ತ ಸರಿಸಿಕೊಳ್ಳುತ್ತಾ ಆ ತನಕ ನಿಂತೇ ಪ್ರಯಾಣಿಸುತ್ತಿದ್ದಾಗ ಖಾಲಿಯಾದ ಒಂದು ಸೀಟಿನಲ್ಲಿ ಪಟಕ್ಕನೆ ಕೂತು ನಿಟ್ಟುಸಿರು ಬಿಟ್ಟು ಘಳಿಗೆ ಕಳೆದಿರಲಿಲ್ಲ, ಮೊಬೈಲ್ ರಿಂಗಾಯಿತು. ಕಂಡಿದ್ದು ಬರೀ ನಂಬರ್‌ ಗಳು. ಹಾಗಾಗಿ “ಇದ್ಯಾವುದೋ ನನ್ನ ಲಿಸ್ಟಿನಲ್ಲಿಲ್ಲದ ಹೆಸರು” ಎಂದುಕೊಳ್ಳುತ್ತಾ ರಿಸೀವ್ ಮಾಡಿ, ” ಹಲೋ” ಅಂದೆ ಉದಾಸೀನದಿಂದ.

“ಎಲ್ಲದಿಯೋ, ಹೆಂಗದೀ”? ಅತ್ಯಾಪ್ತ ಎನಿಸುವ ಸಲಿಗೆಯ ಖಡಕ್ಕು ದನಿ!

ಈ ಭಾಷೆ ನಮ್ಮದೇ, ನಮ್ಮದೇ ಊರು- ಜಿಲ್ಲೆಯದು. ಇಷ್ಟು ಆಪ್ತ ದನಿ ಬೇರೆ. ನಾನೇಕೆ ಈ ನಂಬರ್ ಸೇವ್ ಮಾಡಿಕೊಂಡಿಲ್ಲ ಎಂದುಕೊಳ್ಳುತ್ತಲೇ, “ಯಾರು” ಎಂದೆ.

“ನಾನಯ್ಯ, ರವಿ ಬೆಳಗೆರೆ ” ನನಗ್ಗೊತ್ತು. ನೀನೆಲ್ಲಿ ನನ್ನ ನಂಬರ್ ಇಟ್ಕೊಳ್ತಿ? ಅದಿರ್ಲಿ…, ಎಲ್ಲದೀ ಈಗ?”

ಹೆಸರು ಕೇಳುತ್ತಲೇ, ನಾನು ಹಗುರಾಗಿ ಹೋಗಿದ್ದೆ. ತಕ್ಷಣ, ಸರ್… ಅಂದೆನೋ, ಅಣ್ಣಾ.. ಎಂದೆನೋ ಆ ಆಶ್ಚರ್ಯ ದ ಉದ್ಗಾರ ನನ್ನಲ್ಲಿ ನೆನಪನ್ನೂ ಉಳಿಸಿಲ್ಲ. ಆದರೆ “ಇಲ್ಲೇ ಬೆಂಗಳೂರಲ್ಲೇ ಅದೀನಿ” ಅಂದದಷ್ಟೇ, “ಏ..ಕಳ್ಳಾ, ಬಾರಯ್ಯ, ಇಲ್ಲಿಗೆ” ಎಂಬ ಪ್ರೀತಿ.

ನಾನು ಏನು ಹೇಳಬೇಕೆಂದು ತೋಚದೇ ಏನೇನೋ ಗುಯ್ ಗುಟ್ಟುತ್ತಿದ್ದಂತೆ….”ಏ..ಏನೂ ಹೇಳ್ಬೇಡ. ಬರ್ತೀಯಾ, ಇಲ್ಲಾ, ಹೊತ್ಹಾಕ್ಕೆಂಡ್ ಬರ್ಲ್ಯಾ” ಎಂದೇ ಬಿಟ್ಟರು. “ಸರಿ, ಬರ್ತೀನಿ” ಅಂತೇನೋ ಅಂದೆ. ಆದರೆ ಅವರ ವಿಳಾಸವೇ ಗೊತ್ತಿರಲಿಲ್ಲ. ಕೇಳಿಯೇ ಬಿಟ್ಟೆ. ವಿಚಿತ್ರವಾಗಿ ನಕ್ಕು, ಹೇಳಿದರು. ಹೋದೆ, ಸೀದಾ ಅಲ್ಲಿಗೆ.

ಗೇಟಿನಲ್ಲಿ ಸೆಕ್ಯುರಿಟಿ ಯವನು ಹೆಸರೇನು, ಯಾರನ್ನು ಕಾಣಬೇಕು ಅಂತಾ ಇನ್ನೂ ಕೇಳ್ತಿದ್ದಂಗೆ, ಅವನಿಗೆ ಒಳಗಿನಿಂದ ಫೋನ್ ಬಂತು. “ಬಿಡಯ್ಯಾ ಅವನಿಗೆ ಒಳಗೆ” ಎಂದಿರಬಹುದು ಬಹುಶಃ.” ” ಹೋಗಿ” ಅಂದ. ಒಳ ಬಂದೆ. ಅಲ್ಲಿ, ಎಲ್ಲಿ ಹೋಗುವುದೆಂದು ತೋಚದೆ, ಅತ್ತಿತ್ತಾ ನೋಡುತ್ತಾ ನಿಂತಿದ್ದಂತೆ….”ಇಲ್ಲೇ…ಇದ್ದೀನಿ ಬಾರಯ್ಯಾ” ಎಂದು ಜೋರಾಗಿ ಕರೆದ ಸದ್ದಿಗೆ, ಬರೆವಣಿಗೆಗೆ ಬಾಗಿದ್ದ ತಲೆಗಳೆಲ್ಲಾ ಒಮ್ಮೆಗೆ ಎದ್ದು ನಿಂತು ನನ್ನತ್ತಾ..ಹೊರಳಿದವು. ರವಿ, ಬೆಳಗೆರೆ, ತಮ್ಮ ಕೋಣೆ ಬಿಟ್ಟು ಹೊರಗಿನ ಕೆಲಸಗಾರರ ನಡುವೆ ಕುಳಿತಿದ್ದರು. ನಗುತ್ತಾ ಹೋಗಿ ಕೈ ಕುಲುಕಿದೆ.

“ಬಾರಪ್ಪಾ, ದೊರೆ” ಎಂದು ಕೈ ಕುಲುಕುತ್ತಾ, ಅಲ್ಲಿರುವ ಎಲ್ಲರಿಗೂ ಪರಿಚಯಿಸಿ ಕೊಡುವ ಧಾಟಿಯಲ್ಲಿ, “ಇವನಿದ್ದಾನಲ್ಲ, ಇವನ ಹೆಸರು ಪೀರ್ ಬಾಷ. ನಮ್ಮ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯವನು. ಕವಿ, ಹೋರಾಟಗಾರ. ಭಾಳಾ ಭಾಳಾ ಬುದ್ಧೀವಂತ…..” ನಾನು, ಇದು ಪ್ರೀತಿಯೋ, ವ್ಯಂಗವೋ ಎಂದು ಗೊಂದಲಕ್ಕೀಡಾದವನಂತೆ, ಅಡ್ಡ ಬಾಯಿ ಹಾಕಿ ತಡೆದೆ.

“ಹೇಗಿದ್ದಾನಯ್ಯಾ, ನಿಮ್ಮ ಎಂ.ಪಿ.ಪ್ರಕಾಶ, ನೀನೇನು, ಎಲ್ಲಾ ಬಿಟ್ಟು ಆತಗೂ ತಡವಿಕೊಂಡು ಬಿಟ್ಟೀಯಲ್ಲಾ…” ಎಂದು ಮಾತು ಶುರುವಿಟ್ಟುಕೊಂಡರು. ಪ್ರಕಾಶರ ವಿರುದ್ಧ ನಮ್ಮೂರಿನಲ್ಲಿ ನಾನು ಎದುರು ಹಚ್ಚಿಕೊಂಡ ಹೋರಾಟವನ್ನು ಗಮನಿಸಿದಂತೆನಿಸಿತ್ತು.

ಅವತ್ತು ಅದೂ, ಇದೂ ಎಂದು ಏನೇನು ಮಾತಾಡಿದೆವೋ ತಾಸೊಂದೂವರೆತಾಸು. ನೆನಪಿನಲ್ಲಿರುವುದು ಕೆಲವೇ ಮಾತುಗಳು. “ಗೊತ್ತಿಲ್ಲೇನು ನಿನಗೆ. ಎರಡನೆ ಹೆಂಡತೀನಾ ಮಾಡಿಕೊಂಡೆ…ಹೆ, ಅದ್ಭುತ ಹೆಣ್ಣು ಮಗಳು.. ಎಂದೆಲ್ಲಾ ಸಾಗಿ, ತನ್ನ ಬರೆವಣಿಗೆ, ದುಡಿಮೆ, ಶಾಲೆ ಕಟ್ಟಿದ್ದು, ಮಕ್ಕಳ ಪ್ರೀತಿ…ಇತ್ಯಾದಿ.

ಆಗ ಗೊತ್ತಾಯಿತು ನನಗೆ, ಇವರು ನನ್ನನ್ನು ಕರೆದದ್ದೇಕೆಂದು.

“ದೇವರು ಮನುಷ್ಯರಾದ ದಿನ” ನನ್ನ ಕವನ ಸಂಕಲನ, ಪ್ರಕಟವಾದ ಕೆಲವೇ ದಿನಗಳಲ್ಲಿ ಅದು ಹೇಗೋ ಅವರ ಕೈ ತಲುಪಿತ್ತು. ಅವರು ನನ್ನ ಕವಿತೆಗಳ ಬಗ್ಗೆ ಹೇಳುವುದೇನೂ ಇರಲಿಲ್ಲ. ಆದರೆ ಆ ಸಂಕಲನದಲ್ಲಿ ನಾನು ಬರೆದುಕೊಂಡಿದ್ದ ಮಾತುಗಳಲ್ಲಿನ ಒಂದು ವಿಷಯ ಅವರ ಮನಸ್ಸಿಗೆ ನಾಟಿತ್ತು. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ನನ್ನ ತಂಗಿ, ಹಾಲು ಕುಡಿವ ಹಸುಗೂಸಿನೊಂದಿಗೆ ಮೂವರು ಹೆಣ್ಣು ಮಕ್ಕಳನ್ನೂ ಒಳಗೊಂಡಂತೆ ತನ್ನ ಐದು ಮಕ್ಕಳನ್ನು ಸಾಕಿ ಸಲಹುವ ಗೋಳನ್ನು ಉಲ್ಲೇಖಿಸಿ ಆಕೆಗೆ ಆ ಕೃತಿಯನ್ನು ಅರ್ಪಿಸಿದ್ದು ಅವರ ಮನಸ್ಸಿನಲ್ಲುಳಿದಿತ್ತು.

ರವಿ ಬೆಳೆಗೆರೆ ಅವತ್ತು, “ಪೀರ್ ಬಾಷ. ನೀನು ಏನೂ ಯೋಚನೆ ಮಾಡಬ್ಯಾಡ. ಆ ಮಕ್ಕಳನ್ನ ಓದಿಸೋ ಪೂರ್ತೀ ಜವಾಬ್ದಾರಿ ನನಗ ಬಿಡು. ತೀರಾ ಸಣ್ಣ ಮಕ್ಕಳು ಬೇಕಾದ್ರೆ, ತಾಯಿ ಜೊತೆ ಇರಲಿ. ಹೈಯರ್ ಪ್ರೈಮರಿ, ಹೈಸ್ಕೂಲು ಓದ್ತಿರೋರನ್ನ ನೀನು ನನ್ನ ಪ್ರಾರ್ಥನಾ ಸ್ಕೂಲಿಗೆ ಹಾಕೋದಾದ್ರೆ..ಅವರು ಇಲ್ಲೇ ಇದ್ದುಕೊಂಡು, ಓದಲಿ”

ನನಗೆ ತಕ್ಷಣಕ್ಕೆ ಏನು ಹೇಳಬೇಕೋ ತೋಚದಂತಾಗಿತ್ತು. ಅವರ ಪ್ರೀತಿ ಕಾಳಜಿಗೆ ಥ್ಯಾಂಕ್ಸ್ ಹೇಳಿದೆನಷ್ಟೇ. “ಊರಿಗೆ ಹೋಗಿ ಹೇಳ್ತೀನಿ” ಅಂತಾ ಬಂದು ಏನನ್ನೂ ಹೇಳದೇ ಉಳಿದೆ. ಇವತ್ತು ಅವರು ಹೋಗಿಯೇ ಬಿಟ್ಟರು.

ಅವತ್ತು ಅವರು ಲೋಕಾಭಿರಾಮವಾಗಿ ಮಾತಾಡುತ್ತಾ, ನನ್ನನ್ನು ತಮಾಷೆಯ ಶೈಲಿಯಲ್ಲಿ ತಡವಿದ್ದು ಮಾತ್ರ ಎಂದೂ ಮರೆಯಲಾರೆ. ಆ ಮಾತುಗಳ ನಡುವೆ ಅವರು;

“ನೀನು ಹಂದೀ ಮಾಂಸ ತಿನ್ತೀ ಏನೋ” ಅಂದಿದ್ರು. ನಾನು ” ಇಲ್ಲ ” ಅಂದಿದ್ದಕ್ಕೆ, ನೀನ್ಯಾ ಸೀಮೆ ಕಮ್ಯೂನಿಸ್ಟನಯ್ಯಾ? ಎನ್ನುವ ದನಿಯಲ್ಲೇ ಇನ್ನೊಂದನ್ನು ಹೇಳುವವರಂತೆ “ನೋಡೋ, ನಾನು ಹುಟ್ಟಾ ಬ್ರಾಹ್ಮಣ, ನಾನು ತಿಂತೀನಿ,” ಎಂದು ನನ್ನನ್ನು ಮೀಟಿದ್ದರು.

ಕೊನೆಗೆ, ನಂಗೊತ್ತಯ್ಯಾ, ನೀನು ನನ್ನನ್ನ ಒಪ್ಪಲ್ಲಾ, ಹಂಗಂತ್ಲೇ ನನ್ನ ಪೇಪರ್ರಿಗೆ ಬರಿಯಾದಿಲ್ಲ, ಚೆಂದದೀಯಲ್ಲಾ,…ಅನ್ನುತ್ತಾ ಕೊನೆಗೆ ” ನೋಡು, ನೀನಾಗಿ ಕಳಿಸಿಕೊಟ್ರೆ ಆ ಮಕ್ಕಳನ್ನ ಓದಿಸಿ, ದೊಡ್ಡವರನ್ನು ಮಾಡೋ ಜವಾಬ್ದಾರಿ ನಾನು ನೋಡ್ಕಂತೀನಿ, ನಿನ್ನಿಷ್ಟ” ಅಂದರು. ಅವರಿಗೆ ಅವೇ ಕೆಲ ನಿಮಿಷಗಳಲ್ಲಿಯೇ ಅರ್ಥವಾಗಿ ಹೋಗಿತ್ತು, ನಾನು ಮಕ್ಕಳನ್ನು ಅವರಲ್ಲೆ ಕಳಿಸುವುದಿಲ್ಲವೆಂದು.

ಪ್ರೀತಿಯ ರವಿ ಬೆಳಗೆರೆ, ನನ್ನ ಜಿಲ್ಲೆಯವರು. ಅಣ್ಣನೆಂಬಷ್ಟು ಆಪ್ತ ದನಿ ಸಂಬಂಧವನ್ನು ಇಟ್ಟುಕೊಂಡಿದ್ದವರು. ಖಯಾಲಿಯ ಜೀವನದ ನಡುವೆಯೂ ಅವರಿಗಿದ್ದ ಕಾಳಜಿಯ ಕರುಳೊಂದಿತ್ತು ಎಂಬುದನ್ನು ನಾನು ಮರೆಯಲಾರೆ.

– ಬಿ.ಪೀರ್ ಬಾಷಾ