ಹೊಸದಿಲ್ಲಿ,: ಕೊರೋನ ವೈರಸ್ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರು ತಿಂಗಳು ಸಾಲ ಮರುಪಾವತಿ ಕಂತುಗಳ ಸ್ತಂಭನ ಅವಧಿಯನ್ನು ವಿಸ್ತರಿಸಿತ್ತು. 2 ಕೋ.ರೂ. ವರೆಗಿನ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ತಾನು ಸಿದ್ದವಾಗಿರುವುದಾಗಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ ಎಂದು ndtv.com ವರದಿ ಮಾಡಿದೆ.
ಎಂಎಸ್ಎಂಇಗಳು(ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು)ತೆಗೆದುಕೊಂಡ ಸಾಲಗಳಿಗೆ, ಶೈಕ್ಷಣಿಕ, ವಸತಿ, ಗ್ರಾಹಕ ವಸ್ತುಗಳು ಹಾಗೂ ವಾಹನ ಸಾಲಗಳಿಗೆ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿಗಾಗಿ ಬಡ್ಡಿ ಮನ್ನಾ ಅನ್ವಯಿಸುತ್ತದೆ.
ಸಾಂಕ್ರಾಮಿಕ ಪರಿಸ್ಥಿತಿಗಳಲ್ಲಿ ಸಾಲಗಳ ಮೇಲಿನ ಬಡ್ಡಿಯ ಹೊರೆ ಭರಿಸುವುದು ಸರಕಾರದ ಮುಂದಿರುವ ಏಕೈಕ ಪರಿಹಾರವಾಗಿದೆ ಎಂದು ಸರಕಾರ ಶುಕ್ರವಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ. ಈ ಕ್ರಮವನ್ನು ಸಕ್ರಿಯಗೊಳಿಸಲು ಅನುದಾನಕ್ಕಾಗಿ ಸಂಸತ್ತಿನ ಅನುಮತಿಯನ್ನು ಪಡೆಯುವುದಾಗಿ ಹೇಳಿದೆ.
ಒಂದು ವೇಳೆ ಬ್ಯಾಂಕ್ಗಳು ಈ ಹೊರೆಯನ್ನು ಭರಿಸಬೇಕಾದರೆ ಅದು ಅದರ ನಿವ್ವಳ ವೌಲ್ಯದ ಒಂದು ಪ್ರಮುಖ ಭಾಗವನ್ನು ಅಳಿಸಿಹಾಕುತ್ತದೆ. ಹೆಚ್ಚಿನ ಬ್ಯಾಂಕ್ಗಳನ್ನು ಅಸಮರ್ಥವಾಗಿಸುತ್ತದೆ ಹಾಗೂ ಅವುಗಳ ಉಳಿವಿನ ಬಗ್ಗೆ ಬಹಳ ಗಂಭೀರವಾದ ಪ್ರಶ್ನಾರ್ಥಕ ಚಿಹ್ನೆಯನ್ನು ಉಂಟುಮಾಡುತ್ತದೆ.
ದೇಶವು ಎದುರಿಸುತ್ತಿರುವ ಅಭೂತಪೂರ್ವ ಪರಿಸ್ಥಿತಿಯಲ್ಲಿ ನಿರ್ದಿಷ್ಟ ವರ್ಗದ ಸಾಲಗಾರರಿಗೆ ಸಹಾಯ ಮಾಡಲು ನಿರ್ಧರಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೋನ ವೈರಸ್ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಸಾಲ ಮರು ಪಾವತಿಯ ಮೇಲೆ ನೀಡಿದ್ದ ಆರು ತಿಂಗಳ ಸ್ತಂಭನ ಅವಧಿ ಆಗಸ್ಟ್ 31ಕ್ಕೆ ಕೊನೆಯಾಗಿದೆ.