ಕೋವಿಡ್ ಆಸ್ಪತ್ರೆಗಳ ಎಲ್ಲ ಒಳರೋಗಿಗಳಿಗೆ ಆ್ಯಂಟಿಜನ್ ಪರೀಕ್ಷೆ

  • ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಧಾರವಾಡ : ಸರ್ಕಾರದಿಂದ ಜಿಲ್ಲೆಗೆ 3,300 ಆ್ಯಂಟಿಜನ್ ಪರೀಕ್ಷಾ ಕಿಟ್‍ಗಳು ಬರುತ್ತಿವೆ. ಕಿಮ್ಸ್, ಎಸ್‍ಡಿಎಂ, ಜಿಲ್ಲಾಸ್ಪತ್ರೆ ಸೇರಿದಂತೆ ಅಗತ್ಯವಿರುವ ಇತರೆ ಆಸ್ಪತ್ರೆಗಳಲ್ಲಿ ದಾಖಲಾಗುವ ಇತರೆ ಸಾಮಾನ್ಯ ಒಳ ರೋಗಿಗಳನ್ನು ಆ್ಯಂಟಿಜನ್ ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗಲಿದೆ. ಈ ಪರೀಕ್ಷೆಯಿಂದ ಕೋವಿಡ್‍ನ ತಪಾಸಣಾ ವರದಿ ತ್ವರಿತವಾಗಿ ಕೆಲವೇ ಗಂಟೆಗಳಲ್ಲಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೀವ್ರ ನೆಗಡಿ, ಕೆಮ್ಮು, ಜ್ವರ (ಐಎಲ್‍ಐ) ಹಾಗೂ ತೀವ್ರ ಉಸಿರಾಟದ ತೊಂದರೆ (ಎಸ್‍ಎಆರ್‍ಐ) ಪ್ರಕರಣಗಳು ಹಾಗೂ ನಿಗದಿತ ಕೋವಿಡ್ ಆಸ್ಪತ್ರೆಗಳಾದ ಕಿಮ್ಸ್, ಎಸ್‍ಡಿಎಂ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‍ಯೇತರ ಖಾಯಿಲೆಗಳ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳನ್ನು ಆ್ಯಂಟಿಜನ್ ಪರೀಕ್ಷೆಗೆ ಒಳಪಡಿಸಿದರೆ ತ್ವರಿತವಾಗಿ ಕೋವಿಡ್ ವರದಿ ಲಭ್ಯವಾಗುತ್ತದೆ. ಇದರಿಂದ ವೈರಾಣು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಇತರ ಸಾಮಾನ್ಯ ವಾರ್ಡ್‍ಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ರೋಗಿಗಳನ್ನು ಭೇಟಿ ಮಾಡಲು ಬರುವ ವ್ಯಕ್ತಿಗಳಿಗೆ ನಿರ್ಬಂಧ ಹೇರಬೇಕು. ಸೋಂಕು ದೃಢಪಟ್ಟ ವ್ಯಕ್ತಿಗಳ ದಾಖಲು ಹಾಗೂ ಬಿಡುಗಡೆ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಿ ಕಾರ್ಯವನ್ನು ಚುರುಕುಗೊಳಿಸಬೇಕು. ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸುವುದು ಮತ್ತು ಬಿಡುಗಡೆ ಮಾಡುವ ಕಾರ್ಯವನ್ನು ಕೈಗೊಳ್ಳಲು ಪೂರ್ಣ ಪ್ರಮಾಣದ ತಂಡ ರಚಿಸಲಾಗಿದೆ. ಇದರಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು, ವೈದ್ಯರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಬಿ.ಸಿ. ಸತೀಶ್ ಮಾತನಾಡಿ, ಆ್ಯಂಟಿಜನ್ ಪರೀಕ್ಷೆ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟರೆ ಮತ್ತೇ ಪರೀಕ್ಷೆ ಮಾಡುವ ಅಗತ್ಯವಿಲ್ಲ. ಆದರೆ ಸೋಂಕಿನ ಲಕ್ಷಣಗಳಿದ್ದು, ವರದಿ ನೆಗೆಟಿವ್ ಬಂದರೆ ಮತ್ತೊಮ್ಮೆ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿನ ಲಕ್ಷಣ ಇರುವವರು ಮತ್ತು ಇಲ್ಲದವರನ್ನು ಪ್ರತ್ಯೇಕಗೊಳಿಸಿ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸುವ ಕಾರ್ಯದಲ್ಲಿ ವ್ಯತ್ಯಯವಾಗಬಾರದು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕಿಮ್ಸ್ ನಿರ್ದೇಶಕ ಡಾ: ರಾಮಲಿಂಗಪ್ಪ ಅಂಟರಠಾಣೆ, ತಜ್ಞ ವೈದ್ಯರಾದ ಡಾ: ಈಶ್ವರ ಹಸಬಿ, ಡಾ: ಶೈಲೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಶಿಮಕುಮಾರ್ ಮಾನಕರ, ಎಸ್‍ಡಿಎಂ ವೈದ್ಯರಾದ ಡಾ: ಕಿರಣ ಐತಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


ಎಂಬಿಬಿಎಸ್ ವೈದ್ಯರ ನೇರ ಸಂದರ್ಶನ

ಧಾರವಾಡ (ಕರ್ನಾಟಕ ವಾರ್ತೆ) ಜುಲೈ.10: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಎಂಬಿಬಿಎಸ್ ಪದವಿ ಪಡೆದ 10 ವೈದ್ಯರ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಮಾಸಿಕವಾಗಿ ರೂ.60,000/-ಗಳ ವೇತನ ನೀಡಲಾಗುವುದು.

ಆಸಕ್ತ ಅರ್ಹ ವೈದ್ಯರು ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಧಾರವಾಡ ಹಳೇ ಎಸ್‍ಪಿ ವೃತ್ತದ ಬಳಿ ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ವಾರದ ಯಾವುದಾದರೂ ದಿನ ಭೇಟಿ ನೀಡಿ ನೇರಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0836-2447483 ಸಂಪರ್ಕಿಸಬಹುದು.


Please follow and like us: