ಊರಿಗೆ ಹೋಗಲು ದುಡ್ಡಿಲ್ಲದೆ ರೋಗಿ ಕುಟುಂಬ ಪರದಾಟ:
ಊರಿಗೆ ಕಳುಹಿಸಿಕೊಟ್ಟ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ

ಕಲಬುರಗಿ..- ಲಾಕ್ ಡೌನ್ ಪೂರ್ವ ಕಲಬುರಗಿಗೆ ಬಂದ ಹೈದ್ರಾಬಾದ ಮೂಲದ ಮಹಿಳೆಯೋರ್ವಳು ವಾಂತಿ, ಹೊಟ್ಟೆನೋವಿನಿಂದ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಶುಕ್ರವಾರ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದ ನಂತರ ಊರಿಗೆ ಹೋಗಲು ದುಡ್ಡಿಲ್ಲದೆ ಚಿಂತೆಯಲ್ಲಿದ್ದಾಗ ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಅವರು ಮಹಿಳೆಯ ಕುಟುಂಬಕ್ಕೆ ರೈಲ್ವೆ ಟಿಕೆಟ್ ತೆಗಿಸಿ ಊಟೋಪಚಾರಕ್ಕೆ ಹಣ ನೀಡಿ ಮರಳಿ ತಮ್ಮೂರಿಗೆ ಕಳುಹಿಸುವ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೈದ್ರಾಬಾದ ಮೂಲದ ಸುಮಾರು 32 ವರ್ಷದ ಮಹಿಳೆ ತನ್ನ 6 ವರ್ಷದ ಗಂಡು ಮಗುವಿನೊಂದಿಗೆ ಲಾಕ್ ಡೌನ್ ಪೂರ್ವ ಕಲಬುರಗಿಗೆ ಆಗಮಿಸಿದಳು. ಲಾಕ್ ಡೌನ್ ಪರಿಣಾಮ ಮರಳಿ ಹೈದ್ರಾಬಾದಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊರೋನಾ ಕಾರಣ ದೂರದ ಸಂಬಂಧಿಗಳು ಕಲಬುರಗಿಯಲ್ಲಿದ್ದರು ಯಾರ ಮನೆಗೂ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈಕೆ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು.

ಕೆಲವು ದಿನಗಳ ನಂತರ ಮಗು ಸಹ ಜಾಂಡೀಸ್ ರೋಗಕ್ಕೆ ತುತ್ತಾಗಿದ್ದರಿಂದ ಜಿಮ್ಸ್ ನಲ್ಲಿಯೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಪತ್ನಿ ಮತ್ತು ತನ್ನ ಮಗ ಆಸ್ಪತ್ರೆಯಲ್ಲಿರುವುದನ್ನು ತಿಳಿದ ತಂದೆ ಕಳೆದ 10 ದಿನಗಳ ಹಿಂದೆ ಹೈದ್ರಾಬಾದಿನಿಂದ ಕಲಬುರಗಿಗೆ ಬಂದು ಆಸ್ಪತ್ರೆಯಲ್ಲಿಯೆ ಪತ್ನಿ ಮತ್ತು ಮಗುವಿನೊಂದಿಗೆ ಇಲ್ಲಿನ‌ ಜಿಮ್ಸ್ ಅಸ್ಪತ್ರೆಯಲ್ಲಿಯೆ ಇದ್ದರು.

ಸುಮಾರು ಎರಡು ತಿಂಗಳ ಕಾಲ ಇಲ್ಲಿನ ಜಮ್ಸ್ ಆಸ್ಪತ್ರೆಯೆ ಮಹಿಳೆ ಮತ್ತು ಕುಟುಂಬಕ್ಕೆ ಆಶ್ರಯ ತಾಣವಾಗಿತ್ತು. ಶುಕ್ರವಾರ ಮಹಿಳೆ ಮತ್ತು 6 ವರ್ಷದ ಗಂಡು ಮಗು ಕಾಯಿಲೆಯಿಂದ ವಾಸಿಯಾದ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆಯಿಂದ ಸಾಯಂಕಾಲ ಬಿಡುಗಡೆ ಮಾಡಲಾಯಿತು.

ತುಂಬಾ ಬಡತನ ಪರಿಸ್ಥಿಯಲ್ಲಿರುವ ಇವರಿಗೆ ಕೈಯಲ್ಲಿ ಕಾಸಿಲ್ಲದೆ ಮರಳಿ ಊರಿಗೆ ಹೋಗುವುದೆ ದೊಡ್ಡ ಚಿಂತೆಯಾಗಿಬಿಟ್ಟಿತ್ತು. ತಿನ್ನಕ್ಕೂ ಏನಾದರು ತೊಗೊಳಬೇಕು ಎಂದರೂ ದುಡ್ಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಮುಂದೆ ಗೋಳಾಡಿದ್ದರು. ನಮ್ಮನ್ನು ಇನ್ನೂ ಸ್ವಲ್ಪ ದಿನ ಅಸ್ಪತ್ರೆಯಲ್ಲಿಯೆ ಇರಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡರು.

ಇದನ್ನರಿತ ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಅವರು ರೋಗಿ ಮತ್ತು ಅವರ ಕುಟುಂಬಗಳಿಗೆ ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ರೈಲು ನಿಲ್ದಾಣ ತಲುಪಿಸಿ ಅಲ್ಲಿಂದ ಹೈದ್ರಾಬಾದಿಗೆ ಪ್ರಯಾಣಿಸಲು ರೈಲ್ವೆ ಟಿಕೆಟ್ ತೆಗಿಸಿದಲ್ಲದೆ ಊಟೋಪಚಾರಕ್ಕು ಹಣ ಕೊಟ್ಟು ಕಳುಹಿಸುವ ಮೂಲಕ ರೋಗಿಯ ಕುಟಂಬಕ್ಕೆ ನೆರವಾಗಿದ್ದಾರೆ.

Please follow and like us: