ಯಾದಗಿರಿ 5 ಜನ ಗುಣಮುಖ
20302 ವರದಿ ನೆಗೆಟಿವ್, 1026 ವರದಿ ಬಾಕಿ



ಯಾದಗಿರಿ, ): ನೋವೆಲ್ ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಗುರುವಾರ ಪಾಸಿಟಿವ್ ಬಂದ 8 ಮಾದರಿ ಸೇರಿದಂತೆ ಜೂನ್ 18ರವರೆಗೆ ಒಟ್ಟು 873 ವರದಿ ಪಾಸಿಟಿವ್ ಬಂದಿವೆ. ಈವರೆಗೆ 20,302 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 289 ಮಾದರಿಗಳು ಸೇರಿದಂತೆ 1026 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 873 ವ್ಯಕ್ತಿಗಳ ಪೈಕಿ ಗುರುವಾರ ಮತ್ತೆ 5 ಜನ ಗುಣಮುಖರಾಗಿದ್ದು, ಜೂನ್ 18ರವರೆಗೆ ಒಟ್ಟು 483 ಜನ ಗುಣಮುಖರಾಗಿರುತ್ತಾರೆ. ಒಬ್ಬರು ಮೃತಪಟ್ಟಿದ್ದಾರೆ. ಉಳಿದ 389 ಪ್ರಕರಣಗಳು ಸಕ್ರಿಯವಾಗಿರುತ್ತವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,356 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,753 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 52 ಕಂಟೇನ್‍ಮೆಂಟ್ ಝೋನ್‍ಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 175 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪೂರ ಕೊರೊನಾ ಕೇರ್ ಸೆಂಟರ್‍ನಲ್ಲಿ 54 ಜನರನ್ನು, ಸುರಪುರ ಕೊರೊನಾ ಕೇರ್ ಸೆಂಟರ್‍ನಲ್ಲಿ 44 ಮತ್ತು ಬಂದಳ್ಳಿ ಏಕಲವ್ಯ ಕೊರೊನಾ ಕೇರ್ ಸೆಂಟರ್‍ನಲ್ಲಿ 68 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 21 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್‍ಗಳಲ್ಲಿ ಒಟ್ಟು 883 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950ಗೆ ಗುರುವಾರ 6 ಕರೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ಕೋವಿಡ್-19 ಪೀಡಿತ ದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರು ಭಾರತಕ್ಕೆ ಹಿಂತಿರುಗಿದ ಮತ್ತು ಬೇರೆ ರಾಜ್ಯಗಳಿಂದ ಯಾದಗಿರಿ ಜಿಲ್ಲೆಗೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ನಿಗದಿತ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿರಬೇಕು ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಮಾಹಿತಿಗಾಗಿ ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಅಥವಾ ವಾಟ್ಸ್‍ಆ್ಯಪ್ ಸಂಖ್ಯೆ:9449933946 ಅಥವಾ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ. ಕೈ ಸ್ವಚ್ಛಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವುದನ್ನು ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.

Please follow and like us: