ನಮ್ಮದು ನೇರಾ ನೇರ ರಾಜಕಾರಣ: ಬಿ.ಸಿ.ಪಾಟೀಲ

 

ನಾನು ಪಿಕ್ನಿಕ್ಗೆ ಬಂದಿರಲಿಲ್ಲ:

ಕೊಪ್ಪಳ: ಜಿಲ್ಲೆಯಲ್ಲಿ ಈಚೆಗೆ ಆಲೀಕಲ್ಲು ಮಳೆ ಸುರಿದು ಸುಮಾರು 75000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಹಾನಿಯಾಗಿತ್ತು. ಅದರ ಪರಿಶೀಲನೆಗೆ ತೆರಳಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಇದನ್ನೇ ಕಾಂಗ್ರೆಸ್ನವರು ಢೋಂಗಿ ರಾಜಕಾರಣ ಅಂದ್ರೆ ಏನು ಮಾಡಲಾಗದು. ಢೋಂಗಿ ರಾಜಕಾರಣ ಎಂದರೇನು? ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಪ್ರಶ್ನಿಸಿದರು. ನಮ್ಮದೇನಿದ್ದರೂ ನೇರಾ ನೇರ ರಾಜಕಾರಣ ಎಂದು ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಜಿಲ್ಲೆಗೆ ಮೊದಲ ಬಾರಿಗೆ ಬಂದಿದ್ದು, ಕೊರೊನಾ ನಿಯಂತ್ರಣ ಕುರಿತು ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ಕುರಿತು ಸಭೆ ನಡೆಸುತ್ತಿದ್ದೇನೆ. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪಾಸಿಟೀವ್ ಕೇಸ್ ಇಲ್ಲದಿರುವುದು ಸಂತೋಷದ ಸಂಗತಿ. ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಪ್ರಶಂಸಿಸಿದರು.
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಶೋಚನೀಯ ಸಂಗತಿ. ತಬ್ಲಿಘಿಗಳಿಂದ ಆತಂಕ ಹೆಚ್ಚಾಗುತ್ತಿದೆ. ತಬ್ಲಿಘಿ ಸಭೆ ನಡೆಸಿರುವುದು ಅಪರಾಧವೇನಲ್ಲ. ಆದರೆ ಸಭೆಯಲ್ಲಿ ಪಾಲ್ಗೊಂಡವರು ಸ್ವ ಇಚ್ಛೆಯಿಂದ ಮುಂದೆ ಬಂದು ಪರೀಕ್ಷೆಗೊಳಪಟ್ಟರೆ ನಿಯಂತ್ರಣ ತಕ್ಕ ಮಟ್ಟಿಗೆ ಸಾಧ್ಯ. ಅದೇ ರೀತಿ ಜ್ಯುಬಿಲಿಯಂಟ್ ಫ್ಯಾಕ್ಟರಿ ಪ್ರಕರಣದಿಂದಲೂ ಪಾಸಿಟೀವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಭತ್ತ ಬೇರೆ ರಾಜ್ಯಗಳಿಗೆ ರಫ್ತಾಗಲು ಯಾವುದೇ ಅಂತಾರಾಜ್ಯ ನಿರ್ಬಂಧ ಇಲ್ಲ. ಆದರೆ ಗಡಿ ಭಾಗದ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಹಾವಳಿ ಹೆಚ್ಚಾಗಿರೋದ್ರಿಂದ ಸಹಜವಾಗಿ ಆತಂಕ ಉಂಟಾಗುತ್ತಿದೆ. ರೈತರು ತಮ್ಮ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಬೆಲೆ ಹರಗುವುದು ಸರಿಯಲ್ಲ. ಮಧ್ಯವರ್ತಿಗಳನ್ನು ಅವಲಂಬಿಸದೇ ರೈತರೇ ನೇರವಾಗಿ ಆನ್ಲೈನ್ ಟ್ರೇಡಿಂಗ್ ಶುರು ಮಾಡಿದರೆ ನಷ್ಟದ ಸಾಧ್ಯತೆ ಕಡಿಮೆ ಎಂದು ಅವರು ವಿವರಿಸಿದರು.
ಬಿಜೆಪಿ ಮುಖಂಡ ಮುಂಬೈ ಮೂಲದ ಯುವತಿಯನ್ನು ಜಿಲ್ಲೆಗೆ ಕರೆ ತಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ನನಗೆ ಜಾಸ್ತಿ ಮಾಹಿತಿ ಇಲ್ಲ. ಪಕ್ಷದ ಮುಖಂಡರ ಸಭೆಯಲ್ಲಿ ಈ ಕುರಿತು ತಿಳಿದುಕೊಂಡು ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಮತ್ತಿತರ ಮುಖಂಡರು ಇದ್ದರು. ನಂತರ ನಗರದ ಸಂಸ್ಥಾನ ಶ್ರೀ ಗವಿಮಠಕ್ಕೆ ತೆರಳಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ನಾನು ಪಿಕ್ನಿಕ್ಗೆ ಬಂದಿರಲಿಲ್ಲ:
ಕೃಷಿ ಸಚಿವನಾಗಿ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಆ ವೇಳೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕಿತ್ತು. ಅವರು ಬಾರದಿರುವುದನ್ನು ಪ್ರಶ್ನಿಸಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಸಚಿವ ಬಿ.ಸಿ.ಪಾಟೀಲ, ಇದು ಮುಗಿದು ಹೋದ ಅಧ್ಯಾಯವಾಗಿದ್ದು, ಜಿಲ್ಲಾಧಿಕಾರಿಗಳು ಉತ್ತರ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜನಾಕ್ರೋಶ ಎನ್ನುವುದು ಸುಳ್ಳು. ಸರಕಾರದ ಸಂಬಳ ಪಡೆದು ಜನರ ಕೆಲಸ ಮಾಡುತ್ತೇನೆ. ಸರಕಾರದ ಸಂಬಳ ಪಡೆಯುವವರು ಸಹ ಜನರ ಕೆಲಸ ಮಾಡಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

Please follow and like us:
error