ಮೂರು ವರ್ಷಗಳಿಂದ ಆದಿತ್ಯ ರಾವ್‌ನ ಮುಖವನ್ನೇ ನೋಡಿಲ್ಲ : ಸಹೋದರನ ಹೇಳಿಕೆ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ

ಮಂಗಳೂರು, ಜ. 22: ‘ಆದಿತ್ಯ ರಾವ್ ನನ್ನ ಸಹೋದರ. ಆದರೆ ಕಳೆದ ಎರಡು ವರ್ಷಗಳಿಂದ ಆತನೊಂದಿಗೆ ಕುಟುಂಬದ ಸಂಪರ್ಕವಿಲ್ಲ. ಆದರೆ ಈ ಮೊದಲು ಆತನನ್ನು ಸರಿದಾರಿಗೆ ತರಲು ಹಲವು ಬಾರಿ ಯತ್ನಿಸಿದ್ದೆವು’ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಆರೋಪಿ ಆದಿತ್ಯ ರಾವ್ ನ ಸಹೋದರ ಅಕ್ಷತ್ ರಾವ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಂದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಹೋದರ ಆದಿತ್ಯ ರಾವ್‌ನನ್ನು ಸಂಪೂರ್ಣವಾಗಿ ಕುಟುಂಬದಿಂದ ಕೈಬಿಟ್ಟಿದ್ದೇವೆ. ಆತನನ್ನು ಯಾವ ಕಾರ್ಯಕ್ಕೂ, ಯಾವುದಕ್ಕೂ ಪ್ರೋತ್ಸಾಹಿಸಿಲ್ಲ. ಅವನನ್ನು ಸರಿ ದಾರಿಗೆ ತರಲು ತಂದೆ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಆತ ಯಾರ ಮಾತನ್ನೂ ಕೇಳುತ್ತಿರಲಿಲ್ಲ’ ಎಂದು ಹೇಳಿದರು.

‘ಚಿಕ್ಕಂದಿನಿಂದಲೂ ಅವನೊಂದಿಗೆ ಸಂಪರ್ಕ ಕಡಿಮೆ ಇದೆ. ಎಂಟನೇ ತರಗತಿ ಬಳಿಕ ಸಹೋದರ ವಸತಿನಿಲಯಕ್ಕೆ ತೆರಳಿದ ನಂತರ ಸಂಪರ್ಕ ಕಡಿತಗೊಂಡಿದೆ. ಅಪರೂಪಕ್ಕೊಮ್ಮೆ ಕುಟುಂಬದೊಂದಿಗೆ ಸೇರುತ್ತಿದ್ದೆವು. ಕಳೆದ ಮೂರು ವರ್ಷಗಳಿಂದ ಆತನ ಮಖವನ್ನೇ ನೋಡಿಲ್ಲ. ಇಂಜಿನಿಯರಿಂಗ್ ಹಾಗೂ ಎಂಬಿಎ ಶಿಕ್ಷಣ ಪಡೆದಿದ್ದಾನೆ. ಇದರ ಹೊರತು ಆತನ ವೈಯಕ್ತಿಕ ಮಾಹಿತಿ ಇಲ್ಲ’ ಎಂದರು.

ರಕ್ಷಣೆ ನೀಡಲು ಪೊಲೀಸರಿಗೆ ಮನವಿ

‘ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಪ್ರಕರಣದಲ್ಲಿಯೂ ಜಾಮೀನು ಪಡೆಯುವಾಗಲೂ ಕುಟುಂಬ ಸಹಕಾರ ನೀಡಿಲ್ಲ. ಆತನನ್ನು ನೋಡಲೂ ನಾವು ಹೋಗಿಲ್ಲ. ಆತನ ಬಗ್ಗೆ ನಮ್ಮಲ್ಲಿದ್ದ ಎಲ್ಲ ಮಾಹಿತಿಯನ್ನೂ ಮಂಗಳೂರು ಪೊಲೀಸರಿಗೆ ನೀಡಿದ್ದೇವೆ. ಸಹೋದರ ಆದಿತ್ಯ ರಾವ್ ಮಂಗಳೂರಿನಲ್ಲಿದ್ದ ಎನ್ನುವ ವಿಷಯ ನಿನ್ನೆಯಷ್ಟೇ ಕುಟುಂಬಕ್ಕೆ ತಲುಪಿತು. ನಮಗೂ ಭಯವಾಯಿತು. ಕುಟುಂಬಕ್ಕೆ ರಕ್ಷಣೆ ನೀಡಲು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ’ ಎಂದರು.

‘ತಾಯಿ ನಿಧನರಾದಾಗ ಹಿರಿಯ ಪುತ್ರನೇ ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಬೇಕಾಗಿದ್ದರಿಂದ ಸಹೋದರ ಆದಿತ್ಯ ರಾವ್‌ಗೆ ‘ನಿಧನ’ ವಿಷಯ ತಿಳಿಸಿದ್ದೆವು. ಆಗ ಆತ ಚಿಕ್ಕಬಳ್ಳಾಪುರದಲ್ಲಿ ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸುತ್ತಿದ್ದ. ಆತನ ನಂತರದ ಜೀವನದ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

Please follow and like us: