ಪೌರತ್ವ ಕಾಯ್ದೆ ಪರ ಬಿಜೆಪಿಯಿಂದ ಮನೆ-ಮನೆ ಪ್ರಚಾರ ಅಭಿಯಾನ

ಬೆಂಗಳೂರು, ಜ. 8: ಪೌರತ್ವ ತಿದ್ದುಪಡಿ ಕಾಯ್ದೆ ಪರ ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಕರಪತ್ರ ವಿತರಿಸಿ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದ್ದು, ಜ.11 ಮತ್ತು 12ರಂದು ವಿಶೇಷ ವಿಸ್ತಾರಕ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.

ಬುಧವಾರ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿಸುತ್ತಿರುವ ಕಾಂಗ್ರೆಸ್, ಎಡಪಕ್ಷಗಳ ದೇಶದ್ರೋಹಿ ನೀತಿಯ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಎಲ್ಲ 58 ಸಾವಿರ ಬೂತ್‌ಗಳಲ್ಲಿ ಮನೆ-ಮನೆಗೆ ತೆರಳಿ ತಿಳಿವಳಿಕೆ ಮೂಡಿಸಲು ಕರೆ ನೀಡಿದರು.

ನಲವತ್ತು-ಐವತ್ತು ವರ್ಷಗಳಿಂದ ನರಕ ಜೀವನ ನಡೆಸುತ್ತಿದ್ದ ದೇಶದ ನಾಗರಿಕರಿಗೆ ಪೌರತ್ವ ಕಾಯ್ದೆ ಜಾರಿಗೊಳಿಸಿರಲಿಲ್ಲ. ಈ ಕಾಯ್ದೆ ಜಾರಿಗೊಳಿಸಿದ ಮೋದಿಯವರಿಗೆ ಅಭಿನಂದಿಸಲು ಜ.18ಕ್ಕೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಜ.11ಕ್ಕೆ ಕಲಬುರ್ಗಿ-ಯಾದಗಿರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾಗಿ-ಚಿಕ್ಕೋಡಿಯಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಜ.13ಕ್ಕೆ ದಾವಣಗೆರೆ-ಹಾವೇರಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಜ.9ರಂದು ಸಿಂಧನೂರು-ಮಸ್ಕಿಯಲ್ಲಿ ರವಿಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಿಎಎ ಬೆಂಬಲಿಸಿ ಮಿಸ್ಡ್ ಕಾಲ್ ಅಭಿಯಾನ, ಸಹಿ ಸಂಗ್ರಹ, ಎತ್ತಿನಬಂಡಿ ಮೆರವಣಿಗೆ, ಭಾರತ್ ಮಾತಾ ಪೂಜನ್, ಪ್ರಬುದ್ಧರ ಸಭೆ, ಜಿ.ಪಂ.ಕೇಂದ್ರಗಳಲ್ಲಿ ಕಟ್ಟೆ ಚರ್ಚೆ, ಬೈಕ್ ರ‍್ಯಾಲಿ, ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರವಿಕುಮಾರ್ ಇದೇ ವೇಳೆ ವಿವರಿಸಿದರು.

Please follow and like us: