ಯಾವುದೇ ಅಡತಡೆಗಳಿಲ್ಲದೆ ಕಲ್ಕುಳಿ ವಿಠಲ್ ಹೆಗ್ಡೆ ಅಧ್ಯಕ್ಷೆಯಲ್ಲಿ ಸಾಹಿತ್ಯ ಸಮ್ಮೇಳನ: ಕಸಾಪ ಜಿಲ್ಲಾಧ್ಯಕ್ಷ

ಚಿಕ್ಕಮಗಳೂರು, ಜ.8: ಕನ್ನಡ ಸಾಹಿತ್ಯ ಪರಿಷತ್ತು ಶೃಂಗೇರಿ ಪಟ್ಟಣದಲ್ಲಿ ಜ.10-11ರಂದು ಹಮ್ಮಿಕೊಂಡಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎಲ್ಲ ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಸಮ್ಮೇಳನದ ಆಹ್ವಾನ ಪತ್ರಿಕೆಗಳನ್ನು ಈಗಾಗಲೇ ಹಂಚಿಕೆ ಮಾಡಲಾಗುತ್ತಿದೆ. ಸಾಹಿತಿ ಕಲ್ಕುಳಿ ವಿಠಲ್ ಹೆಗ್ಡೆ ಅವರ ಅಧ್ಯಕ್ಷೆಯಲ್ಲಿ ಸಾಹಿತ್ಯ ಸಮ್ಮೇಳನ ಯಾವುದೇ ಆತಂಕ, ಅಡತಡೆಗಳಿಲ್ಲದೇ ಸಾಂಗವಾಗಿ ನಡೆಯಲಿದೆ. ಸಾಹಿತ್ಯಾಭಿಮಾನಿಗಳು ಸಮ್ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಆಹ್ವನ ಪತ್ರಿಕೆಗಳನ್ನು ಜಿಲ್ಲೆಯ 8 ತಾಲೂಕುಗಳ ಎಲ್ಲ ಕಸಾಪ ಅಧ್ಯಕ್ಷರಿಗೂ ಕಳಿಸಲಾಗಿದೆ. ಸ್ವಾಗತ ಸಮಿತಿಯು ಸಮ್ಮೇಳನಕ್ಕೆ ವ್ಯಾಪಕ ಪ್ರಚಾರ ನೀಡಿದೆ. ಸಮ್ಮೇಳನವು ಶೃಂಗೇರಿ ಪಟ್ಟಣದ ಬಿಜೆಎಸ್ ಸಮುದಾಯ ಭವನದಲ್ಲಿ ನಡೆಯಲಿದ್ದು, ಸಮ್ಮೇಳನ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.

ಜ.ರಂದು ಶುಕ್ರವಾರ ಬೆಳಗ್ಗೆ 8ಕ್ಕೆ ತಹಶೀಲ್ದಾರ್ ಯರ್ರಿಸ್ವಾಮಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಮಹಾಮಂಟಪಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ವಿಪ ಉಪಸಭಾಪತಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ವೇದಿಕೆಯನ್ನು ಉದ್ಘಾಟಿಸಲಿದ್ದು, ಹೆಸರಾಂತ ಸಾಹಿತಿ ಕುಂ.ವೀರಭದ್ರಪ್ಪ ಅವರು ನುಡಿತೋರಣ ಕಟ್ಟಿಕೊಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧಕ್ಷ ಡಾ.ಡಿ.ಎಸ್.ಜಯಪ್ಪಗೌಡ ಮಾತನಾಡಲಿದ್ದು, ಈ ಸಮಾರಂಭದಲ್ಲಿ ಮಾಜಿ ಶಾಸಕ ಜೀವರಾಜ್, ವಿಪ ಸದಸ್ಯರಾದ ಪ್ರಾಣೇಶ್, ಭೋಜೇಗೌಡ ಮತ್ತಿತರರು ಉಪಸ್ಥಿತರಿರುತ್ತಾರೆಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳದ ಮಹಾಧ್ವಾರಕ್ಕೆ ಎಸ್.ವಿ.ಪರಮೇಶ್ವರ ಭಟ್ಟ ಅವರ ಹೆಸರಿಡಲಾಗಿದೆ. ಮಹಾಧ್ವಾರವನ್ನು ಕೊಪ್ಪದ ಪ್ರಗತಿಪರ ಕೃಷಿಕ ಕೌರಿ ಪ್ರಕಾಶ್ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸಮ್ಮೇಳದಲ್ಲಿ ಎರಡು ದಿನಗಳ ಕಾಲ 5 ಪ್ರಮುಖ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಜ.10ರಂದು ಮಧ್ಯಾಹ್ನ ನಮ್ಮ ಊರು-ನಮ್ಮ ಲೇಖಕರು ಎಂಬ ಜಿಲ್ಲಾ ಸಾಹಿತ್ಯ ದರ್ಶನ ಮಾಡುವ ಗೋಷ್ಠಿ ನಡೆಯಲಿದ್ದು, ಈ ಗೋಷ್ಠಿಯ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕ ಎಚ್.ಎಂ.ರುದ್ರಸ್ವಾಮಿ ವಹಿಸಲಿದ್ದು, ಕೊಪ್ಪ ತಾಲೂಕು ನಿಕಟಪೂರ್ವ ಕಸಾಪ ಅಧ್ಯಕ್ಷ ರವಿಕಾಂತ ಪ್ರವೇಶ ನುಡಿಯಾಡಲಿದ್ದಾರೆ. ಸಾಹಿತಿ ರವೀಶ್ ಕ್ಯಾತನಬೀಡು ಅವರು ಪ್ರಥಮ ಗೋಷ್ಠಿಯಲ್ಲಿ ಅಜ್ಜಂಪುರ ಜಿ.ಸೂರಿ ಸಾಹಿತ್ಯ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಚಿಕ್ಕಮಗಳೂರಿನ ವಿಮರ್ಶಕ ಡಾ.ಸತ್ಯನಾರಾಯಣ ಅವರು ಎರಡನೇ ಉಪನ್ಯಾಸದಲ್ಲಿ ಕಲ್ಕುಳಿ ವಿಠಲ್ ಹೆಗ್ಡೆ ಸಾಹಿತ್ಯ ವಿಷಯದ ಕುರಿತು ಮಾತನಾಡಲಿದ್ದಾರೆ. ನಗರದ ಐಡಿಎಸ್‍ಜಿ ಕಾಲೇಜಿನ ಪ್ರಾಧ್ಯಾಪಕ ಎಚ್.ಎಂ.ಮಹೇಶ್ ಡಾ.ಬೆಳವಾಡಿ ಮಂಜುನಾಥ ಸಾಹಿತ್ಯ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.

ಜ.10ರಂದು ಶುಕ್ರವಾರ ಸಂಜೆ 4ಕ್ಕೆ ಜಿಲ್ಲೆಯ ಕೃಷಿ ಮತ್ತು ಪರಿಸರ ಗೋಷ್ಠಿ ನಡೆಯಲಿದ್ದು, ಮಾಜಿ ಶಾಸಕ ವೈಎಸ್‍ವಿ ದತ್ತ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿಯ ಮೊದಲ ಉಪನಾಸ್ಯದಲ್ಲಿ ಸಾಹಿತಿ ಹಳೇಕೋಟೆ ರಮೇಶ್ ಅವರು ಮಲೆನಾಡಿನ ಕೃಷಿಗಿರುವ ಸಾವಾಲುಗಳ ಮತ್ತು ಆತಂಕ ವಿಷಯದ ಕುರಿತು ಮಾತನಾಡಲಿದ್ದಾರೆ, ಎರಡನೇ ಉಪನ್ಯಾಸದಲ್ಲಿ ಪ್ರಕೃತಿ ವಿಕೋಪ ಮತ್ತು ಜಿಲ್ಲೆಯ ಜನರ ಆತಂಕಗಳು ವಿಷಯದ ಕುರಿತು ಹಾಸನದ ಪರಿಸರವಾದಿ ಕಿಶೋರ್ ಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದರು.

ಜ.11ರಂದು ಶನಿವಾರ ಬೆಳಗ್ಗೆ 9ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಗೋಷ್ಠಿಯಲ್ಲಿ 15 ಮಂದಿ ಯುವ ಕವಿಗಳು ಕವನವಾಚಿಸಲಿದ್ದಾರೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ತೀರ್ಥಹಳ್ಳಿಯ ಸಾಹಿತಿ ಡಾ.ಸುಮಿತ್ರಾ ವಹಿಸಲಿದ್ದಾರೆ. ಕವಯತ್ರಿ ನಳಿನಾ ಪ್ರತಿಸ್ಪಂದನೆ ನೀಡಲಿದ್ದಾರೆ ಎಂದ ಅವರು, ಶನಿವಾರ ಬೆಳಗ್ಗೆ 12ಕ್ಕೆ ಕನ್ನಡ ನಾಡು ನುಡಿ ಗೋಷ್ಠಿ ನಡೆಯಲಿದ್ದು, ಡಾ.ಬೆಳವಾಡಿ ಮಂಜುನಾಥ ಅವರು, ಕನ್ನಡ-ಸದ್ಯದ ಪರಿಸ್ಥಿತಿ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಲೇಖಕ ರಾಜ್‍ಕುಮಾರ್ ಅವರು, ಗೋಷ್ಠಿಯ ಎರಡನೇ ಉಪನ್ಯಾಸದಲ್ಲಿ ಕನ್ನಡದ ಬೆಳವಣಿಗೆಗಿರುವ ಸಾಧ್ಯತೆಗಳು ಸವಾಲುಗಳು ವಿಷಯದ ಕುರಿತು ವಿಷಯ ಮಂಡಿಸಲಿದ್ದಾರೆ. ಶನಿವಾರ ಮಧ್ಯಾಹ್ನ 2ಕ್ಕೆ ಜಾನಪದ ಸಾಹಿತ್ಯದಲ್ಲಿ ಹಾಸ್ಯ ವಿಷಯದ ಕುರಿತು ಸಾಹಿತಿ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯದಲ್ಲಿ ನವಿರು ಹಾಸ್ಯ ವಿಷಯದ ಕುರಿತು ಬೆಂಗಳೂರಿನ ಹಾಸ್ಯ ಸಾಹಿತಿ ರಾಮನಾಥ್ ಅವರು ವಿಷಯ ಮಂಡನೆ ಮಾಡಲಿದ್ದಾರೆ ಎಂದರು.

ಜ.11ರಂದು ಶನಿವಾರ ಸಂಜೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿ ನಡೆಯಲಿದ್ದು, ಕಲ್ಕುಳಿ ವಿಠಲ್ ಹೆಗ್ಡೆ ಅವರ ಬದುಕು, ಬರಹ ಹಾಗೂ ಹೋರಾಟ ವಿಷಯದ ಕುರಿತು ಅಂಕಣಕಾರ ಬಿ.ಚಂದ್ರೇಗೌಡ ಅವರು ಉಪನ್ಯಾಸ ನೀಡಲಿದ್ದಾರೆ. ಸಂವಾದದಲ್ಲಿ ಕವಿ ಶೃಂಗೇರಿ ಶಿವಣ್ಣ, ಎಂ.ಎಲ್.ಮೂರ್ತಿ, ಎಚ್.ಎಚ್.ದೇವರಾಜ್, ಬಿ.ಅಮ್ಜದ್, ಮೊದಲಿಯರ್, ಗುರುಶಾಂತಪ್ಪ, ಗೋಪಾಲ್, ಗಣೇಶ್ ಹೆಗ್ಡೆ, ಝುಬೇದಾ ಮತ್ತಿತರರು ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ಸಂಜೆ 5ಕ್ಕೆ ಬಹಿರಂಗ ಅಧಿವೇಶನ, ನಿರ್ಣಯ ಮಂಡನೆ ನಡೆಯಲಿದೆ. ಇದೇ ವೇಳೆ ಜಿಲ್ಲಾ ಸಾಹಿತ್ಯ ಸಿರಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದ್ದು, ಸಂಸದೆ ಶೋಭಾ ಅವರು ತರೀಕೆರೆಯ ಸಾಹಿತಿ ರಾಜಪ್ಪ ದಳವಾಯಿ ಅವರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಮಂಜಪ್ಪಶೆಟ್ಟಿ ಹಾಗೂ ನವರತ್ನ ಇಂದೂ ಕುಮಾರ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ 17 ಮಂದಿ ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ ಸಮಾರಂಭ ಇದ್ದು, ಸಾಹಿತ್ಯಾಭಿಮಾನಿಗಳು ಸಮ್ಮೇಳವನ್ನು ಯಶಸ್ವಿ ಮಾಡಲು ಸಹಕಾರ ನೀಡಬೇಕೆಂದು ಅವರು ಕೋರಿದರು.

ಗೋಷ್ಠಿಯಲ್ಲಿ ಕಸಾಪ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ಚಂದ್ರಯ್ಯ, ಮಂಜುನಾಥ ಸ್ವಾಮಿ, ಶ್ರೀನಿವಾಸ್ ಮೂರ್ತಿ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Please follow and like us: