ಜ. ೮ರಂದು ಪೌರತ್ವ ಕಾಯ್ದೆ ವಿರುದ್ಧ ಬಹುಜನ ಕ್ರಾಂತಿ ಮೋರ್ಚಾ ಪ್ರತಿಭಟನೆ

ವಿಜಯಪುರ ಜ. ೬-ವಾಮನ್ ಮೇಶ್ರಾಮ್ ನೇತೃತ್ವದ ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಪೌರತ್ವ ಕಾಯ್ದೆ ವಿರುದ್ಧ ಜನೆವರಿ ೮ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾದ ಜಿಲ್ಲಾ ಸಂಚಾಲಕ ಮಹೇಶ್ ಕ್ಯಾತನ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ದೇಶದಾದ್ಯಂತ ದೋಷಪೂರಿತ ಎನ್‌ಆರ್‌ಸಿ ಮತ್ತು ಸಂವಿಧಾನ ವಿರೋಧಿ ಸಿಎಎ ವಿರುದ್ಧ ಮೂರು ಹಂತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಎರಡನೆ ಹಂತದ ಪ್ರತಿಭಟನೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಆನೆವರಿ ೮ರಂದು ಮುಂಜಾನೆ ೧೧-೦೦ ಗಂಟೆಗೆ ಡಾ. ಅಂಬೇಡ್ಕರ್ ಸರ್ಕಲ್‌ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದ್ದು, ಭೀಮ್ ಆರ್ಮಿ, ಪೀಪಲ್ ಫ್ರಂಟ್ ಆಫ್ ಇಂಡಿಯಾ, ದಲಿತ ಸಮನ್ವಯ ಸಮಿತಿ, ಚಲವಾದಿ ಮಹಾಸಭಾ, ಚಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ, ರಿಪಬ್ಲಿಕನ್ ಸೇನಾ, ರಾಷ್ಟ್ರೀಯ ಮುಸ್ಲಿಂ ಮೋರ್ಚಾ, ಉಲುಮಾ ಕಮೀಟಿ ಇತ್ಯಾದಿ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಈ ಎಲ್ಲಾ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಹೇಶ ಕ್ಯಾತನ್ ತಿಳಿಸಿದ್ದಾರೆ.
ದೇಶದ ನಾಗರಿಕರ ಹಿತರಕ್ಷಣೆಗಾಗಿ ನಡೆಸುತ್ತಿರುವ ಈ ಪ್ರತಿಭಟನೆಯಲ್ಲಿ ಸಂವಿಧಾನವನ್ನು ಗೌರವಿಸುವ ಎಲ್ಲ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಹೇಶ ಕ್ಯಾತನ್ ಅವರು ಮನವಿ ಮಾಡಿದ್ದಾರೆ.

Please follow and like us:
error