​ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಅಂತಿಮ ವಿದಾಯ 

 ಬೆಂಗಳೂರು , ಡಿ . 29 : ಇಂದು ನಿಧನರಾದ ಉಡುಪಿಯ ಅಷ್ಟಮಠದ ಹಿರಿಯ ಯತಿ , ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿ ( 88 ) ಯ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಬೆಂಗಳೂರಿನ ಪೂರ್ಣ ಪ್ರಜ್ಞಾ 

ವಿದ್ಯಾಪೀಠದಲ್ಲಿ ನೆರವೇರಿಸಲಾಯಿತು . ರವಿವಾರ ಬೆಳಗ್ಗೆ 9 . 20ಕ್ಕೆ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ವಿಧಿವಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕೆ ಉಡುಪಿ ಜಿಲ್ಲಾ ಕ್ರೀಡಾಂಗಣದಲಿ ಅವಕಾಶ ಕಲ್ಪಿಸಲಾಗಿತ್ತು . ಬಳಿಕ ಶ್ರೀಗಳ ಪ್ರಾರ್ಥಿವ ಶರೀರವನ್ನು ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಯಿತು . ಅಲ್ಲಿಂದ ಪ್ರಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಂದು , ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯ ಸರಕಾರ ಸಕಲ ಸಿದ್ಧತೆಗಳನ್ನು ಕಲ್ಪಿಸಿತ್ತು .  ಆನಂತರ , ಕತ್ರಿಗುಪ್ಪೆ ಬಳಿಯಿರುವ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಗಣ್ಯರು ಅಂತಿಮ ನಮನ ಸಲ್ಲಿಸಿದರು . ಸಕಲ ಸರಕಾರಿ ಗೌರವಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳಂತೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು . ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ , ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ , ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ , ಗೃಹ ಸಚಿವ ಬಸವರಾಜ ಬೊಮ್ಮಾಯಿ , ಕೇಂದ್ರದ ಮಾಜಿ ಸಚಿವೆ ಉಮಾಭಾರತಿ , ಸಂಸದರಾದ ಶೋಭಾ ಕರಂದ್ಲಾಜೆ , ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಿರಿಯ ಸಚಿವರು , ಶಾಸಕರು , ವಿವಿಧ ಮಠಗಳ ಸ್ವಾಮೀಜಿಗಳು ವಿಶ್ವೇಶತೀರ್ಥರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು . ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಶ್ರೀಗಳಿಗೆ ಅಂತಿಮ ಗೌರವ ಸಲ್ಲಿಸಿದರು . ಪೇಜಾವರ ಶ್ರೀಗಳ ಪಾರ್ಥಿವ ಶರೀರಕ್ಕೆ ಗಂಗಾ ಜಲದಿಂದ ಸ್ನಾನ ಮಾಡಿಸಿದ ಬಳಿಕ ಮಧ್ವ ಸಂಪ್ರದಾಯದಂತೆ ನಾಮ ಇಡಲಾಯಿತು . ಬಳಿಕ ಮುದ್ರೆ , ಅಕ್ಷತೆ , ಅಂಗಾರಕ , ತುಳಸಿ ವನಮಾಲೆ ಧಾರಣೆ ಮಾಡಿಸಲಾಯಿತು . ಬಳಿಕ ಕೃಷ್ಣ ಮಂದಿರದಲ್ಲಿ ದೇವರಿಗೆ ಆರತಿ ಬೆಳಗಿಸಿ , 55 ಅಳತೆಯ ಗುಂಡಿಯಲ್ಲಿ ಪದ್ಮಾಸನದಲ್ಲಿ ಕೂತಿರುವಂತೆ ಪಾರ್ಥಿವ ಶರೀರವನ್ನು ಇರಿಸಲಾಯಿತು . ಪಂಚಗವ್ಯ , ಪ್ರೋಕ್ಷಣೆ , ಗೋಮಯ ಲೇಪನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 5 ಕಲಶಗಳಿಗೆ ಗಂಗಾ ಸನ್ನಿಧಾನ ಆವಾಹಿಸಿ ಅಭಿಷೇಕ ಮಾಡಲಾಯಿತು . ಜಪಾನುಷ್ಠಾನ ಸಾಧನಗಳನ್ನು ಪಾರ್ಥಿವ ಶರೀರದ ಮುಂದಿಡಲಾಯಿತು . ನಂತರ 5 ಪ್ರಮುಖ ದ್ರವ್ಯಗಳಾದ ಉಪ್ಪು , ಸಾಸಿವೆ , ಕರ್ಪುರ , ಕರಿಮೆಣಸು , ಹತ್ತಿ ಹಾಗೂ ನೇತ್ರಾವತಿ , ಕುಮಾರಧಾರ , ಗೋದಾವರಿ , ಗಂಗಾ ನದಿ , ಕಾವೇರಿ , ಕಷ ಸರ್ಣ , ಹೇಮಾವತಿ ಹೇಮಾವತಿ ನದಿಗಳ ಮರಳಿನಿಂದ ಮೃತ್ತಿಕ ಅಧಿವಾಸ ನಡೆಸಿ , ಬಳಿಕ ತಲೆಯ ಮೇಲೆ ಇಷ್ಟ ಸಾಲಿಗ್ರಾಮವಿಟ್ಟು ಸಮಾಧಿ ಮಾಡಲಾಯಿತು . ಅಂತಿಮ ನಮನ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಶಾಸಕ ರಾಮಲಿಂಗಾರೆಡ್ಡಿ , ಸಂಸದೆ ಶೋಭಾ ಕರಂದ್ಲಾಜೆ , ಮಾಜಿ ಸಚಿವ ಅರವಿಂದ ಲಿಂಬಾವಳಿ , ಎಚ್ . ಕೆ . ಪಾಟೀಲ್ , ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಸೇರಿ ಹಲವರು ನ್ಯಾಷನಲ್ ಕಾಲೇಜು ಮೈದಾನಕ್ಕೆ ತೆರಳಿ ಪೇಜಾವರ ಶ್ರೀಗಳ ಅಂತಿಮ ದರ್ಶನ ಪಡೆದರು .

Please follow and like us: