ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಅಸ್ತಂಗತ

ಉಡುಪಿ: ಪೇಜಾವರ ಶ್ರೀಗಳು ಅಸ್ತಂಗತ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಶ್ರೀಗಳಿಗೆ 90 ವರ್ಷ ವಯಸ್ಸು ಆಗಿತ್ತು

ಉಡುಪಿಯಿಂದ ೧೨೦ ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಹಳ್ಳಿ. ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳ. ಹೆಸರು ರಾಮಕುಂಜ. ಇಂಥ ಹಳ್ಳಿಯಲ್ಲಿ ೧೯೩೧ ಎಪ್ರಿಲ್ ೨೭ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಜನಿಸಿದರು.

ತಂದೆ ನಾರಾಯಣಾಚಾರ್ಯ, ತಾಯಿ ಕಮಲಮ್ಮ. ಹುಟ್ಟಿದ ಎರಡನೆಯ ಗಂಡುಮಗುವಿಗೆ ‘ವೆಂಕಟರಮಣ’ ಎಂದು ಹೆಸರಿಟ್ಟರು. ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ವೆಂಕಟರಮಣನ ಶುಭ ಜನನ.

ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ. ವೇದಮಾತೆ ವಟುವಿನ ತುಟಿಯಲ್ಲಿ ನಲಿದಳು.

ಉಪನಯನಕ್ಕೂ ಮುಂಚೆ, ಹುಡುಗನಿಗಿನ್ನೂ ಆರು ವರ್ಷ. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ: ತಾನೂ ಹೀಗೆ ಕೃಷ್ಣನನ್ನು ಪೂಜಿಸಬಹುದೆ?

ತಂದೆ – ತಾಯಿ ವೆಂಕಟರಮಣನನ್ನು ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖ, ಅಲ್ಲಿ ತುಂಬಿದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಆಕಸ್ಮಿಕವಾಗಿ ಅವರ ಬಾಯಿಂದ ಹೀಗೊಂದು ಮಾತು ಬಂತು. ‘ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’

ವೆಂಕಟರಮಣ ಉತ್ತರಿಸಿದ: “ಹ್ಞೂ, ಆಗುತ್ತೇನೆ”

ಈ ಆಕಸ್ಮಿಕ ಸಂಭಾಷಣೆಗೆ ಒಳಗಿನಿಂದ ಪ್ರೆರಿಸಿದ, ಮೇಲೆ ನಿಂತ ದೇವತೆಗಳು ‘ತಥಾsಸ್ತು’ ಎಂದರು.

ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (೩.೧೨.೧೯೩೮) ವೆಂಕಟರಮಣನಿಗೆ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನಡೆಯಿತು. ರಾಮಕುಂಜದ ಪುಟ್ಟ ಹಳ್ಳಿಯ ಮುಗ್ಧ ಬಾಲಕ, ಇನ್ನೂ ಏಳರ ಬಾಲ್ಯದ ಹಸುಳೆ, ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದ. ವೆಂಕಟರಾಮ ‘ವಿಶ್ವೇಶ ತೀರ್ಥ’ರಾದರು.

ವಿದ್ವತ್ ಪ್ರಕಾಶ

೧೯೪೩ರ ಫೆಬ್ರವರಿ ತಿಂಗಳು. ಶ್ರೀವಿದ್ಯಾಮಾನ್ಯ ತೀರ್ಥರು ಭಂಡಾರಕೇರಿಯಲ್ಲಿ ಶ್ರೀ ಮಧ್ವರಾದ್ಧಾಂತ ಸಂವರ್ಧಿನೀ ಸಭೆಯನ್ನು ಸ್ಥಾಪಿಸಿದರು. ವಿದ್ವಾಂಸರ ಮೇಳವೇ ಭಂಡಾರಕೇರಿಗೆ ಧಾವಿಸಿತು. ಆ ಬಾರಿಯ ಮಧ್ವನವಮಿಯ ವಿದ್ವತ್ಸಭೆಯ ಅಧ್ಯಕ್ಷತೆಯನ್ನು ೧೨ರ ಬಾಲಯತಿ ಶ್ರೀ ವಿಶ್ವೇಶ ತೀರ್ಥರಿಗೆ ಒಪ್ಪಿಸಿದರು. ಈ ವಾಮನಮೂರ್ತಿಯ ವಿದ್ಯೆಯ ತ್ರಿವಿಕ್ರಮಾವತಾರವನ್ನು ಅವರು ಅಂದೇ ಗುರುತಿಸಿದ್ದರು.

ನಾಡಿನ ಉದ್ದಗಲದಿಂದ ಹಿರಿಯ ವಿದ್ವಾಂಸರೆಲ್ಲ ಬಂದು ನೆರೆದಿದ್ದ ಆ ವಿದ್ವತ್ ಸಭೆಯಲ್ಲಿ ಪುಟ್ಟ ಯತಿ ವಿಶ್ವೇಶ ತೀರ್ಥರು ನೀಡಿದ ಚುಟುಕು ಭಾಷಣ ಎಲ್ಲರಿಗೂ ಚುರುಕು ಮುಟ್ಟಿಸಿತು. ಇಡಿಯ ಸಭೆಗೆ ಸಭೆಯೇ ತಲೆದೂಗಿತು. ಜತೆಗೆ ಅವರು ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯವಂತೂ ಪಂಡಿತ ಮಂಡಳಿಯನ್ನು ಬೆರಗುಗೊಳಿಸಿತು.

 

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

Please follow and like us: