ಪೇಜಾವರ ಶ್ರೀ ಸ್ಥಿತಿ ಗಂಭೀರವಾಗಿದ್ದರೂ ಚಿಕಿತ್ಸೆಗೆ ಸ್ಪಂದನೆ: ಡಾ. ಸುಧಾ ವಿದ್ಯಾಸಾಗರ್

‘ಆರೋಗ್ಯದಲ್ಲಿ ಅಲ್ಪ ಸುಧಾರಣೆ, ವೆಂಟಿಲೇಟರ್ ಮುಂದುವರಿಕೆ’

ಉಡುಪಿ, ಡಿ. 20: ‘ಪೇಜಾವರ ಸ್ವಾಮೀಜಿಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ಅವರ ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆಗಳು ಕಾಣುತ್ತಿವೆ ಎಂದು ಸ್ವಾಮೀಜಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡದ ನೇತೃತ್ವ ವಹಿಸಿರುವ ತಜ್ಞೆ ಡಾ. ಸುಧಾ ವಿದ್ಯಾಸಾಗರ್ ತಿಳಿಸಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಸಂಜೆ ತಂಡದಲ್ಲಿರುವ ತಜ್ಞ ವೈದ್ಯರೊಂದಿಗೆ ಸೇರಿ ಕರೆಯಲಾದ ಪತ್ರಿಕಾಗೋಷ್ಠಿ ಯಲ್ಲಿ ಅವರು ಪೇಜಾವರ ಸ್ವಾಮೀಜಿ ಆರೋಗ್ಯದ ಕುರಿತ ಮಾಹಿತಿ ನೀಡಿದರು.

ಪೇಜಾವರ ಸ್ವಾಮೀಜಿ ಇಂದು ಬೆಳಗ್ಗೆ ಐದು ಗಂಟೆಗೆ ಉಸಿರಾಟದ ಸಮಸ್ಯೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ನ್ಯುಮೋನಿಯಾ ದಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಹಾಗೂ ಪ್ರತಿರೋಧಕ ಔಷಧಿಯನ್ನು ನೀಡಲಾಗಿತ್ತು ಎಂದು ಅವರು ಹೇಳಿದರು.

ಸ್ವಾಮೀಜಿಯ ಸ್ಥಿತಿ ಗಂಭೀರವಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ಅವರ ಆರೋಗ್ಯದಲ್ಲಿ ಸುಧಾರಣೆಗಳು ಕಂಡು ಬರುತ್ತಿವೆ. ಅದಕ್ಕೆ ಬೇಕಾದ ಚಿಕಿತ್ಸೆಯನ್ನು ತಂಡ ನೀಡುತ್ತಿದೆ. ಅಲ್ಲದೆ ಅವರಿಗೆ ನೀಡಲಾದ ಕೃತಕ ಉಸಿರಾಟದ ವ್ಯವಸ್ಥೆಯನ್ನು ಈಗಲೂ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.

ಸ್ವಾಮೀಜಿಯ ಪ್ರಜ್ಞೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೃತಕ ಉಸಿರಾಟದ ವ್ಯವಸ್ಥೆ ಜೊತೆ ಕೆಲವೊಂದು ಔಷಧಿಗಳನ್ನು ಕೂಡ ನೀಡುತ್ತಿರುವುರಿಂದ ಸ್ವಾಮೀಜಿ ಅಮಲಿನಲ್ಲಿ ಇದ್ದಾರೆ. ಪ್ರಜ್ಞೆಯ ಬಗ್ಗೆ ಈಗ ಏನು ಹೇಳಲು ಆಗುವುದಿಲ್ಲ. ಈ ಕುರಿತು ಒಂದೆರೆಡು ದಿನಗಳ ಕಾಲ ಕಾಯಬೇಕಾಗುತ್ತದೆ. ಅದೇ ರೀತಿ ಔಟ್ ಆಫ್ ಡೇಂಜರ್ ಬಗ್ಗೆ ಕೂಡ ಈಗ ಏನು ಹೇಳಲು ಆಗುವುದಿಲ್ಲ. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸದ್ಯ ಐಯುಸಿಯುನಲ್ಲಿ ಇದ್ದಾರೆ. ಎಷ್ಟು ದಿನ ಚಿಕಿತ್ಸೆ ನೀಡಬೇಕಾಗುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಅದಕ್ಕೆ ಕಾಯಬೇಕಾಗುತ್ತದೆ. ಮುಂದೆ ಅವರ ಆರೋಗ್ಯದಲ್ಲಿ ಆಗುವ ಸುಧಾರಣೆಯನ್ನು ನೋಡಿ ಹೇಳಬೇಕಾಗುತ್ತದೆ. ಬೆಳಗ್ಗೆಗಿಂತ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಡಾ. ಸುಧಾ ವಿದ್ಯಾಸಾಗರ್ ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಪೇಜಾವರ ಸ್ವಾಮೀಜಿಗೆ ಡಾ. ಸುಧಾ ವಿದ್ಯಾಸಾಗರ್ ನೇತೃತ್ವದಲ್ಲಿ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ಪ್ರೊ. ಡಾ.ರವಿರಾಜ್ ವಿ. ಆಚಾರ್ಯ, ಪ್ರೊ. ಡಾ.ಮಂಜುನಾಥ್ ಹಂದೆ, ಕಾರ್ಡಿಯಲಜಿ ವಿಭಾಗದ ಪ್ರೊ. ಡಾ. ಪದ್ಮಕುಮಾರ್, ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ಅಸೋಸಿಯೇಟ್ ಪ್ರೊ. ಡಾ. ಶ್ವೇತಾಪ್ರಿಯ, ಅಸೋಸಿಯೇಟ್ ಪ್ರೊ. ಡಾ.ವಿಶಾಲ್ ಶಾನುಭಾಗ್ ಅವರ ತಂಡ ಜವಾಬ್ದಾರಿ ವಹಿಸಿಕೊಂಡು ಚಿಕಿತ್ಸೆಯನ್ನು ನೀಡುತ್ತಿದೆ ಎಂದರು.

‘ಆಸ್ಪತ್ರೆಗೆ ಭೇಟಿ ಮಾಡಬೇಡಿ’

ಪೇಜಾವರ ಸ್ವಾಮೀಜಿಯನ್ನು ನೋಡಲು ಬಹಳಷ್ಟು ಸಂದರ್ಶಕರು ಹಾಗೂ ಗಣ್ಯ ವ್ಯಕ್ತಿಗಳು ಆಸ್ಪತ್ರೆ ಬರುತ್ತಿದ್ದಾರೆ. ದಯವಿಟ್ಟು ಆಸ್ಪತ್ರೆಯಲ್ಲಿ ಸಮಸ್ಯೆಯಾಗುವುದರಿಂದ ಯಾರು ಕೂಡ ಆಸ್ಪತ್ರೆಗೆ ಭೇಟಿ ನೀಡುವುದು ಬೇಡ. ಅವರ ಆರೋಗ್ಯದ ಬಗ್ಗೆ ನಾವೇ ಪ್ರತಿ 12 ಗಂಟೆಗೊಮ್ಮೆ ಮಾಧ್ಯಮದ ಮೂಲಕ ಮಾಹಿತಿ ನೀಡುತ್ತೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮನವಿ ಮಾಡಿದರು.

Please follow and like us: