‘ದಲಿತ ಸಿಎಂ’ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಧಾರವಾಡ, ಡಿ. 5: ಹದಿನೈದು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ, ದಲಿತ ಮುಖ್ಯಮಂತ್ರಿ ಕುರಿತ ಚರ್ಚೆಯೆ ಅಪ್ರಸ್ತುತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶದ ಬಳಿಕ ಎಲ್ಲ ಚರ್ಚೆಗಳು ನಡೆಯಲಿದ್ದು, ಮೈತ್ರಿ, ದಲಿತ ಸಿಎಂ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಚರ್ಚೆ ಅಥವಾ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ಉಪಚುನಾವಣೆಯಲ್ಲಿ ಮೊದಲಿಗೆ ನಾವು 10 ಸ್ಥಾನಗಳನ್ನು ಗೆಲ್ಲಬೇಕು. ಜೆಡಿಎಸ್ ಒಂದೂ ಅಥವಾ ಎರಡು ಸ್ಥಾನಗಳನ್ನು ಗೆದ್ದರೆ ಮೈತ್ರಿ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ 5 ಸ್ಥಾನ ಗೆದ್ದರೂ, ಬಿಎಸ್ಪಿ ಶಾಸಕ ಸೇರಿ 112 ಸಂಖ್ಯಾಬಲ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹುಡುಗಾಟ ಸಲ್ಲ: ರಾಜಕೀಯದಲ್ಲಿ ಹುಡುಗಾಟಿಕೆ ಸರಿಯಲ್ಲ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಗಂಭೀರವಾಗಿ ಮಾತನಾಡುವುದನ್ನು ಕಲಿಯಬೇಕು. ನನ್ನನ್ನು ಬಿಜೆಪಿಗೆ ಕರೆದೊಯ್ಯುವ ರಮೇಶ್ ಹೇಳಿಕೆಗೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ ಎಂದು ಲೇವಡಿ ಮಾಡಿದರು.

ರಮೇಶ್ ಜಾರಕಿಹೊಳಿಗೆ ಜವಾಬ್ದಾರಿ ಇದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ. ನಮ್ಮ ಹೋರಾಟವೇ ಕೋಮುವಾದಿ ಪಕ್ಷದ ವಿರುದ್ಧ. ಆ ರಮೇಶ್‌ಗೆ ಸಿದ್ಧಾಂತವೇ ಇಲ್ಲ. ರಾಜಕೀಯ ತತ್ವಶಾಸ್ತ್ರದ ಅರಿವಿಲ್ಲ. ಮನಸ್ಸಿಗೆ ಬಂದಂತೆ ಮಾತನಾಡುವವರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

Please follow and like us: