ಇನ್ನೂ ಬಾರದ ಕೊಟ್ಟೂರು ರೈಲು – ರಹಮತ್ ತರೀಕೆರೆ

ಕೊಟ್ಟೂರು   ಹರಿಹರ ರೈಲು ಆರಂಭವಾದ ಹಿನ್ನೆಲೆಯಲ್ಲಿ…

24 ವರ್ಷಗಳ ಬಳಿಕ ಇವತ್ತು ಹೊಸಪೇಟೆಯಿಂದ ಕೊಟ್ಟೂರ ಮೂಲಕ ಹರಿಹರಕ್ಕೆ ರೈಲು ಹೊರಡುತ್ತಿದೆ. 15 ವರ್ಷಗಳ ಹಿಂದೆ ಬರೆದ ಲೇಖನವಿದು. ಸಾಧ್ಯವಾದರೆ ಉದ್ಘಾಟನ ಬಂಡಿಯಲ್ಲಿ ಸವಾರಿ ಮಾಡಬೇಕೆಂಬ ಇರಾದೆಯೂ ಇದೆ.

ಇನ್ನೂ ಬಾರದ ಕೊಟ್ಟೂರು ರೈಲು

ನಾನು ಶಿವಮೊಗ್ಗೆ ಬಿಟ್ಟು ಹೊಸಪೇಟೆಗೆ ಬಂದಾಗ (1992) ರೈಲ್ವೆಹಳಿಯ ಸಮೀಪವೇ ಮನೆ ಹಿಡಿದಿದ್ದೆ. ಆಗ ಹಳಿಗಳ ಮೇಲೆ ಹೊಸಪೇಟೆಯಿಂದ ಕೊಟ್ಟೂರಿಗೆ ಪುಟ್ಟದೊಂದು ರೈಲು ಹೋಗುತ್ತಿತ್ತು. ಅದರಲ್ಲಿ ಮರಿಯಮ್ಮನಹಳ್ಳಿ ಕೊಟ್ಟೂರುಗಳಿಗೆ ಜನ, ಗಂಟುಮೂಟೆ ಇಟ್ಟುಕೊಂಡು, ಸರಳಿಲ್ಲದ ಕಿಟಕಿಯಲ್ಲಿ ತಲೆಹಾಕಿಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಕಿಟಕಿಯ ಸರಳುಗಳಿಗೆ ಹೊರಗಿನಿಂದ ಉದ್ದನೆಯ ಕಟ್ಟಿಗೆಯ ಹೊರೆಗಳನ್ನು ನೇತುಹಾಕಿರುತ್ತಿದ್ದು ಉಂಟು. ಅದನ್ನು ನಾವು ಕಟ್ಟಿಗೆ ರೈಲು ಎಂದು ಕರೆಯುತ್ತಿದ್ದೆವು. ಈ ರೈಲಿನಿಂದ ಒಂದು ಸಣ್ಣ ಕಿರಿಕಿರಿಯಿತ್ತು. ಅದು ದೀರ್ಘವಾಗಿ ಅನಗತ್ಯವಾಗಿ ಸಿಳ್ಳುಹಾಕುತ್ತಿತ್ತು. ಎಷ್ಟೊ ದಿನಗಳ ನಂತರ ಅದರ ಕಿರುಚಿನಲ್ಲಿರುವುದು ಗರ್ಜನೆಯಲ್ಲ. ‘ನಾನು ಹೋಗಬೇಕು, ಸ್ವಲ್ಪ ದಾರಿಬಿಡ್ರಪ್ಪೊ’ ಎಂಬ ಬೇಡುದನಿ ಎಂದು ಗೊತ್ತಾಯಿತು. ಕಾರಣ, ಹಳಿಗಳ ಮೇಲೆ ತಪಸ್ವಿಗಳಂತೆ ಗಂಟೆಗಟ್ಟಲೆ ಚೆಂಬು ಹಿಡಿದು ಕುಳಿತ ಚಿತ್ತವಾಡಿಗಿಯ ಜನರನ್ನು ಎಬ್ಬಿಸಿ ದಾರಿಮಾಡಿಕೊಂಡು ಅದು ಚಲಿಸಬೇಕಿತ್ತು.

ಈ ರೈಲು ಹೊಸಪೇಟೆ ಸ್ಟೇಶನ್ನಿಗೆ ಬಂದು ಹೋಗುವುದು ಕೂಡ, ಧನಿಕರ ಮದುವೆ ಮನೆಗೆ ಬಡವಿಯೊಬ್ಬಳು ಮಕ್ಕಳುಮರಿ ಕಟ್ಟಿಕೊಂಡು ಬಂದು ಸಂಕೋಚದಿಂದ ಮೂಲೆಯಲ್ಲಿ ಕುಳಿತು ಎದ್ದುಹೋದಂತೆ ಇರುತ್ತಿತ್ತು. ಅದರಲ್ಲಿ ಹೋಗುತ್ತಿದ್ದವರೆಲ್ಲ ಎರಡು ಮೂರು ರೂಪಾಯಿ ಟಿಕೀಟಿನ ಜನರು. ಈ ರೈಲು ಚಲಿಸುವ ಪಥ ಮಾತ್ರ ಮೋಹಕವಾಗಿತ್ತು. ಬತ್ತ ತೆಂಗು ಕಬ್ಬು ಬೆಳೆದ ಗದ್ದೆಗಳ ನಡುವಿಂದ ಹಾದು, ನೀರುಗಾಲುವೆಗಳನ್ನು ದಾಟಿ, ತುಂಗಭದ್ರಾ ಡ್ಯಾಮಿನ ಬಾಜೂಕ್ಕೆ ಹೋಗಿ, ಅಲ್ಲಿ ವಂಕಿಯಾಕಾರದಲ್ಲಿ ಎಡಮುರಿದುಕೊಂಡು, ದೊಡ್ಡ ಬೆಟ್ಟವೊಂದರ ನಡುವನ್ನು ಕೊರೆದು ಮಾಡಿದ ಕಿಬ್ಬದಿಯ ದಾರಿಯಲ್ಲಿ ಸಹಸ್ರಪದಿಯಂತೆ ಮೆಲ್ಲ ಚಲಿಸುತ್ತ, ದೊಡ್ಡಕೊಳ್ಳವನ್ನು ದಾಟಿ ಕಣಿವೆ ವೀರಭದ್ರನ ಗುಡಿಯ ಬೆನ್ನಹಿಂದಿನ ಸಂದಿನಲ್ಲಿ ನುಸುಳಿ, ಡ್ಯಾಂ ನೀರಿನ ಪಕ್ಕವೇ ಹರಿಯುತ್ತಾ, ವ್ಯಾಸನಕೆರೆಯ ಕಾಡನ್ನು ಹಾದು ಅದು ಕೊಟ್ಟೂರಿನ ಕಪ್ಪನೆಹಾಳೆ ಹಾಸಿದಂತಿರುವ ಎರೆಹೊಲಗಳ ಬಯಲಿಗೆ ಹೋಗುತ್ತಿತ್ತು. ಕೊಟ್ಟೂರು ಅದರ ಕೊನೆಯ ನಿಲ್ದಾಣ. ಕೊನೆಯ ನಿಲ್ದಾಣಗಳು-ಜೀವನದ ಚಲನೆ ತಟ್ಟನೆ ನಿಂತಂತೆ-ಅವ್ಯಕ್ತವಾದ ಶೂನ್ಯ ಭಾವನೆ ಕವಿಸುತ್ತವೆ. ತಾಳಗುಪ್ಪ ಚಾಮರಾಜನಗರ ನಿಲ್ದಾಣಗಳಲ್ಲೂ ನನಗೀ ಅನುಭವವಾಗಿದೆ. ಪಯಣಿಸಲಿ ಬಿಡಲಿ, ದಾರಿ ಡೆಡೆಂಡ್ ಆಗಬಾರದು. ಅದು ಮತ್ತೊಂದು ದಾರಿಗೆ ಸೇರಿಕೊಂಡಾಗಲೇ ನೆಮ್ಮದಿ. ಆದರೆ ಕೊಟ್ಟೂರು ಹಾದಿ ವಿಷಾದಕರವಾಗಿ ಕೊನೆಗೊಂಡಿತ್ತು. ಅದನ್ನು ವಿಸ್ತರಿಸಿ, ಹತ್ತಿರದ ಹರಿಹರಕ್ಕೆ ಸೇರಿಸಬೇಕೆಂಬುದು ಈ ಭಾಗದ ಜನರ ಆಸೆ. ಇದಕ್ಕಾಗಿ ಕೊನೆಯ ಪಕ್ಷ ಅರ್ಧಶತಮಾನದಿಂದ ಜನ ಮನವಿಪತ್ರ ಸಲ್ಲಿಕೆ, ಧರಣಿ, ರಾಸ್ತಾರೋಕೊ, ಸತ್ಯಾಗ್ರಹ, ಮೆರವಣಿಗೆ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡಿಕೊಂಡು ಬಂದರು. ತತ್ಫಲವಾಗಿ ಕೊಟ್ಟೂರಿಂದ ಹರಿಹರಕ್ಕೆ ಮಾರ್ಗ ವಿಸ್ತರಣೆ ಹಾಕಬೇಕೆಂದು 1995ರಲ್ಲಿ ನಿರ್ಧರಿಸಲಾಯಿತು. 15 ವರ್ಷ ಕಳೆದವು. 60ಕಿಮಿ ದೂರದ ಈ ಹಾದಿಯಿನ್ನೂ ಪೂರ್ಣಗೊಂಡಿಲ್ಲ. ಈ ಕಾಯುವಿಕೆ ಆಕ್ರೋಶ ಮತ್ತು ನೋವನ್ನು ಸೃಷ್ಟಿಮಾಡಿದೆ.

ಕೊಟ್ಟೂರು ಅನೇಕ ಕಾರಣಗಳಿಂದ ಪ್ರಸಿದ್ಧವಾಗಿದೆ-ಅರಳೆ ಮಾರುಕಟ್ಟೆಗೆ, ರಂಗ ಚಟುವಟಿಕೆಗಳಿಗೆ, ಕೊಟ್ಟೂರುಸ್ವಾಮಿ ಎಂದು ಹೆಸರಾಗಿರುವ ಸಂತ ಬಸಪ್ಪಸ್ವಾಮಿಯ ತೇರಿಗೆ, ರುಚಿಕರ ವಗ್ಗಾಣಿ ಮಿರ್ಚಿಗೆ, ಕತೆಗಾರ ಕುಂವಿಗೆ; ಕುಂವಿಯವರ ಮಾತಲ್ಲಿ ಹೇಳುವುದಾದರೆ, ಅಡ್ಡಪಲ್ಲಕ್ಕಿ ಹೊತ್ತುಹೊತ್ತು ತಮ್ಮ ದೇಹಾಕಾರ ಕಳಕೊಂಡಿರುವ ಜನರಿಗೆ ಕೂಡ. ಬ್ರಿಟಿಶರು ಕೊಟ್ಟೂರಿಗೆ ರೈಲುಹಳಿ ಹಾಕಲು ಏನೇನು ಕಾರಣಗಳಿದ್ದವೊ, ಅದರಲ್ಲಿ ಇಲ್ಲಿನ ಹತ್ತಿ ಮಾರುಕಟ್ಟೆಯದೂ ಒಂದೆಂದು ಕಾಣುತ್ತದೆ. ವಸಾಹತುಶಾಹಿ ವಾಣಿಜ್ಯದಲ್ಲಿ ಜವಳಿ ಮುಖ್ಯವಾದ ಮಾರುಕಟ್ಟೆ ಸರಕಾಗಿತ್ತಷ್ಟೆ. ಬ್ರಿಟಿಶರು ಸಂಪನ್ಮೂಲವಿರುವ ಜಾಗವಾದರೆ, ಪಾತಾಳಕ್ಕೂ ಹಾದಿಹಾಕುವರು. ಸೊಂಡೂರು ಬೆಟ್ಟಗಳಲ್ಲಿ ಖನಿಜವಿರುವುದನ್ನು 19ನೇ ಶತಮಾನದಲ್ಲೇ ಕಂಡುಹಿಡಿದು ವರದಿ ತಯಾರಿಸಿದ್ದ ಅವರು, ಅಗೆದು ಸಾಗಿಸಲು ಹೊಸಪೇಟೆಯಿಂದ ಮದರಾಸಿನ ಬಂದರಿನ ತನಕ ರೈಲುಹಾದಿ ನಿರ್ಮಿಸಿದ್ದರು. ಇದಕ್ಕೆ ಲಗತ್ತಾಗಿ ಹೊಸಪೇಟೆ-ಕೊಟ್ಟೂರು ನಡುವೆ ತೇರಿನ ಹಗ್ಗ ಉಚ್ಚಿಕೊಂಡು ಬಿದ್ದಂತೆ 40 ಕಿಮೀ ಉದ್ದದ ಮೀಟರುಗೇಜು ಹಳಿಯಿತ್ತು. ಇದರ ಮೇಲೆ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ಗಾಡಿ ನಿರುಮ್ಮಳ ಓಡಾಡುತ್ತಿತ್ತು.

ಯಾವಾಗ ಬ್ರಾಡ್‍ಗೇಜು ಪರಿವರ್ತನ ಕ್ರಾಂತಿ ಶುರುವಾಯಿತೊ, ತನ್ನ ಪಾಡಿಗೆ ತಾನು ಆಡುವ ಮಗುವಿನಂತೆ ಓಡಾಡಿಕೊಂಡಿದ್ದ ಈ ರೈಲಿಗೆ ಸಂಚಕಾರ ಬಂತು. ರೈಲು ನಿಂತಿದ್ದಕ್ಕೆ ಜನರಿಗೆ ಶಾನೇ ಬೇಜಾರಾಯಿತು. ಸಣ್ಣರೈಲು ಹೋಗಿ ದೊಡ್ಡರೈಲು ಬರುತ್ತದೆಂದು ಸಮಾಧಾನ ಮಾಡಿಕೊಂಡರು. ಮಾತ್ರವಲ್ಲ, ಕೊಟ್ಟೂರಿಗೆ ನಿಂತುಹೋಗಿರುವ ಹಳಿಗಳು ಹರಿಹರದವರೆಗೆ ಚಾಚಿಕೊಂಡು, ಅಲ್ಲಿಂದ ಮುಂದಕ್ಕೆ ದಾವಣಗೆರೆ ಬೆಂಗಳೂರು ಮೈಸೂರು ಮಂಗಳೂರುಗಳಿಗೂ, ಹಿಂದಕ್ಕೆ ಹುಬ್ಬಳ್ಳಿ ಬಿಜಾಪುರ ಸೊಲ್ಲಾಪುರ ಪುಣೆ ಮುಂಬಯಿಗಳಿಗೂ ಓಡಾಟ ಲಭಿಸುತ್ತದೆಂದು ವಣಿಕರು ಸಂತೋಷಗೊಂಡರು. ಈ ಭಾಗದಲ್ಲಿ ಬೆಳೆಯುವ ಸೂರ್ಯಕಾಂತಿ ದಾಳಿಂಬೆ ಅಂಜೂರ ಹತ್ತಿ ತರಕಾರಿಗಳಿಗೆ ಹೊಸಹೊಸ ಮಾರುಕಟ್ಟೆಗಳಿಗೆ ಸಿಗುವುದೆಂದು ರೈತರು ಕನಸು ಕಟ್ಟಿದರು. ಯಾರೊ ‘ಗಂಡ ಜರೀಸೀರೆ ತರ್ತಾನೆ ಅಂತ ಇರೋ ಸೀರೆ ಹರಕೊಂಡಿದ್ದಳಂತೆ’-ಹಾಗಾಯಿತು.

ಅಭಿವೃದ್ಧಿ ಎಂದರೆ ದಾರಿಗಳು ಮಾತ್ರವಲ್ಲ. ರೈಲುಮಾರ್ಗ ಮುಗಿದು ರೈಲುಗಳು ಓಡಾಟ ಶುರುಮಾಡಿದರೆ, ಒಂದು ಪ್ರದೇಶದ ಸಮಸ್ತ ಸಮಸ್ಯೆಗಳು ಮುಗಿದು, ಸುವರ್ಣಯುಗ ಶುರುವಾಗುವುದಿಲ್ಲ.. ಆದರೆ ಗ್ರಾಮೀಣ ಭಾಗಕ್ಕೆ ಇವು ಕನಿಷ್ಠಮಟ್ಟದ ಚಲನಶೀಲತೆಯನ್ನು ಒದಗಿಸುತ್ತವೆ. ದಾರಿಗಳು ಬಸ್ಸಿನದಿರಲಿ ರೈಲಿನದಿರಲಿ, ಅವಕ್ಕೂ ಅವುಗಳಿಗೆ ಲಗತ್ತಾಗುವ ಊರುಗಳ ಚಲನಶೀಲತೆಗೂ ಸಂಬಂಧವಿದೆ. ಹೆದ್ದಾರಿ ಮತ್ತು ರೈಲುಹಾದಿಗಳು ಹಾಯದ ಊರುಗಳು ವಿಚಿತ್ರರೀತಿಯಲ್ಲಿ ಹಿಂದುಳಿಯುತ್ತವೆ. ದೇವದುರ್ಗ ಯಲಬುರ್ಗ ರೋಣ ಮುದ್ದೇಬಿಹಾಳಗಳನ್ನು ನೋಡುವಾಗ ನನಗೆ ಇದು ಅನಿಸಿದೆ. ಹೊಸಪೇಟೆಯಿಂದ ಬೆಂಗಳೂರಿಗೂ ಶಿವಮೊಗ್ಗೆಗೂ ಹೋಗುವ ಹೆದ್ದಾರಿಗಳು ಕಾಲುಚಾಚಿದಂತೆ ಕವಲೊಡೆದಿದ್ದು, ಅವುಗಳ ನಡುವೆ ಸಿಕ್ಕಿಕೊಂಡಂತೆ ಒಳಭಾಗದಲ್ಲಿ ಕೊಟ್ಟೂರಿದೆ. ತನ್ನ ವಾಣಿಜ್ಯ ಚಟುವಟಿಕೆಯಿಂದಲೂ ರೈತಾಪಿ ಉತ್ಪನ್ನಗಳಿಂದಲೂ ನೆಲೆನಿಂತ ಹಳೆಯ ಪಟ್ಟಣವಿದು. ಪೇಟೆಬೀದಿ ನೋಡಿದರೆ ಸುತ್ತಮುತ್ತಲಿನ ನೂರು ಹಳ್ಳಿಗಳ ವ್ಯಾಪಾರಕ್ಕೆ ಅದು ಕೇಂದ್ರವಾಗಿದೆ ಎನಿಸುತ್ತದೆ. ಹೀಗಾಗಲು ಅದಕ್ಕಿದ್ದ ತುಂಡುರೈಲಿನ ಸಂಪರ್ಕವೂ ಒಂದು ಕಾರಣವಾಗಿತ್ತು. ಈಗದೂ ಇಲ್ಲವಾಯಿತು. ಜನ ಲಾರಿ ಬಸ್ಸು ಟೆಂಪೊಗಳನ್ನು ಅವಲಂಬಿಸಿ ರೈಲಿನ ಕೊರತೆಯನ್ನು ತುಂಬಿಕೊಂಡರು. ಆದರೂ ರೈಲು, ಜನರ ಬಯಕೆಯಾಗಿತ್ತು. ಇದಕ್ಕೆ ಕೊಟ್ಟೂರಿನ ಜನರು ಮಾಡಿದ ಅಸಂಖ್ಯ ಹೋರಾಟಗಳೇ ಸಾಕ್ಷಿ. ಪರಿಸ್ಥಿತಿ ಎಲ್ಲಿಗೆ ಮುಟ್ಟಿತ್ತೆಂದರೆ, ಚುನಾವಣೆಗೆ ಸ್ಪರ್ಧಿಸುವವರು ಹರಿಹರ ಕೊಟ್ಟೂರು ರೈಲುಮಾರ್ಗ ಪೂರ್ಣಗೊಳಿಸುತ್ತೇವೆ ಎಂದು ಜನರಿಗೆ ಆಶ್ವಾಸನೆ ಕೊಡುತ್ತಿದ್ದರು; ಗೆದ್ದ ಶಾಸಕರು ತಮ್ಮ ಕಾಲದಲ್ಲಿ ರೈಲ್ವೆಮಾರ್ಗ ಇಷ್ಟು ಉದ್ದ ಹಾಕಲಾಯಿತು ಎಂದು ಸಾಧನೆ ಸಾಬೀತು ಪಡಿಸುತ್ತಿದ್ದರು. ರೈಲು ಶಾಸಕರನ್ನು ಅಳೆಯುವ ಮಾನದಂಡವಾಗಿ ಹೋಯಿತು.

ಯಾಕೆ ಇಂತಹ ಸಣ್ಣಪುಟ್ಟ ಊರುಗಳನ್ನು ಬೆಸೆಯುವ ರೈಲು ಮಾರ್ಗಗಳು ಪೂರ್ಣಗೊಳ್ಳಲು ಎರಡು ಮೂರು ದಶಕ ಕಾಯಿಸಲಾಗುತ್ತದೆ? ಪ್ಯಾಸೆಂಜರ್ ಟ್ರೈನುಗಳ ಬಗ್ಗೆ ರೈಲ್ವೆ ಇಲಾಖೆಗೆ ತಾತ್ಸಾರವೇ? ಹಳೆಯ ಬಣ್ಣಮಾಸಿದ ನಾಲ್ಕೈದು ಡಬ್ಬಿಗಳನ್ನು ಇಟ್ಟುಕೊಂಡು ಬಾಲತುಂಡಾದ ಹಲ್ಲಿಯಂತೆ ಹಾಸ್ಯಾಸ್ಪದವಾಗಿ ಓಡಾಡುವ ಈ ಪ್ಯಾಸೆಂಜರಗಳು ಗ್ರಾಮೀಣ ಭಾಗದಲ್ಲಿ ಜೀವನಾಡಿಗಳು. ಇವುಗಳ ಜನಪ್ರಿಯತೆಗೆ ತಿಕೀಟಿನ ಕ್ರಯ ಕಮ್ಮಿ ಎನ್ನುವುದು ಮಾತ್ರ ಕಾರಣವಲ್ಲ. ಇವು ಹಳ್ಳಿಮೂಲೆಗಳನ್ನು ಸಮೀಪದ ತಾಲೂಕು ಪಟ್ಟಣ ಮತ್ತು ಜಿಲ್ಲಾಕೇಂದ್ರಗಳಿಗೆ ಸಂಪರ್ಕಿಸುವ ಕೆಲಸ ಮಾಡುತ್ತವೆ; ರಸ್ತೆಗಳು ಸೇರಿಸಲಾಗದ ಊರುಗಳನ್ನು ತಮ್ಮ ಜಾಲದಲ್ಲಿ ಸೇರಿಸುತ್ತವೆ; ತಾವು ನೋಡದ ದೂರದ ಊರುಗಳಿಗೆ ಹೋಗುವ ಕನಸನ್ನು ಹುಟ್ಟಿಸುತ್ತವೆ. ಸಣ್ಣಪುಟ್ಟ ಊರುಗಳ ಮುಂದೆ ನಿಮಗೂ ನನಗೂ ಸಂಬಂಧವಿಲ್ಲ ಎಂಬಂತೆ ಓಡುವ ಎಕ್ಸ್‍ಪ್ರೆಸ್ಸುಗಳಂತಲ್ಲದೆ ಸಣ್ಣಪುಟ್ಟ ಊರಲ್ಲಿ ನಿಂತು ಜನರನ್ನು ಹತ್ತಿಸಿಕೊಂಡು ಹೋಗುತ್ತವೆ. ಇವತ್ತಿಗೂ ಸಂತೆಗಳಿಗೆ ಓಡಾಡುವ ಚಿಲ್ಲರೆ ವ್ಯಾಪಾರಿಗಳು, ಬೆಳೆದ ತರಕಾರಿಯನ್ನೊ ಕರೆದ ಹಯನನ್ನೊ ಒಯ್ಯುವವರು, ಶಾಲೆ ಕಾಲೇಜಿಗೆ ಹೋಗುವ ಮಕ್ಕಳು, ಹಳ್ಳಿಗೆ ಬಂದು ಹೋಗುವ ನರ್ಸುಗಳು ಶಿಕ್ಷಕರು ಅಧಿಕಾರಿಗಳು, ದೇವರು-ದಿಂಡರಿಗೆ ಹೋಗುವ ಭಕ್ತರು ಹಾಗೂ ಕೂಲಿಕಾರ್ಮಿಕರು ಪ್ಯಾಸೆಂಜರುಗಳಲ್ಲಿ ಓಡಾಡುತ್ತಾರೆ. ರಾಯಚೂರು ಯಾದಗಿರಿ ಬೀದರ್ ಸೇಡಂ ಚಿತಾಪುರ, ಗುಲಬರ್ಗ ಜಿಲ್ಲೆಯ ಕಟ್ಟಡದ ಕೆಲಸಗಾರರನ್ನು ಬೆಂಗಳೂರಿಗೆ ಸಾಗಿಸುವ ರೈಲುಗಳನ್ನು ‘ಕೂಲಿ ಎಕ್ಸ್‍ಪ್ರೆಸ್’ ಎಂದು ಕರೆಯುವ ವಾಡಿಕೆಯಿದೆ. ಅವುಗಳ ಜನರಲ್ ಬೋಗಿಗಳು ತುಂಬಿ ಜಾಗ ಸಾಲದೆ ಲಗೇಜು ವ್ಯಾನಿನಲ್ಲೂ ಜನ ನುಸುಳಿಕೊಂಡಿರುತ್ತಾರೆ.
ಅರಸೀಕೆರೆ-ಹುಬ್ಬಳ್ಳಿ, ಗುಂತಕಲ್-ಚಿಕ್ಕಜಾಜೂರು, ಗದಗ-ಬಾಗಲಕೋಟ, ಹುಬ್ಬಳ್ಳಿ-ಹೊಸಪೇಟೆ, ಮೈಸೂರು-ಚಾಮರಾಜನಗರ, ಬೀರೂರು-ಶಿವಮೊಗ್ಗ, ವಾಡಿ-ಹೈದರಾಬಾದು ಪ್ಯಾಸೆಂಜರುಗಳಲ್ಲಿ ಪಯಣಿಸಿದ್ದೇನೆ. ಅವು ಹಳಿಪಕ್ಕದ ಊರುಗಳಲ್ಲಿ ಉಂಟು ಮಾಡಿರುವ ಚಲನಶೀಲತೆ ಕಂಡಿದ್ದೇನೆ. ಬೀರೂರು-ಶಿವಮೊಗ್ಗ ಪ್ಯಾಸೆಂಜರು ಇರದಿದ್ದರೆ, ನಾನು ಮತ್ತು ತರೀಕೆರೆ ಕಡೂರು ಭದ್ರಾವತಿ ಪರಿಸರದ ಸಾವಿರಾರು ಮಂದಿ ಪದವೀಧರರಾಗುವುದು ಕಷ್ಟವಿತ್ತು. ನಾವು ತಿಂಗಳಿಗೆ ಐದು ರೂಪಾಯಿಯ ಪಾಸುಮಾಡಿಕೊಂಡು ಹಳ್ಳಿಯ ಜನ ತರುತ್ತಿದ್ದ ತರಕಾರಿ ಪುಟ್ಟಿಗಳನ್ನು, ಹಾಲಿನ ಕ್ಯಾನುಗಳನ್ನು ಒಳಗೆ ಎಳೆದುಕೊಳ್ಳಲು ನೆರವಾಗುತ್ತ, ಸೀಟನ್ನು ಬಿಟ್ಟುಕೊಟ್ಟು ಸಮಾಜಸೇವೆ ಮಾಡಿದ ಹೆಮ್ಮೆಯಲ್ಲಿ ಬಾಗಿಲಲ್ಲಿ ನೇತುಕೊಂಡು ಹೋಗುತ್ತಿದ್ದೆವು. ಕೆಲವೊಮ್ಮೆ ಮಸರಹಳ್ಳಿಯ ಸ್ಟೇಶನಿನಲ್ಲಿ ಹೊಲದೊಳಗಿನ ಕಾಲುಹಾದಿಯಲ್ಲಿ ಮಗುವನ್ನು ಎತ್ತಿಕೊಂಡು ಹೆಂಗಸರು ಓಡೋಡಿ ಬರುತ್ತಿದ್ದರೆ, ಗಾಡಿ ನಿಂತು ಕಾಯುತ್ತಿತ್ತು. ಚಿಕ್ಕಜಾಜೂರು-ಬಳ್ಳಾರಿ ಹಾದಿಯು ಮೊಣಕಾಲ್ಮೂರು, ರಾಯದುರ್ಗ, ಚಳ್ಳಕೆರೆ, ಬಳ್ಳಾರಿ ತಾಲೂಕುಗಳ ಬೋಳುಗುಡ್ಡದ ಬೆಂಗಾಡು ಹೊಲಗಳಲ್ಲಿ ಹಾದುಹೋಗುತ್ತದೆ. ಮೈಸೂರು- ಬೆಂಗಳೂರು, ಭದ್ರಾವತಿ- ಶಿವಮೊಗ್ಗ ಮುಂತಾದ ಹಸಿರುಕಚ್ಚಿದ ದಾರಿಯಲ್ಲಿ ಪಯಣಿಸಿದವರಿಗೆ ‘ಇದೇನು ಇಥಿಯೋಪಿಯಾ!’ ಅನಿಸಬಹುದು. ಆದರೆ ಇಲ್ಲಿ ಚಲಿಸುವ ಪ್ಯಾಸೆಂಜರುಗಳು ಓಬಳಾಪುರ, ತಳುಕು ಇತ್ಯಾದಿ ಅನಾಮಿಕ ಹಳ್ಳಿಗಳಿಂದ ಜನರನ್ನು ಬೆಂಗಳೂರು, ಮೈಸೂರು, ಬಳ್ಳಾರಿ ಚಿತ್ರದುರ್ಗಗಳಿಗೆ ಕರೆದೊಯ್ಯುತ್ತವೆ. ಪಶುಪಾಲಕ ನೇಕಾರರು ತಮ್ಮ ಕಂಬಳಿಗಳನ್ನು ಗಾಡಿಗೆ ಹಾಕಿಕೊಂಡು ಮಲೆನಾಡ ಕಡೆ ಹೋಗುವರು. ಕೈಲಾಗದ ಮುದುಕರು, ದೊಡ್ಡಾಸ್ಪತ್ರೆಗೆ ಹೋಗುವ ರೋಗಿಗಳು, ಮಕ್ಕಳು ಮರಿ ಕಟ್ಟಿಕೊಂಡು ಜಾತ್ರೆಗೆ ಲಗ್ನಕ್ಕೆ ಹೋಗುವವರು, ಪ್ಯಾಸೆಂಜರುಗಳಲ್ಲಿ ಕುಳಿತು, ಮನೆಯಿಂದ ಅವಸರದಲ್ಲಿ ಕಟ್ಟಿತಂದ ತಿಂಡಿಯನ್ನು ತಿನ್ನುತ್ತ ನೆಮ್ಮದಿಯಿಂದ ಪಯಣಿಸುವರು. ವಾಡಿ-ಹೈದರಾಬಾದು ಪ್ಯಾಸೆಂಜರುಗಳಲ್ಲಿ ಈ ಭಾಗದ ನೂರಾರು ಕಾರ್ಮಿಕರು ಹೈದರಾಬಾದಿಗೆ ಹೋಗುವುದುಂಟು. ನಾನು ಈಚೆಗೆ ಸೇಡಂ ನಿಲ್ದಾಣದಲ್ಲಿ ಒಬ್ಬ ಹಳ್ಳಿಯ ವಯಸ್ಸಾದ ದಂಪತಿಗಳನ್ನು ಕಂಡೆ. ಮಗ ಹೈದರಾಬಾದಿನಲ್ಲಿ ಯಾವುದೋ ಕಂಪನಿಯಲ್ಲಿ ವಾಚ್‍ಮನ್. ದಂಪತಿಗಳು ಜೋಳದ ಹಿಟ್ಟಿನ ಚೀಲ, ತೊಗರಿಕಾಯಿಯ ಕೈಚೀಲ ಮತ್ತು ರೊಟ್ಟಿಯ ಗಂಟು ಕಟ್ಟಿಕೊಂಡು, ಹೈದರಾಬಾದು ಪ್ಯಾಸೆಂಜರಿಗೆ ಕಾದುಕೊಂಡಿದ್ದರು. ಬಸ್ಸಿನಲ್ಲಿ ಇವನ್ನೆಲ್ಲ ಇಟ್ಟುಕೊಂಡು ಹೋಗಲು ಆಗುವುದಿಲ್ಲ. ರೈಲಿಗೆ ಇಪ್ಪತ್ತೈದು ರೂಪಾಯಿಯಾದರೆ ಬಸ್ಸಿಗೆ ಎಪ್ಪತ್ತೈದು.

ಇಷ್ಟು ಜನೋಪಯುಕ್ತವಾದ ಪ್ಯಾಸೆಂಜರ್ ಗಾಡಿಗಳ ಬಗ್ಗೆ ಇವು ಓಡಾಡುವ ದಾರಿಗಳ ಬಗ್ಗೆ ರೈಲ್ವೆ ಇಲಾಖೆಗೆ ಆಸಕ್ತಿ ಕಡಿಮೆ. ಈ ಪ್ಯಾಸೆಂಜರುಗಳು ಅದಕ್ಕೆ ಮುದ್ದಿನ ಮಕ್ಕಳಲ್ಲ. ಒಂದು ಗೂಡ್ಸುಗಾಡಿ ತರುವ ಲಾಭವನ್ನು ಈ ರೈಲುಗಳು ಒಂದು ವರ್ಷ ಓಡಿದರೂ ತರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ವಾಸ್ತವವಾಗಿ ಕೊಟ್ಟೂರು-ಹರಿಹರದ ಮಾರ್ಗ ಶುರುವಾಗಿದ್ದು 1995ರಲ್ಲಿ. ರೈಲ್ವೆಮಂತ್ರಿ ಜಾಫರ್ ಶರೀಫರು ಅದಕ್ಕೆ ಅಡಿಗಲ್ಲು ಹಾಕಿದ್ದರು. ಮಂಗಳೂರು ಬಂದರಿಗೆ ಅದಿರನ್ನು ಸಾಗಿಸುವುದು ಸುಲಭವಾಗುತ್ತದೆ ಎಂಬುದು ಇದಕ್ಕೆ ಕೊಡಲಾಗಿದ್ದ ತರ್ಕ. ಆದರೆ ರೈಲ್ವೆ ಇಲಾಖೆ ಬಜೆಟ್ಟಿನಲ್ಲಿ ಇದಕ್ಕೆ ಎರಡು ಕೋಟಿ ಮೂರುಕೋಟಿ ಹಣ ಕೊಡುತ್ತ ತಡಮಾಡತೊಡಗಿತು. ಈ ಮಾರ್ಗ ಆರಂಭವಾದರೆ ಮದ್ರಾಸು ಮತ್ತು ಹೈದರಾಬಾದು ರೈಲ್ವೆ ವಲಯಗಳಿಗೆ ಅದಿರು ಸಾಗಣೆಯಿಂದ ಬರುವ ರೆವಿನ್ಯೊ ತಪ್ಪುತ್ತದೆ ಎಂದು ಇದನ್ನು ತಳುವಲಾಗುತ್ತಿದೆ, ಇದು ತಮಿಳು ತೆಲುಗರ ಆಟ ಎನ್ನಲಾಯಿತು. ಜಿಲ್ಲಾಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್ ಮನಸ್ಸು ಮಾಡಿದ್ದರೆ ಇದು ಮುಗಿಯುತ್ತಿತ್ತೆಂದೂ, ಗದಗ ಹಡಗಲಿ ಹರಿಹರ ಮಾರ್ಗಕ್ಕಾಗಿ ಅವರು ಕೊಟ್ಟೂರು ಹರಿಹರ ರೈಲಿನ ಬಗ್ಗೆ ಅನಾಸಕ್ತಿ ತೋರಿದರೆಂದೂ ವಿರೋಧಿಗಳು ವ್ಯಾಖ್ಯಾನಿಸುವುದುಂಟು. ಸತ್ಯ ಹಂಪಿ ವಿರೂಪಾಕ್ಷನಿಗೇ ಗೊತ್ತು! ಆದರೆ ಅದಿರು ಸಾಗಣೆಯಿಂದ ರೈಲ್ವೆ ಇಲಾಖೆಗೆ ಪ್ರತಿವರ್ಷ 400 ಕೋಟಿ ಆದಾಯ ಬಳ್ಳಾರಿ ಜಿಲ್ಲೆಯಿಂದ ಇದ್ದರೂ ಇಂತಹ ಕಿರುಮಾರ್ಗ ಮುಗಿಸುವುದಕ್ಕೆ ಹಿಂದೇಟು ಹಾಕುತ್ತಿರುವುದೇಕೆ? 1995ರಲ್ಲಿ 65 ಕೋಟಿಯಿದ್ದ ಅಂದಾಜು ವೆಚ್ಚ 2001ರಲ್ಲಿ 124 ಕೋಟಿಗೆ ಏರಿತು. ವೆಚ್ಚವೀಗ 200 ಕೋಟಿಗೇರಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಂತಮ್ಮ ಪಾಲನ್ನು ಹಾಕಿ ಇದನ್ನು ಪೂರೈಸಬೇಕೆಂದು ನಿರ್ಧರಿಸಲಾಗಿದೆ. ಕರ್ನಾಟಕ ಸರ್ಕಾರ ತನ್ನ ಪಾಲನ್ನು ಕೊಟ್ಟಿದೆ. ಆದರೂ ಇದು ಮುಗಿವ ಲಕ್ಷಣಗಳಿಲ್ಲ.

ಭಾರತದ ಸದ್ಯದ ಬೃಹತ್ ಕೈಗಾರಿಕವಾದಿ ಆರ್ಥಿಕ ವ್ಯವಸ್ಥೆಯಲ್ಲಿ ಹಳ್ಳಿಪಟ್ಟಣಗಳನ್ನು ಸೇರಿಸುವ ಪ್ಯಾಸೆಂಜರು ರೈಲು ಮಾರ್ಗದ ಆಸೆಗಳು ಈಡೇರಲು ದಶಮಾನಗಳು ಬೇಕಾಗುತ್ತವೆ. ಆದರೆ ಮಹಾನಗರಗಳ ನಡುವಣ ಕಾರಿಡಾರ್ ರಸ್ತೆಗಳು, ಫ್ಲೈಓವರುಗಳು, ಮೆಟ್ರೋರೈಲು ಯೋಜನೆಗಳು ಕೆಲವೇ ವರ್ಷಗಳಲ್ಲಿ ಮುಗಿಯುತ್ತವೆ. ಹಾಗೆ ಮುಗಿಸದಿದ್ದರೆ ರಾಜ್ಯ ಬಿಟ್ಟು ಬೇರೆಡೆಗೆ ಹೋಗುತ್ತೇವೆ ಎಂದು ಉದ್ಯಮಿಗಳೂ ಹೆದರಿಸುತ್ತಾರೆ. ತಡಮಾಡಬೇಡಿ ಎಂದು ನ್ಯಾಯಾಲಯಗಳು ಸರ್ಕಾರಕ್ಕೆ ಛೀಮಾರಿ ಹಾಕುತ್ತವೆ; ವಿಶ್ವಬ್ಯಾಂಕ್ ಎಚ್ಚರಿಸುತ್ತದೆ. ಯೋಜನೆಗಳು ಜನರಿಗೆ ಎಷ್ಟೇ ಉಪಯುಕ್ತವಿರಲಿ, ಅವುಗಳ ಜತೆ ದೊಡ್ಡ ಉದ್ಯಮಗಳ ಹಿತಾಸಕ್ತಿ ಸೇರಿಕೊಳ್ಳದಿದ್ದರೆ, ಅವು ನಮ್ಮ ಸಾರ್ವಜನಿಕ ವ್ಯವಸ್ಥೆಯಲ್ಲಿ ಆದ್ಯತೆ ಪಡೆಯುವುದಿಲ್ಲ. ಸಣ್ಣಪುಟ್ಟವರನ್ನು ಬಿಟ್ಟು ನಡೆಯುವ ಆರ್ಥಿಕ ರಾಜಕೀಯ ವ್ಯವಸ್ಥೆಯ ಮನೋಭಾವದ ಪರಿಣಾಮವಿದು. ವಿಚಿತ್ರವೆಂದರೆ ಸಮಾಜವಾದಿ ಹಿನ್ನೆಲೆಯ ಮಂತ್ರಿಗಳೇ ಹೆಚ್ಚು ರೈಲ್ವೆ ಮಂತ್ರಿಗಳಾಗುತ್ತ ಬಂದಿರುವುದು. ಹಿಂದೆ ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್. ಈಗ ಲಾಲೂಪ್ರಸಾದ್. ಇವರ ಕಾಲದಲ್ಲೂ ಗ್ರಾಮೀಣ ಒಳಮಾರ್ಗಗಳು ಪೂರ್ಣಗೊಳ್ಳುತ್ತಿಲ್ಲ ಎಂದರೆ ಏನರ್ಥ? ಯತ್ನಾಳರು ರೈಲ್ವೆ ಮಂತ್ರಿಯಾದಾಗ, ಕೊಟ್ಟೂರು ಹರಿಹರ ಮಾರ್ಗ ಪೂರ್ಣಗೊಳ್ಳಬಹುದು ಎಂದು ಜನ ಭಾವಿಸಿದರು. ಸಾಧ್ಯವಾಗಲಿಲ್ಲ. ಮೊಯಿಲಿಯವರು ವಿಶ್ವವಿದ್ಯಾಲಯಕ್ಕೆ ಬಂದಾಗ, ಅವರಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟೆವು. ಲಾಲೂಪ್ರಸಾದರ ಜತೆ ಮಾತಾಡಿ, ಇದರ ಬಗ್ಗೆ ಗಮನ ಹರಿಸಲಾಗುವುದು ಎಂಬ ಆಶ್ವಾಸನೆ ಪಡೆದುಕೊಟ್ಟರು. ಆದರೂ ಕೆಲಸ ಮುಗಿಯುವಂತೆ ಕಾಣುತ್ತಿಲ್ಲ.
ಕೊಟ್ಟೂರು-ಹೊಸಪೇಟೆಯ ನಡುವೆ ಹಾಕಲಾದ ಹಳಿ ಮತ್ತು ಕಟ್ಟಲಾದ ನಿಲ್ದಾಣಗಳನ್ನು, ಇನ್ನು ರೈಲು ಬರುವುದಿಲ್ಲ ಎಂದು ಗೊತ್ತಾದ ಬಳಿಕ, ಸ್ಥಳೀಯ ಪ್ರತಿ¨sಗಳು ಹಳಿಗಳ ಮೇಲೆ ಕಸತಂದು ಸುರಿಯಲಾರಂಭಿಸಿದರು. ಹಳಿಗಳನ್ನು ಶೌಚಕ್ರಿಯೆಯ ‘ದೊಡ್ಡಿ’ಯನ್ನಾಗಿ ಮಾಡಿಕೊಂಡರು. ಹಳಿಗೆ ಎಮ್ಮೆ ಕಟ್ಟುವುದು, ಹುಲ್ಲಿನ ಬಣವೆ ಒಟ್ಟುವುದು, ಮಾಡಿಕೊಂಡರು. ಪ್ಲಾಟ್‍ಫಾರಮ್ಮಿನ ಬಯಲನ್ನು ಒಕ್ಕಲು ಮಾಡುವ, ಮೆಕ್ಕೆಜೋಳ ಮೆಣಸಿನಕಾಯಿ ನೀರುಳ್ಳಿ ಒಣಗಿಸುವ ಕಣವನ್ನಾಗಿ ಬದಲಿಸಿದರು. ಸ್ಟೇಶನುಗಳನ್ನು ಇಸ್ಪೀಟುಗಾರರು ಕ್ಲಬ್ಬನ್ನಾಗಿಸಿದರು. ಪೋಲಿದನಗಳು ಹಕ್ಕೆ ಮಾಡಿಕೊಂಡವು. ಊರಾಡುವ ಭಿಕ್ಷುಕರು, ಜೋಗಮ್ಮಗಳು, ದುರುಗ ಮುರಗಿಯವರು, ತಮ್ಮ ರಾತ್ರಿ ಉಳಿಕೆಯ ಧರ್ಮಶಾಲೆಯನ್ನಾಗಿ ರೂಪಾಂತರಿಸಿದರು. ಕೆಲವರು ಹಳಿಗಳಿಗೆ ಬಳಸುವ ಕಬ್ಬಿಣ, ಫಿಶ್‍ಪ್ಲೇಟಿಗೆ ಬಡಿಯುವ ಬೆಣೆ ಮತ್ತು ಚಕ್ಕುಲಿಯಂತಹ ರಿಂಗುಗಳನ್ನು ಕಿತ್ತು ಕುಡುಕೋಲು ಕೊಡಲಿ ಮಾಡಿಸಿಕೊಂಡರು. ರೈಲ್ವೆ ಕಬ್ಬಿಣದಿಂದ ಮಾಡಿದ ಕುಡುಗೋಲು ಚೆನ್ನಾಗಿ ಕೆಲಸ ಮಾಡುತ್ತವೆಯೆಂದು ಒಬ್ಬ ಸುದ್ದಿಹಬ್ಬಿಸಿ, ಜನರನ್ನು ಹುರಿದುಂಬಿಸಿದನು. ಪೋಲಿಸರು ಕಬ್ಬಿಣದ ಕಳ್ಳರನ್ನು ಹಿಡಿದು ಕೇಸು ಜಡಿಯತೊಡಗಿದರು. ಕೊಟ್ಟೂರು ಪೋಲಿಸು ಠಾಣೆಯಲ್ಲಿ ಹಳಿಗಳ್ಳರ ಕೇಸುಗಳಿವೆಯಂತೆ. ಇಂತಹ ವಿಚಿತ್ರವಾದ ಸುದ್ದಿಗಳನ್ನು ಕಳೆದ 15 ವರ್ಷಗಳಿಂದ ಇಲ್ಲಿನ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ; ಇದರದ್ದೇ ಒಂದು ಸಾಂಸ್ಕøತಿಕ ಅಧ್ಯಯನ ಮಾಡಬಹುದು.
25 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಜನ ‘ವಿಜಯನಗರ ಉಕ್ಕು ನಮ್ಮಹಕ್ಕು’ ಎಂದು ಜನ ಕಬ್ಬಿಣದ ಕಾರ್ಖಾನೆಗಳಿಗೆ ಜನಹೋರಾಟ ನಡೆಸುತ್ತಿದ್ದರು. ಈಗ ರೈಲ್ವೇ ಸೌಲಭ್ಯಕ್ಕಾಗಿ ಮತ್ತು ಜಿಲ್ಲಾಕೇಂದ್ರಕ್ಕಾಗಿ ಚಳುವಳಿಗಳು ನಡೆಯುತ್ತಿವೆ. ಅದಿರು ಸಾಗಾಟದಿಂದ ಏಳುವ ಧೂಳಿನಿಂದ ಬೆಳೆ ರಕ್ಷಿಸಿಕೊಳ್ಳುವುದಕ್ಕಾಗಿ, ಡ್ಯಾಮಿನ ನೀರನ್ನು ಉಳಿಸಿಕೊಳ್ಳುವುದಕ್ಕಾಗಿ ಚಳುವಳಿಗಳು ನಡೆಯುತ್ತಿವೆ. ಹಿಂದೆ ಕಾರ್ಖಾನೆ ಬರುವುದು ಎಂದರೆ ಎಂದರೆ ಸ್ಥಳೀಯ ಸಂಪನ್ಮೂಲ ಬಳಕೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಎಂಬ ಆಶಯವಿತ್ತು. ಈಗ ಜಿಲ್ಲೆಯ ಜನರೇ ಊರುಬಿಟ್ಟು ಹೋಗುವಷ್ಟು, ತಮ್ಮ ಹೊಲ ಮತ್ತು ಡ್ಯಾಮಿನ ನೀರು ಉಳಿಸಿಕೊಂಡರೆ ಸಾಕು ಎಂಬಷ್ಟು ಖಾಸಗಿ ಉದ್ಯಮಗಳು ಬೀಡುಬಿಟ್ಟಿವೆ. ಬಳ್ಳಾರಿಯ ರೈಲ್ವೇ ಹೋರಾಟ ಸಮಿತಿ ಚೆನ್ನಾಗಿ ಕೆಲಸ ಮಾಡಿ ಅನೇಕ ಸೌಲಭ್ಯಗಳನ್ನು ದೊರಕುವಂತೆ ಮಾಡಿತು. ಆದರೂ ಮಧ್ಯಮ ವರ್ಗ ಹಾಗೂ ದೊಡ್ಡ ವ್ಯಾಪಾರಿ ವರ್ಗಗಳ ಹಿತಾಸಕ್ತಿಗಳಿಗೆ ಇಲ್ಲಿ ಒತ್ತು ಹೆಚ್ಚು. ಹೀಗಾಗಿ ಮಹಾನಗರಗಳಿಗೆ ಸಂಪರ್ಕ ಮಾಡುವ ರೈಲುಗಳಿಗಿರುವ ಒತ್ತಾಯ, ಕಿರುದೂರದ ರೈಲುಹಾದಿಗಳ ಬಗ್ಗೆ ಬೀಳುವುದಿಲ್ಲ.
ಹರಿಹರ-ಕೊಟ್ಟೂರು ರೈಲುಮಾರ್ಗದ ವಿಷಯವಾಗಿ ನಡೆದ ಹಕ್ಕೊತ್ತಾಯಕ್ಕೆ ಅರ್ಧಶತಮಾನದ ಚರಿತ್ರೆಯಿದೆ. ಸ್ಥಳೀಯ ಪತ್ರಕರ್ತರಲ್ಲಿ ಕೆಲವರು ಈ ರೈಲುಮಾರ್ಗದ ಬಗ್ಗೆ ತಮ್ಮ ಯೌವನದಲ್ಲಿ ಈ ಬಗ್ಗೆ ಬರೆಯಲು ಚಳುವಳಿ ಮಾಡಲು ಆರಂಭಿಸಿ, ಈಗ ಮಧ್ಯವಯಸ್ಸಿಗೂ ಮಧ್ಯವಯಸ್ಕರು ಮುಪ್ಪಿಗೂ ತಲುಪಿದ್ದಾರೆ. ಮುಪ್ಪಿನಲ್ಲಿದ್ದವರು ಸತ್ತೇ ಹೋಗಿರಬಹುದು. ಮುಪ್ಪಿನಿಂದ ಬಸವಳಿದಿದ್ದ ನನ್ನಪ್ಪನಿಗೆ ಬೀರೂರಿನಿಂದ ಹೊರಟು ಹರಿಹರದ ಮೂಲಕ ಹೊಸಪೇಟೆಗೆ ರೈಲಿನಲ್ಲಿ ಬರುವ ಆಸೆಯಿತ್ತು. ಅವನು ಬದುಕಿರುವರೆಗೆ ಇದು ಸಾಧ್ಯವಾಗಲಿಲ್ಲ. ಪ್ರತಿವರ್ಷ ರೈಲು ಬಜೆಟ್ಟು ಬಂದಾಗ, ಹರಿಹರ ಕೊಟ್ಟೂರು ಮಾರ್ಗಕ್ಕೆ ಎಷ್ಟು ಹಣ ಒದಗಿಸಿದೆ ಎಂದು ನೋಡುವುದು, ಬೇಜಾರು ಪಟ್ಟುಕೊಳ್ಳುವುದು ಇದೇ ನಡೆದುಕೊಂಡು ಬಂದಿದೆ. ಬಹುಶಃ ಹೊಸಪೇಟೆ ಹರಿಹರ ರೈಲಿಗೆ ಇನ್ನೊಂದು ತಲೆಮಾರು ಪ್ರತೀಕ್ಷೆಗೆ ಸಿದ್ಧವಾಗಬೇಕೊ ಏನೊ?

(ಕದಳಿ ಹೊಕ್ಕು ಬಂದೆ ಕೃತಿಯಿಂದ)

#Rahamath #Tarikere

Please follow and like us: