ಸಿಂಗನಾಳ ದೇವದಾಸಿಯರ ಮತ್ತು ಸರ್ಕಾರಿ ಭೂಮಿ ಸಾಗುವಳಿದಾರ ಕೂಲಿಕಾರರ ಹೋರಾಟಕ್ಕೆ ಸಿ.ಪಿ.ಐ.(ಎಂ) ಜಿಲ್ಲಾ ಸಮಿತಿ ಬೆಂಬಲ.

Gangavati ಗಂಗಾವತಿ ತಾಲೂಕ್ ಹೇರೂರು ಗ್ರಾಮದ ಸವರ್ಣಿಯ ಶ್ರೀಮಂತರು ಕಾರಟಗಿ ತಾಲೂಕ್ ಸಿಂಗನಾಳ ಗ್ರಾಮದ ಸರ್ಕಾರಿ ಪಡ ಭೂಮಿಯಲ್ಲಿ ಕಳೆದ ೪೦ ವರ್ಷಗಳಿಂದ ಅನಧೀಕೃತ ಸಾಗುವಳಿ ಮಾಡುತ್ತಾ ಬಂದಿರುವ ೮ ದೇವದಾಸಿ ಕುಟುಂಬಗಳ ಭೂಮಿಯನ್ನು ತಮಗೆ ವಾಪಸ್ ಕೊಡಸಬೇಕೆಂದು ಒತ್ತಾಯಿಸಿ ದೇವದಾಸಿ ಮಹಿಳೆಯರು ಮತ್ತು ಅವರ ಕುಟುಂಬದ ಸದಸ್ಯರು ನವ್ಹೆಂಬರ್ ೧೯ ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಎದುರು ಆರಂಭಿಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದಿಗೂ ಮುಂದುವರೆದಿರುವುದು ಶೋಚನೀಯವಾಗಿದೆ ಎಂದು ಸಿ.ಪಿ.ಐ.(ಎಂ) ಕೊಪ್ಪಳ ಜಿಲ್ಲಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


೧೯೭೦ರ ದಶಕದಿಂದ ೮ ಜನ ದೇವದಾಸಿಯರು ಸರ್ವೆ ನಂ.೧೧೬ರಲ್ಲಿ ೫ ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಶ್ರಮವಹಿಸಿ, ಬಂಡವಾಳ ಹಾಕಿ ಅಭಿವೃದ್ಧಿಪಡಿಸಿ ಬಂದಿದ್ದಾರೆ. ಸದರಿ ಭೂಮಿಯನ್ನು ಕಬಳಿಸಲು ಹೊಂಚುಹಾಕುತ್ತಿದ್ದ ಹೇರೂರು ಗ್ರಾಮದ ಕೆಲವು ಶ್ರೀಮಂತರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಮ್ಮ ಆಪ್ತರಾದ ಮಾಜಿ ಸೈನಿಕರೊಬ್ಬರಿಂದ ಸಿಂಗನಳ ಗ್ರಾಮದ ಸರ್ವೆ ನಂ.೧೧೬ರ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡು ಮಾಜಿ ಸೈನಿಕನಿಂದ ಸದ್ರಿ ಭೂಮಿಯನ್ನು ಹೇರೂರಿನ ಅವರ ಆಪ್ತರು ವರ್ಗಾಹಿಸಿಕೊಂಡು ಬಡ ದಲಿತ ದೇವದಾಸಿಯರಿಗೆ ಮೋಸ ಮಾಡಿದ್ದಾರೆ. ಸಿಂಧನೂರಿನ ಮಾಜಿ ಸೈನಿಕ ಹಾಗೂ ಹೇರೂರಿನ ಅವರ ಆಪ್ತರಾಗಲಿ ಅಪಾರ ಆಸ್ತಿ ಹೊಂದಿರುವ ಶ್ರೀಮಂತರು ದಿನಾಂಕ:೧೧-೦೮-೨೦೧೮ ರಂದು ದೇವದಾಸಿ ಮಹಿಳೆಯರು ಭತ್ತದ ನಾಟಿ ಮಾಡುತ್ತಿದ್ದಾಗ, ಹೇರೂರಿನ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ, ನೂರಾರು ಜನರ ಅಕ್ರಮ ಕೂಟ ರಚಿಸಿಕೊಂಡು, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ದೇವದಾಸಿ ಮಹಿಳೆಯರನ್ನು ಎಳೆದಾಡಿ, ಅವರ ಸೀರೆ, ರವಿಕೆಗಳನ್ನು ಹರಿದುಹಾಕಿ, ಇನ್ನೊಮ್ಮೆ ಹೊಲಕ್ಕೆ ಬಂದರೆ ಕಡಿದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೊಲದಿಂದ ಹೊರದಬ್ಬಿದ್ದಾರೆ.
ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ನ್ಯಾಯಾಲಯಕ್ಕೆ ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದಾರೆ. ಜಾಮೀನು ಪಡೆದು ಹೊರ ಬಂದಿರುವ ಆರೋಪಿಗಳು ಮತ್ತು ಅವರ ಬೆಂಬಲಿಗರಿಂದ ತಮಗೆ ಬೆದರಿಕೆ ಇರುವುದರಿಂದ ತಮ್ಮ ಭೂಮಿಯಲ್ಲಿ ಭತ್ತ ಕಟಾವು ಮಾಡಲು ಪೋಲಿಸ್ ರಕ್ಷಣೆ ಕೋರಿ ದೇವದಾಸಿಯರು ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹಕ್ಕೆ ಸಿ.ಪಿ.ಐ.(ಎಂ) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ದೇವದಾಸಿಯರ ಜೊತೆಯಲ್ಲಿ, ಸಿಂಗನಾಳ ಸರ್ವೆ ನಂ.೭,೮,೯,೧೦,೪೮ ಮತ್ತು ೬೩ರ ಸರ್ಕಾರಿ ಪಡ ಭೂಮಿಗೆ ರಕ್ಷಣೆ ನೀಡಲು ಸಂಬಂಧಪಟ್ಟ ೨೮ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕೂಲಿಕಾರ ಕುಟುಂಬಗಳಿಗೆ ‘ತಾತ್ಕಾಲಿಕ’ ಸಾಗುವಳಿ ಚೀಟಿ ವಿತರಣೆ ಮಾಡಬೇಕೆಂದು ಸಿ.ಪಿ.ಐ.(ಎಂ) ಒತ್ತಾಯಿಸುತ್ತದೆ.
ಇಂದಿನ ಜಿಲ್ಲಾ ಸಮಿತಿ ಸಭೆಯು ಬಸವರಾಜ.ಎಂ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಗೆ ಮಾರ್ಗದರ್ಶಕರಾಗಿ ಸಿ.ಪಿ.ಐ.(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಜಿ.ವಿ.ಶ್ರೀರಾಮರೆಡ್ಡಿಯವರು ಆಗಮಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ ಮತ್ತು ಸದಸ್ಯರಾದ ಸುಂಕಪ್ಪ ಗದಗ್ ಖಾಸಿಂಸಾಬ ಸರದಾರ, ದೊಡ್ಡನಗೌಡ, ಶಿವನಗೌಡ, ಮಂಜುನಾಥ ಡಗ್ಗಿ, ಲಕ್ಷ್ಮೀದೇವಿ, ಜಿ.ಹುಲಿಗೆಮ್ಮ, ಕ್ರಾಂತಿ ವಿಜಯ ಉಪಸ್ಥಿತರಿದ್ದರು. ಈ ಎಲ್ಲಾ ಮುಖಂಡರು ಹಾಗೂ ಜಿಲ್ಲಾ ಸಮಿತಿ ಸದಸ್ಯರು, ದೇವದಾಸಿಯರ ಹೋರಾಟದ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

Please follow and like us: