ಮೋದಿ ಆಡಳಿತದಲ್ಲಿ ಭಾರತದಲ್ಲಿ ವಾಕ್‌ಸ್ವಾತಂತ್ರ್ಯದ ವಾತಾವರಣ ಹದಗೆಟ್ಟಿದೆ: ಪೆನ್ ಇಂಟರ್‌ನ್ಯಾಶನಲ್ ಕಳವಳ

ಹೊಸದಿಲ್ಲಿ, ನ. 2: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತದಲ್ಲಿ ವಾಕ್ ಸ್ವಾತಂತ್ರದ ವಾತಾವರಣ ತೀವ್ರವಾಗಿ ಹದಗೆಟ್ಟಿದೆ ಎಂದು ಜಾಗತಿಕ ಬರಹಗಾರರ ಸಂಘಟನೆ ‘ಪೆನ್ ಇಂಟರ್‌ನ್ಯಾಶನಲ್’ ತಿಳಿಸಿದೆ.

ಪುಣೆಯಲ್ಲಿ ಸೆಪ್ಟೆಂಬರ್ 25ರಿಂದ 29ರವರೆಗೆ ನಡೆದ ತನ್ನ 84ನೇ ಸಮಾವೇಶದಲ್ಲಿತನ್ನ ವಾರ್ಷಿಕ ‘ಅಭಿವ್ಯಕ್ತಿ ಸ್ವಾತಂತ್ರ್ಯದ ವರದಿ’ಯಲ್ಲಿ ಅದು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಕನ್ನಡದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ರ ಹತ್ಯೆ ಘಟನೆಯ ಬಗ್ಗೆ ಪೆನ್ ಇಂಟರ್‌ನ್ಯಾಶನಲ್ ಸಂಸ್ಥೆಯು ವರದಿಯಲ್ಲಿ ಗಮನಸೆಳೆದಿದೆ ಹಾಗೂ ಭಾರತದ ಆಡಳಿತವು ಅಭಿವ್ಯಕ್ತಿ ಸ್ವಾತಂತ್ರ್ಯದ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ಬರಹಗಾರರನ್ನು, ಪತ್ರಕರ್ತರನ್ನು ಹಾಗೂ ಇತರರನ್ನು ರಕ್ಷಿಸಬೇಕು’’ ಎಂದು ಕರೆ ನೀಡಿದೆ.

‘‘ಭಾರತದಲ್ಲಿ ಪತ್ರಕರ್ತರಿರಲಿ, ಬರಹಗಾರರಾಗಿರಲಿ, ಶಿಕ್ಷಣತಜ್ಞರಿರಲಿ, ವಿದ್ಯಾರ್ಥಿಗಳಿರಲಿ, ಯಾರು ಭಿನ್ನಾಭಿಪ್ರಾಯದ ಧ್ವನಿಗಳನ್ನು ಎತ್ತುತ್ತಾರೋ ಅವರಿಗೆ ಹೇಗೆ ಬೆದರಿಕೆಯೊಡ್ಡಲಾಗುತ್ತಿದೆ, ಕಿರುಕುಳ ನೀಡಲಾಗುತ್ತಿದೆ ಮತ್ತು ವಿಚಾರಣೆಗೊಳಪಡಿಸಲಾಗುತ್ತದೆ. ಆನ್‌ಲೈನ್‌ಗಳಲ್ಲಿ ನಿಂದನೆ ಹಾಗೂ ದೈಹಿಕ ಹಿಂಸಾಚಾರ’’ ಎಸಗಲಾಗುತ್ತದೆ ಎಂದು ವರದಿ ತಿಳಿಸಿದೆ.

ಕೇಂದ್ರದ ಬಿಜೆಪಿ ಸರಕಾರದ ಆಳ್ವಿಕೆಯಲ್ಲಿ ವಾಕ್‌ಸ್ವಾತಂತ್ರದ ಪರಿಸ್ಥಿತಿ ಕೂಡಾ ಹೀನಾಯವಾಗಿದೆಯೆಂದು ರಕ್ಷಾ ಕುಮಾರ್, ಗೌತಮ್ ಭಾಟಿಯಾ, ಅಪೂರ್ವಾನಂದ ಹಾಗೂ ನಿಲಾಂಜನ ರಾಯ್ ಅವರ ಪ್ರಬಂಧಗಳನ್ನು ಒಳಗೊಂಡ 15 ಪುಟಗಳ ವರದಿ ತಿಳಿಸಿದೆ. ‘‘ಕಾಲೇಜ್, ವಿವಿ ಕ್ಯಾಂಪಸ್‌ಗಳಲ್ಲಿಯೂ ವಿದ್ಯಾರ್ಥಿ ಚಳವಳಿಗಳನ್ನು ಹತ್ತಿಕ್ಕಲಾಗುತ್ತಿದೆ. ಪ್ರೊಫೆಸರ್‌ಗಳಿಗೆ ವಿಚಾರಸಂಕಿರಣಗಳಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತಿಲ್ಲ, ಪಠ್ಯಪುಸ್ತಕಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಹಾಗೂ ಶೈಕ್ಷಣಿಕ ಸ್ವಾತಂತ್ರ ಬೆದರಿಕೆಗೊಳಗಾಗಿದೆ’’ ಎಂದು ವರದಿ ಹೇಳಿದೆ.

ಹಿಂಸಾತ್ಮಕ ವಿಧಾನಗಳ ಮೂಲಕ ಮಾಧ್ಯಮಗಳನ್ನು ಸುಮ್ಮನಾಗಿಸುವುದೆಂದರೆ ಪ್ರಜಾಪ್ರಭುತ್ವದ ಅಧಃಪತನ ಎಂದರ್ಥವೆಂದು ವರದಿಯು ಕಳವಳ ವ್ಯಕ್ತಪಡಿಸಿದೆ.

ಆನ್‌ಲೈನ್‌ಗಳಲ್ಲಿ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮಹಿಳೆಯರನ್ನು ಗುರಿಯಿರಿಸಲಾಗುತ್ತಿದೆಯೆಂದು ಹೇಳಿರುವ ವರದಿಯು, ನಕಲಿ ಟ್ವೀಟ್ ವಿವಾದಕ್ಕೆ ಸಂಬಂಧಿಸಿ ಪತ್ರಕರ್ತ ರಾಣಾ ಅಯ್ಯೂಬ್‌ರನ್ನು ಗುರಿಮಾಡಲಾಯಿತು ಎಂದು ಹೇಳಿದೆ. ಮಹಿಳಾ ಪತ್ರಕರ್ತೆಯರನ್ನು ಅವರ ವಿವಾದಾತ್ಮಕ ಅಭಿಪ್ರಾಯಗಳಿಗಾಗಿ ಇಲ್ಲವೇ ಮುಕ್ತವಾಗಿ ಮಾತನಾಡಿದ್ದಾರೆಂಬ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ನಿಂದಿಸಲಾಗುತ್ತಿದೆ’ ಎಂದಿದೆ.

ಸಮಾವೇಶದಲ್ಲಿ ಪೆನ್ ಇಂಟರ್‌ನ್ಯಾಶನಲ್ ಅಧ್ಯಕ್ಷ ಹಾಗೂ ಮೆಕ್ಸಿಕನ್ ಬರಹಗಾರ ಜೆನ್ನಿಫರ್ ಕ್ಲೆಮೆಂಟ್ ಸಮಾವೇಶದಲ್ಲಿ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡುತ್ತಾ, ‘‘ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಗತಿ ಸಾಧಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದಾಗ್ಯೂ ನಾವು ಈಗಲೂ ನ್ಯಾಯದ ನಿರಿಭಾರತದಲ್ಲಿ ನಿರೀಕ್ಷೆಯಲ್ಲಿದ್ದೇವೆ ಎಂದು  ಹೇಳಿದ್ದಾರೆ.

ಬರಹಗಾರ ಸಲೀಲ್ ತ್ರಿಪಾಠಿ ಮಾತನಾಡಿ, ವಾಕ್‌ಸ್ವಾತಂತ್ರವನ್ನು ಹತ್ತಿಕ್ಕಲು ಕಾನೂನು ಜಾರಿಗೊಳಿಸಲಾಗುತ್ತಿದೆ, ಭಿನ್ನಾಭಿಪ್ರಾಯದ ಧ್ವನಿಗಳನ್ನು ದ್ವೇಷಿಸುವ ವಾತಾವರಣ ಸೃಷ್ಟಿಯಾಗಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಯದ ಕರಿನೆರಳು ಅವರಿಸಿದೆ ಎಂದು ಹೇಳಿದ್ದಾರೆ.

ಪತ್ರಕರ್ತರು ಬರಹಗಾರರಿಗೆ ಸುರಕ್ಷತೆಯನ್ನು ಖಾತರಿಪಡಿಸುವಂತೆ, ಅವರ ವಿರುದ್ಧ ಯಾವುದೇ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಕೂಡದೆಂದು ಪೆನ್‌ಇಂಟರ್ ಇಂಟರ್‌ನ್ಯಾಶನಲ್ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ. ಆನ್‌ಲೈನ್‌ಗಳಲ್ಲಿ ನಡೆಯುವ ಕಿರುಕುಳ ಹಾಗೂ ಬೆದರಿಕೆಗಳ ವಿರುದ್ಧ ನಾಗರಿಕರಿಗೆ ಇರುವ ಕಾನೂನುಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಅಭಿಯಾನ ನಡೆಸಬೇಕೆಂದು ಕ್ಲೆಮೆಂಟ್ ಹೇಳಿದ್ದಾರೆ.

Please follow and like us: