ಭಾದ್ರಪದ ಮಾಸ, ಶುಕ್ಲಪಕ್ಷದ ಸಂದರ್ಭದಲ್ಲಿ ಗಣೇಶ ಚತುರ್ಥಿ ನಂತರ ಜೋಕುಮಾರನ ಆಚರಣೆ ಪ್ರಮುಖವಾದುದು.
ಗಂಗಾಮತದ ಹೆಣ್ಣುಮಕ್ಕಳು ಬೇವಿನಸೊಪ್ಪಿನ ಬುಟ್ಟಿಯಲ್ಲಿ ಮಣ್ಣಿನ ಮೂರ್ತಿ ಇಟ್ಟುಕೊಂಡು ಮನೆಮನೆಗೆ ಹೋಗುತ್ತಾರೆ.
ಮನೆಯಲ್ಲಿರುವ ತಗಣಿ, ಚಿಕ್ಕಾಡುಗಳನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡು ಹೋಗುತ್ತಾರೆ. ಜೋಕುಮಾರನ ಆಚರಣೆಯಲ್ಲಿ ಇದು ಪ್ರಮುಖವಾದ ಸಂಪ್ರದಾಯವಾಗಿದೆ.
ಜೋಕುಮಾರ ಊರಿನ ಕುಂಬಾರರ ಮನೆಯಲ್ಲಿ ಮಣ್ಣಿನಲ್ಲಿ ನಿರ್ಮಾಣವಾಗುತ್ತಾನೆ. ಅಗಲ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ತಲೆಗೆ ಕಿರೀಟದಂತಿರುವ ತಲೆಸುತ್ತು, ಚೂಪಾದ ಹುರಿಮೀಸೆ, ತೆರೆದ ಬಾಯಿ, ಹಣೆಗೆ ವಿಭೂತಿ, ಕುಂಕುಮದ ಪಟ್ಟೆಗಳು, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣದಾದ ಕತ್ತಿ, ಜನನೇಂದ್ರಿಯವುಳ್ಳ ಮಣ್ಣಿನ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿಕೊಂಡು ತಳವಾರರು ಅಥವಾ ಗಂಗೆಯ ಮಕ್ಕಳು ಬಿದಿರಿನ ಬುಟ್ಟಿಯಲ್ಲಿ ಹೊತ್ತು ತರುತ್ತಾರೆ.
ಜೋಕುಮಾರನ ಕುರಿತು ಹಾಡು ಹೇಳುತ್ತಾ ಹಳ್ಳಿಗಳಲ್ಲಿ ಮೊಟ್ಟಮೊದಲು ಗೌಡರು ಇಲ್ಲವೆ ಶಾನಭೋಗರ ಮನೆಗಳಿಗೆ ಭೇಟಿ ನೀಡಿದ ನಂತರ 7 ದಿನ ಊರಿನ ವಿವಿಧ ಮನೆ ಸುತ್ತುತ್ತಾರೆ. ನಂತರ ಬರುವ ಹುಣ್ಣಿಮೆಯನ್ನು ಜೋಕ್ಯಾನ ಹುಣ್ಣಿಮೆ, ಅನಂತನ ಹುಣ್ಣಿಮೆ ಎಂದು ಕರೆಯುತ್ತಾರೆ.
ಅಲ್ಪಾಯುಷಿಯಾದ ಜೋಕುಮಾರನನ್ನು ಅನಂತನಹುಣ್ಣಿಮೆಯ ದಿನ ರಾತ್ರಿ ಊರಿನ ಹರಿಜನಕೇರಿಯಲ್ಲಿಟ್ಟು ಈತನ ಸುತ್ತಲೂ ಮುಳ್ಳು ಹಾಕಿ ಹೆಣ್ಣುಮಕ್ಕಳು ಸುತ್ತುತ್ತಾ ಹಾಡುತ್ತಾರೆ. ಹೆಣ್ಣುಮಕ್ಕಳ ಸೆರಗು ಮುಳ್ಳಿಗೆ ತಾಗುತ್ತದೆ. ಜೋಕುಮಾರನೇ ಸೀರೆ ಎಳೆದನೆಂದು ಭಾವಿಸಿ ಗಂಡಸರು ಆತನನ್ನು ಒನಕೆಯಿಂದ ಬಡಿದು ಸಾಯಿಸುತ್ತಾರೆ. ಆಗ ಆತನ ರುಂಡ ಅಂಗಾತ ಬಿದ್ದರೆ ಸುಖಕಾಲವೆಂದು, ಬೋರಲು ಬಿದ್ದರೆ ದುಖಃ ಕಾಲವೆಂದು ಗ್ರಾಮೀಣರು ನಂಬುತ್ತಾರೆ. ಸತ್ತ ನಂತರ ರುಂಡ-ಮುಂಡಗಳನ್ನು ಅಗಸರು ಊರಿನ ಬದಿಯ ಹಳ್ಳಕ್ಕೆ ಒಯ್ದು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಹಾಕಿಬರುತ್ತಾರೆ. ಆಗ ಜೋಕುಮಾರನು ನರಳುತ್ತಾನೆ. ಇದರಿಂದ ತಮಗೆ ಅಪಾಯವಾಗುವುದು ಎಂದು ನಂಬುತ್ತಾರೆ. ಅಗಸರು ಮೂರು ದಿನಗಳ ಕಾಲ ಬಟ್ಟೆ ಒಗೆಯಲು ಹಳ್ಳಕ್ಕೆ ಹೋಗುವುದಿಲ್ಲ. ನಾಲ್ಕನೇ ದಿನ ಆತನನ್ನು ಸಂತೈಸಲು ಕರ್ಮಾದಿ ಕಾಯಕ ಮಾಡುತ್ತಾರೆ ಎಂಬ ಕತೆ ಜನರಲ್ಲಿದೆ.
ಮಳೆನೀಡುವ, ಬಂಜೆಗೆ ಫಲ ನೀಡುವ ದೇವನಾದ ಜೋಕುಮಾರನನ್ನು ಜನಪದರು ತಮ್ಮ ಹಾಡುಗಳಲ್ಲಿ ಹೀಗೆ ಹೇಳುತ್ತಾರೆ
‘ಅಡ್ಡಡ್ಡ ಮಳೆ ಬಡಿದು, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲಾ ಹೈನಾಗಿ ಜೋಕುಮಾರ…
ರೈತರ ದೇವತೆ ಎನ್ನುವಲ್ಲಿ ಹಾಡುವ ಹಾಡು ಹೀಗಿದೆ.
‘ಹಾಸ್ಯಾಸಿ ಮಳಿ ಬಡಿದು ಬೀಸಿ ಬೀಸಿ ಕೆರೆ ತುಂಬಿ, ಬಾಸಿಂಗದಂತ ತೆನೆಬಾಗಿ ಗೌಡರ ರಾಶಿಯ ಮ್ಯಾಲೆ, ಸಿರಿ ಬಂದು ಜೋಕಮಾರ….
ಜೋಕುಮಾರನ ಸುತ್ತಲೂ ಅನೇಕ ಕಥೆಗಳಿವೆ. ಭೂಲೋಕಕ್ಕೆ ಈತನು ಬಂದು ಹೋದ ನಂತರ ಅದು ಸುಖದ ಕಾಲವೆಂದು ಜನಪದರು ನಂಬುತ್ತಾರೆ.
ಇಂದಿಗೂ ಹಳ್ಳಿಗಳಲ್ಲಿ ಮೆರೆಯುವವರನ್ನು ‘ದೊಡ್ಡ ಜೋಕಮಾರ ಆಗ್ಯಾನ’ ಎಂದು ಹೇಳುವದನ್ನು ನೋಡಿದರೆ ಇದು ಕಾಮುಕ, ಗರ್ವಿಷ್ಠ, ಸೊಕ್ಕಿನವನೆಂದು ಅರ್ಥ ನೀಡುತ್ತದೆ. ಜೋಕ ಎಂದರೆ ಡೌಲು, ಬೆಡಗು, ಮನ್ಮಥ, ಠೀವಿ ಉಳ್ಳವನೆಂಬ ಅರ್ಥಗಳಿವೆ. ನೊಂದವರ, ಬಡವರ ಪ್ರತೀಕವಾದ ಜೋಕುಮಾರನ ಬಗ್ಗೆ ಬಹಳಷ್ಟು ನಂಬಿಗೆ ಸಂಪ್ರದಾಯಗಳು ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿವೆ.
ಪ್ರತಿವರ್ಷ ಜೋಕುಮಾರನನ್ನು ಹೊತ್ತು ತಂದು ಮನೆ ಮನೆಗಳಿಗೆ ತೆರಳಿ ದವಸ, ಧಾನ್ಯ ಸಂಗ್ರಹ ಮಾಡುತ್ತಾರೆ.
ಕಥೆ ಎರವಲು ಶಾಂತಾ ಆಯಿ. ಕಲಬುರ್ಗಿ.