ಕರ್ನಾಟಕದ ಈ ಶಾಸಕನ ವಾರ್ಷಿಕ ಆದಾಯ ಎಷ್ಟಂತೀರಾ? ಕೇಳಿದರೆ ನೀವೆ ದಂಗಾಗುತ್ತೀರಿ !

ಕರ್ನಾಟಕದ ಈ ಶಾಸಕನ ವಾರ್ಷಿಕ ಆದಾಯ 157 ಕೋ. ರೂ. !

ಹೊಸದಿಲ್ಲಿ,  : ವಿವಿಧ ರಾಜ್ಯಗಳ ವಿಧಾನ ಸಭೆಯ 3,145 ಹಾಲಿ ಶಾಸಕರ ಸರಾಸರಿ ವಾರ್ಷಿಕ ಆದಾಯ 24.59 ಲಕ್ಷ ರೂ. ಆಗಿದೆ. ಇವರಲ್ಲಿ ಕರ್ನಾಟಕದ 203 ಶಾಸಕರು ಸರಾಸರಿ 111.4 ಲಕ್ಷ ರೂ. ಆದಾಯ ಹೊಂದಿದ್ದು, ದೇಶದಲ್ಲಿ ಅತ್ಯಧಿಕ ವಾರ್ಷಿಕ ಆದಾಯ ಪಡೆಯುವ ಶಾಸಕರಾಗಿದ್ದಾರೆ. ದೇಶದ ಪೂರ್ವ ವಲಯದ ಶಾಸಕರು ಅತಿ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿದವರಾಗಿದ್ದಾರೆ. ಅವರ ಸರಾಸರಿ ವಾರ್ಷಿಕ ಆದಾಯ 8.53 ಲಕ್ಷ ರೂ. ಎಂಬುದನ್ನು ಎಡಿಆರ್ (ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್) ಹಾಗೂ ನ್ಯಾಶನಲ್ ಇಲೆಕ್ಷನ್ ವಾಚ್ ಬಿಡುಗಡೆ ಮಾಡಿದ ಆದಾಯ ವಿಶ್ಲೇಷಣೆ ಬಹಿರಂಗಪಡಿಸಿದೆ. 

ಛತ್ತೀಸ್‌ಗಢ ವಿಧಾನ ಸಭೆಯ 63 ಶಾಸಕರು ದೇಶದಲ್ಲೇ ಕನಿಷ್ಠ ಸರಾಸರಿ ವಾರ್ಷಿಕ ಆದಾಯ 5.4 ಲಕ್ಷ ರೂ. ಪಡೆಯುತ್ತಿದ್ದಾರೆ. ದಕ್ಷಿಣ ರಾಜ್ಯಗಳ 711 ಶಾಸಕರು ಅತ್ಯಧಿಕ ಸರಾಸರಿ ವಾರ್ಷಿಕ ಆದಾಯ ಗಳಿಸುವವರಾಗಿದ್ದಾರೆ. ಈ ಶಾಸಕರ ಸರಾಸರಿ ವಾರ್ಷಿಕ ಆದಾಯ 51.99 ಲಕ್ಷ ರೂ. ತಮ್ಮ ವೃತ್ತಿಯನ್ನು ಕೃಷಿ/ತೋಟಗಾರಿಕೆ ಅಥವಾ ವ್ಯವಹಾರ ಎಂದು ಘೋಷಿಸಿಕೊಂಡಿರುವ 397 ಅಥವಾ ಶೇ. 13 ಶಾಸಕರು ಅತ್ಯಧಿಕ ವಾರ್ಷಿಕ ಆದಾಯ ಗಳಿಸುವವರಾಗಿದ್ದಾರೆ. ಅವರ ಸರಾಸರಿ ವಾರ್ಷಿಕ ಅತ್ಯಧಿಕ ಆದಾಯ 57.81 ಲಕ್ಷ ರೂ. ಎಂದು ವರದಿ ತಿಳಿಸುತ್ತದೆ. ಇನ್ನು ರಿಯಲ್ ಎಸ್ಟೇಟ್ ವ್ಯವಹಾರ, ನಟನೆ/ಚಿತ್ರ ನಿರ್ಮಾಣ ವೃತ್ತಿಯಲ್ಲಿ ಪ್ರತಿ ವರ್ಗದಲ್ಲಿ ಶೇ. 1 ಶಾಸಕರು ಇದ್ದಾರೆ. ಈ ನಾಲ್ಕು ಉದ್ಯಮಗಳು ಅತ್ಯಂತ ಹೆಚ್ಚು ಆದಾಯ ತರುವ ಕ್ಷೇತ್ರಗಳಾಗಿದ್ದು, ಇವರ ಸರಾಸರಿ ವಾರ್ಷಿಕ ಆದಾಯ ಅನುಕ್ರಮವಾಗಿ 39.69 ಲಕ್ಷ ರೂ. ಹಾಗೂ 28.48 ಲಕ್ಷ ರೂ. ಆಗಿದೆ. ಆಸಕ್ತಿಕರ ಅಂಶವೆಂದರೆ, 3,145 ಸ್ವಘೋಷಿತ ಅಫಿದಾವಿತ್ ಸಲ್ಲಿಸಿದ ಶಾಸಕರ ಪೈಕಿ 1,052 ಅಥವಾ ಶೇ. 33 ಶಾಸಕರು 12ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ ಅಥವಾ ಉತ್ತೀರ್ಣರಾಗಿದ್ದಾರೆ. ಇವರ ಸರಾಸರಿ ಆದಾಯ 31.03 ಲಕ್ಷ ರೂ. ಆಗಿದೆ. ಇದೇ ವೇಳೆ ಶೇ. 63 ಅಥವಾ 1997 ಪದವೀಧರ ಹಾಗೂ ಅದಕ್ಕಿಂತ ಮೇಲಿನ ಶಿಕ್ಷಣ ಪಡೆದ ಶಾಸಕರು ವಾರ್ಷಿಕ ಸರಾಸರಿ 20.87 ಲಕ್ಷ ರೂ. ಗಳಿಸುತ್ತಿದ್ದಾರೆ.

ಕಾಂಗ್ರೆಸ್‌ನ ಬೆಂಗಳೂರು (ಗ್ರಾಮೀಣ) ಹೊಸಕೋಟೆ ಕ್ಷೇತ್ರದ ಶಾಸಕ ಎನ್. ನಾಗರಾಜ್ ದೇಶದಲ್ಲೇ ಅತ್ಯಂತ ಶ್ರೀಮಂತ ಶಾಸಕ ಎಂದು ಪರಿಗಣಿಸಲ್ಪಟ್ಟಿದ್ದು, ತಮ್ಮ ವಾರ್ಷಿಕ ಆದಾಯ 157.04 ಕೋ. ರೂ. ಎಂದು ಘೋಷಿಸಿಕೊಂಡಿದ್ದಾರೆ. ಇದೇ ವೇಳೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಸಕಿ ಬಿ. ಯಾಮಿನಿ ಬಾಲ ಅವರು ಅತ್ಯಂತ ಕಡಿಮೆ ವಾರ್ಷಿಕ ಆದಾಯ 1,301 ರೂ. ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. 25-50ರ ನಡುವಿನ ಹರೆಯದ 1,401 ಶಾಸಕರ ಸರಾಸರಿ ವಾರ್ಷಿಕ ಆದಾಯ 18.25 ಲಕ್ಷ ರೂ. 51-80 ಹರೆಯದ ನಡುವಿನ 1,727 ಶಾಸಕರ ಸರಾಸರಿ ವಾರ್ಷಿಕ ಆದಾಯ 29.32 ಲಕ್ಷ ರೂ. ಆಸಕ್ತಿದಾಯಕ ವಿಚಾರವೆಂದರೆ 91-90ರ ನಡುವಿನ ಹರೆಯದ 11 ಶಾಸಕರು ಇನ್ನೂ ಅಧಿಕ ಸರಾಸರಿ ವಾರ್ಷಿಕ ಆದಾಯ ಪಡೆಯುತ್ತಿದ್ದು, ಈ 11 ಶಾಸಕರ ಸರಾಸರಿ ವಾರ್ಷಿಕ ಆದಾಯ 87.71 ಲಕ್ಷ ರೂ. ಆಗಿದೆ ಎಂದು ವರದಿ ತಿಳಿಸಿದೆ. ಸರಾಸರಿಯಾಗಿ ಪುರುಷ ಶಾಸಕರ ವಾರ್ಷಿಕ ಸ್ವ ಆದಾಯ 25.85 ಲಕ್ಷ ರೂ. ಆಗಿದ್ದರೆ, ಮಹಿಳಾ ಶಾಸಕಿಯರ ವಾರ್ಷಿಕ ಸರಾಸರಿ ಸ್ವ ಆದಾಯ 10.53 ಲಕ್ಷ ರೂ. ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Please follow and like us: