ಹೈ.ಕ ಅಭಿವೃದ್ಧಿಗಾಗಿ ವಿಮೋಚನಾ ಚಳುವಳಿಯ ಆಶಯವನ್ನು ಮುಂದಕ್ಕೋಯ್ಯೋಣ.

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಯಾಗಬೇಕು. ಈ ಭಾಗ ಆರ್ಥಕವಾಗಿ, ಸಮಾಜಿಕವಾಗಿ ಬಲಗೊಳ್ಳಬೇಕು. ಎಂಬ ಆಶಯದೊಂದಿಗೆ ನಡೆದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಆಶಯ ಆಶಯವಾಗಿಯೇ ಉಳಿದಿದೆ. ಪ್ರಭಲ ರಾಜಕಾರಣಿಗಳಿದ್ದರು ಅಭಿವೃದ್ಧಿಯ ಕಂಡಿಲ್ಲ. ಅಭಿವೃದ್ಧಿಯಾಗದಿರುವುದನ್ನೆ ರಾಜಕೀಯ ವಸ್ತುವನ್ನಾಗಿಸಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳ ಇಚ್ಚಾ ಶಕ್ತಿ ಕೊರತೆ ಎದ್ದು ಕಾಣುತ್ತಲೇ ಇದೆ.

ಪ್ರಾದೇಶಕ ಅಸಮಾನತೆ ನಿವಾರಿಸುವಂತೆ ಪ್ರಭಲ ಹೋರಾಟಗಳು ನಡೆದಿವೆ. ಹೋರಾಟದ ಭಾಗವಾಗಿ 371(J) ಸ್ಥಾನಮಾನ ಸಿಕ್ಕಿದೆ ಯಾದರೂ ಅದು ಜಾರಿಗೊಂಡಿಲ್ಲ. ಜಾರಿಯಲ್ಲಿ ಅನೇಕ ತೊಡಕಗಳು ಎದುರಾಗುತ್ತಿವೆ. ಅವುಗಳನ್ನು ನಿವಾರಿಸುವಂತೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ, SFI, KPRS ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಜನರ ನಡುವೆ ಜಾಗೃತಿ ಮೂಡಿಸಲು ಸಂವಾದ, ವಿಚಾರ ಸಂಕೀರ್ಣ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮಲಗಿರುವ ಸರಕಾರ ಮತ್ತು ಅಧಿಕಾರಿಗಳನ್ನು ಎಚ್ಚಿರಿಸಲು ಸಾಕಾಗುತ್ತಿಲ್ಲ.

ಹೈ.ಕ ಅಭಿವೃದ್ಧಿಗಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (HKRDB) ರಚಿಸಿ ಐದು ವರ್ಷಗಳಾಗುತ್ತಾ ಬಂದಿದೆ. ಆದರೆ ಈ ಮಂಡಳಿಯ ಉದ್ದೇಶ ಇನ್ನೂ ಜಾರಿ ಆಗಿಲ್ಲ. ಖಾಯಂ ಕಾರ್ಯದರ್ಶಿ ಇಲ್ಲದ ಕಾರಣ ಬಂದ ಅನುದಾನದ ಸಮರ್ಪಕ ಬಳಕೆಯೂ ಇಲ್ಲದಾಗಿದೆ. ಡಾ. ಎಂ ನಂಜುಡ್ಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ತಾಲ್ಲೂಕುಗಳು ಇರುವುದು ಈ ಪ್ರದೇಶದಲ್ಲಿಯೇ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕನಸಿನ ಮಾತಾಗಿದೆ. ಈ ಭಾಗದಲ್ಲಿ 31 ತಾಲ್ಲೂಕುಗಳಿದ್ದು 40 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿಭಾರಿಯೂ ಗೆದ್ದವರೇ ಚುನಾವಣೆಯಲ್ಲಿ ಮರು ಆಯ್ಕೆ ಯಾಗುತ್ತಿದ್ದಾರೆ. ಹೊಸಬರ ಆಯ್ಕೆಯೂ ನಡೆಯುತ್ತಿದೆ. ಆದರೆ ಇವರ್ಯಾರು ಈ ಪ್ರದೇಶದ ಅಭಿವೃದ್ಧಿಗೆ ಮನಸ್ಸು ಮಾಡಿ ಕೆಲಸ ಮಾಡುತ್ತಿಲ್ಲ. ಕೈಗೊಂಡ ಕಾಮಗಾರಿಗಳು ಅರ್ಧಕ್ಕೆ ನಿಂತದ್ದೆ ಹೆಚ್ಚು. ತಾಲ್ಲೂಕಗಳ ಅಭಿವೃದ್ಧಿಯಲ್ಲಿಯೂ ಅಸಮಾನತೆಯ ಪ್ರಮಾಣ ಹೆಚ್ಚಿದೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ ಮಂತ್ರಿಯಾಗಿದ್ದರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು ಎಂಬ ಕಾರಣಕ್ಕೆ ಕಲಬುರ್ಗಿ ಮೇಲ್ನೋಟಕ್ಕೆ ಅಭಿವೃದ್ಧಿಯಾದಂತೆ ಕಾಣುತ್ತಿದೆ. ದೇವದುರ್ಗ, ಶಹಪುರ, ಸುರಪುರ, ಬೀದರ್, ಬಸವಕಲ್ಯಾಣ, ಔರಧ್, ಕುಷ್ಟಗಿ, ಯಲಬುರ್ಗಾ, ಕುಕನೂರು, ಆಳಂದ, ಜೇವರ್ಗಿ, ತಾಲ್ಲೂಕಗಳ ಪರಸ್ಥಿತಿ ನೋಡಿದರೆ ಈ ಮಂಡಳಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ತಿಯುತ್ತದೆ.

371(J) ಕಲಂ ಸಮರ್ಪಕ ಜಾರಿಯ ಜೊತೆಯಲ್ಲಿ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ಪ್ಯಾಕೇಜ್ ಜಾರಿ ಮಾಡಬೇಕಿದೆ. ಮುಖ್ಯವಾಗಿ ಶಾಲೆ, ಕಾಲೇಜ್, ಹಾಸ್ಟೇಲ್ ಗಳ ಬಲವರ್ಧನೆ, ಆರೋಗ್ಯ ಕೇಂದ್ರಗಳ ಸ್ಥಾಪನೆ, ರಸ್ತೆ, ಸಾರಿಗೆ, ಕುಡಿಯುವ ನೀರು, ರೈತರಿಗೆ ನೀರಾವರಿ ಸೌಲಭ್ಯ, ರೈತರು ಬೆಳೆದ ಬೆಲೆಗಳಿಗೆ ಬೆಂಬಲ ಬೆಲೆ, ಸುಸಜ್ಜಿತ ಮನೆ, ನಿವೇಶನ ಇತ್ಯಾದಿಗಳ ಅಗತ್ಯಕ್ಕೆ ಆಳುವ ಸರಕಾರ, ಈ ಭಾಗದ ರಾಜಕಾರಣಿಗಳು, ಅಧಿಕಾರಿಗಳು ಮುಂದಾಗಬೇಕಿದೆ. ಅಸಮತೋಲನದ ನಿವಾರಣೆಗಾಗಿ ಜನರ ನಡುವೆ ಜಾಗೃತೆ ಮೂಡಿಸಲು ಪ್ರಭಲ ಚಳುವಳಿಯೂ ಹೊರ ಹೊಮ್ಮಬೇಕಿದೆ.

ಗುರುರಾಜ್ ದೇಸಾಯಿ

Please follow and like us: