ಇದು ದಮನಿತ ಸಮುದಾಯವೊಂದರ ಸಮಾವೇಶ: ಮುನೀರ್ ಕಾಟಿಪಳ್ಳ

ಡಿವೈಎಫ್‌ಐ ವತಿಯಿಂದ ಮಂಗಳೂರಿನಲ್ಲಿ ಮೇ 14 ಮತ್ತು 15ರಂದು ಹಮ್ಮಿಕೊಳ್ಳಲಾಗಿರುವ ಮುಸ್ಲಿಮ್ ಯುವ ಸಮಾವೇಶ ಮೆಚ್ಚುಗೆ, ಟೀಕೆ, ವಿಮರ್ಶೆ ಇತ್ಯಾದಿಗಳ ಮೂಲಕ ಚರ್ಚೆಯಲ್ಲಿದೆ. ಈ ಸಮಾವೇಶದ ಉದ್ದೇಶ, ಗುರಿಯ ಕುರಿತಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪತ್ರಿಕೆಯ ಜೊತೆಗೆ ಮಾತನಾಡಿದ್ದಾರೆ. ಎದುರಾಳಿಗಳ ಟೀಕೆ, ವಿಮರ್ಶೆಗಳಿಗೂ ಅವರು ಸಮಚಿತ್ತದಿಂದ ಪ್ರತಿಕ್ರಿಯಿಸಿದ್ದಾರೆ.


dyfi

1. ಬಹುಶಃ ಎಡಪಕ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಮುಸ್ಲಿಂ ಯುವ ಸಮಾವೇಶವನ್ನು ಹಮ್ಮಿಕೊಂಡಿದ್ದೀರಿ. ಈ ವರೆಗೆ ಧರ್ಮಾತೀತವಾಗಿ ಜನ ಸಂಘಟನೆ ಮಾಡಿಕೊಂಡು ಬಂದ ಎಡ ಚಿಂತನೆಗಳಿಗೆ ಇದು ವಿರುದ್ಧವಾಗಿಲ್ಲವೇ ?

ಧಾರ್ಮಿಕ ಅಸ್ಮಿತೆಯ ಭಾಗವಾಗಿ ಈ ಸಮಾವೇಶವನ್ನು ನಾವು ಹಮ್ಮಿಕೊಂಡಿಲ್ಲ. ಮುಸ್ಲಿಮ್ ಸಮುದಾಯ ಒಂದು ದಮನಿತ ಸಮುದಾಯ. ಈ ದಮನಿತ ಸಮುದಾಯದ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅದು ಎದುರಿಸುತ್ತಿರುವ ಇಕ್ಕಟ್ಟು ಹಾಗೂ ಬಿಕ್ಕಟ್ಟುಗಳಿಂದ ಪಾರಾಗಲು ರೂಪಿಸಬೇಕಾದ ಕಾರ್ಯತಂತ್ರಗಳನ್ನು ಚರ್ಚಿಸುವ ಉದ್ದೇಶ ಇದರ ಹಿಂದಿದೆ. ಇದೇ ಮೊದಲ ಬಾರಿಗೆ ಇಂಥದೊಂದು ಸಮಾವೇಶ ನಡೆಸುತ್ತಿದ್ದೇವೆ ಅನ್ನೋದು ನಿಜ. ಆದರೆ, ಹಿಂದೆ ಮಾಡಿಲ್ಲವೆಂದರೆ ಮುಂದೆ ಮಾಡಲೇಬಾರದು ಎಂದಲ್ಲ. ಜಾತಿ ರಾಜಕಾರಣದ ಭಾಗವಾಗಿ ಬೇರೆ ರಾಜಕೀಯ ಪಕ್ಷಗಳು ಮಾಡುವಂತೆ ಇದನ್ನು ಮಾಡುತ್ತಿಲ್ಲ. ಕೋಮುವಾದದ ಜೊತೆಜೊತೆಗೇ ಬಡತನ, ಹಸಿವು, ಶಿಕ್ಷಣ, ಸಂಸ್ಕೃತಿ ಇಂಥಾ ಹಲವು ಆಯಾಮಗಳಲ್ಲಿ ಸರಿಯಾದ ಮಾರ್ಗದರ್ಶನವಿಲ್ಲದೆ ನಿಂತಿರುವ ಸಂದರ್ಭದಲ್ಲಿ ನಾವು ಈ ವೇದಿಕೆಯನ್ನು ಕಲ್ಪಿಸಿದ್ದೇವೆ. ಚಿಂತನ ಮಂಥನ ನಡೆಯಲಿ ಎಂಬುದು ನಮ್ಮ ಉದ್ದೇಶ. ಖಂಡಿತವಾಗಿಯೂ ಇದು ಎಡ ಚಿಂತನೆಗಳಿಗೆ ವಿರುದ್ಧವಲ್ಲ. ಧಾರ್ಮಿಕ ಹಿನ್ನೆಲೆಯಲ್ಲಿ ಸಮಾವೇಶ ಮಾಡಿದ್ದರೆ ಎಡಚಿಂತನೆಗೆ ವಿರುದ್ಧವಾಗುತ್ತಿತ್ತು; ಸಾಮಾಜಿಕ ಹಿನ್ನೆಲೆಯಲ್ಲಿ ದಮನಿತ ಸಮುದಾಯವಾಗಿ ಅಲ್ಪಸಂಖ್ಯಾತ ಸಮುದಾಯ ಭಾರತ ಈಗ ಹಿಡಿದಿರುವ ದಿಕ್ಕಿನಲ್ಲಿ ತೀರ ಅಭದ್ರತೆ, ಆತಂಕಗಳಿಂದ ದಿನ ದೂಡುತ್ತಿದೆ. ಅಂಥ ಸಮುದಾಯದ ನೋವು ನಲಿವುಗಳ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಸುತ್ತಿದ್ದೇವೆ. ಇದು ಎಡಚಿಂತನೆಗೆ ಪೂರಕವೇ ಹೊರತು ವಿರುದ್ಧ ಆಗುವುದಿಲ್ಲ.

2. ಯುವ ಸಮಾವೇಶದ ಕುರಿತಂತೆ ಪ್ರಗತಿ ಪರರಿಂದಲೇ ತೀವ್ರ ಟೀಕೆಗಳು ಕೇಳಿ ಬರುತ್ತಿವೆಯಲ್ಲ ?
– ಹಾಗೇನಿಲ್ಲ. ಒಬ್ಬರು ಇಬ್ಬರು ತಕರಾರು ಎತ್ತಿರಬಹುದಷ್ಟೆ. ಮುಸ್ಲಿಮ್ ಸಮುದಾಯದ ಒಳಗಿನ ಎಡಪಂಥೀಯ ಚಿಂತಕರು ಹಾಗೂ ಪ್ರಗತಿಪರರು ಹಾಗೂ ಸಮುದಾಯದ ಹೊರಗಿನ ಎಡಪಂಥೀಯ – ಪ್ರಗತಿಪರರು ದೊಡ್ಡ ದನಿಯಲ್ಲಿ ಬೆಂಬಲ ಸೂಚಿಸಿದ್ದಾರೆ. ಇಂಥದೊಂದು ಕಾರ್ಯಕ್ರಮದ ಅಗತ್ಯವಿತ್ತು ಎಂದು ಬೆನ್ನು ತಟ್ಟಿದ್ದಾರೆ.

3. ಎಡ ಪಕ್ಷದ ಕಾರ್ಯಕರ್ತರು ಜಾತಿ, ಧರ್ಮಗಳನ್ನು ತೊರೆದು ಬಂದವರು. ಹೀಗಿರುವಾಗ ಅವರಿಗೆ ಈ ಸಮಾವೇಶದಿಂದ ಮುಜುಗರವಾಗುವುದಿಲ್ಲವೇ ?
ಎಡ ಪಕ್ಷಗಳು ಜಾತಿ ಧರ್ಮದ ಆಧಾರದಲ್ಲಿ ನಿಂತಿಲ್ಲ. ಎಡಪಕ್ಷಗಳ ಸಿದ್ಧಾಂತ ವರ್ಗಗಳ ಮೇಲೆ ನಿಂತಿರುವಂಥದ್ದು. ಆದರೆ ಎಡಪಕ್ಷಗಳಿಗೆ ಬರುವ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಜಾತಿ ಧರ್ಮಗಳನ್ನು ತೊರೆದು ಬರಬೇಕೆಂದು ಯಾವತ್ತೂ ತಾಕೀತು ಮಾಡಲಾಗಿಲ್ಲ. ಅಂಥ ಯಾವುದೇ ನಿಯಮಗಳನ್ನು ಪಕ್ಷವು ರೂಪಿಸಿಲ್ಲ. ಆದ್ದರಿಂದ ಈ ಸಮಸ್ಯೆ ನಮಗೆ ಎದುರಾಗುವುದೇ ಇಲ್ಲ. ಶೋಷಿತ? ದಮನಿತ ಸಮುದಾಯಗಳು ದುಡಿಯುವ ವರ್ಗಗಳ ಕೆಟಗರಿಯಲ್ಲೇ ಬರುತ್ತವೆ. ವರ್ಕಿಂಗ್ ಕ್ಲಾಸ್ ಅಂದರೆ ಕೇವಲ ಕಾರ್ಖಾನೆ ಅಥವಾ ಮತ್ತೊಂದೆಡೆ ದುಡಿಯುವವರು ಮಾತ್ರ ಅಲ್ಲ. ಇಲ್ಲಿನ ದಮನಿತ ಸಮುದಾಯಗಳು, ಹಿಂದುಳಿದ ಜಾತಿಗಳು, ಮುಸ್ಲಿಮರು ಇವರು ಬಹುತೇಕ ಬಡವರು. ಇವರು ದುಡಿಯುವ ವಿಭಾಗದಲ್ಲೇ ಬರುತ್ತಾರೆ. ಈ ದಮನಿತ ಸಮುದಾಯಗಳನ್ನು ನಾವು ವರ್ಗ ಬಿಟ್ಟು ನೋಡಲಾಗುವುದಿಲ್ಲ. ಈ ದಮನಿತ ಸಮುದಾಯಗಳು -ದುಡಿಯುವ ವಿಭಾಗಗಳು ತಮ್ಮ ದುಡಿಮೆಯ ವಿಚಾರಕ್ಕೆ ಒಳಗಾಗುವ ಶೋಷಣೆ ಏನಿದೆ, ಅಷ್ಟೇ ಪ್ರಮುಖವಾಗಿ ತಮ್ಮ ಜಾತಿ-ಧರ್ಮಗಳ ಕಾರಣದಿಂದ ಇಂಥದೇ ಶೋಷಣೆಯನ್ನು ಎದುರಿಸುತ್ತಿದ್ದಾರೆ. ಅಂಥ ಶೋಷಣೆಯನ್ನು ಅಡ್ರೆಸ್ ಮಾಡುವುದು, ಪರಿಹಾರ ಹುಡುಕುವುದು ಎಡ ಸಂಘಟನೆಗಳ ಮತ್ತು ಅದರ ಕಾರ್ಯಕರ್ತರ ಜವಾಬ್ದಾರಿ ಆಗಿರುತ್ತದೆ. ಆ ಕರ್ತವ್ಯ ನಿರ್ವಹಣೆ ನಡೆಯುತ್ತಿದೆ.

4. ಇಂತಹದೊಂದು ಸಮಾವೇಶ ನಡೆಸುವ ಯೋಜನೆಯ ಹಿಂದಿರುವವರು ಯಾರು?
ಇದು ನಮ್ಮ ಸಂಘಟನೆಯ ವತಿಯಿಂದ ನಡೆಯುತ್ತಿರುವ ಸಮಾವೇಶ. ಯಾರೋ ಒಬ್ಬರ ನಿರ್ಧಾರದಂತೆ ನಮ್ಮ ಪಕ್ಷ ಯಾವ ಕಾರ್ಯಕ್ರಮವನ್ನೂ ನಡೆಸುವುದಿಲ್ಲ.

5. ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆದಾಗ ಎಡಪಕ್ಷಗಳು ಸ್ಪಂದಿಸಿದ್ದು ಕಡಿಮೆ ಎಂಬ ಆರೋಪಗಳಿವೆಯಲ್ಲ?
ಬೇರೆ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಮುಸ್ಲಿಮರ ಮೇಲೆ ದಾಳಿಗಳಾದಾಗ ಮುಂಚೂಣಿಯಲ್ಲಿ ನಿಂತದ್ದೇ ಎಡಪಕ್ಷಗಳು. ಅದರ ಈ ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಎಡಪಕ್ಷಗಳು ಯಾವತ್ತೂ ಕೂಡ ಕೋಮುವಾದದ ಪ್ರಶ್ನೆಗಳನ್ನು ಮತ್ತು ಮುಸ್ಲಿಮರ ಮೇಲೆ ಆಗುವ ದಾಳಿಗಳನ್ನು ರಾಜಕೀಯ ಲೆಕ್ಕಾಚಾರ ಆಧರಿಸಿ ನೋಡಿದ್ದೇ ಇಲ್ಲ. ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಅನ್ನುವ ಆತಂಕ ಇದ್ದಾಗಲೂ ಯಾವುದೇ ಹಿಂಜರಿಕೆಯಿಲ್ಲದೆ ಎಡಪಕ್ಷಗಳು ಮುಸ್ಲಿಮರ ಪರ ನಿಂತಿವೆ. ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷದ ಆಡಳಿತವಿದ್ದ 34 ವರ್ಷಗಳ ಕಾಲವೂ ಒಂದೇಒಂದು ಕೋಮುಗಲಭೆ ನಡೆದಿಲ್ಲ. ಕೇರಳ ಕೂಡ ಕೋಮುವಾದ ಹಿಂಸೆಗಳಿಂದ ಬಹುತೇಕ ಮುಕ್ತವಾಗಿದೆ. ಎಡಪಕ್ಷಗಳ ಪ್ರಭಾವ ಇರುವ ತಮಿಳುನಾಡು, ಆಂಧ್ರ ಮುಂತಾದ ರಾಜ್ಯಗಳಲ್ಲಿ ಕೂಡ ಮುಸ್ಲಿಮರ ಮೇಲೆ ಕೋಮು ಹಿಂಸೆಗಳಾಗುವುದು ಬಹಳ ಕಡಿಮೆ. ಕರ್ನಾಟಕದ ಕರಾವಳಿಯಲ್ಲಿ ಆದಿ ಉಡುಪಿಯಲ್ಲಿ ಮುಸ್ಲಿಮರನ್ನು ಬೆತ್ತಲೆಗೊಳಿಸಿದ ಪ್ರಕರಣ ಕುರಿತು ವಿಧಾನಸಭೆಯಲ್ಲಿ ದನಿಯೆತ್ತಿದ್ದು ಸಿಪಿಐಎಂ ಶಾಸಕರು. ಕರಾವಳಿಯಲ್ಲಿ ಕೋಮುವಾದಿಗಳು ಮುಸ್ಲಿಮರ ಮೇಲೆ ದಾಳಿ ಮಾಡಿದಾಗೆಲ್ಲ ಎಡಪಕ್ಷಗಳು ಬೀದಿಗಿಳಿದಿವೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಗಟ್ಟಿದನಿಯಲ್ಲಿ ಪ್ರತಿಭಟಿಸಿದೆ. ಮುಸ್ಲಿಮರನ್ನು ಪೊಲೀಸರಾಗಲೀ ಯಾರೇ ಆಗಲೀ ಗುರಿ ಮಾಡಿದಾಗ ಮುಸ್ಲಿಮರ ಪರವಾಗಿ ನಿಂತಿದೆ. ಮಂಗಳೂರಿನಲ್ಲಿ ಕೊಲೆ ಪ್ರಕರಣದಲ್ಲಿ ಸಿಲುಕಿಸಲಾಗಿದ್ದ ಅಮಾಯಕ ಮುಸ್ಲಿಮರನ್ನು ಬಿಡಿಸಲು ನಡೆಸಿದ ಹೋರಾಟ ಇರಬಹುದು, ಉಡುಪಿ ಬೆತ್ತಲೆ ಪ್ರಕರಣ ಇರಬಹುದು, ಮುಸ್ಲಿಮರ ಮೇಲಿನ ನೈತಿಕ ಪೊಲೀಸ್ ಗಿರಿ, ಪಬ್ ಅಟ್ಯಾಕ್ – ಹೋಂ ಸ್ಟೇ ದಾಳಿ ಸಂದರ್ಭಗಳಿರಬಹುದು – ಈ ಎಲ್ಲ ಪ್ರಕರಣಗಳಲ್ಲೂ ಮುಖಾಮುಖಿಯಾಗಿ ನಿಂತದ್ದು ಡಿವೈಎಫ್‌ಐ. ಇಂತಹ ಅನೇಕ ಉದಾಹರಣೆಗಳಿವೆ.

6. ಮುಂದಿನ ದಿನಗಳಲ್ಲಿ ಎಡಪಕ್ಷಗಳಲ್ಲೂ ಅಲ್ಪಸಂಖ್ಯಾತ ಘಟಕಗಳು ಸ್ಥಾಪನೆಯ ಸಾಧ್ಯತೆ ಇದೆಯೇ?

ಅಂಥ ಸಾಧ್ಯತೆಗಳು ಸದ್ಯದ ಮಟ್ಟಿಗೆ ಇಲ್ಲ. ಈ ಸಮಾವೇಶದಲ್ಲಿ ಶೇ.75ರಷ್ಟು ಜನ ಡಿವೈಎಫ್‌ಐ ಹೊರಗಿನವರು ಬರುತ್ತಾರೆ. ಸಮಾವೇಶದಲ್ಲಿ ನಡೆಯುವ ಸಂವಾದವನ್ನು ಸಾರ ರೂಪದಲ್ಲಿ ಸಂಗ್ರಹಿಸಿ ಸರಕಾರದ ಮುಂದೆ ಇಟ್ಟು ಪರಿಹಾರಕ್ಕೆ ಯತ್ನಿಸುವುದಷ್ಟೆ ನಮ್ಮ ಉದ್ದೇಶ.

7. ಈ ಯುವ ಸಮಾವೇಶ ಕೇವಲ ರಾಜ್ಯಕ್ಕೆ ಅಷ್ಟೇ ಸೀಮಿತವೋ? ಅಥವಾ ಇತರ ರಾಜ್ಯಗಳಲ್ಲೂ ಸಮಾವೇಶ ಹಮ್ಮಿಕೊಳ್ಳಲಿದೆಯೇ?
ಸದ್ಯಕ್ಕೆ ಇದು ಮೊದಲನೆಯದು. ಆದರೆ ಹಿಂದೆ ಬಹಳಷ್ಟು ಬಾರಿ ಇಂಥದೊಂದು ಸಮಾವೇಶ ಆಯೋಜಿಸುವ ಕುರಿತು ಚರ್ಚಿಸಿದ್ದೇವೆ. ಸಾಚಾರ್ ಸಮಿತಿ ವರದಿ ಆಧರಿಸಿದ ಚರ್ಚೆಗಳನ್ನು ದೇಶಾದ್ಯಂತ ನಡೆಸಿದ್ದೇವೆ. ಮುಸ್ಲಿಮರನ್ನೇ ಸಂಘಟಿಸಿ ಕಾರ್ಯಕ್ರಮಗಳನ್ನೂ ಮಾಡಿದ್ದೇವೆ. ಆದರೆ ಸಮುದಾಯದ ಹೆಸರನ್ನೇ ನೇರವಾಗಿ ಇಟ್ಟುಕೊಂಡು ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಇದೀಗ ಆರಂಭಿಸಿದ್ದೇವೆ. ಈ ಅನುಭವದ ಆಧಾರದ ಮೇಲೆ ಮುಂದಕ್ಕೆ ಇದು ದೇಶಾದ್ಯಂತ ನಡೆಯಲೂಬಹುದು.

8. ಮುಂದೆ ಪಕ್ಷದ ವತಿಯಿಂದ ದಲಿತ ಸಮಾವೇಶ ನಡೆಸುವ ಸಾಧ್ಯತೆಗಳಿವೆಯೇ?
ಈ ಹಿಂದೆಯೇ ಸಾಕಷ್ಟು ದಲಿತ ಸಮಾವೇಶಗಳನ್ನು ಸಂಘಟಿಸಿದ್ದೇವೆ. ತಮಿಳುನಾಡಿನಲ್ಲಿ ಜಾತಿವಿಮುಕ್ತಿ ಸಮಿತಿ ಬಹಳ ಕ್ರಿಯಾಶೀಲವಾಗಿದೆ. ಡಿವೈಎಫ್‌ಐ ನೇತೃತ್ವದಲ್ಲಿ ಅಲ್ಲಿನ ಎಡಪಕ್ಷಗಳು ದಲಿತ-ಮೇಲ್ಜಾತಿಗಳ ನಡುವಿನ ಗೋಡೆಯನ್ನು ಒಡೆದುಹಾಕಿದ್ದವು. ರಾಷ್ಟ್ರಮಟ್ಟದಲ್ಲಿ ದಲಿತ ಅಧಿಕಾರ ಮಂಚ್, ಕರ್ನಾಟಕದಲ್ಲಿ ದಲಿತ ಹಕ್ಕುಗಳ ಸಮಿತಿ ಕ್ರಿಯಾಶೀಲವಾಗಿವೆ. ಕರ್ನಾಟಕದ ಬಳ್ಳಾರಿಯ ಹೊಸಪೇಟೆಯಲ್ಲಿ ಇತ್ತೀಚೆಗಷ್ಟೇ ದಲಿತ ರ್ಯಾಲಿ ನಡೆಸಿದ್ದೆವು. ಮುಂದೆಯೂ ನಡೆಸುತ್ತೇವೆ. ದಲಿತ, ಆದಿವಾಸಿ ಹಾಗೂ ಮುಸ್ಲಿಮ್ ಸಮುದಾಯಗಳು ದಮನಿತ ಕೆಟಗರಿಯಲ್ಲಿ ಬರುತ್ತವೆ. ಅವರಲ್ಲಿ ಧೈರ್ಯ ತುಂಬಲು, ಅವರ ನ್ಯಾಯಯುತ ಹಕ್ಕುಗಳನ್ನು ಕೊಡಿಸಲು ಈವರೆಗೂ ಹೋರಾಟ ಮಾಡಿದ್ದೇವೆ, ಮಾಡುತ್ತೇವೆ ಕೂಡಾ.

9. ದೇಶಾದ್ಯಂತ ಎಡ ಪಕ್ಷಗಳಿಗೆ ಹಿನ್ನಡೆ ಆಗುತ್ತಿರುವುದರಿಂದ ಅದು ತನ್ನ ಸಂಘಟನೆಯ ಕಾರ್ಯತಂತ್ರ ಬದಲಿಸುತ್ತಿರುವ ಭಾಗವಾಗಿ ಈ ಸಮಾವೇಶ ನಡೆಯುತ್ತಿದೆಯೇ?
ರಾಜಕೀಯ ಚಳವಳಿಗಳು ಕಾರ್ಯತಂತ್ರಗಳನ್ನ ಬದಲಿಸುತ್ತಲೇ ಇರುತ್ತವೆ. ಬಹುತೇಕ ಬೂರ್ಜ್ವಾ ರಾಜಕೀಯ ಪಕ್ಷಗಳಿಗೆ ಈ ಕಾರ್ಯತಂತ್ರಗಳು ತತ್ ಕ್ಷಣದ ಅಧಿಕಾರ ಹಿಡಿಯಲಿಕ್ಕಾದರೆ, ಎಡಪಂಥೀಯ ಸಂಘಟನೆಗಳಿಗೆ ಅದು ತಕ್ಷಣದ ಅಧಿಕಾರಕ್ಕಾಗಿ ಅಲ್ಲ. ಚಳವಳಿಗಳನ್ನ ಜನರ ಮಧ್ಯೆ ವ್ಯಾಪಕವಾಗಿ ತೆಗೆದುಕೊಂಡು ಹೋಗುವುದು ಮತ್ತು ನಾಗರಿಕ ಸಮಾಜದಲ್ಲಿ ಜನರಿಗೆ ಸಮಾನ ಅಧಿಕಾರವನ್ನು ಕೊಡಿಸುವ ಪ್ರಯತ್ನವಾಗಿ ಹೋರಾಟ ರೂಪಿಸುತ್ತೇವೆ. ಶೋಷಿತ ಸಮುದಾಯಗಳನ್ನು ಸಂಘಟಿಸಲಿಕ್ಕಾಗಿ, ದುಡಿಯುವ ಜನರನ್ನು ಸಂಘಟಿಸಲಿಕ್ಕಾಗಿ ಬೇರೆಬೇರೆ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದ್ದೇವೆ. ಈ ತಂತ್ರಗಾರಿಕೆಗಳು ನಾವು ಕೇವಲ ಹಿನ್ನಡೆ ಅನುವಿಸುತ್ತಿದ್ದೇವೆ ಎಂದಾಗಲೀ ಮತ ಬ್ಯಾಂಕ್ ನ ಸೀಮಿತ ರಾಜಕಾರಣ ಮಾಡಲಿಕ್ಕಾಗಲೀ ಅಲ್ಲ. ಇದು ಅವೆಲ್ಲವನ್ನೂ ಮೀರಿದ ಲೆಕ್ಕಾಚಾರ. ಇಂದು ದೇಶದ ಎಲ್ಲ ಜನಪರ ಚಳವಳಿಗಳೂ ಈ ಬಿಕ್ಕಟ್ಟನ್ನು ಎದುರಿಸುತ್ತಾ ಇವೆ. ದಲಿತರನ್ನು, ಮುಸ್ಲಿಮರನ್ನು, ಹಿಂದುಳಿದ ಜಾತಿ – ವರ್ಗಗಳನ್ನು ಬೆಂಬಲಿಸುವ ಹಾಗೂ ಬಂಡವಾಳಶಾಹಿಗಳನ್ನು ವಿರೋಧಿಸುವ ಸಂಘಟನೆಗಳು ಬಲಪಂಥೀಯ ರಾಜಕಾರಣದ ವಿಜೃಂಭಣೆಯಿಂದಾಗಿ ಹಿನ್ನಡೆಗೆ ಗುರಿಯಾಗಿವೆ. ಇಂಥ ಸಂದರ್ಭದಲ್ಲಿ ಈ ಸಮಾವೇಶದ ಮೂಲಕ ಸಮುದಾಯಗಳ ನಡುವೆ ಹೋಗುವ ಯತ್ನ ನಡೆಸಿದ್ದೇವೆ. ನ್ಯಾಯಯುತ ಹೋರಾಟದಿಂದ ಸಮಸ್ಯೆಗೆ ಪರಿಹಾರ ಬಯಸುವವರಿಗೆ ಇಂತಹ ತಂತ್ರಗಾರಿಕೆಯ ಅಗತ್ಯವಿದೆ. ಇದು ನ್ಯಾಯಯುತ ಕೂಡಾ.

10. ಮಂಗಳೂರಿನಲ್ಲಿ ನೀವು ಚುನಾವಣೆಗೆ ಸ್ಪರ್ಧಿಸುವ ಮಾತುಗಳು ಕೇಳಿಬರುತ್ತಿವೆ. ಹೌದೇ?
ಸದ್ಯಕ್ಕೆ ಅಂಥಾ ಯಾವ ಯೋಚನೆಯೂ ಇಲ್ಲ. ವೈಯಕ್ತಿಕವಾಗಿ ನಾನು ಚುನಾವಣಾ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಪಕ್ಷ ತೀರ್ಮಾನಿಸಿದರೆ ಸ್ಪರ್ಧಿಸಬಹುದು.

varthabharati

Please follow and like us: