ಮೇ ಸಾಹಿತ್ಯ ಮೇಳ ಬನ್ನಿ …

2017 ಮೇ 6, 7
ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ
ಅಂತರ್ರಾಷ್ಟ್ರೀಯ ಖ್ಯಾತ ಲೇಖಕಿ ಗೀತಾ ಹರಿಹರನ್ ಉದ್ಘಾಟಿಸುವರು.
ಆಲೂರು ವೆಂಕಟರಾವ್ ಸಭಾಭವನ ಧಾರವಾಡ.

ಮೇ 6, 7 ರಂದು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ನಡೆವ ಮೇ ಸಾಹಿತ್ಯ ಮೇಳದಲ್ಲಿ ಹೊರ ರಾಜ್ಯಗಳಿಂದ ಭಾಗವಹಿಸುವ ಅತಿಥಿಗಳು ಯಾರು? ಅವರೇನು? ಚಿಕ್ಕ ಮಾಹಿತಿ ಇಲ್ಲಿದೆ.. ನೀವೂ ಬನ್ನಿ. ಅವರ ಮಾತುಗಳ ಕೇಳೋಣ.

ಗೀತಾ ಹರಿಹರನ್

ತಮಿಳು ನಾಡಿನ ಕೊಯಮತ್ತೂರಿನಲ್ಲಿ ಜನಿಸಿದ ಗೀತಾ ಹರಿಹರನ್ ಭಾರತೀಯ ಇಂಗ್ಲಿಷ್ ಲೇಖಕಿ. ಕತೆ, ಕಾದಂಬರಿ, ಸಂಪಾದನೆ, ಅಂಕಣ ಬರಹಗಳಲ್ಲಿ ತೊಡಗಿಕೊಂಡಿರುವ ಹಾಗೂ ಮಹಿಳಾಪರ, ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಹೆಸರು ಅವರದು. ಮುಂಬಯಿ ಮತ್ತು ಮನಿಲಾಗಳಲ್ಲಿ ಬೆಳೆದ ಅವರು ನಂತರ ಅಮೆರಿಕದ ಕನೆಕ್ಟಿಕಟ್ನಲ್ಲಿ ಶಿಕ್ಷಣ ಮುಂದುವರೆಸಿದರು. ಅಮೆರಿಕದ ಚಾನೆಲ್ ಒಂದರಲ್ಲಿ ಕೆಲಕಾಲ ಕೆಲಸ ಮಾಡಿದ ಗೀತಾ ನಂತರ ಓರಿಯೆಂಟ್ ಲಾಂಗ್ಮನ್ ಪಬ್ಲಿಷಿಂಗ್ ಹೌಸ್ನಲ್ಲಿ ೨೦ ವರ್ಷ ಸಂಪಾದಕರಾಗಿ ಕೆಲಸ ನಿರ್ವಹಿಸಿದರು. ಅನೇಕ ಮಹಿಳಾಪರ ಹಾಗೂ ಸಮಾಜ ವಿಜ್ಞಾನ ಕುರಿತ ಪುಸ್ತಕಗಳು ಆ ಪ್ರಕಾಶನದಿಂದ ಹೊರಬರಲು ಕಾರಣರಾದರು. may

may-sahitya-mela

ಅವರ ಮೊದಲ ಕಾದಂಬರಿ ‘ತೌಸಂಡ್ ಫೇಸಸ್ ಆಫ್ ಲೈಟ್’ ೧೯೯೩ರಲ್ಲಿ ಕಾಮನ್ವೆಲ್ತ್ ಬರಹಗಾರರ ಪ್ರಶಸ್ತಿಯನ್ನು ಗಳಿಸಿತು. ನಂತರ ದ ಘೋಸ್ಟ್ಸ್ ಆಫ್ ವಾಸು ಮಾಸ್ಟರ್, ವೆನ್ ಡ್ರೀಮ್ಸ್ ಟ್ರಾವೆಲ್, ಇನ್ ಟೈಮ್ಸ್ ಆಫ್ ಸೀಜ್, ಫ್ಯುಜಿಟಿವ್ ಹಿಸ್ಟರೀಸ್, ದಿ ಆರ್ಟ್ ಆಫ್ ಡೈಯಿಂಗ್ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಲವು ವರ್ಷ ಕಾಲ ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಮಾಸಿಕ ಅಂಕಣ ಬರೆದರು. ಅವರ ಪುಸ್ತಕಗಳು ಅನೇಕ ವಿದೇಶೀ ಭಾಷೆಗಳಿಗೆ ಅನುವಾದಗೊಂಡಿವೆ.

೧೯೯೫ರಲ್ಲಿ ಹಿಂದೂ ಮೈನಾರಿಟಿ ಅಂಡ್ ಗಾರ್ಡಿಯನ್ ಶಿಪ್ ಆಕ್ಟ್ ಮಹಿಳಾ ತಾರತಮ್ಯ ಹೊಂದಿದೆ ಎಂದು; ದತ್ತು ಪಡೆದ ಮಗುವಿಗೆ ತಾಯಿಯ ಹೆಸರನ್ನು ಸರ್ನೇಮ್ ಆಗಿಟ್ಟುಕೊಳ್ಳಲು ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇಂದಿರಾ ಜೈಸಿಂಗ್ ವಾದಿಸಿದ ಆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಯವು ತಾಯಿಯೂ ಪೋಷಕಳಾಗಬಹುದು ಎಂದು ಅವರ ಪರವಾಗಿ ತೀರ್ಪಿತ್ತಿತು.

ಈಗ ಫ್ರೀಲ್ಯಾನ್ಸ್ ಪತ್ರಿಕೋದ್ಯಮದಲ್ಲಿ ತೊಡಗಿ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇಂಡಿಯನ್ ರೈಟರ್ಸ್ ಫೋರಂನ ಸ್ಥಾಪಕ ಸದಸ್ಯರೂ, ಅಧ್ಯಕ್ಷರೂ ಆಗಿದ್ದಾರೆ.

ಮದಿವಣ್ಣನ್. ಮ

ಮ.ಮದಿವಣ್ಣನ್ ಆಧುನಿಕ ತಮಿಳು ಕಾವ್ಯ ಸಂಧರ್ಭದಲ್ಲಿ ಮಹತ್ವದ ದಲಿತ ಕವಿ. ನೆರಿಂದು ಕವನ ಸಂಕಲನದ ಮೂಲಕ ತಮಿಳು ಕಾರ್ಯಕ್ಷೇತ್ರದಲ್ಲಿ ಸಂಚಲನ ತಂದವರು. ಕಾವ್ಯ, ವಿಮರ್ಶೆ, ಅನುವಾದ ,ಸಂಪಾದನೆಯಲ್ಲಿಯು ಕ್ರಿಯಾಶೀಲರು. ದಲಿತ ,ಪೆರಿಯಾರ್ ತತ್ವ ಸಿದ್ದಾಂತಗಳ ಆಳವಾದ ಆಧ್ಯಯನ ಹಾಗೂ ಸೈಧ್ದಾಂತಿಕ ಕಣ್ಣೋಟವು ತಮಿಳು ಸಾಹಿತ್ಯದಲ್ಲಿ ಮಹತ್ತ್ವದ ಬರಹಗಾರರಾಗಿ ಗುರುತಿಸುವಂತೆ ಮಾಡಿದೆ.ದಲಿತ ಸಾಂಸ್ಕೃತಿಕ ಚಿಂತನೆಗಳ ಮೂಲಕ ಹೊಸ ಒಳಹುಗಳ ನೀಡಬಲ್ಲ ಛಾತಿಯುಳ್ಳವರು. ” ತಮಿಳುನಾಡು ಸಾಕಿಯ ಅರುಂಧತಿಯರ್ ಸಂಘದ ಅಧ್ಯಕ್ಷರಾಗಿ ಮತ್ತು ವೆಳ್ಳ ಕುದಿರೈ( ಬಿಳಿ ಕುದುರೆ.) ಎಂಬ ಮಾಸ ಪತ್ರಿಕೆಯ ಸಂಪಾದಕರು ಆಗಿದ್ದಾರೆ.
ಕವನ ಸಂಕಲನಗಳು: ನೆರಿಂದು(ಒತ್ತರಿಸು), ನಮಕ್ಕಿಡೈಯಿಲಾನ ತೊಲೈವು( ನಮ್ಮ ನಡುವಿನ ಅಂತರ),ಏದಿಲಿಯೈ ತೊಡ್ರಂದು ವರುಂ ನಿಲಾ.
ಸಂಪಾದನೆ ಮತ್ತು ಅನುವಾದ : ರಾವ್ ಬಹದ್ದೂರ್ ಎಲ್.ಸಿ ಗುರುಸ್ವಾಮಿ ಅವರ ಸದನದ ಭಾಷಣಗಳು, ದಲಿತ ನೋಟ – ಶರಣಕುಮಾರ ಲಿಂಬಾಳೆ,ಲಿಂಬಾಳೆಯವ ಸಣ್ಣಕತೆಗಳು, ಎದಿರ್ ವರ್ಗ – ಅಶೋಕ್ ಯಾದವ್,
ವಿಮರ್ಶೆ ಮತ್ತು ಚಿಂತನ :ಒಳ ಮೀಸಲಾತಿ ಮುಂದುವರೆದ ವಿವಾದಗಳು, ಒಳ ಮೀಸಲಾತಿ ಕೆಲವು ಚಿಂತನೆಗಳು.
ಗೌರವ ಮತ್ತು ಸನ್ಮಾನ : ತಮಿಳಿ ಪ್ರತಿಷ್ಠಿತ ಪತ್ರಿಕೆ “ಆನಂದ ವಿಗಡನ್ ಯುವ ಸಾಧಕರ ಪಟ್ಟಿಯಲ್ಲಿ ಸ್ಥಾನ ೨೦೧೪,೧೯೯೪ ರಲ್ಲಿ ತಮಿಳುನಾಡಿನ ಪ್ರಗತಿಪರ ಬಂಡಾಯ ಬರಹಗಾರರ ಒಕ್ಕೂಟದ ಪ್ರಶಸ್ತಿ ( ಹಸ್ತ ಪ್ರತಿಗೆ) ,
ಮದಿವಣ್ಣನ್ ರ ” ನೆರಿಂದು ” ಕವನ ಸಂಕಲನ ವು ಸೇಲಂನಲ್ಲಿರುವ “ಪೆರಿಯಾರ್ ವಿಶ್ವವಿದ್ಯಾನಿಲಯ ದಲ್ಲಿ ಪಠ್ಯವಾದ ನಂತರದ ಏಳು ತಿಂಗಳ ಬಳಿಕ ಮತೀಯವಾದಿಗಳ ಒತ್ತಡಗಳಿಂದ ಪಠ್ಯವನ್ನು ತೆಗೆದು ಹಾಕಲಾಯಿತು.
ಮದಿವಣ್ಣನ್ ರು ಪ್ರಖರ ಬರಹಗಾರಾಗಿ ,ದಲಿತ ಸಾಂಸ್ಕೃತಿಕ ಚಿಂತನೆಗಳ ಮೂಲಕ ಸ್ವಸ್ಥ ಸಮಾಜಕ್ಕೆ ದುಡಿಯುವ ಜೀವಪರ ಕಾಳಜಿಯ ಕವಿ, ನಿಷ್ಠೂರ ಮಾತುಗಾರ.
ಇವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವೆ.

ಡಾ. ಆನಂದ್ ತೇಲ್ತುಂಬ್ಡೆ

ಚಿಂತಕ, ಮಾನವ ಹಕ್ಕು ಹೋರಾಟಗಾರ ಹಾಗೂ ಬರಹಗಾರ ಡಾ. ಆನಂದ್ ತೇಲ್ತುಂಬ್ಡೆ ಇಂಜಿನಿಯರಿಂಗ್ ಪದವಿ ಹಾಗೂ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಪದವಿ ಪಡೆದವರು. ಔಟ್ಲುಕ್, ತೆಹೆಲ್ಕಾ, ಮೇನ್ಸ್ಟ್ರೀಮ್, ಸೆಮಿನಾರ್ ಇತ್ಯಾದಿ ಹಲವಾರು ಪ್ರಮುಖ ಇಂಗ್ಲಿಷ್ ಪತ್ರಿಕೆಗಳಿಗೆ ಅಂಕಣಕಾರರು. ಎಡಪಂಥೀಯ ಒಲವುಳ್ಳ ಅವರ ಚಿಂತನೆಗಳು ಜನಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಲಸ್ಪರ್ಶಿಯಾದ ಮುನ್ನೋಟ ಒದಗಿಸುತ್ತವೆ. ನೈಜೀರಿಯಾ, ಕೆನ್ಯಾ, ಟಾಂಝಾನಿಯಾ, ಚೈನಾಗಳಲ್ಲಿ ವಿವಿಧ ಕಂಪನಿಗಳ ಎಂಡಿ, ಸಿಇಒ ಆಗಿ ಕೆಲಸ ನಿರ್ವಹಿಸಿ, ಐಐಟಿ ಖರಗ್ಪುರದಲ್ಲಿ ಬೋಧಕರಾಗಿ ಕೆಲಸ ಮಾಡಿ ಈಗ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಬೋಧಿಸುತ್ತಾರೆ. ‘ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್’ ಎಂಬ ಮಾನವ ಹಕ್ಕು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

‘ಖೈರ್ಲಾಂಜಿ’, ‘ಪರ್ಸಿಸ್ಟೆನ್ಸ್ ಆಫ್ ಕ್ಯಾಸ್ಟ್’, ‘ಹಿಂದುತ್ವ ಅಂಡ್ ದಲಿತ್ಸ್’, ‘ಅಂಬೇಡ್ಕರ್ ಇನ್ ಅಂಡ್ ಫಾರ್ ದಿ ಪೋಸ್ಟ್ ಅಂಬೇಡ್ಕರ್ ದಲಿತ್ ಮೂವ್ಮೆಂಟ್’, ‘ಗ್ಲೋಬಲೈಸೇಷನ್ ಅಂಡ್ ದಲಿತ್ಸ್’, ‘ಅಂಬೇಡ್ಕರ್ ಅಂಡ್ ಮುಸ್ಲಿಮ್ಸ್’, ‘ಕ್ಯಾಪಿಟಾಲಿಸಂ ಅಂಡ್ ಕ್ಯಾಸ್ಟ್ ಕ್ವೆಶ್ಚನ್ಸ್’ ಇವು ಅವರ ಕೆಲವು ಪ್ರಮುಖ ಪುಸ್ತಕಗಳು.

ಮಹಾಬಲೇಶ್ವರ ಸೈಲ್ (೧೯೪೩)

ಕರ್ನಾಟಕದ ಗಡಿಊರಾದ ಮಾಜಾಳಿಯ ಶೇಜೆಬಾಗದವರು. ಕೃಷಿಕ ಕುಟುಂದಲ್ಲಿ ಹುಟ್ಟಿ ಬೆಳೆದ ಸೈಲ್ ತಂದೆ ಸೈನ್ಯದಲ್ಲಿದ್ದರು. ಅವರ ಮರಣಾನಂತರ ಎಂಟನೇ ತರಗತಿಗೆ ಶಿಕ್ಷಣ ನಿಲಿಸಿ ಸೈಲ್ ಕೃಷಿಕೆಲಸ ನೋಡಿಕೊಳ್ಳುವಂತಾಯಿತು. ನಂತರ ಅವರೂ ಸೇನೆ ಸೇರಿದರು. ೧೯೬೫ರ ಭಾರತ-ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಗಡಿಯ ಹುಸೇನ್ವಾಲಾದಲ್ಲಿ ಕೆಲಸ ನಿರ್ವಹಿಸಿದರು. ೧೯೬೪-೬೫ರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯವರಾಗಿ ಇಸ್ರೇಲ್, ಈಜಿಪ್ಟ್ಗಳಲ್ಲಿ ಕಾರ್ಯ ನಿರ್ವಹಿಸಿದರು. ನಂತರ ಸೈನ್ಯದ ಕೆಲಸ ತೊರೆದು ಅರಣ್ಯ ಇಲಾಖೆಯಲ್ಲಿ, ಗೋವಾ-ಡಮನ್-ಡಿಯುಗಳ ಪೊಲೀಸ್ ಇಲಾಖೆಯಲ್ಲಿ, ಕೊನೆಗೆ ಗೋವಾ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದರು.

ಮೊದಲು ತಮ್ಮ ಬರವಣಿಗೆಯನ್ನು ಮರಾಠಿಯಲ್ಲಿ ಶುರುಮಾಡಿದರೂ ನಂತರ ಕೊಂಕಣಿಯಲ್ಲಿ ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ ರಚಿಸಿದರು. ನಂತರ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿನೆ ಮುಂದುವರೆಸಿದರು. ಅವರ ಮೊದಲ ಕಾದಂಬರಿ ‘ಕಾಳಿ ಗಂಗಾ’ ಕಾರವಾರದ ಕಾಳಿ ನದಿ ತೀರದ ಕೃಷಿಕುಟುಂಬಗಳ ಹತ್ತಿರದ ವಿವರಗಳನ್ನೊಳಗೊಂಡಿದೆ. ಅವರ ಕಾದಂಬರಿ, ಕತೆಗಳಲ್ಲಿ ಗಟ್ಟಿ ಹೆಣ್ಣುಪಾತ್ರಗಳು ಬರುತ್ತವೆ. ಕಾರವಾರ ಆಸುಪಾಸಿನ ಕೊಂಕಣಿ ಭಾಷೆ ಬಳಸಿದ್ದಾರೆ. ಇತ್ತೀಚೆಗೆ ಸರಸ್ವತಿ ಸಮ್ಮಾನ್ ಪಡೆದ ಅವರ ಕಾದಂಬರಿ ‘ಹಾವಠಣ’ ಬೇಡಿಕೆ ಕುಸಿತದಿಂದ ಬಿಕ್ಕಟ್ಟು ಎದುರಿಸುತ್ತಿರುವ ಕುಂಬಾರ ಸಮುದಾಯದ ಕುರಿತದ್ದಾಗಿದೆ.

Please follow and like us: