ಚುನಾವಣೆಗಾಗಿ ಹಣ ಸಂಗ್ರಹಿಸುತ್ತಿರುವ ರಾಜ್ಯ ಸರಕಾರ : ಕುಮಾರಸ್ವಾಮಿ ಆರೋಪ

hdk-election_karnataka

ಮಡಿಕೇರಿ,ಎ.21:ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರವಲ್ಲದ ಬೃಹತ್ ಯೋಜನೆಗಳ ಹೆಸರಿನಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲು ಹಣ ಸಂಗ್ರಹಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರವಲ್ಲದ ಯೋಜನೆಗಳಿಂದ ಕಾಂಗ್ರೆಸ್ ಲಾಭ ಮಾಡಿಕೊಳ್ಳುತ್ತಿದೆಯೇ ಹೊರತು ಇಂತಹ ಯೋಜನೆಗಳು ಜನರಿಗೆ ತಲುಪುವುದಿಲ್ಲವೆಂದು ಟೀಕಿಸಿದರು.

ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಬ್ಬರು ಈ ಹಿಂದೆ ತನಗೆ ಚುನಾವಣೆ ಎದುರಿಸಲು ಹಣದ ಕೊರತೆ ಇತ್ತು. ಆದರೆ, ಮುಂದಿನ ಚುನಾವಣೆಗೆ ಹಣದ ಕೊರತೆ ಇಲ್ಲ, 10 ಕೋಟಿ ಇದೆಯೆಂದು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ. ಇವರ ಇಂತಹ ಹೇಳಿಕೆಗಳು ಕಾಂಗ್ರೆಸ್ ಮುಂದಿನ ಚುನಾವಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಬಹಿರಂಗ ಪಡಿಸುತ್ತಿದೆ. ಚುನಾವಣೆಯ ನಿಗಧಿತ ಮಿತಿಗೂ ಮೀರಿ ವೆಚ್ಚ ಮಾಡುವ ಹಣವನ್ನು ಕಾಂಗ್ರೆಸ್ ಪಕ್ಷ ನೀಡುತ್ತದೆಯೇ ಅಥವಾ ಅದು ಅವರ ಸ್ವಂತ ಗಳಿಕೆಯ ಹಣವೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಬರ ನಿರ್ವಹಣೆ ವಿಫಲ

ಕರ್ನಾಟಕ ಈ ಹಿಂದೆಂದೂ ಕಾಣದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಹಲವಾರು ಗ್ರಾಮೀಣ ಭಾಗಗಳಿಂದ ಜನರು ಗುಳೆಹೋಗುತ್ತಿದ್ದಾರೆ. ಆದರೆ, ಇದಾವುದು ತಿಳುದಂತೆ ರಾಜ್ಯ ಸರ್ಕಾರ ಜನ ಗುಳೆ ಹೋಗುತ್ತಿಲ್ಲ, ಗುಳೆ ಹೋಗದ ರೀತಿ ಅನ್ನಭಾಗ್ಯ ಕಲ್ಪಿಸಿರುವುದಾಗಿ ಹೇಳಿಕೊಳ್ಳುತ್ತಿದೆ ಎಂದು ವಿಷಾದಿಸಿದರು.

ಬರದ ಸಂದರ್ಭ ಜನರ ಸಂಕಷ್ಟಗಳಿಗೆ ಯಾವ ಸ್ಪಂದಿಸಬೇಕಿತ್ತೊ ಆ ವೇಗ ಸರ್ಕಾರದಿಂದ ಕಾಣುತ್ತಿಲ್ಲ. ಸ್ಥಳಕ್ಕೆ ಭೇಟಿ ನೀಡದೆ ವಿಧಾನ ಸೌಧದಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಂದ ಬರದ ಮಾಹಿತಿ ಪಡೆದಲ್ಲಿ ಅದೆಷ್ಟು ಸಮರ್ಪಕವಾಗಿರುತ್ತದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

52 ಸಾವಿರ ಕೋಟಿ ರೂ. ಸಾಲ ಮನ್ನಾ

ಮುಂಬರುವ ವಿಧಾನಸಭಾ  ಚುನಾವಣೆೆಯಲ್ಲಿ 113ಮ್ಯಾಜಿಕ್ ಸದಸ್ಯ ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿಕ ವರ್ಗದ 52 ಸಾವಿರ ಕೋಟಿ ರೂ. ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುವ ಸವಾಲು ತಮ್ಮೆದುರು ಇದೆ ಎಂದು ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇತರೆ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಇಲ್ಲವೆಂದು ಸ್ಪಷ್ಟಪಡಿಸಿದರು. ಕೇಂದ್ರ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಿಲ್ಲವೆಂದು ಟೀಕಿಸಿದರು

Please follow and like us: