ಬಿಎಸ್‌ವೈ ವಿರುದ್ಧ ದೂರು ನೀಡಲು ಭಿನ್ನಮತೀಯರು ಸಜ್ಜು?

yadiyurappa_bs_bjp

ಬೆಂಗಳೂರು, ಎ.21: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ವರಿಷ್ಠರಿಗೆ ದೂರು ನೀಡಲು ಭಿನ್ನಮತೀಯರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕೈಗೊಳ್ಳುತ್ತಿರುವ ಏಕಪಕ್ಷೀಯ ತೀರ್ಮಾನಗಳಿಂದ ಪಕ್ಷದ ಸಂಘಟನೆ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಮಾಹಿತಿ ಒದಗಿಸಲು ಬಿಜೆಪಿ ರಾಷ್ಟ್ರೀಯ ಅಮಿತ್ ಷಾರನ್ನು ಭೇಟಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿದ್ದಾರೆ. ಅಮಿತ್ ಷಾ ಅವಕಾಶ ನೀಡಿದ್ದಲ್ಲಿ ಎಪ್ರಿಲ್ 30ರಂದು ಭಿನ್ನಮತೀಯರು ಹೊಸದಿಲ್ಲಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರ ಮುಖಂಡರು, ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ನೇಮಕವಾಗಿರುವ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ವರಿಷ್ಠರ ಮುಂದೆ ಒತ್ತಡ ಹೇರಿದ್ದರು. ಅದರಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗೊಂದಲಕ್ಕೆ ಎಡೆಮಾಡಿ ಕೊಟ್ಟಿರುವ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಯಡಿಯೂರಪ್ಪಗೆ ಸೂಚನೆ ನೀಡಿದ್ದರು.

ಅಲ್ಲದೆ, ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿ, ಫೆ.10ರೊಳಗೆ ವರದಿ ನೀಡುವಂತೆ ಯಡಿಯೂರಪ್ಪಗೆ ಸೂಚನೆ ನೀಡಿದ್ದರು. ಆದರೆ, ಈವರೆಗೆ ಯಡಿಯೂರಪ್ಪ ಭಿನ್ನಮತೀಯರನ್ನು ಕರೆದು ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ನಡೆಸದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಉಪ ಚುನಾವಣೆ ಸೋಲು: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಡಿಯೂರಪ್ಪ, ಪಕ್ಷದ ಇತರ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಪ್ರಚಾರ ನಡೆಸಿದ ಪರಿಣಾಮ ಬಿಜೆಪಿ ಅಭ್ಯರ್ಥಿಗಳು ಸೋಲುವಂತಾಯಿತು. ಎರಡು ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದರೂ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲು ಭಿನ್ನಮತೀಯರು ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಲ್ಪಟ್ಟಿದ್ದ ಈ ಉಪ ಚುನಾವಣೆಯಂತೆ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಂಡರೆ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವಾಗಬಹುದು. ಆದುದರಿಂದ, ಎಲ್ಲ ಪ್ರಮುಖ ತೀರ್ಮಾನಗಳನ್ನು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸುವಂತೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಭಿನ್ನಮತೀಯರು ವರಿಷ್ಠರ ಮುಂದೆ ಬೇಡಿಕೆ ಮಂಡಿಸಲಿದ್ದಾರೆ ಎನ್ನಲಾಗಿದೆ.

ಎ.23ರಂದು ಬಿಜೆಪಿ ಪದಾಧಿಕಾರಿಗಳ ಸಭೆ
ರಾಜ್ಯದಲ್ಲಿ ಪಕ್ಷದ ಸಂಘಟನೆ ಹಾಗೂ ಉಪ ಚುನಾವಣೆಯ ಫಲಿತಾಂಶದ ಕುರಿತು ಚರ್ಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪಕ್ಷದ ಪದಾಧಿಕಾರಿಗಳು, ಕೋರ್ ಕಮಿಟಿ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು, ಶಾಸಕರು, ಜಿಲ್ಲಾಧ್ಯಕ್ಷರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಎಲ್ಲ ಪ್ರಮುಖ ನಾಯಕರ ಸಭೆಯನ್ನು ಎ.23ರಂದು ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಕರೆದಿದ್ದಾರೆ.

Please follow and like us: