ಹಕೀಂಸಾಬರಿಂದ ಅನ್ಮೋಲ್ ಕ್ಯಾಲೆಂಡರ್ ಬಿಡುಗಡೆ…

anmol_news_walisab_calalnder


ಆಂಗ್ಲ ಭಾಷೆ ತೊಲಗಿ ಹಿಂದಿ ಸಾರ್ವತ್ರಿಕ ಭಾಷೆಯಾಗಲಿ : ಎಂ.ಎ.ವಲಿಸಾಹೇಬ್
ಹೊಸಪೇಟೆ: ಭಾರತವನ್ನು ಕೊಳ್ಳೆ ಹೊಡೆದ ಆಂಗ್ಲರು ತೊಲಗಿದರೂ ಶಾಪದಂತೆ ನಮಗಂಟಿರುವ ಇಂಗ್ಲೀಷ್ ಭಾಷೆ ನಮ್ಮನ್ನು ಬಿಟ್ಟು ಹೋಗದಿರುವುದು ದುರದೃಷ್ಟಕರ, ಇನ್ನು ಮುಂದೆ ಶ್ರೀಮಂತ ಭಾಷೆ ಹಿಂದಿ ಪಾರಪತ್ಯ ಮೆರೆಯಬೇಕಿದ್ದು ಕ್ಯಾಲೆಂಡರ್ ಸಹ ಮುದ್ರಣಗೊಳ್ಳುವಂತಾಗಲಿ ಎಂದು ಅನ್ಮೋಲ್ ಪಬ್ಲಿಕ್ ಸ್ಕೂಲ್‌ನ ಸಂಸ್ಥಾಪಕ ಅಧ್ಯಕ್ಷರಾದ ಎಂ.ಎ.ವಲಿಸಾಹೇಬ್ (ಹಕೀಂಸಾಬ್) ಆಶಯವ್ಯಕ್ತಪಡಿಸಿದರು.
ಅವರು ಹೊಸಪೇಟೆಯ ಮಹೆಬೂಬ್‌ನಗರದಲ್ಲಿರುವ ಅನ್ಮೋಲ್ ಪಬ್ಲಿಕ್ ಸ್ಕೂಲ್‌ನಲ್ಲಿ ೨೦೧೭ರ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಬುಧವಾರ ಮಾತನಾಡುತ್ತಿದ್ದರು.
ಇಡಿ ವಿಶ್ವವೇ ಇಂಗ್ಲೀಷ್ ಭಾಷೆಯ ಬೆನ್ನು ಬಿದ್ದಿರುವುದು ಸೋಜಿಗದ ಸಂಗತಿ, ಅನ್ಯ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ನಾವು ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ, ಅಂತಾರಾಷ್ಟ್ರೀಯ ಭಾಷೆ ಹಿಂದಿಯನ್ನು ಸಾರ್ವತ್ರಿಕಗೊಳಿಸುವಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇಡಬೇಕಾದ ಅನಿವಾರ‍್ಯತೆ ಇದೆ. ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲೊಂದಾದ ಭಾರತ ದೇಶವು ಅನ್ಯ ದೇಶದ ಭಾಷೆಯನ್ನು ಅನುಸರಿಸದೆ ನಮ್ಮ ಭಾಷೆಯ ಪ್ರಭಾವವನ್ನು ಹೆಚ್ಚಿಸಿ ಇತರರು ಅನುಕರಿಸುವಂತೆ ಮಾಡುವ ಅನಿವಾರ‍್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಜಿಯವರು ಮುತುವರ್ಜಿ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ವಿಶ್ವಗುರು ಭಾರತದೇಶ ತನ್ನ ಆಚಾರ ವಿಚಾರ ಗಟ್ಟಿ ಸಾಂಪ್ರದಾಯದಿಂದಾಗಿ ವಿಶ್ವಕ್ಕೆ ಮಾದರಿಯಾಗಿದೆ. ಭಾಷೆಯ ವಿಚಾರದಲ್ಲೂ ಇದು ಮುಂದುವರೆಯಬೇಕಿದೆ. ಅಂತಾರಾ ಷ್ಟ್ರೀಯ ಭಾಷೆ ಹಿಂದಿಗೆ ಎಲ್ಲೆಲ್ಲದ ಪ್ರಾಮುಖ್ಯತೆ ಸಿಗಬೇಕಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ಹಿಂದಿ ಕಡ್ಡಾಯವಾಗಬೇಕು ಹೀಗಾದಾಗ ಮಾತ್ರ ನಾವು ಉತ್ತಮ ಬೆಳವಣಿಗೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ವೈವಿದ್ಯಮಯ ಈ ದೇಶದಲ್ಲಿ ಪ್ರತಿದಿನ ದೇಶದ ಯಾವುದೋ ಒಂದು ಮೂಲೆಯಲ್ಲಿ ಉತ್ಸವಗಳು, ಜಾತ್ರೆಗಳು, ಪರಿಷೆಗಳು, ಹಬ್ಬ ಹರಿದಿನಗಳು ನಡೆಯುತ್ತಲೇ ಇರುತ್ತವೆ, ಇದು ಐಕ್ಯತೆಯ ಪ್ರತೀಕವೂ ಆಗಿದೆ. ಹಿಂದಿ ಭಾಷೆಯನ್ನು ಜನಪ್ರೀಯಗೊಳಿಸುವುದರಿಂದ ಏಕತೆ ಸಾಧ್ಯವಿದೆ. ಭಿನ್ನ ಸಂಸ್ಕೃತಿಯನ್ನು ಹೊಂದಿದ್ದರೂ ಸಹ ಭಾಷೆ ನಮ್ಮಲ್ಲರನ್ನು ಒಗ್ಗೂಡಿಸಲಿದೆ ರಾಜಕಾರಣಿಗಳು ವಿಶೇಷ ಆಸ್ಥೆವಹಿಸಿ ಹಿಂದಿ ಭಾಷೆಯನ್ನು ಸಾರ್ವತ್ರಿಕ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕಿದೆ ಇದು ಐಕ್ಯತೆ ಹಾದಿಯೂ ಆಗಲಿದೆ. ಶ್ರೀಮಂತ ಭಾಷೆ ಹಿಂದಿಯಾಗಿದ್ದರೂ ಸಹ ಆಂಗ್ಲ ಭಾಷೆಯಲ್ಲಿ ಕ್ಯಾಲೆಂಡರ್ ಮುದ್ರಿಸಿ ವಿತರಿಸಬೇಕಿರುವುದು ದುರಂತವೇ ಸರಿ ಎಂದು ವಿಷಾಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾನಿ ಮಜೀದ್‌ನ ವಾಹೀದ್ ಬಯ್ (ಮುತ್ತವಲ್ಲಿಸಾಬ್), ಅನ್ಮೋಲ್ ಟೈಮ್ಸ ಪತ್ರಿಕೆಯ ಸಹಾಯಕ ಸಂಪಾದಕ ನಾಗರಾಜ್ ಇಂಗಳಗಿ, ಅನ್ಮೋಲ್ ಪಬ್ಲಿಕ್ ಸ್ಕೂಲ್‌ನ ಆಡಳಿತಾಧಿಕಾರಿ ಆರೀಫಾಬೇಗಂ, ಶಾಲಾ ಮುಖ್ಯಶಿಕ್ಷಕಿ ಅಫ್ರೀನ್, ಪ್ರಮುಖರಾದ ಮಹ್ಮದ್ ಇಸ್ಮೈಯಿಲ್, ಸಾಧಿಕ್‌ಸಾಬ್ ಶಾಲಾ ಸಿಬ್ಬಂದಿ ಇದ್ದರು.

Please follow and like us: