ಬಾಲಕನನ್ನು ನುಂಗಲು ಹೊರಟಿದ್ದ ಹೆಬ್ಬಾವು ಸೆರೆ

python_koppal

ಮಂಗಳೂರು, ಅ.: ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ಬಾಲಕನನ್ನು ನುಂಗಿ ಸುದ್ದಿ ಮಾಡಿದ್ದ ಹೆಬ್ಬಾವು ಕೊನೆಗೂ ಸೆರೆಸಿಕ್ಕಿದೆ. ಬಂಟ್ವಾಳದ ಸಜಿಪ ಕೊಳಕೆ ಗ್ರಾಮದಲ್ಲಿ ಹೆಬ್ಬಾವು ಸೆರೆ ಸಿಕ್ಕಿದ್ದು, ಎರಡು ವಾರಗಳ ಜನರ ಆತಂಕಕ್ಕೆ ತೆರೆ ಬಿದ್ದಿದೆ.

ಹಾವು ಹಿಡಿಯುವ ಪ್ರಕ್ರಿಯೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಗಾಯಗೊಂಡಿರುವ ಜಗದೀಶ್ ಕೌಡೂರು ಮತ್ತು ಅಬ್ದುಲ್ ಸತ್ತಾರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅರಣ್ಯ ಸಂಚಾರಿ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಪಿಲಿಕುಳ ನಿಸರ್ಗಧಾಮದ ವಶಕ್ಕೆ ಒಪ್ಪಿಸಿದ್ದಾರೆ.

ಅಕ್ಟೋಬರ್ 4ರಂದು 11 ವರ್ಷದ ಪೋರ ವೈಶಾಖನನ್ನು ಈ ಹೆಬ್ಬಾವು ನುಂಗಲು ಹೊರಟು ಸುದ್ದಿ ಮಾಡಿತ್ತು. ಸಾವಿನ ದವಡೆಯಿಂದ ಪಾರಾಗಿದ್ದ ವೈಶಾಖ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ. ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದಾಗ ಮತ್ತೆ ಇದೇ ಹೆಬ್ಬಾವು ಕಾಣಿಸಿ ಜನರಲ್ಲಿ ಆತಂಕ ಸೃಷ್ಟಿಸಿತ್ತು.

ಒಟ್ಟಿನಲ್ಲಿ ಎರಡು ವಾರಗಳಿಂದ ಹೆಬ್ಬಾವು ಕಾಟದಿಂದ ಕಂಗಾಲಾಗಿದ್ದ ಜನ ಈಗ ನಿಟ್ಟುಸಿರು ಬಿಟ್ಟಿದ್ದಾರೆ.

Please follow and like us: