ಕೊಪ್ಪಳ : ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಯಾರು ಬೇಕು ?

nagarabiruddi

ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರ ಮತ್ತೊಮ್ಮೆ ಸುದ್ದಿಯಲ್ಲಿದೆ. ತನ್ನ ಕೆಲಸಗಳಿಂದಲ್ಲ. ಅಧ್ಯಕ್ಷ ಗಾದಿಗಾಗಿ ನಡೆದಿರುವ ಪೈಪೋಟಿಯಿಂದಾಗಿ. ಕೊಪ್ಪಳ ಜಿಲ್ಲೆಯಾದ ನಂತರ  ಇದುವರೆಗೆ ನಗರಾಭಿವೃದ್ದಿ ಪ್ರಾಧಿಕಾರದ ಹೆಸರನ್ನು ಜನರು ಕೇಳುವುದು ಅದರ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಪೈಪೋಟಿಯ ಸಂದರ್ಭದಲ್ಲಿಯೇ ,ಉಳಿದಂತೆ ಅಲ್ಲಿ ಏನು ನಡೆಯುತ್ತಿದೆ. ಅದರಿಂದ ಊರಿಗೆ ಏನುಪಯೋಗವಾಗಿದೆ ಎಂದು ಯಾರಿಗೂ ಗೊತ್ತಿಲ್ಲ. ಇಡೀ ನಗರದ ಸುತ್ತಮುತ್ತ ನೂರಾರು ಎಕರೆ ಜಾಗೆ ಎನ್ ಎ ಮಾಡಲಾಗುತ್ತಿದೆ. ಹೊಸ ಲೇಔಟ್ ಗಳ ನಿರ್ಮಾಣವಾಗುತ್ತಿದೆ. ಆದರೆ ಅಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿವೆಯೇ? ನಿಯಮಾವಳಿಗಳನ್ನು ಪಾಲಿಸಲಾಗಿದೆಯೇ  ಕೇಳುವವರು ಯಾರು ? ಇಡೀ ನಗರದಲ್ಲಿ ಇಂತಹ ಲೇ ಔಟ್ ಗಳನ್ನು ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗೆ ಎಷ್ಟು? ಎಷ್ಟು ಲೇ ಔಟ್ ಗಳಲ್ಲಿ ಉದ್ಯಾನವನ್ನು ಜನಸಾಮಾನ್ಯರು ಉಪಯೋಗಿಸುತ್ತಿದ್ದಾರೆ ಇಂತಹ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಕೇವಲ ಹಾಳೆಯಲ್ಲಿಯೇ ದಾಖಲೆಗಳ ಸೃಷ್ಟಿಯಾಗುತ್ತೆ. ಸ್ಥಳಕ್ಕೆ ಹೋಗಿ ನೋಡಿದರೆ ಉದ್ಯಾನವನದ ಹೆಸರಿನಲ್ಲಿ ಮುಳ್ಳುಗಂಟಿ ಬೆಳೆದಿರುತ್ತೆ.   ಸಿದ್ದರಾಮಯ್ಯ ಸರಕಾರದಲ್ಲಿ ಮೊದಲ ಅವಧಿಯ ಅಧ್ಯಕ್ಷರಾಗಿ ಸೈಯದ್ ಜುಲ್ಲು ಖಾದ್ರಿಯವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.  ಕಳೆದ ಸಲ  ಅಶ್ವಿನ್ ಜಾಂಗಡಾರ ಹೆಸರೂ  ಅಧ್ಯಕ್ಷ ಗಾದಿಗೆ ಕೇಳಿಬಂದಿತ್ತು. ಆದರೆ ಡಿಸಿಸಿ ಅಧ್ಯಕ್ಷ ಬಸವರಾಜ ಹಿಟ್ನಾಳರ ಫೆವರಿಟ್ ಆಯ್ಕೆಯಾಗಿದ್ದು ಈ ಸೈಯದ್ ಜುಲ್ಲು ಖಾದ್ರಿ. ಅಲ್ಪಸಂಖ್ಯಾತ ಸಮುದಾಯದ ಮನವೊಲಿಸುವುದಕ್ಕಾಗಿ ಈ ಅಧ್ಯಕ್ಷಗಿರಿಯನ್ನು ನೀಡಿದ್ದೇನೆ ಎಂದು ಕಾಂಗ್ರೆಸ್ ಹೇಳಿತು. ಮೊದಲ ಅವಧಿಯು ಪೂರ್ಣವಾಗಿರುವ  ಈ ಸಂದರ್ಭದಲ್ಲಿ ಮತ್ತೊಮ್ಮೆ ಅಧ್ಯಕ್ಷ ಗಾದೆಗೆ ಪೈಪೋಟಿ ಆರಂಭವಾಗಿದೆ. ಈಗ ರೇಸ್ ನಲ್ಲಿ ಅಶ್ವಿನ್ ಜಾಂಗಡಾ , ಕೆ.ಎಂ.ಸಯ್ಯದ್  ಬಂದಿದ್ಧಾರೆ.  ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಸೈಯದ್ ಜುಲ್ಲು ಖಾದ್ರಿ ಮತ್ತೊಮ್ಮೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.  ಜೊತೆಗೆ ಕಾಡಾ ಅಧ್ಯಕ್ಷರಾಗಲು ಪ್ರಯತ್ನಿಸುತ್ತಿರುವ ಪ್ರಸನ್ನ ಗಡಾದ ಸಹ ರೇಸ್ ನಲ್ಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಕಾಡಾ ಅಧ್ಯಕ್ಷಗಿರಿಗೆ ಮಾಜಿ ಶಾಸಕರು, ಎಂಎಲ್ಸಿಗಳೂ ಸಹ ಪ್ರಯತ್ನ ನಡೆಸಿರುವುದರಿಂದ ಪ್ರಸನ್ನ ಗಡಾದಗೆ ಅಧ್ಯಕ್ಷಗಿರಿ ಸುಲಭದಲ್ಲ  ಹೀಗಾಗಿ ನಗರಾಭಿವೃದ್ದಿ ಪ್ರಾಧಿಕಾರ ಸಿಕ್ಕರೂ ಸಿಗಬಹುದು ಎನ್ನುವ ಲೆಕ್ಕಾಚಾರಗಳಿವೆ. ಆದರೆ ಇತ್ತೀಚಿಗೆ ನಡೆದ ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಸನ್ನ ಗಡಾದಗೆ ತಾಂತ್ರಿಕವಾಗಿ ಸಮಸ್ಯೆ ಇದೆ ಎನ್ನಲಾಗಿದೆ.  ಈಗಾಗಲೇ ಹಲವಾರು ಬಾರಿ ಅಧ್ಯಕ್ಷ ಗಾದಿಗೆ ಅಶ್ವಿನ್ ಜಾಂಗಡಾ ಹೆಸರು ರೇಸ್ ನಲ್ಲಿತ್ತು. ಆದರೂ ಕೊನೆಯ ಕ್ಷಣದಲ್ಲಿ ಏನಾದರೊಂದು ವಿಷಯ ಅಡ್ಡವಾಗಿ ಕೈತಪ್ಪಿಹೋಗುತ್ತಿತ್ತು.  ಮೊದಲ ಅವಧಿ ನಂತರ ಅಶ್ವಿನ್ ಜಾಂಗಡಾ ಅಧ್ಯಕ್ಷ ಗಾದಿಗೆ ಏರುವುದು ಖಚಿತ ಎನ್ನಲಾಗಿತ್ತು. ಆದರೆ ಅವರ   ಆಯ್ಕೆಗೆ ಈ ಸಲವೂ ಅಡ್ಡಿ ಬರುತ್ತಿದೆ. ಅದು ಅವರದೇ ಸಮುದಾಯದ ಮಹೇಂದ್ರ ಚೋಪ್ರಾರ ರೂಪದಲ್ಲಿ . ಈಗಾಗಲೇ ಇವರದೇ ಸಮುದಾಯದ ಮಹೇಂದ್ರ ಚೋಪ್ರಾ ನಗರಸಭೆ ಅಧ್ಯಕ್ಷರಾಗಿರುವುದು ಅಶ್ವಿನ್ ಜಾಂಗಡಾ ಆಯ್ಕೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.   ಕಾಂಗ್ರೆಸ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ಕೆ.ಎಂ.ಸಯ್ಯದ್ ಸಹ  ರೇಸ್ ನಲ್ಲಿದ್ಧಾರೆ. ಆದರೆ ಅವರಿಗೆ ರಾಜ್ಯಮಟ್ಟದ ನಿಗಮ ಮಂಡಳಿಯ ಮೇಲೆಯೇ ಕಣ್ಣಿರುವುದರಿಂದ ನಗರಾಭಿವೃದ್ದಿ ಪ್ರಾಧಿಕಾರ ಸರಳವಾಗಿ ಸಿಕ್ಕರೆ ನೋಡೊಣ ಅಷ್ಟೇ ಎನ್ನುತ್ತಿದ್ದಾರೆ ಎನ್ನಲಾಗಿದೆ.  ನಗರದ ಅಭಿವೃದ್ದಿಯ ದೃಷ್ಟಿಯಿಂದ ಹಲವಾರು ಯೋಜನೆ, ಕನಸುಗಳನ್ನು ಇಟ್ಟುಕೊಂಡಿರುವ ಅಶ್ವಿನ್ ಜಾಂಗಡಾ ಕಾಂಗ್ರೆಸ್  ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ನನ್ನ ಆಯ್ಕೆ ಮಾಡಿದರೆ ನಗರದಲ್ಲಿ ಹಲವಾರು ಯೋಜನೆಗಳನ್ನು ಜಾರಿ ತರಲು ಪ್ರಯತ್ನಿಸುತ್ತೇನೆ. ಆ ಮೂಲಕ ಶಾಸಕರಿಗೆ , ಪಕ್ಷಕ್ಕೆ  ಹೆಸರು ಕೀರ್ತಿ ತರುವ ಕೆಲಸ ಮಾಡುತ್ತೇನೆ ಎನ್ನುತ್ತಿದ್ದಾರೆ. ಒಂದು ಅವಧಿಗಾದರೂ ಅವಕಾಶ ಮಾಡಿಕೊಡಿ ಎನ್ನುತ್ತಾರೆ. ಆದರೆ ಸೈಯದ್ ಜುಲ್ಲು ಖಾದ್ರಿಯವರನ್ನೇ ಮುಂದುವರೆಸಿದರೆ ಅಲ್ಪಸಂಖ್ಯಾತರ ಮತಗಳು ಜೊತೆಗಿರುತ್ತವೆ ಎನ್ನುವುದು ಬಸವರಾಜ್ ಹಿಟ್ನಾಳರ ಲೆಕ್ಕಾಚಾರವಾಗಿದೆ. ಉಳಿದಿರುವ ಅವಧಿಯಲ್ಲಿ ಅರ್ಧ ಅವಧಿಗಾದರೂ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ನಂತರ ಬೇಕಿದ್ದರೆ ಖಾದ್ರಿಯವರನ್ನೇ ಮುಂದುವರೆಸಿ ಎನ್ನುವ ಪ್ರಪೋಸಲ್ ನ್ನೂ ಸಹ ಪಕ್ಷದ ಹಿರಿಯರ ಮುಂದೆ ಅಶ್ವಿನ್ ಜಾಂಗಡಾ ಇಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ನಗರಾಭಿವೃದ್ದಿ ಪ್ರಾಧಿಕಾರ ಮತ್ತೊಮ್ಮೆ ಸುದ್ದಿಯಲ್ಲಿದೆ.  ಕಾಂಗ್ರೆಸ್ ಪಕ್ಷದ ಆಯ್ಕೆಯಾರಾದರೂ ಆಗಬಹುದು. ನಗರದ ಅಭಿವೃದ್ದಿಯ ದೃಷ್ಟಿಯಿಂದ ನಿಮ್ಮ ಆಯ್ಕೆ ಏನು?

Editor : Rajabakshi H.V

Please follow and like us:
error