ಸ್ವಚ್ಛಭಾರತ್ ಮಿಷನ್ – ಕೇಂದ್ರದಿಂದ ಕೊಪ್ಪಳ ಜಿಲ್ಲೆಯಲ್ಲಿ ಚಿತ್ರೀಕರಿಸಿದ ಕಿರುಚಿತ್ರ ದೆಹಲಿಯಲ್ಲಿ ಬಿಡುಗಡೆ

ಕೊಪ್ಪಳ  – (ಕ ವಾ): ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ರಾಷ್ಟ್ರದಲ್ಲೇ ಅತ್ಯುತ್ತಮ ಸಾಧನೆ ತೋರಿರುವ ಕೊಪ್ಪಳ ಜಿಲ್ಲೆಯಲ್ಲಿನ ನೈರ್ಮಲ್ಯ ಜಾಗೃತಿಯ ಕುರಿತು ಕೇಂದ್ರ ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ವತಿಯಿಂದ ತಯಾರಿಸಲಾದ ‘ಆನ್ ಓಪನ್ ಮೈಂಡ್’  ಕಿರುಚಿತ್ರವನ್ನು ಕೇಂದ್ರ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ನರೇಂದ್ರಸಿಂಗ್ ತೋಮರ್ ಅವರು ಆ. ೧೧ ರಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಚಿತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ವಿಶೇಷ. ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಇಡಿ ದೇಶದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿರುವ ಚಾಂಪಿಯನ್ ಜಿಲ್ಲೆಗಳಲ್ಲಿ ಕೇಂದ್ರದ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ವತಿಯಿಂದ ಚಿತ್ರೀಕರಣ ನಡೆಸಲು ಕಳೆದ ಕೆಲ ತಿಂಗಳ ಹಿಂದೆ ತಂಡವನ್ನು ಕಳುಹಿಸಿಕೊಟ್ಟು, ಚಿತ್ರೀಕರಿಸಲಾಗಿತ್ತು. ಈ ಪೈಕಿ ಕೇಂದ್ರ ತಂಡವು ಸಂಪೂರ್ಣ ಬಯಲು ಬಹಿರ್ದೆಸೆ ಗ್ರಾಮವನ್ನಾಗಿ ಘೋಷಿಸಲಾಗಿರುವ ಕೊಪ್ಪಳ ಜಿಲ್ಲೆ ಹಿರೇಬಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲ್ಲಾನಗರ ಗ್ರಾಮಕ್ಕೆ ತಂಡವನ್ನು ಕಳುಹಿಸಿ, ಚಿತ್ರೀಕರಣ ನಡೆಸಲಾಗಿತ್ತು. ಇದೀಗ ಕೇಂದ್ರ ಸರ್ಕಾರದಿಂದ ೨. ೫೪ ನಿಮಿಷದ ‘ಆನ್ ಓಪನ್ ಮೈಂಡ್’  ಕಿರುಚಿತ್ರವನ್ನು ತಯಾರಿಸಿ ಆಗಸ್ಟ್ ೧೧co

ರಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದು, ಕೇಂದ್ರ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಚಿತ್ರ ಬಿಡುಗಡೆ ಮಾಡಿದರು. ಅಲ್ಲಾನಗರ ಗ್ರಾಮದ ಶಾಲೆ ಮತ್ತು ಶಾಲಾ ಮಕ್ಕಳ ಚಿತ್ರೀಕರಣ, ಮನೆಯ ವೈಯಕ್ತಿಕ ಶೌಚಾಲಯ, ಗ್ರಾಮಸ್ಥರ ವಿವಿಧ ಚಟುವಟಿಕೆಗಳ ಕುರಿತು ಚಿತ್ರೀಕರಿಸಲಾಗಿತ್ತು. ಅಲ್ಲದೆ ಕಿರು ಚಿತ್ರದಲ್ಲಿ ಕುಷ್ಟಗಿ ತಾಲೂಕಿನ ಖ್ಯಾತ ಜಾನಪದ ಕಲಾವಿದ ಶರಣಪ್ಪ ವಡಿಗೇರಿ ಅವರು ಜನ ಜಾಗೃತಿ ಮೂಡಿಸುತ್ತಿರುವ ಹಾಗೂ ಗ್ರಾಮಸ್ಥರು ಸ್ವಚ್ಛತೆಯ ಮಹತ್ವವನ್ನು ಸಾರುವ ದೃಶ್ಯಾವಳಿಗಳು ಇವೆ.ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳ ಜಿಲ್ಲೆ ಕೇಂದ್ರ ಮಟ್ಟದಲ್ಲಿ ಸ್ವಚ್ಛ ಭಾರತ್ ಮಿಷನ್‌ನಡಿ ವಿವಿಧ ಕಾರ್ಯಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಹಿಂದೆ ಹುಲಿಗಿಯ ಘನ ತ್ಯಾಜ್ಯ ವಿಲೇವಾರಿ ಘಟಕ ರಾಜ್ಯದಲ್ಲಿ ಮಾದರಿಯಾಗಿ ೧ ಲಕ್ಷ ಬಹುಮಾನದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಕೇಂದ್ರ ಮಟ್ಟದಲ್ಲಿ ತಯಾರಾದ ಈ ಕಿರುಚಿತ್ರದಲ್ಲಿ ಕೊಪ್ಪಳ ಜಿಲ್ಲೆಯ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ.ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ಕೇಂದ್ರ ಸಚಿವರಾದ ನರೇಂದ್ರಸಿಂಗ್ ತೋಮರ್, ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಹಾಗೂ ಚಾಂಪಿಯನ್ ಜಿಲ್ಲೆಗಳಿಂದ ಆಯ್ಕೆಯಾದ ಅಧಿಕಾರಿಗಳು, ವಿವಿಧ ಸಚಿವರುಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಜನರ ಮನಮುಟ್ಟುವಂತೆ ಜಾನಪದ ಶೈಲಿಯ ಗೀತೆಗಳನ್ನು ರಚಿಸಿ, ಹಾಡುವ ಮೂಲಕ ಜನರ ಮನ ಪರಿವರ್ತನೆ ಮಾಡುವುದರಲ್ಲಿ ಶರಣಪ್ಪ ವಡಗೇರಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಇವರು ಕೂಡ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

Please follow and like us: