ಪುತ್ತೂರು ತಾಲೂಕಿನ ಗೋಳಿತೊಟ್ಟು ಗ್ರಾ.ಪಂ.ಆಡಳಿತ ವಾಟ್ಸ್‌ಆ್ಯಪ್ ಗ್ರೂಪ್‌’ನಲ್ಲಿ.

ಗ್ರಾಮ ಪಂಚಾಯ್ತಿಗೆ ಗ್ರಾಮಸ್ಥರ ಅಲೆದಾಟ ತಪ್ಪಿಸಲು ಪುತ್ತೂರು ತಾಲೂಕಿನ ಗೋಳಿತೊಟ್ಟು ಗ್ರಾಮ ಪಂಚಾಯ್ತಿಯು ವಿನೂತನ ಪ್ರಯೋಗದ ಮೂಲಕ ಗಮನ ಸೆಳೆದಿದೆ. ಇದುವರೆಗೆ ಗ್ರಾಮಸ್ಥರ ದೂರು ದುಮ್ಮಾನಗಳಿಗೆ ವೇದಿಕೆಯಾಗಿ ಬಳಸುತ್ತಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನ್ನು ಇದೀಗ ಪಂಚಾಯ್ತಿಯ ಸುಗಮ ಹಾಗೂ ಕ್ಷಿಪ್ರ ಆಡಳಿತಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಗ್ರಾಮ ಪಂಚಾಯ್ತಿಯಲ್ಲಿ ಸರ್ಕಾರಿ ಯೋಜನೆಗಳು, ಸುತ್ತೋಲೆಗಳು ಮೊದಲು ಜನರ ಬಳಿಗೆ ತಲುಪುವುದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ. ಇಲ್ಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅದಕ್ಕೆಂದೇ ‘ಗೋಳಿತೊಟ್ಟು ಪಂಚಾಯ್ತಿ’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದಾರೆ. ಈಗ ಈ ವಾಟ್ಸ್‌ಆ್ಯಪ್ ಗ್ರೂಪ್‌ನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಮನೆಗಳನ್ನು ತಲುಪುವಂತೆ ನೋಡಿಕೊಳ್ಳಲಾಗಿದೆ. ಗೋಳಿತೊಟ್ಟು ಗ್ರಾಮ ಪಂಚಾಯ್ತಿಯು ಕೊಣಾಲು ಮತ್ತು ಆಲಂತಾಯ ಗ್ರಾಮಗಳನ್ನು ಒಳಗೊಂಡಿದೆ. ಈ ಮೂರು ಗ್ರಾಮwwwಗಳಲ್ಲಿ ಸುಮಾರು ೧,೮೦೦ ಮನೆಗಳು ಇವೆ. ಈ ಎಲ್ಲ ಮನೆಗಳಲ್ಲಿ  ಮನೆಯವರಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಇದೆ. ಇದನ್ನು ತಿಳಿದುಕೊಂಡ ಗ್ರಾಮ ಪಂಚಾಯ್ತಿ ಆಡಳಿತ ಎಲ್ಲರನ್ನು ಈ ಗ್ರೂಪ್‌ಗೆ ಸೇರಿಸುವ ನಿರ್ಧಾರವನ್ನು ಕೈಗೊಂಡಿತ್ತು. ಈಗ ಪ್ರತಿಯೊಬ್ಬರ ಮನೆಯಿಂದ ಮೊಬೈಲ್ ನಂಬರನ್ನು ಈ ಗ್ರೂಪ್‌ಗೆ ಸೇರಿಸಲಾಗುತ್ತಿದೆ. ಅಲ್ಲದೆ ಗ್ರಾಮದೊಳಗಿನ ಪರಿಚಯಸ್ಥರಿದ್ದರೆ, ಅಂತಹವರನ್ನೂ ಗ್ರೂಪಿಗೆ ಸೇರಿಸಲು ಅನುಕೂಲವಾಗುವಂತೆ ಹಲವು ಮಂದಿಗೆಯನ್ನು ಗ್ರೂಪ್ ಎಡ್ಮಿನ್ ಮಾಡಲಾಗಿದೆ. ಇದರಿಂದ ಆದಷ್ಟು ಬೇಗನೆ ಎಲ್ಲ ಗ್ರಾಮಸ್ಥರನ್ನು ಈ ಗ್ರೂಪ್‌ನೊಳಗೆ ತರುವುದು ಸುಲಭವಾಗುತ್ತದೆ ಎಂಬುದು ಪಂಚಾಯ್ತಿ ಆಡಳಿತದ ಲೆಕ್ಕಾಚಾರ. ಈ ಗ್ರೂಪ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ವಿವರ ಇರುತ್ತದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿಗಳ ವಿವಿಧ ಸವಲತ್ತುಗಳ ವಿವರಗಳನ್ನು ಕಾಲಕಾಲಕ್ಕೆ ಪೋಸ್ಟ್ ಮಾಡಲಾಗುತ್ತದೆ. ವಿವಿಧ ಇಲಾಖೆಗಳ ಯೋಜನೆಗಳನ್ನೂ ತಿಳಿಸಲಾಗುತ್ತದೆ. ಪಂಚಾಯ್ತಿ ಸಭೆಯ ಕರೆಯೋಲೆಯೂ ಇರುತ್ತದೆ. ಇದು ಗ್ರಾಮಸ್ಥರಿಗೆ ಅತ್ಯಂತ ಕ್ಷಿಪ್ರವಾಗಿ ತಲುಪುತ್ತದೆ. ಜಿ.ಪಂ. ತಾ.ಪಂ. ಹಾಗೂ ಗ್ರಾ.ಪಂ. ಸವಲತ್ತುಗಳ ಬಗ್ಗೆ ಜನತೆಗೆ ಸುಲಭವಾಗಿ ಮಾಹಿತಿ ನೀಡಲು ವಾಟ್ಸ್‌ಆ್ಯಪ್ ಗ್ರೂಪ್‌ನ್ನು ಬಳಸಲಾಗುತ್ತದೆ. ಈ ಗ್ರೂಪ್‌ಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊರಗಿನವರನ್ನು ಸೇರಿಸುತ್ತಿಲ್ಲ. ಕೇವಲ ಗ್ರಾಮ ಪಂಚಾಯ್ತಿ ವ್ಯಾಪ್ತಿಗಷ್ಟೆ ಸೀಮಿತಗೊಳಿಸಲಾಗಿದೆ.