ರಾಜ್ಯದ ವಿವಿಧೆಡೆ ಹಕ್ಕಿಜ್ವರ ಪ್ರಕರಣಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣ ಕಂಡುಬಂದಿಲ್ಲ. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ. ಆದಾಗ್ಯೂ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಔಷಧ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.
ಆತಂಕ ಭಯ ಬೇಡ : ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್೫ ಎನ್೧ ವೈರಸ್ನಿಂದ ಹರಡುವ ಸಾಂಕ್ರಾಮಿಕ ಖಾಯಿಲೆ ಆಗಿದ್ದು, ಇದು ಟರ್ಕಿಕೋಳಿ, ಗಿನಿಕೋಳಿ, ಬಾತುಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗೆ ಇದು ಹರಡುತ್ತದೆ. ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ರೋಗ ಹರಡಲು ಕಾರಣ : ರೋಗಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದ, ಸೋಂಕು ಇರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ, ಕೋಳಿಗಳ ಹಿಕ್ಕೆಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು, ಕಲುಷಿತಗೊಂಡ ನೀರು ಸೇವನೆಯಿಂದ, ಕೆಲವು ಸಂದರ್ಭಗಳಲ್ಲಿ ಗಾಳಿ ಮೂಲಕವೂ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ.
ರೋಗ ಲಕ್ಷಣಗಳು : ಹಕ್ಕಿಜ್ವರದ ಲಕ್ಷಣಗಳೆಂದರೆ, ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ತೀವ್ರ ನೋವು, ಆಯಾಸ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ವಾಂತಿ ಮತ್ತು ಭೇದಿ ಆಗಬಹುದು, ಉಸಿರಾಟದಲ್ಲಿ ತೊಂದರೆ ಕಾಣಿಸುವುದು.
ಮುನ್ನೆಚ್ಚರಿಕೆ ಕ್ರಮಗಳು : ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿಜ್ವರದ ಸೋಂಕು ಹರಡದಂತೆ ತಡೆಯಬಹುದಾಗಿದೆ. ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು. ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಸೋಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು. ಹಕ್ಕಿಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು. ಹಕ್ಕಿ ಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ, ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳಬೇಕು. ಅಲ್ಲದೆ ಮುಂದಿನ ನಾಲ್ಕು ದಿನಗಳವರೆಗೆ ತಮ್ಮ ದಏಹದ ಉಷ್ಣಾಂಶದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು. ಒಂದು ವೇಳೆ ಜ್ವರದ ಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗೊಳನ್ನು ಸೋಪಿನಿಂದ ತೊಳೆಯಬೇಕು.
ಹಕ್ಕಿ ಜ್ವರ ಕುರಿತಂತೆ ಪಶುಸಂಗೋಪನೆ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೆಲವು ಕೋಳಿ ಫಾರಂಗಳಿಗೆ ಭೇಟಿ ನೀಡಿ ಪರಿಶಿಲಿಸಲಾಗಿದ್ದು, ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಕ್ಕಿ ಜ್ವರ ಕುರಿತು ಜನರು ಆತಂಕಪಡುವ ಅಗತ್ಯವಿಲ್ಲ
Please follow and like us: