ಮುರುಳೀಧರನ್ ವಿವಾದಗಳಿಗೆಲ್ಲ ಭಾವುಕರಾಗಿ ಕೊಟ್ಟ ಉತ್ತರವೇನು ಗೊತ್ತಾ ?

ನಾನು ಏಳು ವರ್ಷದವನಾಗಿದ್ದಾಗ ನನ್ನ ತಂದೆಯನ್ನು ಇರಿಯಲಾಗಿತ್ತು, ನನ್ನ ಸಂಬಂಧಿಗಳನ್ನು ಕೊಲ್ಲಲಾಗಿತ್ತು.‌ ಎಷ್ಟೋ ಬಾರಿ ಬದುಕು ಬೀದಿಗೆ ಬಿದ್ದಿತ್ತು. ಯುದ್ಧದ ಭೀಕರತೆ ನನಗೆ ಎಳವೆಯಲ್ಲೇ ಅರ್ಥವಾಗಿತ್ತು. ಮೂವತ್ತು ವರ್ಷಗಳ ಯುದ್ಧದ ಸುದೀರ್ಘ ಇತಿಹಾಸ. ಕಳೆದುಕೊಳ್ಳುವ ನೋವು ಏನು ಎಂಬುದು ನನಗೆ ಚೆನ್ನಾಗೇ ಗೊತ್ತು….

ಹೀಗೆ ಹೇಳುತ್ತ ಹೋಗುತ್ತಾರೆ ಮುತ್ತಯ್ಯ ಮುರುಳೀಧರನ್ ಎಂಬ ಕ್ರಿಕೆಟ್ ಮಾಂತ್ರಿಕ. 800 ಎಂಬ ಹೆಸರಿನಲ್ಲಿ ಅವರ ಬಯೋಪಿಕ್ ಸಿನಿಮಾ ಬರುತ್ತಿದೆ. ಸಿನಿಮಾದಲ್ಲಿ ಮುರುಳಿ ಪಾತ್ರವನ್ನು ಅಭಿನಯಿಸುತ್ತಿರುವುದು ಈ ಕಾಲದ ಇಂಡಿಯಾದ ಬಹುಮುಖ್ಯ ಪ್ರತಿಭಾವಂತ ನಟ ವಿಜಯ್ ಸೇತುಪತಿ. ಪೋಸ್ಟರ್ ನಲ್ಲಿ ವಿಜಯ್ ಸೇತುಪತಿ ಶ್ರೀಲಂಕಾ ಜೆರ್ಸಿ ಹಾಕಿರುವುದು ಹಲವರಿಗೆ ಪಥ್ಯವಾಗಿಲ್ಲ‌. ಅವರಿಗೆ ಮುರುಳೀಧರನ್ ಮೇಲೆ ಹಲವು ತಕರಾರುಗಳಿವೆ. ಈ ತಕರಾರುಗಳಿಗೆ ಮುರುಳೀಧರನ್ ಅವರೇ ಉತ್ತರ ಕೊಟ್ಟಿದ್ದಾರೆ, ಕೇಳಿಸಿಕೊಳ್ಳುವ ಕಿವಿಗಳು ನಮಗೆ ಇರಬೇಕಷ್ಟೆ.

ಶ್ರೀಲಂಕಾದಲ್ಲಿ ಟೀ ಪ್ಲಾಂಟೇಷನ್ ಗಳಲ್ಲಿ ಕೆಲಸ ಮಾಡಲು ಹತ್ತೊಂಭತ್ತನೇ ಶತಮಾನದಲ್ಲಿ ತಮಿಳುನಾಡಿನಿಂದ ವಲಸೆ ಹೋದ ದೊಡ್ಡ ತಮಿಳು ಜನವರ್ಗವಿದೆ. ನಾನು ಅಲ್ಲಿಂದ ಬಂದವನು.‌ ಅಪ್ಪ ಟೀ ಪ್ಲಾಂಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಯುದ್ಧದ ಕರಾಳತೆಗೆ ಬಲಿಯಾದವರು ನಾವು. ಶಾಲೆಗೆ ಹೋದಾಗ ಇವತ್ತು ಬಂದ ಸ್ನೇಹಿತ ನಾಳೆ ಬರುವನೋ ಇಲ್ಲವೋ ಖಾತ್ರಿಯಿರಲಿಲ್ಲ. 1970ರ ಆದಿಯಲ್ಲಿ ಹಿಂಸಾಚಾರಗಳು ಶುರುವಾದವು. ಸರಣಿ ಬಾಂಬ್ ಸ್ಫೋಟಗಳು ನಡೆದವು.‌ ಹಿಂಸಾತ್ಮಕ ಪ್ರತಿಭಟನೆಗಳು ಆರಂಭಗೊಂಡವು. ಎಲ್ಲವನ್ನೂ‌ ನಾನು ಕಣ್ಣಾರೆ ನೋಡಿದ್ದೇನೆ, ಹಿಂಸೆಯ ತೀವ್ರತೆಯನ್ನು ಅನುಭವಿಸಿದ್ದೇನೆ.

2009 ನನ್ನ ಬದುಕಿನ ಮಹತ್ವದ ವರ್ಷವೆಂದು ಹೇಳಿದ್ದು ನಿಜ. ಅದನ್ನು ತಿರುಚಲಾಗುತ್ತಿದೆ. ಯುದ್ಧ ಕೊನೆಗೊಳ್ಳುವುದು ಒಳ್ಳೆಯದಲ್ಲವೇ? 2009ರಲ್ಲಿ ಯುದ್ಧ ಕೊನೆಗೊಂಡಿತು. ಅಲ್ಲಿಂದ ನಾನು ಈ ಹೇಳಿಕೆ ನೀಡಿದ 2019ರವರೆಗೆ ಯಾವ ಜೀವಹಾನಿಯೂ ಆಗಲಿಲ್ಲ. ಶಾಂತಿ ನೆಲೆಸಿದ್ದು ಒಳ್ಳೆಯದಲ್ಲವೇ? ಯಾವ ಮುಗ್ಧ ಜೀವವನ್ನು ಕೊಲ್ಲುವುದೂ ತಪ್ಪು. ಅದನ್ನು ನಾನು ಎಂದಿಗೂ ಸಮರ್ಥಿಸಿಕೊಂಡಿಲ್ಲ, ಸಮರ್ಥಿಸಿಕೊಳ್ಳುವುದೂ ಇಲ್ಲ.

ಯುದ್ಧದ ಭೀಕರತೆಯಿಂದ ನಾನು ನನ್ನವರನ್ನು ಕಳೆದುಕೊಂಡಿದ್ದೇನೆ.‌ ನೊಂದ ಜೀವಗಳಿಗೆ ನಾನು ಏನೇನನ್ನು ಮಾಡಿದ್ದೇನೆಂದು ಹೇಳಿಕೊಳ್ಳುವುದು ಮುಜುಗರದ ವಿಷಯ. ಆದರೆ ಅನಿವಾರ್ಯವಾಗಿ ನಾನು ಏನೇನನ್ನು ಮಾಡಿದ್ದೇನೋ ಎಲ್ಲವನ್ನೂ ಇಂದು ಹೇಳಿಕೊಳ್ಳುತ್ತಿದ್ದೇನೆ.
ನಾನು ಇಂಡಿಯಾದಲ್ಲಿ ಹುಟ್ಟಿದ್ದರೆ, ಇಂಡಿಯಾ ತಂಡಕ್ಕಾಗಿಯೇ ಆಡುತ್ತಿದ್ದೆ. ಶ್ರೀಲಂಕಾದಲ್ಲಿ ಹುಟ್ಟಿದ್ದಕ್ಕಾಗಿ ಶ್ರೀಲಂಕಾ ತಂಡಕ್ಕೆ ಆಡಿದ್ದೇನೆ. ಅದರಲ್ಲಿ ನನ್ನ ತಪ್ಪೇನಿದೆ ಹೇಳಿ? ನಾನು ಶ್ರೀಲಂಕನ್ ತಮಿಳನಾಗಿ ಹುಟ್ಟಿದ್ದೇ ನನ್ನ ತಪ್ಪೇ?

ಹೌದು, ಶ್ರೀಲಂಕನ್ ತಮಿಳರಿಗೆ ಕೊಂಚ ಕೀಳರಿಮೆ ಇದೆ ಎಂದು ನಾನು ಹೇಳಿದ್ದು ನಿಜ. ಅದು ನನ್ನದೇ ಅನುಭವದ ಮಾತು. ಯಾವುದೇ ದೇಶದ ಅಲ್ಪಸಂಖ್ಯಾತ ಸಮುದಾಯ ಈ ಬಗೆಯ ಕೀಳರಮೆ ಹೊಂದುವುದು ಸಹಜ. ನನಗೂ ಕೀಳರಿಮೆ ಇತ್ತು. ಶಾಲಾದಿನಗಳಲ್ಲಿ ಕ್ರಿಕೆಟ್ ಹುಚ್ಚು. ಅದನ್ನು ನನ್ನನ್ನು ಎಲ್ಲಿಗೋ ತಂದು ನಿಲ್ಲಿಸಿತು. ನೀವು ನಿಮ್ಮ ಕೀಳರಿಮೆಯನ್ನು ಕಿತ್ತೆಸೆದು ನಿಮ್ಮ ಪ್ರತಿಭೆಯಲ್ಲಿ ವಿಶ್ವಾಸವಿಡಿ ಎಂದು ಹೇಳಿದ್ದೇನೆ. ಅದರಲ್ಲೂ ತಪ್ಪು ಹುಡುಕಿದರೆ ನಾನೇನು ಮಾಡಲಿ?

ಮುರುಳೀಧರನ್ ವಿವಾದಗಳಿಗೆಲ್ಲ ಹೀಗೆ ಭಾವುಕರಾಗಿ ಉತ್ತರ ಕೊಡುತ್ತ ಹೋಗುತ್ತಾರೆ. ಇದೆಲ್ಲವನ್ನು ನಾನು ವಿವಾದ ಸೃಷ್ಟಿಸಿದವರಿಗಾಗಿ ಹೇಳುತ್ತಿಲ್ಲ, ನನ್ನನ್ನು ಇಷ್ಟಪಡುವ ಜನರು, ಈ ವಿವಾದದ ವಿಷಯದಲ್ಲಿ ತಟಸ್ಥರಾಗಿರುವವರಿಗಾಗಿ ಹೇಳುತ್ತಿರುವುದಾಗಿ ಮುರುಳಿ ಹೇಳುತ್ತಾರೆ.

ವಿಜಯ್ ಸೇತುಪತಿ ಮೇಲೆ ಟ್ವಿಟರ್ ನಲ್ಲಿ #ShameOnVijaySethupathi ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿ ದಾಳಿ ನಡೆಸುತ್ತಿರುವವರಿಗೆ ಇದೆಲ್ಲ ಅರ್ಥವಾಗಬಹುದಾ?

#ISupportVijaySethupathi

Please follow and like us:
error