ಮುಂಗಾರು ಮಳೆ-2 ಚಿತ್ರ ವಿಮರ್ಶೆ

ಸಾಧಾರಣ “ಮಳೆ”

ಮರಭೂಮಿಗೆ ಹೋಗಿ ಭರಪೂರ ಮಳೆ ತರ್ತಿನಿ ಅಂದಂಗಾಯ್ತು ಪ್ರೀತಂ ಕಥೆ!

mungaru_male_film_review
ಎರಡನೇ ಮುಂಗಾರು ಮಳೆ ಸುರಿಯುವ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದ ನಿರ್ದೇಶಕ ಪ್ರೀತಂ ಗುಬ್ಬಿ, ನಿರಾಸೆಯನ್ನೇನೂ ಮಾಡಿಲ್ಲ. ಆದರೆ ಮಳೆ ಭಾರಿ ಅನಿಸಲಿಲ್ಲ. ಅಲ್ಲಲ್ಲಿ ಹೃದಯ ಭಾರ ಅನಿಸುತ್ತೆ. ಒಮ್ಮೊಮ್ಮೆ ತಲೆಯೂ ಭಾರವಾಗುತ್ತೆ.
ನಾಯಕ ಪ್ರೀತಂ ಈಗಿನ ಜನರೇಷನ್ ನ ರಿಚ್ ಫ್ಯಾಮಿಲಿ ಹುಡುಗ. ಮಗನ ಉನ್ಮಾದದ ಕ್ರೇಜ್ ಗೆ ಕೋಟಿಗಟ್ಟಲೇ ಹಣ ಸುರಿಯೋ ಅಪ್ಪಾನೂ ಸಹ ಕ್ರೇಜೀನೆ.
ಮೊದಲರ್ಧದಲ್ಲಿ ಸಿಕ್ಕಾಪಟ್ಟೆ ಸ್ಪೀಡ್ ಆಗಿರೋ ಸಿನಿಮಾ, ನಂತರ ನಾಯಕಿಯ ಕುಟುಂಬದ ಹಿನ್ನೆಲೆಗೆ ಹೊರಳಿದಾಗ ಹಳೇ ಮುಂಗಾರು ಮಳೆಯನ್ನ ನೆನಪಿಸುತ್ತೆ. ಇಲ್ಲಿ ದೇವದಾಸ್ ಇರದಿದ್ದರೂ ಹಾಳಾದ ಹಳೇ ನೆನಪು ಕಾಡುತ್ತೆ ಕಣ್ರಿ. ಜಲಪಾತದಂಥ ಸೀನು, ಜೇನಿನಂಥ ಹುಡುಗಿ, ಇವನ ಉನ್ಮಾದ, ಬ್ರೇಕಪ್, ಬೋರಿಂಗ್ ಎಲ್ಲಾನು ಮಿಕ್ಸ್ ಮಾಡಿ ಜಾಮೂನಿಗೆ ಒಗ್ಗರಣೆ ಹಾಕಿದಂಗಿದೆ.
ಯುರೋಪ್ ನ ತಾಣಗಳು, ರಾಜಸ್ಥಾನದ ಲೋಕೇಷನ್ನು, ಮಡಿಕೇರಿ ರಸ್ತೆ, ಮೈನವಿರೇಳಿಸೋ ಜಲಪಾತ, ಜುಂ ಎನ್ನಿಸುವ ಅಪಘಾತದ ದೃಶ್ಯ ಸೆರೆ ಹಿಡಿದಿರೋ ಕ್ಯಾಮರಾ ಕಣ್ಣಿಗೆ ಹ್ಯಾಟ್ಸಾಫ್.
ಮೊದಲೆಲ್ಲ ಜಾಲಿ ಎನಿಸೋ ಸಿನಿಮಾ ಹೋಗ್ತಾ ಹೋಗ್ತಾ ಕಣ್ಣಂಚು ತೇವವಾಗುವಂತೆ ಮಾಡುತ್ತೆ. ರವಿಚಂದ್ರನ್ ಮಾಣಿಕ್ಯದ ನಂತರ ಮತ್ತೊಮ್ಮೆ ಅಪ್ಪನಾಗಿ ಇಷ್ಟವಾಗ್ತಾರೆ. ಡೈಲಾಗ್ ನಿರೀಕ್ಷೆ ಇಟ್ಕೊಂಡು ಸಿನಿಮಾಗೆ ಬಂದವರಿಗೆ ಸ್ವಲ್ಪ ಬೇಸರ ಆಗುತ್ತೆ. ಆದರೂ ಅಲ್ಲಲ್ಲಿ, ಆಗಾಗ ಕಚಗುಳಿಯಂಥ ಮಾತುಗಳು ಖುಷಿ ಕೊಡುತ್ತವೆ.
ಒತ್ತಾಯ ಪೂರ್ವಕವಾಗಿಯೋ, ಅಥವಾ ಅಭಿಮಾನಿಗಳ ಒತ್ತಾಸೆಗೋ ಒಂದು ಫೈಟ್ ಸಹ ಇದೆ. ಅರ್ಜುನ್ ಜನ್ಯ ಸಂಗೀತದ ಒಂದು ಹಾಡಿಗೆ ಕಾಡುವ ಗುಣ ಇದೆ.
ಮೋಡ ಕವಿದ ವಾತಾವರಣ ಕಂಡು ಭಾರಿ ಮಳೆ ಸುರಿಯುವ ಲಕ್ಷಣಗಳಿದ್ದವು. ಆದರೆ ಮೋಡಗಳು ಸರಿದು ಸಾಧಾರಣ ಮಳೆ ಸುರಿದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡರೆ ಎತ್ತರದ ಪ್ರದೇಶದಲ್ಲಿನ ನೀರು ಹರಿಯುತ್ತಿದೆ. ಮೋಡ ಬಿತ್ತನೆಗೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ಆದರೆ ಲಾಭದ ಗ್ಯಾರಂಟಿ ಇಲ್ಲ.

ಮುಂದೇನಾಗುತ್ತೋ ಯಾರಿಗ್ಗೊತ್ತು, ಯಾಕಂದ್ರೆ ಹಳೆ ಮುಂಗಾರು, ವಾರದ ನಂತರವೇ ಸುರಿದದ್ದು..!

ರೇಟಿಂಗ್: 10ಕ್ಕೆ 5.5

-ಚಿತ್ರಪ್ರಿಯ ಸಂಭ್ರಮ್.

Leave a Reply