ಕೊರೋನಾ ವಿಪತ್ತು : ಪುಟ್ ಪಾತ್ ನಲ್ಲಿ ಇಡ್ಲಿ,ವಡಾ ಮಾರುತ್ತಿರುವ ಖಾಸಗಿ ಶಾಲೆಯ ಪ್ರಿನ್ಸಿಪಾಲ್

ಕೊರೋನಾ ವೈರಸ್ ತಂದ ವಿಪತ್ತು ಮತ್ತು ಅದರ ಬೆನ್ನಿಗೇ ಹೇರಲ್ಪಟ್ಟ ಲಾಕ್ ಡೌನ್ ಅಸಂಖ್ಯ ಜನರ ಬದುಕನ್ನು ಅತಂತ್ರಗೊಳಿಸಿದೆ. ಬೀದಿಗೆ ಬಿದ್ದು ಇದ್ದ ಬಿದ್ದ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು, ಮಕ್ಕಳು ಮುದುಕರನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು, ಗರ್ಭಿಣಿ ಹೆಂಗಸರನ್ನು ಪಕ್ಕದಲ್ಲಿ ನಡೆಸುತ್ತ ಉರಿಬಿಸಿಲಲ್ಲಿ ಸಾವಿರಾರು ಕಿಮಿ ದೂರದ ತಮ್ಮೂರುಗಳಿಗೆ ಹೊರಟ ವಲಸೆ ಕಾರ್ಮಿಕರ ಗೋಳಾಟವನ್ನು ದೇಶ ಕಣ್ಣಾರೆ ಕಂಡಿತು! ಆದರೆ ಕಣ್ಣಿಗೆ ಕಾಣದ ದುರಂತಗಳು ಅದೆಷ್ಟಿವೆಯೋ ಯಾರೂ ಕಾಣರು. ಇಂತಹವರಲ್ಲಿ ಖಾಸಗೀ ಶಾಲೆ ಕಾಲೇಜಿನಲ್ಲಿ ಶಿಕ್ಷಕರಾಗಿ ದುಡಿಯುವ ಜನವರ್ಗ ಒಂದು.

ಖಾಸಗೀ ಶಾಲೆಗಳೆಂದರೆ ಹೆಚ್ಚೂಕಡಿಮೆ ಇಂಗ್ಲೀಷ್ ಮಾಧ್ಯಮ ಶಾಲೆಗಳೆಂದೇ ಅರ್ಥ. ಮಾತೃಭಾಷೆಗೆ ಬದಲು ಇಂಗ್ಲೀಷು ಮಾಧ್ಯಮದಲ್ಲಿ ಕಲಿತರೆ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿ ತೀರಾ ಬಡವರೂ ಇಂದು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಕಳಿಸುತ್ತಾರೆ. ಇಂತಹ ಅನೇಕರು ಇಂದು ಲಾಕ್ ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡು ಅಥವಾ ಉದ್ಯೋಗ ಇದ್ದರೂ ಸಂಬಳ ಇಲ್ಲದೆ ತಮ್ಮ ಮಕ್ಕಳ ಶಾಲೆ ಕಾಲೇಜು ಫೀಸು ಕಟ್ಟಲಾರದಂತಹ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಫೀಸು ಕಟ್ಟದಿದ್ದರೆ ಶಾಲೆ ಕಾಲೇಜುಗಳು ತಮ್ಮ ಶಿಕ್ಷಕರುಗಳಿಗೆ ಸಂಬಳ ಕೊಡಲಾರವು. ಇಂತಹ ಶಿಕ್ಷಕರೀಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ!

ತೆಲಂಗಾಣದ ಕಮ್ಮಂನ ಮಿಲ್ಲೇನಿಯಂ ಇಂಗ್ಲೀಷ್ ಸ್ಕೂಲಿನ ಪ್ರಿನ್ಸಿಪಾಲ್ ಮರ್ಗಾಣಿ ರಾಮ್ ಬಾಬು(ಚಿತ್ರದಲ್ಲಿರುವವರು) ಅಂತಹವರಲ್ಲೊಬ್ಬರು. ಲಾಕ್ ಡೌನ್ ನಿಂದಾಗಿ ಇವರ ಶಾಲೆ ಮುಚ್ಚಿ ಉದ್ಯೋಗ ಇಲ್ಲದಾಗಿದೆ. ಮನೆಯಲ್ಲಿ ಹೆಂಡತಿ, ಇಬ್ಬರು ಮಕ್ಕಳು ಹಾಗೂ ತಾಯಿಯ ಹೊಟ್ಟೆಪಾಡು ನಡೆಯಬೇಕು. ಬೇರಾವ ಆದಾಯ ಮೂಲವಿಲ್ಲದ ರಾಮ್ ಬಾಬು 2000 ರುಪಾಯಿ ಕೊಟ್ಟು ಒಂದು ತಳ್ಳು ಗಾಡಿ ಖರೀದಿಸಿ ಗಂಡ ಹೆಂಡತಿ ಅದರಲ್ಲಿ ಇಡ್ಳಿ, ವಡೆ, ದೋಸೆ ಮಾರಿ ದಿನಕ್ಕೆ ಖರ್ಚು ಕಳೆದು 200 ರುಪಾಯಿ ಸಂಪಾದಿಸಿ ಸಂಸಾರ ದೂಡುತ್ತಿದ್ದಾರೆ. ರಾಂಚಿಯ ಶಿಶು ವಿದ್ಯಾಮಂದಿರದಲ್ಲಿ 8 ನೇ ತರಗತಿಯ ಟೀಚರ್ ಆಗಿದ್ದ ಲಗನ್ ಲಾಲ್ ಮಹತೋ ಏಪ್ರಿಲ್ ತಿಂಗಳಿಂದ ಸಂಬಳವಿಲ್ಲದೆ ಭತ್ತದ ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಪಟ್ನಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕುಟುಂಬ ನಡೆಸುತ್ತಿರುವ ಶಿಕ್ಷಕ ಅಭಿಶೇಕ್ ರಂಜನ್ ಗೆ 18000 ರುಪಾಯಿ ಸಂಬಳ ಬರುತ್ತಿತ್ತು. ಏಪ್ರಿಲ್ ನಿಂದ ಈತನ ಶಾಲೆ ಅರ್ಧ ಸಂಬಳ ಕೊಡಲು ಶುರು ಮಾಡಿ ಈತ ಈಗ ಆನ್ ಲೈನ್ ಟೂಷನ್ ಹೇಳಿಕೊಟ್ಟು ಒಂದಷ್ಟು ಎಕ್ಸ್ಟ್ರಾ ಗಳಿಸಲು ಅವಕಾಶ ಹುಡುಕುತ್ತಿದ್ದಾರೆ.

ಮುಂದೊಂದು ದಿನ ಲಾಕ್ ಡೌನ್ ಹೋಗಿ ಶಾಲೆಕಾಲೇಜುಗಳು ಶುರುವಾಗಬಹುದು. ಆದರೆ ಹೆತ್ತವರ ಹಣಕಾಸಿನ ಪರಿಸ್ಥಿತಿ ತಕ್ಷಣವೇ ಉತ್ತಮಗೊಳ್ಳುವ ಸಾಧ್ಯತೆ ತೀರಾ ಕಡಿಮೆ. ಅಷ್ಟರೊಳಗೆ ವಿದ್ಯಾರ್ಥಿಗಳು ಖಾಸಗೀ ಶಾಲೆ ಬಿಟ್ಟು ಸರ್ಕಾರಿ ಶಾಲೆಗಳನ್ನು ಸೇರಿದರೆ ಆನೇಕ ಖಾಸಗೀ ಶಾಲೆಗಳು ಮುಚ್ಚಿ ಅಥವಾ ಶಿಕ್ಷಕರ ಸಂಖ್ಯೆ ಕಡಿತಗೊಂಡು ಕಾಯಂ ಆಗಿ ಉದ್ಯೋಗ ಕಳೆದುಕೊಳ್ಳುವ ಭಯವೂ ಆನೇಕರನ್ನು ಕಾಡುತ್ತಿದೆ!

Panju Gangolli

Please follow and like us:
error