ಆರೆಸ್ಸೆಸ್‌ ಬದಲಾದೀತೇ?- ಸನತ್ ಕುಮಾರ್ ಬೆಳಗಲಿ

ಆರೆಸ್ಸೆಸ್‌ಗೆ ಹಿಂದುತ್ವದ ಏಕತೆ ಬೇಕು. ಯಾಕೆಂದರೆ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಶೇ.2ರಷ್ಟು ಇರುವ ಪುರೋಹಿತಶಾಹಿಯ ಚಾಕರಿ ಮಾಡಲು ದಲಿತರು ಮತ್ತು ಹಿಂದುಳಿದ ವರ್ಗದವರು ಹಿಂದೂ ಧರ್ಮದಲ್ಲಿ ಇರಬೇಕು. ಅವರನ್ನು ದುಡಿಸಿಕೊಂಡು ತಾವು ಸುಖವಾಗಿ ಇರುವುದು ಈ ಪರಾನ್ನಪುಷ್ಟರ ವಾದ.

modi-rss-prayer ಗುಜರಾತ್‌ನಲ್ಲಿ ಸತ್ತ ದನಗಳ ಚರ್ಮ ಸುಲಿಯುತ್ತಿದ್ದ ದಲಿತ ಯುವಕರ ಮೇಲೆ ಸಂಘ ಪರಿವಾರದ ಗೋರಕ್ಷಕರು ಎಂಬ ನರಭಕ್ಷಕರು ಮಾರಣಾಂತಿಕ ಹಲ್ಲೆ ಮಾಡಿ ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದರೆ, ಮುಂಬೈಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕಟ್ಟಿಸಿದ ಕಟ್ಟಡವನ್ನು ಅಲ್ಲಿನ ಬಿಜೆಪಿ ಸರಕಾರ ನೆಲಸಮಗೊಳಿಸಿದೆ. ಬಿಎಸ್ಪಿ ನಾಯಕಿ ಮಾಯಾವತಿ ಅವರ ಬಗ್ಗೆ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ತನ್ನ ಹೊಲಸು ನಾಲಗೆಯಿಂದ ಅತ್ಯಂತ ಕೆಟ್ಟ ಭಾಷೆಯಲ್ಲಿ ಟೀಕಿಸಿದ್ದಾನೆ.

ಈ ಎಲ್ಲಾ ಘಟನೆಗಳ ನಂತರ ದಲಿತ ಹಿಂದುಳಿದ ಸಮುದಾಯದ ಜನ ಉಳಿದೆಲ್ಲ ಪ್ರಗತಿಪರ ಎಡಪಂಥೀಯ ಸಂಘಟನೆಗಳ ಜೊತೆ ಸೇರಿ ಹೋರಾಟಕ್ಕೆ ಇಳಿದರು. ಗುಜರಾತ್‌ನಲ್ಲಂತೂ ಸತ್ತ ದನಗಳ ಅಸ್ಥಿಪಂಜರವನ್ನು ದಲಿತರು ಸರಕಾರಿ ಕಚೇರಿ ಎದುರು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೆಲ್ಲ ನಡೆದರೂ ಪ್ರಧಾನಿ ಮೋದಿ ಮೌನ ಮುರಿಯಲಿಲ್ಲ.

ಇವೆಲ್ಲದರ ನಡುವೆ ಎಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ, ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ತುಗಳು ತುಂಬಾ ತಡವಾಗಿ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿ ದವು. ಈ ಹಲ್ಲೆ ನಡೆದಿದ್ದು ಜುಲೈ 11ರಂದು. ಈ ಸಂಘಟನೆಗಳು ಖಂಡಿಸಿ ಹೇಳಿಕೆ ನೀಡಿದ್ದು ಜುಲೈ 22ರಂದು. ಈ ಖಂಡನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕೆಲ ಪ್ರಗತಿ ಪರ ಗೆಳೆಯರು ಕಡೆಗೂ ಸಂಘ ಪರಿವಾರ ಖಂಡಿಸಿತು ಎಂದು ಸಮಾಧಾನಪಟ್ಟರು.

ಆದರೆ, ಸಂಘ ಪರಿವಾರದ ಸಂಘಟನೆಗಳ ಈ ಖಂಡನೆ ಪ್ರಾಮಾಣಿಕವೇ? ಈ ಹಲ್ಲೆಗೆ ಆರೆಸ್ಸೆಸ್ ರೂಪಿಸಿದ ಮನೋಭಾವ ಕಾರಣ ಅಲ್ಲವೇ? ಮೊದಲು ಹಲ್ಲೆ ಮಾಡಿಸಿ, ಪ್ರತಿರೋಧ ಬಂದ ತಕ್ಷಣ ವಿಷಾದ ವ್ಯಕ್ತಪಡಿಸುವುದು ನಾಟಕ ಅಲ್ಲವೇ? ಗೋ ಹತ್ಯೆ ನಿಷೇಧ ಎಂಬುದು ಹಲ್ಲೆ ಮಾಡಿದವರ ಖಾಸಗಿ ಕಾರ್ಯಸೂಚಿಯಲ್ಲ. ಅದು ಆರೆಸ್ಸೆಸ್ ಕಾರ್ಯಸೂಚಿ. ತಮ್ಮ ಸಂಘಟನೆಯ ಕಾರ್ಯಸೂಚಿಯನ್ನು ಸಂಘದ ಕಾರ್ಯಕರ್ತರು ಜಾರಿಗೆ ತಂದಿದ್ದಾರೆ. ಆದರೆ ಘಟನೆ ನಡೆದ ನಂತರ ಆರೆಸ್ಸೆಸ್ ಇದನ್ನು ಖಂಡಿಸುವುದು ಬರೀ ನಾಟಕ ಮಾತ್ರ. ಗಾಂಧಿ ಹತ್ಯೆ ನಂತರ ಗೋಡ್ಸೆ ತಮ್ಮವನಲ್ಲ ಎಂದು ಹೇಳಿದಂತೆ.

govu-pratibhataneಗೋರಕ್ಷಣೆ ಹೆಸರಿನಲ್ಲಿ ಗೋಭಕ್ತರು ನಡೆಸಿದ ಹಲ್ಲೆ ಇದು ಮೊದಲ ಬಾರಿ ಯೇನಲ್ಲ. ಹಿಂದೆ ನೂರಾರು ಬಾರಿ ಇಂತಹ ಹಲ್ಲೆ ನಡೆಸಿದ್ದಾರೆ. ನಮ್ಮ ರಾಜ್ಯದ ಕರಾವಳಿ ಪ್ರದೇಶದಲ್ಲಿ ನಿತ್ಯವೂ ಈ ಗೂಂಡಾಗಿರಿ ನಡೆದಿದೆ. ದಾದ್ರಿಯಲ್ಲಿ ಮನೆ ಯಲ್ಲಿ ಗೋಮಾಂಸ ಇತ್ತೆಂದು ಹಾಡಹಗಲೇ ಮುಹಮ್ಮದ್ ಅಖ್ಲಾಕ್‌ರನ್ನು ಕೊಂದು ಹಾಕಿದರು.

ಈ ಹಿಂದೆ ನಡೆದ ಯಾವ ಹಲ್ಲೆಗಳ ಬಗೆಗೂ ಯಾವ ಹತ್ಯೆಗಳ ಬಗೆಗೂ ಸಂಘ ಪರಿವಾರ ವಿಷಾದ ವ್ಯಕ್ತಪಡಿಸಿಲ್ಲ. ಖಂಡಿಸಿಲ್ಲ. ಗುಜರಾತ್ ಹತ್ಯಾಕಾಂಡವನ್ನೂ ಅದು ಸಮರ್ಥಿಸಿತು. ಆದರೆ ಈಗ ದಿಢೀರ್‌ನೇ ವಿಷಾದ ವ್ಯಕ್ತಪಡಿಸಿರುವುದಕ್ಕೆ ಕಾರಣವೇನು? ಈ ಬಾರಿ ಹಲ್ಲೆ ನಡೆದಿದ್ದು ದಲಿತರ ಮೇಲೆ. ಈ ಹಲ್ಲೆ ವಿರುದ್ಧ ಈ ದೇಶದ ದಲಿತ ಸಮುದಾಯ ಸಿಡಿದು ನಿಂತಿದೆ. ದಲಿತರು ಹಿಂದೂತ್ವ ಗೆರೆಯನ್ನು ದಾಟಿ ಹೋದರೆ, ಮನುವಾದಿ ರಾಷ್ಟ್ರನಿರ್ಮಾಣದ ಕಾರ್ಯಸೂಚಿ ವಿಫಲಗೊಳ್ಳುತ್ತದೆ ಎಂದು ಹೆದರಿದ ಆರೆಸ್ಸೆಸ್ ಈ ಬಾರಿ ವಿಷಾದ ವ್ಯಕ್ತಪಡಿಸಿದೆ. ದಲಿತರನ್ನು ಹಿಂದೂ ಧರ್ಮದ ಒಳಗಿಟ್ಟುಕೊಂಡು ಅವರ ಮೇಲೆ ಸವಾರಿ ಮಾಡುವುದು ಪುರೋಹಿತಶಾಹಿ ಹುನ್ನಾರ. ಅಂತಲೇ ಇದನ್ನು ವಿರೋಧಿಸಿದ ಅಂಬೇಡ್ಕರ್ ಹಿಂದೂ ಧರ್ಮದಿಂದ ಹೊರಗೆ ಬರಲು ಕರೆ ನೀಡಿದರು.

ನವ ಉದಾರವಾದಿ ಆರ್ಥಿಕ ನೀತಿ ಜಾರಿಗೆ ತರಲು ದೇಶವಿದೇಶದ ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಸಂಘ ಪರಿವಾರದಂತಹ ಕೋಮುವಾದಿ ಸಂಘಟನೆ ಬೇಕು. ಸಂಘ ಪರಿವಾರಕ್ಕೆ ತಮ್ಮ ಮನುವಾದಿ ಅಜೆಂಡಾ ಜಾರಿಗೆ ತರಲು ಹಿಂದೂತ್ವದ ಮುಖವಾಡ ಬೇಕು. ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡಲು ದಲಿತರನ್ನು ಮತ್ತು ಹಿಂದುಳಿದವರನ್ನು ಬಳಸಿಕೊಳ್ಳುವುದು ಅದರ ಉದ್ದೇಶವಾಗಿದೆ. ಅದಕ್ಕಾಗಿ ವಿಷಾದದ ನಾಟಕ ಆಡುತ್ತಿದೆೆ. ದಲಿತರ ಮೇಲೆ ನಡೆದ ಹಲ್ಲೆ, ಗೂಂಡಾಗಿರಿಯನ್ನು ಖಂಡಿಸುವ ಪ್ರಾಮಾಣಿಕತೆ ಆರೆಸ್ಸೆಸ್‌ಗೆ ಇದ್ದರೆ, ಅದು ಅದಕ್ಕಿಂತ ಮುಂಚೆ ಗುಜರಾತ್ ಸೇರಿದಂತೆ ದೇಶಾದ್ಯಂತ ಅಲ್ಪಸಂಖ್ಯಾತರ ಮೇಲೆ ತಾವು ನಡೆಸಿದ ದಾಳಿ ಬಗ್ಗೆ ವಿಷಾದ ವ್ಯಕ್ತಪಡಿಸಲಿ. ಬಾಬರಿ ಮಸೀದಿ ನೆಲಸಮಗೊಳಿಸಿದ್ದನ್ನು ಖಂಡಿಸಲಿ. ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸದೆ, ಅದಕ್ಕಾಗಿ ವಿಷಾದ ವ್ಯಕ್ತಪಡಿಸದೆ ದಲಿತರ ಮೇಲೆ ಒಂದೆಡೆ ದಾಳಿ ಮಾಡಿಸಿ, ಇನ್ನೊಂದೆಡೆ ವಿಷಾದ ವ್ಯಕ್ತಪಡಿಸುವ ಕುತಂತ್ರವನ್ನು ಅದು ನಿಲ್ಲಿಸಲಿ.

ಆರೆಸ್ಸೆಸ್‌ಗೆ ಹಿಂದುತ್ವದ ಏಕತೆ ಬೇಕು. ಯಾಕೆಂದರೆ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಶೇ.2ರಷ್ಟು ಇರುವ ಪುರೋಹಿತಶಾಹಿಯ ಚಾಕರಿ ಮಾಡಲು ದಲಿತರು ಮತ್ತು ಹಿಂದುಳಿದ ವರ್ಗದವರು ಹಿಂದೂ ಧರ್ಮದಲ್ಲಿ ಇರಬೇಕು. ಅವರನ್ನು ದುಡಿಸಿಕೊಂಡು ತಾವು ಸುಖವಾಗಿ ಇರುವುದು ಈ ಪರಾನ್ನಪುಷ್ಟರ ವಾದ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೆಸರಿಟ್ಟುಕೊಂಡ ಆರೆಸ್ಸೆಸ್ ಸ್ಥಾಪಿಸಲು ಹೊರಟಿರುವುದು ಪುರೋಹಿತಶಾಹಿ ಹಿಂದೂ ರಾಷ್ಟ್ರವನ್ನು. ಇದನ್ನು ಗುರುತಿಸಿದ ಅಂಬೇಡ್ಕರ್ ಈ ಹಿಂದೂತ್ವವಾದಿ ಶಕ್ತಿಗಳನ್ನು ಕಟುವಾಗಿ ವಿರೋಧಿಸಿದ್ದರು.

ಆರೆಸ್ಸೆಸ್ ಆಗಾಗ ದುಷ್ಕೃತ್ಯ ನಡೆಸಿ, ನಂತರ ವಿಷಾದ ವ್ಯಕ್ತಪಡಿಸಿ ಬದಲಾದಂತೆ ತೋರಿಸಿಕೊಳ್ಳುತ್ತದೆ. ಅದನ್ನು ಬದಲಿಸಲು ಹೋಗಿ ಡಾ. ರಾಮಮನೋಹರ ಲೋಹಿಯಾ ತಮ್ಮ ಸಮಾಜವಾದಿ ಪಕ್ಷವನ್ನೇ ಕಳೆದುಕೊಂಡರು. ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ಉಳಿದೆಲ್ಲಾ ಜಾತ್ಯತೀತ ಪಕ್ಷಗಳನ್ನು ನಾಶ ಮಾಡಿ ಹಿಂದುತ್ವ ರಾಷ್ಟ್ರ ಸ್ಥಾಪಿಸುವುದು ಆರೆಸ್ಸೆಸ್ ಹುನ್ನಾರವಾಗಿದೆ.

ಅಂಬೇಡ್ಕರ್ ಬದುಕಿದ್ದಾಗ, ಅವರಿಗೆ ಚಿತ್ರsanatakumar-belagali-ankanaಹಿಂಸೆ ನೀಡಿದ ಈ ಮನುವಾದಿಗಳು ಅಂಬೇಡ್ಕರ್ ಸಿದ್ಧಾಂತವನ್ನೇ ನಾಶಪಡಿಸಲು ಷಡ್ಯಂತ್ರ ರೂಪಿಸಿದ್ದಾರೆ. ಬಜರಂಗದಳದಂತಹ ಸಂಘಟನೆ ಕಟ್ಟಿ, ದಲಿತ ಹಿಂದುಳಿದ ಯುವಕರಿಗೆ ಹಿಂದುತ್ವದ ಮತ್ತೇರಿಸಿ ಅಲ್ಪಸಂಖ್ಯಾತರ ಮೇಲೆ ದಾಳಿಗೆ ಪ್ರಚೋದಿಸುತ್ತಿದ್ದಾರೆ. ಬಾಬರಿ ಮಸೀದಿ ನಾಶ ಘಟನೆಯಲ್ಲಾಗಲಿ, ಗುಜರಾತ್ ಹತ್ಯಾಕಾಂಡ ಘಟನೆಯಲ್ಲಾಗಲಿ, ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗೂಂಡಾಗಿರಿಯಲ್ಲಾಗಲಿ ಮೇಲ್ಜಾತಿ ಯುವಕರು ಎಲ್ಲೂ ಪಾಲ್ಗೊಂಡಿಲ್ಲ. ಸಂಘ ಪರಿವಾರದ ಪುರೋಹಿತ ಶಾಹಿಗಳು ತಮ್ಮ ಮಕ್ಕಳನ್ನು ಓದಿಸಿ, ಅಮೆರಿಕಕ್ಕೆ ಕಳುಹಿಸುತ್ತಾರೆ. ಹಿಂದುಳಿದ ಬಡ ಮಕ್ಕಳನ್ನು ಬಜರಂಗದಳಕ್ಕೆ ಸೇರಿಸಿ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಬಳಸಿಕೊಳ್ಳುತ್ತಾರೆ. ಪುರೋಹಿತಶಾಹಿ ಮಕ್ಕಳು ಅಮೆರಿಕಕ್ಕೆೆ ಹೋಗಿ ಲಕ್ಷಾಂತರ ರೂಪಾಯಿ ಸಂಬಳ ಎಣಿಸುತ್ತಿದ್ದಾರೆ. ಇಲ್ಲಿ ಬಡವರ ಮಕ್ಕಳು ಬಜರಂಗ ದಳಕ್ಕೆ ಸೇರಿ ಕೇಸು ಹಾಕಿಸಿಕೊಂಡು ಎಡತಾಕುತ್ತಿದ್ದಾರೆ

ಯಾವುದೇ ಕಾರಣಕ್ಕೂ ಆರೆಸ್ಸೆಸ್ ನೀಡುವ ಇಂತಹ ಕಾಟಾಚಾರದ ಹೇಳಿಕೆ ಯನ್ನು ನಂಬಬಾರದು. ಅದು ನಿಜವಾಗಿಯೂ ಬದಲಾಗಿದ್ದರೆ, ಹಿಂದೂ ರಾಷ್ಟ್ರ ಸ್ಥಾಪನೆಯ ಘೋಷಣೆ ಕೈ ಬಿಟ್ಟಿರುವುದಾಗಿ ಹೇಳಿ ಭಾರತದ ಜಾತ್ಯತೀತ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ವ್ಯಕ್ತಪಡಿಸಬೇಕು. ಬಡವರ ಅನ್ನದ ತಟ್ಟೆಗೆ ಕೈ ಹಾಕುವ ಗೋ ಹತ್ಯೆ ನಿಷೇಧ ಬೇಡಿಕೆಯನ್ನು ಕೈಬಿಟ್ಟಿರುವುದಾಗಿ ಅದು ಹೇಳಬೇಕು. ಎಲ್ಲಕ್ಕೂ ಮೊದಲು ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಆರೆಸ್ಸೆಸ್ ಸಂಸ್ಥೆ ವಿಸರ್ಜನೆಯಾಗಬೇಕು. ಆಗ ಮಾತ್ರ ಇವರನ್ನು ನಂಬಬಹುದು.

courtesy : varthabharati

Please follow and like us:
error