ಈ ಮೀಸಲಾತಿಗೆ ಅಪಸ್ವರವೇಕೆ? – ಸನತ್‌ಕುಮಾರ ಬೆಳಗಲಿ

ಮತಾಂತರ ಮತ್ತು ದನ ಹತ್ಯೆ ನಿಷೇಧದ ಜೊತೆಗೆ ಸಂಘಪರಿವಾರಕ್ಕೆ ಈಗ ಇನ್ನೊಂದು ಅಸ್ತ್ರ ದೊರೆಕಿದೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4.5ರಷ್ಟು ಒಳಮೀಸಲು ನಿಗದಿ ಮಾಡಿರುವ ಕೇಂದ್ರ ಸರಕಾರದ ತೀರ್ಮಾನವೇ ಕೋಮುವಾದಿಗಳಿಗೆ ದೊರೆತ ಹೊಸ ಅಸ್ತ್ರ. ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೋಮು ಧ್ರುವೀಕರಣ ಉಂಟು ಮಾಡಿ, ಹಿಂದೂ ವೋಟ್‌ಬ್ಯಾಂಕ್ ನಿರ್ಮಿಸಲು ಈ ವಿಭಜನಕಾರಿ ಶಕ್ತಿಗಳು ಷಡ್ಯಂತ್ರ ರೂಪಿಸಿವೆ. ಬರಲಿರುವ ದಿನಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಭಾರತೀಯರನ್ನು ಕೋಮು ಆಧಾರದಲ್ಲಿ ಒಡೆದು ಈ ಒಡಕನ್ನೇ ಮೆಟ್ಟಿಲು ಮಾಡಿಕೊಂಡು ಚುನಾವಣೆಯನ್ನು ಗೆಲ್ಲಲು ಮಸಲತ್ತು ನಡೆದಿದೆ.‘ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದರೆ, ದೇಶದಲ್ಲಿ ಯಾದವೀ ಕಲಹಕ್ಕೆ ದಾರಿಯಾಗುತ್ತದೆ’ ಎಂದು ಬಿಜೆಪಿ ಈಗಾಗಲೇ ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಹಿಂದುಳಿದ ವರ್ಗಗಳನ್ನು ವಿಭಜಿಸಲು ಸಂಘಪರಿವಾರ ತನ್ನದೇ ಸಂಸ್ಥೆಗಳನ್ನು ಕಟ್ಟಿಕೊಂಡಿದೆ. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಇಂತಹ ಸಂಸ್ಥೆಗಳಲ್ಲಿ ಒಂದು.
ಹಿಂದುಳಿದವರಿಗೆ ಅನ್ಯಾಯವಾದ ಸಂದರ್ಭಗಳೆಲ್ಲ ಮೂರ್ಛೆ ಹೋದವರಂತೆ ಪ್ರಜ್ಞೆ ತಪ್ಪಿ ಬೀಳುವ ಈ ಮೋರ್ಚಾ ಅಲ್ಪಸಂಖ್ಯಾತರ ಪ್ರಶ್ನೆ ಬಂದಾಗ,ಮೈಮೇಲೆ ಭೂತ ಬಂದವರಂತೆ ಕುಣಿದಾಡುತ್ತದೆ.ಅಲ್ಪಸಂಖ್ಯಾತರಿಗೆ ಮೀಸಲು ನೀಡಿದರೆ,ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಈಗ ಬೆದರಿಕೆ ಹಾಕಿದೆ. ಈ ಮೀಸಲಾತಿಯ ವಿರುದ್ಧ ಹಿಂದುಳಿದ ವರ್ಗಗಳ ಎಲ್ಲ ಜಾತಿಯ ನಾಯಕರ ಬೃಹತ್ ಸಮಾವೇಶ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮತ್ತು ಸಂಸದ ಪಿ.ಸಿ.ಮೋಹನ್ ಇದಕ್ಕೆ ದನಿಗೂಡಿಸಿದ್ದಾರೆ.
ಉಡುಪಿಯ ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಪುರೋಹಿತಶಾಹಿ ಮಠಾಧೀಶ ತಾಳಕ್ಕೆ ತಕ್ಕಂತೆ ಕುಣಿದು ಕನಕದಾಸರಿಗೆ ಕುರುಬ ಸಮಾಜಕ್ಕೆ ದ್ರೋಹ ಬಗೆದಿದ್ದ ಈಶ್ವರಪ್ಪನವರಿಗೆ ಈಗ ಇದ್ದಕ್ಕಿದ್ದಂತೆ ಹಿಂದುಳಿದವರ ಬಗ್ಗೆ ದಿಢೀರ್ ಕಾಳಜಿ ಹುಟ್ಟಿಕೊಂಡಿದೆ. ಸಂಘಪರಿವಾರದಲ್ಲಿ ಬೆಳೆದು ಬಂದ ಬಹುತೇಕ ಹಿಂದುಳಿದ ವರ್ಗಗಳ ನಾಯಕರು ಮನುವಾದಿಗಳ ಪಾದಸೇವಕರು ಎಂಬುದು ಆಗಾಗ ಸಾಬೀತಾಗುತ್ತಲೇ ಬಂದಿದೆ.ವಿ.ಪಿ.ಸಿಂಗ್ ಸರಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ವರದಿ ಜಾರಿಗೆ ಮುಂದಾದಾಗ,ಅದನ್ನು ತಡೆಯಲೆಂದೇ ಆರೆಸ್ಸೆಸ್ ನಾನಾ ಹುನ್ನಾರ ನಡೆಸಿತು. ಅಯೋಧ್ಯೆಯ ಬಾಬ್ರಿ ಮಸೀದಿ-ರಾಮ ಮಂದಿರ ವಿವಾದವನ್ನು ಸೃಷ್ಟಿಸಿತು.
ಮಂದಿರವಲ್ಲೇ ಕಟ್ಟುವೆವು ಎಂದು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಹೊರಟಿದ್ದರು.ಈ ರಥಯಾತ್ರೆ ರಕ್ತಯಾತ್ರೆಯಾಗಿ ರಥದ ಗಾಲಿಗಳು ಸಾವಿರಾರು ಜನರನ್ನು ಬಲಿ ತೆಗೆದುಕೊಂಡವು.ಆಗ ಮಂಡಲ ಅಯೋಗದ ಶಿಫಾರಸು ವಿರೋಧಿಸಿದ ಇವರೀಗ ಹಿಂದುಳಿದವರ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದಾರೆ.
ಹೀಗೆ ವಿರೋಧ ಮಾಡುವ ಮೂಲಕ ಇತರ ಹಿಂದುಳಿದ ವರ್ಗದ ಯುವಕರನ್ನು ದಾರಿ ತಪ್ಪಿಸಿ, ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಪ್ರಚೋದಿಸುವ ಮಸಲತ್ತು ನಡೆದಿದೆ. ಆ ಮೂಲಕ ಸಮಾಜದಲ್ಲಿ ವೈಷಮ್ಯದ ವಿಷಬೀಜವನ್ನು ಬಿತ್ತಿ ಕೋಮು ವಿಭಜನೆ ಮಾಡಿ, ರಾಜಕೀಯ ಲಾಭ ಮಾಡಿಕೊಳ್ಳುವುದು ಇವರ ಉದ್ದೇಶವಾಗಿದೆ. ದಲಿತ ಕ್ರೈಸ್ತರಿಗೆ ಮೀಸಲಾತಿ ನೀಡುವ ಪ್ರಶ್ನೆಯಲ್ಲೂ ಈ ಶಕ್ತಿಗಳು ಇಂಥದ್ದೇ ಕುತಂತ್ರ ನಡೆಸುತ್ತ ಬಂದಿವೆ. ಹೇಗಾದರೂ ಮಾಡಿ, ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಿ, ತಮ್ಮ ಅಂತಿಮ ಗುರಿಯಾದ ಮೇಲ್ಜಾತಿಗಳಿಗೆ ಪ್ರಾಧಾನ್ಯ ನೀಡುವ ಹಿಂದೂರಾಷ್ಟ್ರ ನಿರ್ಮಾಣ ಮಾಡುವುದು ಸಂಘ ಪರಿವಾರದ ಹುನ್ನಾರವಾಗಿದೆ. ಈ ಗುರಿ ಸಾಧಿಸಬೇಕೆಂದಿದ್ದರೆ, ತಕ್ಷಣಕ್ಕೆ ಅಧಿಕಾರಕ್ಕೆ ಬರುವುದು ಅದಕ್ಕೆ ಅಗತ್ಯವಾಗಿದೆ.
ದೇಶದಲ್ಲಿ ಸಮಸ್ಯೆಗಳು ಇಲ್ಲವೆಂದಲ್ಲ. ಯುಪಿಎ ಸರಕಾರ ತಪ್ಪು ಮಾಡಿಲ್ಲವೆಂದಲ್ಲ. ಆದರೆ ವಿದೇಶಿ ಬಂಡವಾಳಗಾರರನ್ನು, ಹೂಡಿಕೆದಾರರನ್ನು ಓಲೈಸುವ, ಖಾಸಗೀಕರಣಗೊಳಿಸುವ ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ನೀಡುವ ಹಾಗೂ ಕಷಿಯನ್ನು ಕಾರ್ಪೊರೇಟ್ ತಿಮಿಂಗಲುಗಳ ಬಾಯಿಗೆ ಹಾಕುವ ನೀತಿಗಳ ಬಗ್ಗೆ ಬಿಜೆಪಿ ಸೇರಿದಂತೆ ಸಂಘಪರಿವಾರಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಹಿಂದೆ ವಾಜಪೇಯಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದಾಗಲೂ ಇದೇ ಜಾಗತೀಕರಣದ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನು ಪಾಲಿಸಿಕೊಂಡು ಬಂದಿತ್ತು. ಅಂತಲೇ ಆರ್ಥಿಕ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನೊಂದಿಗೆ ಬಿಜೆಪಿ ಮೂಲಭೂತ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಮೀಸಲಾತಿಯಂಥ ಪ್ರಶ್ನೆಯನ್ನು ದೊಡ್ಡದು ಮಾಡಿ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಅದು ತಂತ್ರ ರೂಪಿಸಿದೆ.
ಅಲ್ಪಸಂಖ್ಯಾತರ, ಅದರಲ್ಲೂ ಮುಸಲ್ಮಾನರ ಶೋಚನೀಯ ಪರಿಸ್ಥಿತಿಯ ಬಗ್ಗೆ ಸ್ವಾತಂತ್ರಾ ನಂತರ ಅನೇಕ ತಜ್ಞರ ಸಮಿತಿಗಳು ಅಧ್ಯಯನ ಮಾಡಿ,ವರದಿಗಳನ್ನು ನೀಡಿವೆ.2006ರಲ್ಲಿ ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಸಮಿತಿ ನೀಡಿದ ವರದಿ ಪ್ರಕಾರ,ಮುಸಲ್ಮಾನರಿಗೆ ಸರಕಾರಿ ನೌಕರಿಯಲ್ಲಿ ನ್ಯಾಯವಾದ ಪಾಲು ನೀಡಬೇಕಾಗಿದೆ.ಆ ನಂತರ ರಚಿಸಲ್ಪಟ್ಟ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ,ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸಲ್ಮಾನರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು.
ಮುಸಲ್ಮಾನರ ಪರಿಸ್ಥಿತಿ ದಲಿತರಿಗಿಂತ ಶೋಚನೀಯವಾಗಿದೆ ಎಂದು ಸಾಚಾರ್ ಮತ್ತು ರಂಗನಾಥ ಮಿಶ್ರಾ ಸಮಿತಿಗಳೆರಡೂ ಆಳವಾದ ಅಧ್ಯಯನ ನಡೆಸಿ, ವರದಿ ನೀಡಿವೆ. ಅನೇಕ ಸರಕಾರಿ ಅಂಕಿ-ಅಂಶಗಳೇ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿದಿವೆ. ಕೇಂದ್ರ ಸರಕಾರದ ನೌಕರರಿಗಳಲ್ಲಿ ಶೇ.2ರಷ್ಟು ಕೂಡ ಮುಸಲ್ಮಾನರಿಲ್ಲ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಲ್ಲೂ ಅವರ ಸಂಖ್ಯೆ ಅತ್ಯಂತ ಕಡಿಮೆ. ಶೈಕ್ಷಣಿಕವಾಗಿ ಮುಂದುವರಿಯದ ಬಹುತೇಕ ಮುಸಲ್ಮಾನ ಯುವಕರು ಗ್ಯಾರೇಜುಗಳಲ್ಲಿ,ಹೊಟೇಲ್‌ಗಳಲ್ಲಿ,ಬೀಡಿ ಉದ್ದಿಮೆಯಲ್ಲಿ,ಸಣ್ಣಪುಟ್ಟ ವ್ಯಾಪಾರಗಳಲ್ಲಿ ದುಡಿದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.ಯಾರೋ ಒಬ್ಬಿಬ್ಬರು ಅಜೀಂ ಪ್ರೇಮ್‌ಜಿ ಅಂಥವರು ಇರಬಹುದು. ಆದರೆ ಶೇ.90ರಷ್ಟು ಭಾಗ ಬೀಡಿ ಕಟ್ಟುವ, ಅಗರಬತ್ತಿ ಸುತ್ತುವ, ಖಾದರಬಿ, ಜನ್ನತ್‌ಬಿ, ಹುಸ್ಸೇನ್‌ಬಿ ಅಂಥವರ ಸಂಖ್ಯೆ ಮುಸಲ್ಮಾನರಲ್ಲಿ ಹೆಚ್ಚಿದೆ.
ಕೇಂದ್ರದ ಯುಪಿಎ ಸರಕಾರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಈ ಮೀಸಲಾತಿ ಪ್ರಕಟಿಸಿರಬಹುದು.ಆದರೆ ಬಿಜೆಪಿ ಇದನ್ನು ನಖಶಿಖಾಂತವಾಗಿ ವಿರೋಧಿಸುತ್ತಿದ್ದರೆ,ಎಡಪಕ್ಷಗಳು ಅಲ್ಪಸಂಖ್ಯಾತರಿಗೆ ನೀಡಿರುವ ಶೇ.4.5ರಷ್ಟು ಮೀಸಲಾತಿ ಕೂಡ ಸಾಲದು.ರಂಗನಾಥ ಮಿಶ್ರಾ ಸಮಿತಿ ಶಿಫಾರಸು ಮಾಡಿದಂತೆ ಶೇ 10ರಷ್ಟು ಮೀಸಲಾತಿ ನೀಡಲೇಬೇಕು ಎಂದು ಪಟ್ಟು ಹಿಡಿದಿವೆ. ಸರಕಾರ ಬರೀ ಹೇಳಿಕೆ ನೀಡಿದರೆ ಸಾಲದು, ಒಳಮೀಸಲಾತಿಗೆ ಅಗತ್ಯವಾದ ಸಂವಿಧಾನಾತ್ಮಕ ತಿದ್ದುಪಡಿ ತರಬೇಕು ಎಂದು ಪ್ರಗತಿಪರ ಶಕ್ತಿಗಳು ಒತ್ತಾಯಿಸಿವೆ.
ಕೇಂದ್ರ ಸರಕಾರ ನೀಡಿರುವ ಶೇ 4.5 ಮೀಸಲಾತಿ ವ್ಯಾಪ್ತಿಗೆ ಮುಸಲ್ಮಾನರು ಮಾತ್ರವಲ್ಲ ಬೌದ್ಧರು, ಕ್ರೈಸ್ತರು, ಜೈನರು, ಪಾರ್ಸಿಗಳು ಸೇರಿದಂತೆ ವಿವಿಧ ಜಾತಿ-ಪಂಗಡಗಳು ಸೇರುತ್ತವೆ. ಆದರೆ ರಂಗನಾಥ ಮಿಶ್ರಾ ಸಮಿತಿ ಮುಸಲ್ಮಾನ ಸಮುದಾಯದ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಸಿ, ಅಲ್ಪಸಂಖ್ಯಾತರಲ್ಲೇ ಅವಕಾಶ ವಂಚಿತರಾದ ಮುಸ್ಲಿಂ ಸಮುದಾಯಕ್ಕೆ ನ್ಯಾಯವಾದ ಪಾಲು ನೀಡಬೇಕು ಎಂದು ಶಿಫಾರಸು ಮಾಡಿದೆ.
ಆದರೆ ಮನುವಾದಿ ಶಕ್ತಿಗಳಿಗೆ ಈ ಮೀಸಲಾತಿ ಹೊಟ್ಟೆಯುರಿ ಉಂಟು ಮಾಡಿದೆ. ಇತರ ಹಿಂದುಳಿದ ವರ್ಗಗಳನ್ನು ಅಲ್ಪಸಂಖ್ಯಾತರೊಂದಿಗೆ ಎತ್ತಿ ಕಟ್ಟಲು ಸಂಘಪರಿವಾರ ತಂತ್ರ ರೂಪಿಸಿದೆ. ಬರಲಿರುವ ದಿನಗಳಲ್ಲಿ ಇದೇ ಪ್ರಶ್ನೆಯನ್ನು ಮುಂದೆ ಮಾಡಿಕೊಂಡು ದ್ವೇಷದ ದಳ್ಳುರಿ ಎಬ್ಬಿಸಲು ಮಸಲತ್ತು ನಡೆಸಿದೆ. ಆದ್ದರಿಂದ ಎಲ್ಲ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳು ಒಂದುಗೂಡಿ ಈ ಕುತಂತ್ರವನ್ನು ವಿಫಲಗೊಳಿಸಬೇಕಾಗಿದೆ.-  ವಾರ್ತಾಭಾರತಿ ಅಂಕಣ
Please follow and like us:
error