18ರ ಯುವತಿಯ ತಂದೆಯನ್ನು ಗುದ್ದಿ ಸಾಯಿಸಿದ ಬೀದಿಕಾಮಣ್ಣ

ಮುಂಬೈ,ನ.20: ಪನವೇಲ್‌ನ ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ತನ್ನ 18ರ ಹರೆಯದ ಪುತ್ರಿಯನ್ನು ಕಳೆದೊಂದು ವರ್ಷದಿಂದಲೂ ಹಿಂಬಾಲಿಸುತ್ತ ಚುಡಾಯಿಸುತ್ತಿದ್ದ ಬೀದಿಕಾಮಣ್ಣನನ್ನು ಪ್ರಶ್ನಿಸಿದ ತಪ್ಪಿಗೆ 53ರ ಹರೆಯದ ವ್ಯಕ್ತಿಯೋರ್ವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಆತನಿಂದ ಹೊಡೆತ ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಶುಕ್ರವಾರ ಮಿದುಳು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.

lover-murders-girl-father ನ.14ರಂದು ರಾಯಗಡ ಜಿಲ್ಲೆಯ ಪೊಯ್ನಡ್ ಪಟ್ಟಣದ ಜನನಿಬಿಡ ರಸ್ತೆಯಲ್ಲಿ ತನ್ನ ನೆರೆಮನೆಯ ನಿವಾಸಿಯಾಗಿರುವ ಅವಿಷೇಕ್ ಭಟ್ಟಾಚಾರ್ಯ(25)ನನ್ನು ತಡೆದು ನಿಲ್ಲಿಸಿದ್ದ ಸದಾಶಿವ ಕಾಂಚನ್ ಆತ ತನ್ನ ಪುತ್ರಿಗೆ ಕಿರುಕುಳ ನೀಡುತ್ತಿದ್ದುದನ್ನು ಪ್ರಶ್ನಿಸಿದ್ದರು.ಇದರಿಂದ ಕುಪಿತಗೊಂಡಿದ್ದ ಆತ ಅವರ ತಲೆಗೆ ಮುಷ್ಟಿಯಿಂದ ಒಂದೇಸಮನೆ ಬಲವಾಗಿ ಗುದ್ದಿದ್ದು, ಕುಸಿದು ಬಿದ್ದು ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ನವಿ ಮುಂಬೈನ ನೆರುಲ್‌ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕಾಂಚನ್ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಅಸುನೀಗಿದ್ದಾರೆ.

ಎರಡು ತಿಂಗಳ ಹಿಂದಿನವರೆಗೂ ಲಿಬ್ಯಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಭಟ್ಟಾಚಾರ್ಯ ಅಲ್ಲಿದ್ದುಕೊಂಡೇ ಕಳೆದ ಒಂದೂವರೆ ವರ್ಷದಿಂದಲೂ ಅವರ ಪುತ್ರಿಯನ್ನು ಆನ್‌ಲೈನ್‌ನಲ್ಲಿ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ಯುವತಿ ತನ್ನ ಫೋನ್ ನಂಬರ್ ಬದಲಿಸಿದ್ದರೂ ಆತನ ಕಾಟ ತಪ್ಪಿರಲಿಲ್ಲ.

ಲಿಬ್ಯಾದಿಂದ ಮರಳಿದ ಬಳಿಕ ಭಟ್ಟಾಚಾರ್ಯ ಯವತಿಯನ್ನು ಪ್ರತಿದಿನ ಕಾಲೇಜಿನವರೆಗೆ ಮತ್ತು ವಾಪಸ್ ಮನೆಯವರೆಗೆ ಹಿಂಬಾಲಿಸುತ್ತಿದ್ದ. ಕಾಂಚನ್ ಈ ಬಗ್ಗೆ ಆತನ ಹೆತ್ತವರಲ್ಲಿ ದೂರಿಕೊಂಡಿದ್ದರೂ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ.

ನ.14ರಂದು ಸಂಜೆ ಭಟ್ಟಾಚಾರ್ಯನನ್ನು ರಸ್ತೆಯಲ್ಲಿ ತಡೆದಾಗ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದ ಕಾಂಚನ್ ಆತನಿಗೆ ಕೊನೆಯ ಎಚ್ಚರಿಕೆಯನ್ನು ನೀಡಲು ಬಯಸಿದ್ದರು. ಆದರೆ ಆತ ಅವರನ್ನೇ ಬಲಿ ತೆಗೆದುಕೊಂಡಿದ್ದಾನೆ.

ಹೆತ್ತವರ ಏಕೈಕ ಪುತ್ರಿಯಾಗಿರುವ ಯುವತಿ ತಂದೆಯ ಸಾವಿನ ಮುನ್ನಾದಿನ ತನ್ನ 18ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಳು. ಭಟ್ಟಾಚಾರ್ಯಗೆ ಶಿಕ್ಷೆ ಕೊಡಿಸದ ಹೊರತು ವಿರಮಿಸದಿರಲು ಆಕೆ ಪಣ ತೊಟ್ಟಿದ್ದಾಳೆ.

ಭಟ್ಟಾಚಾರ್ಯನನ್ನು ಶನಿವಾರ ಬಂಧಿಸಿರುವ ಪೊಲೀಸರು ಆತನ ವಿರುದ್ಧ ಕೊಲೆ ಆರೋಪವನ್ನು ಹೊರಿಸಿದ್ದು,ಸೋಮವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಿದ್ದಾರೆ.

Leave a Reply