​ಟಿವಿ ಚಾನೆಲ್ ಗಳು ಏನನ್ನು ಹೇಳ ಹೊರಟಿವೆ ?- ಸಿದ್ಧರಾಮ ಕೂಡ್ಲಿಗಿ

ಟಿವಿ ಚಾನೆಲ್ ಗಳಲ್ಲಿ ವಿಶೇಷ ವರದಿಗಳನ್ನು ತೋರಿಸುವಾಗ ಅದನ್ನು ವೈಭವಕರಣಗೊಳ್ಳಿಸುವುದು ಸಾಮಾನ್ಯ ಎಂಬಂತಾಗಿದೆ. ವರದಿಗಳನ್ನು ಇದ್ದದ್ದನ್ನು ಇದ್ದಂತೆ ಹೇಳದೇ ಅದನ್ನುಯಾವ ಮಟ್ಟಿಗೆ ಹೇಳಿಬಿಡುತ್ತಾರೆಂದರೆ ನೋಡುಗರು ಬೆಚ್ಚಿಬೀಳಬೇಕು ಇಲ್ಲವೇ ಕಣ್ಣೀರು ಸುರಿಸಲೇಬೇಕು, ಇಲ್ಲವೇ ರೋಷಾವೇಶಗೊಳ್ಳಬೇಕು ಹೀಗೇ ಮುಂದುವರೆಯುತ್ತದೆ.
ಇಷ್ಟೇ ಅಲ್ಲದೆ ಒಬ್ಬ ವ್ಯಕ್ತಿಯ ಬಗ್ಗೆ ಆತನ ಸಾಧನೆಗಳನ್ನು ತೋರಿಸುವುದರ ಜೊತೆಯಲ್ಲಿಯೇ ಸಿನಿಮಾ ಹಾಡುಗಳನ್ನು ಜೋಡಿಸಿಬಿಡುವುದು. ವಿಶೇಷವಾಗಿ ಇತ್ತಿತ್ತಲಾಗಿ ಹಿಂದಿ ಸಿನಿಮಾ ಹಾಡುಗಳನ್ನು, ಇಲ್ಲವೇ ಹಿನ್ನೆಲೆ ಸಂಗೀತವನ್ನು ಬಳಸಿಬಿಡುತ್ತಾರೆ. ಒಬ್ಬ ವ್ಯಕ್ತಿಯ ಸಾಧನೆಗಳನ್ನು ತೋರಿಸಲಿ, ಆತನ ಬಗ್ಗೆ ಹೇಳಲಿ ಆದರೆ ಈ ಸಿನಿಮಾ ಹಾಡುಗಳನ್ನೆ ಮಧ್ಯೆ ಮಧ್ಯೆ ತೂರಿಸುವುದು ಯಾಕೆಂತಲೇ ನನಗೆ ಅರ್ಥವಾಗಲಿಲ್ಲ.

ಮಕ್ಕಳಿರಲಿ ದೊಡ್ಡವರೂ ಬೆಚ್ಚಿ ಬೀಳುವಂತೆ ಭೀಕರ ಅನಾಹುತಗಳನ್ನೋ, ಅಪಘಾತಗಳನ್ನೋ, ದುರಂತಗಳನ್ನೋ, ಕೊಲೆಗಳನ್ನೋ ಮೇಲಿಂದ ಮೇಲೆ ಪುನರಾವರ್ತನೆ ಮಾಡುವಂತೆ ತೋರಿಸುತ್ತಲೇ ಇರುತ್ತಾರೆ. ಇದು ಮಕ್ಕಳ ಮೇಲಂತೂ ಎಷ್ಟೊಂದು ಪರಿಣಾಮ ಬೀರುತ್ತದೆಂದರೆ, ಕ್ರೌರ್ಯವೆಂಬುದು ಹಸಿ ಹಸಿಯಾಗಿಯೇ ಮಕ್ಕಳ ಮನಸಿನಲ್ಲಿ ಉಳಿದುಬಿಡುತ್ತದೆ.

ಇನ್ನು ಯಾವುದೇ ವಿಶೇಷ ವರದಿ ಇಲ್ಲವೆಂದ ತಕ್ಷಣವೇ ಯಾರಾದರೂ ಚಲನಚಿತ್ರ ನಟರ, ದೇಶದ ಶ್ರೀಮಂತರ ಮದುವೆಯನ್ನು ತೋರಿಸತೊಡಗುತ್ತಾರೆ. ಅವರು ಕೈಗೆ ಮೆಹಂದಿ ಹಚ್ಚಿಕೊಳ್ಳುವುದರಿಂದ ಹಿಡಿದು ಅವರು ಮಧುಚಂದ್ರಕ್ಕೆ ಹೋಗುವವರೆಗೆ, ಅವರಿಗೆ ಮಗು ಹುಟ್ಟುವವರೆಗೂ ಈ ವರದಿ ನಿರಂತರ ಪ್ರಸಾರವಾಗುತ್ತಿರುತ್ತದೆ. ಚಾನೆಲ್ ಗಳ ಕಣ್ಣಿಗೆ ಈ ಶ್ರೀಮಂತರು, ಚಿತ್ರನಟ, ನಟಿಯರೇ ಏಕೆ ಕಣ್ಣಿಗೆ ಬೀಳುತ್ತಾರೆ ? ನಮ್ಮ ಗ್ರಾಮೀಣ ಭಾಗದಲ್ಲಿ, ವಿವಿಧ ಜನಾಂಗಗಳಲ್ಲಿ ಮದುವೆ ಎಂಬುದು ಒಂದು ವಿಶಿಷ್ಟವಾದ ಸಂಸ್ಕೃತಿ ಎಂಬಂತೆ ಬಿಂಬಿತವಾಗುತ್ತವೆ. ಅಂತಹ ವಿಶೇಷತೆಗಳಿರುವ ಜನಾಂಗಗಳ, ಗ್ರಾಮೀಣ ಭಾಗಗಳ ಪುಟ್ಟ ಸಮಾರಂಭಗಳು ಏಕೆ ಇವರ ಕಣ್ಣಿಗೆ ಬೀಳುವುದಿಲ್ಲ ? ಈ ದೇಶದ, ನಾಡಿನ ನೆಲದ ಸಂಸ್ಕೃತಿಯನ್ನು ಬಿತ್ತರಗೊಳ್ಳುವ ರೀತಿಯಲ್ಲಿ ಏಕೆ ಇವರು ಪ್ರಯತ್ನಿಸುವುದಿಲ್ಲ ?

ಇನ್ನು ಮಕ್ಕಳಿಗಾಗಿ ಏರ್ಪಡಿಸುವ ಡಾನ್ಸ್ ಸ್ಪರ್ಧೆಗಳಂತೂ ಮಕ್ಕಳನ್ನು ಸರ್ಕಸ್ ನ ಪಟುಗಳಂತೆ, ಲಾಗ ಹಾಕಿಸುವ, ತೂಗುವ, ತೂರಾಡುವ ರೀತಿಗಳು ಪ್ರತಿಭೆಯನ್ನು ಸಾಬೀತುಪಡಿಸುವಂತಹವೇ ? ಆ ಎಳೆಯ ಮಕ್ಕಳನ್ನು ದೊಡ್ಡ ನಟ, ನಟಿಯರಂತೆ ಅಭಿನಯಿಸುವುದನ್ನು ಮೆಚ್ಚಿ ಚಪ್ಪಾಳೆ ಹೊಡೆಯುವ ಮೂರ್ಖರು ಮಕ್ಕಳ ಬಾಲ್ಯವನ್ನು, ಸುಂದರ ಜಗತ್ತನ್ನು ಕಸಿದುಕೊಳ್ಳುತ್ತಿದ್ದೇವೆಂದು ಎಳ್ಳಷ್ಟೂ ಅನಿಸುವುದಿಲ್ಲವೇ ? ಮಕ್ಕಳ ಪಾಲಕರೂ ಸಹ ಇದಕ್ಕೆ ಸಮ್ಮತಿಸುತ್ತಾರೆಂದರೆ ಏನು ಹೇಳುವುದು ?
ಹಳ್ಳಿಯ ಮುಗ್ಧರನ್ನು ತರುವುದು ಅವರನ್ನು ವೇದಿಕೆಯ ಮೇಲೆ ಹಾಸ್ಯ ಮಾಡುವ ರೀತಿಯಲ್ಲಿ ಪ್ರಶ್ನಿಸುವುದು, ಇಡೀ ಕರ್ನಾಟಕ ಅದಕ್ಕೆ ಚಪ್ಪಾಳೆ ಹೊಡೆಯುವುದು ಇದೇನಾ ಟಿಆರ್ ಪಿ ಎಂದರೆ ? ಸ್ಪರ್ಧೆಗಳ ಹೆಸರಿನಲ್ಲಿ ಹಳ್ಳಿಯ ಜನರ ಮೂಲ ಸತ್ವವನ್ನು, ಅವರ ಮುಗ್ಧತೆಯನ್ನು ತಮ್ಮ ಟಿ ಆರ್ ಪಿಗಾಗಿ ಬಳಸಿಕೊಳ್ಳುವ ಚಾನೆಲ್ ಗಳು ಗ್ರಾಮೀಣ ಭಾಗವನ್ನು ಲೇವಡಿ ಮಾಡುವ ರೀತಿಯಲ್ಲಿವೆ. ಒಬ್ಬ ಹಳ್ಳಿಗ ಖ್ಯಾತಿ ಪಡೆದಾಕ್ಷಣ ಅದನ್ನೇ ಅನುಕರಿಸುವ, ಪ್ರಚಾರದ ಬೆನ್ನು ಬೀಳುವ ಅಪಾಯ ಯುವ ಜನಾಂಗದಲ್ಲಿ ಮೂಡಿಬಿಡುತ್ತದೆ ಎಂದು ಇವರು ಏಕೆ ಯೋಚಿಸುವುದಿಲ್ಲ. 
ಒಟ್ಟಾರೆ ಟಿವಿ ಚಾನೆಲ್ ಗಳು ಸಮಾಜಕ್ಕೆ ಏನನ್ನು ಹೇಳಲಿಕ್ಕೆ ಹೊರಟಿದ್ದಾರೆ ? ಎಂಬುದು ಅರ್ಥವಾಗುತ್ತಿಲ್ಲ. ಇವರು ಸಮಾಜವನ್ನು ಉದ್ಧರಿಸುತ್ತಿದ್ದಾರೆಯೋ, ಇನ್ನೂ ನಾಶಗೊಳಿಸುತ್ತಿದ್ದಾರೆಯೋ ಅವರೇ ಯೋಚಿಸಬೇಕು. 

Please follow and like us:
error