ಹಕ್ಕಿ ಪಿಕ್ಕಿ ಜನಾಂಗದ ಶಾಶ್ವತ ಸೌಲಭ್ಯ ಒದಗಿಸಲು ಮನವಿ

ಕೊಪ್ಪಳ, ಫೆ. 07: ಕೊಪ್ಪಳ ನಗರದ ಐತಿಹಾಸಿಕ ಗವಿಮಠಕ್ಕೆ ಹೊಂದಿಕೊಂಡಿರುವ ಇಪ್ಪತ್ತೈದು ಮನೆಗಳಿರುವ ಒಂದು ಸಣ್ಣ ಗುಂಪು, ಹಕ್ಕಿ ಪಿಕ್ಕಿ ಸಮುದಾಯದ ಅಥವಾ ಹರಣ ಶಿಕಾರಿ ಸಮುದಾಯಕ್ಕೆ ಮೂಲಭೂತ ಸೌಲಭ್ಯ ಒದಗಿಸಿಕೊಡಬೇಕು ಎಂದು ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಆಗ್ರಹಿಸಿದೆ.
ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಈ ಜನರಿರುವ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಭೇಟಿ ನೀಡಿ ಅಲ್ಲಿನ ಜನರ ಬದಲಾವಣೆಗೆ, ಜಾಗೃತಿಗೆ ಸಮೀಕ್ಷೆ ಕೈಗೊಂಡಿದ್ದು, ಸರಕಾರ ಮಟ್ಟದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಿಗೆ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮುಖ್ಯಸ್ಥೆ ಜ್ಯೋತಿ ಮಂಜುನಾಥ ಗೊಂಡಬಾಳ ನೇತೃತ್ವದಲ್ಲಿ, ಸರೋಜಾ ಬಾಕಳೆ, ವಿಜಯಲಕ್ಷ್ಮೀ ಗುಳೇದ್, ಅಜುಮುನ್ನಿಸಾ ಬೇಗಂ, ಶಿವಲೀಲಾ ಹಿರೇಮಠ, ಸಲೀಮಾ ಜಾನ್, ಮಲ್ಲಪ್ಪ ಹಡಪದ, ಬಸವರಾಜ ದೇಸಾಯಿ, ಲತಾ ಕಲ್ಲೇಶ್ ಇತರರು ಭೇಟಿ ನೀಡಿ ಮನವಿ ಸಲ್ಲಿಸಿದರು.
ಕೊಪ್ಪಳ ಜಿಲ್ಲಾ ಕೇಂದ್ರದ ವಾರ್ಡ್ ನಂ. 12 ರಲ್ಲಿರುವ ಸಜ್ಜಿ ಓಣಿ ಎಂಬ ಏರಿಯಾದಲ್ಲಿರುವ ಈ ಸಮುದಾಯ, ಸುಮಾರು 25 ಕುಟುಂಬಗಳು ಇದ್ದು, ಯಾವುದೋ ಒಂದು ಕಾಡಿನಲ್ಲಿ ಬದುಕುವ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. 21ನೇ ಶತಮಾನದ ಅಂತಿಮ ಹಂತದಲ್ಲಿರುವ ಕಂಪ್ಯೂಟರ್ ಯುಗದಲ್ಲಿಯೂ ಅಸಮಾನ್ಯ, ಅನಾಗರಿಕ ಬದುಕು ಸಾಗಿಸುತ್ತಿರುವದು. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಜನಾಂಗದ ಬದುಕು ಹಸನ ಮಾಡಲು ತುರ್ತಾಗಿ ಈ ಕೆಲಸಗಳು ಆಗಬೇಕಿದ್ದರೆ ಈ ಎಲ್ಲಾ ಕುಟುಂಬಗಳಿಗೆ ಅವರು ವಾಸಿಸುತ್ತಿರುವ ಸ್ಥಳದಲ್ಲಿಯೇ ಅವರಿಗೆ ಪಕ್ಕಾ ಮನೆ ನಿರ್ಮಾಣ ಮಾಡಿಕೊಡಬೇಕು. ಸ್ವಚ್ಛ ಭಾರತ್ ಮಿಷನ್ ಅಥವಾ ಇತರೆ ಯೋಜನೆಯಲ್ಲಿ ವಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಡಬೇಕು. ಇಲ್ಲಿರುವ ಮಕ್ಕಳು ಸುಮಾರು 23 ಜನರು ನಗರದ ಕೊಟಗಾರಗೇರಾ ಸ.ಹಿ.ಪ್ರಾ.ಶಾಲೆಯಲ್ಲಿ ಓದುತ್ತಿದ್ದು, ಕೆಲವರನ್ನು ಹೊರತುಪಡಿಸಿ ಉಳಿದ ಮಕ್ಕಳು ನಿರಂತರ ಶಾಲೆಗೆ ಗೈರು ಹಾಜರಿ ಇದ್ದಾರೆ. ಅವರ ಶಿಕ್ಷಣ ತುಂಬಾ ಕೆಳಹಂತದಲ್ಲಿದೆ. ಅವರಿಗೆ ಅವಶ್ಯಬಿದ್ದಲ್ಲಿ, ಹಾಸ್ಟೆಲ್ ಅನುಕೂಲ ಮಾಡಿಕೊಡಬೇಕು. ಈ ಮನೆಗಳಿಗೆ ಸರಕಾರದ ಭಾಗ್ಯ ಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು. ಉಜ್ವಲ್ ಅಥವಾ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಮಾಡಿಸಿಕೊಡಬೇಕು. ನಗರಸಭೆ ಮೂಲಕ ಈ ಸ್ಥಳಕ್ಕೆ ಸಂಪರ್ಕ ರಸ್ತೆ ಮತ್ತು ಅಲ್ಲಿ ಸಿಸಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಿಕೊಡಬೇಕು. ಇಲ್ಲಿ ವಾಸಿಸುವ ಜನರಿಗೆ ಗೊತ್ತಿರುವ ಕೆಲಸದಲ್ಲಿಯೇ ಉತ್ತಮ ತರಬೇತಿ ಕೊಡಿಸಿ, ಉದ್ಯೋಗ ನೀಡಲು ಸಾಲ ಸೌಲಭ್ಯ ಒದಗಿಸಿಕೊಡಬೇಕು.
ಪ್ರಮುಖವಾಗಿ ಇವರ ಮೇಲೆ ನಿರಂತರವಾಗಿ ಕಳ್ಳತನ ಇತರೆ ಕೇಸ್‍ಗಳು ದಾಖಲಗುತ್ತಿದ್ದು, ಅವುಗಳನ್ನು ನಿಲ್ಲಿಸಬೇಕು, ಅವರು ಮಾಡದ ತಪ್ಪನ್ನು ಹೊರಿಸಬಾರದು, ಸುಳ್ಳು ಕೇಸ್‍ಗಳನ್ನು ವಜಾ ಮಾಡಬೇಕು. ಪೋಲಿಸರು ಅವರ ಬದುಕಿಗೆ ಸಹಾಯ ಮಾಡಬೇಕು. ತಪ್ಪು ಮಾಡದಿದ್ದರೆ, ತೊಂದರೆ ಆಗುವದಿಲ್ಲ ಎಂಬ ಭರವಸೆ ಮೂಡಿಸಬೇಕಾಗಿದೆ ಎಂದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಈ ಜನಾಂಗವು ನಾಗರಿಕತೆಯಲ್ಲಿ ತನ್ನ ಹೆಜ್ಜೆಯನ್ನು ಇಡಲು ಅವಕಾಶ ಮಾಡಿಕೊಟ್ಟು, ಬಸವಣ್ಣನವರ ಸರ್ವರ ಕಲ್ಯಾಣ ಹಾಗೂ ಸಂವಿಧಾನದ ಆಶಯವಾಗಿರುವ ಕಟ್ಟಕಡೆಯ ಮನುಷ್ಯನ ಬದುಕಿಗೆ ಸಹಾಯ ಮಾಡುವಂತಾಗಬೇಕು. ಅದರ ಮೂಲಕ ಸರ್ವೇಜನಃ ಸುಖಿನೋಭವಂತು ಎಂದು ಮುನ್ನಡೆಯಲು ಅವಕಾಶ ಕೊಡಬೇಕೆಂದು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ನಗರಾಭಿವೃದ್ಧಿ ಕೋಶದ ಕೃಷ್ಣಪ್ಪ ಅವರಿಗೆ ಮನವಿಯಲ್ಲಿ ವಿನಂತಿಸಿದ್ದಾರೆ. ಇದಕ್ಕೂ ಮುಂಚೆ ಗುರುವಾರ ತಂಡದ ಸದಸ್ಯರು ಜನಾಂಗದ ಮಕ್ಕಳು ಓದುತ್ತಿರುವ ಕೊಟಗಾರಗೇರಾ ಸ.ಹಿ.ಪ್ರಾ.ಶಾಲೆಗೆ ಭೇಟಿ ನೀಡಿ ಶಾಲೆಯ ಶಿಕ್ಷಕರೊಂದಿಗೆ ಚರ್ಚಿಸಿದರು.

Please follow and like us:
error