ಹಕ್ಕಿ ಪಿಕ್ಕಿ ಜನಾಂಗದ ಕೌಟಂಬಿಕ ಸರ್ವೆ

ಹಕ್ಕಿ ಪಿಕ್ಕಿ ಜನಾಂಗದ ಕೌಟಂಬಿಕ ಸರ್ವೆ ಪೂರ್ಣ,
ಇಂದು ಉಚಿತ ಆರೋಗ್ಯ ಶಿಬಿರ
ಕೊಪ್ಪಳ, ಫೆ. 12: ಕೊಪ್ಪಳ ನಗರದ ಸಜ್ಜಿಹೊಲದಲ್ಲಿರುವ ಹಕ್ಕಿ-ಪಿಕ್ಕಿ ಸಮುದಾಯದವರಿಗೆ ಫೆ. 13 ಬುಧವಾರದಂದು ಮಧ್ಯಾಹ್ನ 3 ಗಂಟೆಯಿಂದ ಕೊಪ್ಪಳ ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕøತಿಕ ಸಂಸ್ಥೆ, ರೆಡ್ ಕ್ರಾಸ್ ಸಂಸ್ಥೆ ಬ್ಲಡ್ ಬ್ಯಾಂಕ್ ಹಾಗೂ ಕೊಪ್ಪಳ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಜಾಗೃತಿ, ಚಿಕಿತ್ಸೆ, ರಕ್ತದ ಗುಂಪು ಮತ್ತು ಆರ್.ಬಿ.ಸಿ ಕೌಂಟ್ ಪರೀಕ್ಷೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ತಹಶೀಲ್ದಾರ ಜೆ. ಬಿ. ಮಜ್ಜಗಿ, ಶಿಬಿರ ಉದ್ಘಾಟಿಸಲಿದ್ದಾರೆ. ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಂಚಾಲಕಿ ಜ್ಯೋತಿ ಎಂ. ಗೊಂಡಬಾಳ ಅಧ್ಯಕ್ಷತೆವಹಿಸುವರು. ನಗರಸಭೆ ಪೌರಾಯುಕ್ತ ಸುನೀಲ್ ಕುಮಾರ್ ಪಾಟೀಲ್, ಸದಸ್ಯೆ ಯಲ್ಲಮ್ಮ ಗಿಣಗೇರಿ, ಮಾಜಿ ಸದಸ್ಯ ರಮೇಶ ಗಿಣಗೇರಿ ಇತರರು ಪಾಲ್ಗೊಳ್ಳುವರು.
ಸ್ವರಭಾರತಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ರೋಟರಿ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ರೋಟರಿ ಕ್ಲಬ್ ಕಾರ್ಯದರ್ಶಿ ಯಂಕಪ್ಪ ಅತ್ತಾರ್, ರೆಡ್ ಕ್ರಾಸ್ ಸಂಸ್ಥೆಯ ಡಾ. ಕೆ. ಜಿ. ಕುಲಕರ್ಣಿ, ಡಾ. ಚಂದ್ರಶೇಖರ ಕರಮುಡಿ, ಗವಿಶ್ರೀ ಕ್ಲಿನಿಕ್‍ನ ಡಾ. ಮಂಜುನಾಥ ಸಜ್ಜನ್, ಶೀಫಾ ಕ್ಲಿನಿಕ್‍ನ ಡಾ. ಎಸ್. ಕೆ. ರಾಜೂರ, ಅನ್ನದಾನೇಶ್ವರ ಕ್ಲಿನಿಕ್‍ನ ಡಾ. ಶ್ರೀನಿವಾಸ ಹ್ಯಾಟಿ, ರೆಡ್ ಕ್ರಾಸ್‍ನ ಪಿಆರ್‍ಒ ದೇವೇಂದ್ರಪ್ಪ ಇತರರು ಭಾಗವಹಿಸುವರು.
ಕೌಟಂಬಿಕ ಸರ್ವೆ ವರದಿ : ಜಿಲ್ಲಾ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಫೆ. 12 ಮಂಗಳವಾರದಂದು ಮನೆ ಮನೆ ಕೌಟಂಬಿಕ ಸಮೀಕ್ಷೆ ನಡೆಸಿದ್ದು, ಒಟ್ಟು 33 ಕುಟುಂಬಗಳು ಅಲ್ಲಿ ವಾಸಿಸುತ್ತಿರುವದು ದಾಖಲಾಗಿವೆ. ಅದರಲ್ಲಿ 22 ಮಕ್ಕಳು ನಗರದ ಸರಕಾರಿ ಪ್ರಾ. ಶಾ. ಕೊಟಗಾರಗೇರಾ ಶಾಲೆಯಲ್ಲಿ ದಾಖಲೆ ಇವೆ. ಅಲ್ಲಿಯೇ ಇರುವ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಹೋಗುತ್ತವೆ. ಮಕ್ಕಳು ಹಲವಾರು ಕಾರಣಗಳಿಂದ ಶಾಲೆಗೆ ಹೋಗುತ್ತಿಲ್ಲ. ಒಂದು ಅವರಿಗಿರುವ ಬಡತನಕ್ಕೆ ಅವರು ಬೇರೆ ಕಡೆ ದುಡಿಯಲು ಹೋಗುವ ಪೋಷಕರ ಜೊತೆಗೆ ಹೋಗುತ್ತಾರೆ, ನೀರಿನ ಅಭಾವದಿಂದ ಸ್ನಾನ ಇತ್ಯಾದಿ ಮಾಡಲು ಸಾಧ್ಯವಾಗದ್ದರಿಂದ ಶಾಲೆಯಲ್ಲಿ ಸೇರಿಸುವದಿಲ್ಲ, ಮನೆಯ ಹಿರಿಯರಿಗೆ ದುಡಿಯಲು ಕೆಲಸ ಲಭ್ಯವಿಲ್ಲದ್ದರಿಂದ ಮಕ್ಕಳು ಮತ್ತು ಹೆಣ್ಣುಮಕ್ಕಳು ಭಿಕ್ಷೆ ಬೇಡಲು ಹೋಗುತ್ತಾರೆ. ಹೀಗೆ ನಾನಾ ಸಮಸ್ಯೆಗಳಿಂದ ಅವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಶಾಲೆಯಲ್ಲಿ ಸಿಗುವ ಸೌಲಭ್ಯಗಳಾದ ಶೂ, ಸಾಕ್ಸ್, ಪಠ್ಯ ಪುಸ್ತಕ, ಬಟ್ಟೆ, ಸೈಕಲ್ ನೀಡಲಾಗಿದೆಯಾದರೂ ಬಹಳಷ್ಟು ಮಕ್ಕಳಿಗೆ ಓದಲು, ಬರೆಯಲು ಬರುವದಿಲ್ಲ ಆದರೂ ಅವರು ಶಿಕ್ಷಣ ಇಲಾಖೆಯ ನಿಯಮದಂತೆ ಪಾಸ್ ಆಗಿದ್ದಾರೆ. ಅಕ್ಷರ ಬರದ ಶಿಕ್ಷಣದಿಂದ ಏನು ಪ್ರಯೋಜನ ಎನ್ನುವದು ಈಗಿನ ಯಕ್ಷ ಪ್ರಶ್ನೆ.
ಹರಿಣಶಿಕಾರಿ ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಲೇಮಾರಿ ಸಮುದಾಯದ 33 ಕುಟುಂಬಗಳಲ್ಲಿ ಒಟ್ಟು ಜನಸಂಖ್ಯೆ (93), ಅದರಲ್ಲಿ ಮದುವೆಯಾದವರು (36+5), ವಿಧವೆಯರು ಮಾಸಾಶನ ಪಡೆಯುತ್ತಾರೆ (05), ಅಂಗವಿಕಲ ಮಾಸಾಶನ ಪಡೆಯುವವರು (02), 0-5 ಮಕ್ಕಳು (ಗ-3 ಹೆ-3), 6-10 ಮಕ್ಕಳು (ಗ-6 ಹೆ-7), 11-14 ಮಕ್ಕಳು (ಗ-5 ಹೆ-6), 15-18 ಮಕ್ಕಳು (ಗ-1 ಹೆ-2), 19-59 ವಯಸ್ಸಿನವರು (ಗ-23 ಹೆ-26), 60 ವರ್ಷ ಮೇಲ್ಪಟ್ಟವರು (ಗ-6 ಹೆ-5) ಇದ್ದಾರೆ. ಇದರಲ್ಲಿ ಮತದಾರರು (60), ಆಧಾರ ಕಾರ್ಡ್ (ಇರುವವರು-72 ಇಲ್ಲ-21), ರೇಷನ್ ಕಾರ್ಡ್ (ಇರುವವರು-22 ಇಲ್ಲ-11), ಪಕ್ಕಾ ಮನೆಗಳು (07), ಗುಡಿಸಲು ಹಂಚು (14), ಗುಡಿಸಲು (5), ಬಾಡಿಗೆ (3), ಮನೆ ಇಲ್ಲದವರು (4).
ಸರ್ವೆ ಕಾರ್ಯದಲ್ಲಿ ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿಯ ಸಂಚಾಲಕಿ ಜ್ಯೋತಿ ಎಂ. ಗೊಂಡಬಾಳ, ಸದಸ್ಯರಾದ ಅಶ್ವಿನಿ ಅರಕೇರಾ, ಅಜುಮುನ್ನಿಸಾ ಬೇಗಂ ಮತ್ತು ಸಲೀಮಾ ಜಾನ್ ಇದ್ದರು.
ಕ್ರೋಡೀಕೃತ ಪೂರ್ಣ ಮಾಹಿತಿಯ ಪ್ರತಿಯನ್ನು ನಗರಸಭೆ ಪೌರಾಯುಕ್ತರು, ಜಿಲ್ಲಾ ನ್ಯಾಯಾಧೀಶ ಟಿ. ಶ್ರೀನಿವಾಸ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ತಹಶೀಲ್ದಾರ ಜೆ. ಬಿ. ಮಜ್ಜಗಿ, ಸಮಾಜ ಕಲ್ಯಾಣ ಉಪನಿರ್ದೇಶಕ ಬಿ. ಕಲ್ಲೇಶರವರಿಗೆ ನೀಡಿದರು.

Please follow and like us:
error