ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ

New Doc 18

:

New Doc 18
New Doc 18

ಮುಂದಿನ ತಿಂಗಳಿನಿಂದ ರಾಯಚೂರಿನಲ್ಲಿ ನಡೆಯಲಿರುವ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರಕಾರವು ಈಗಾಗಲೇ ಎರಡು ಕೋಟಿ ರೂ. ಬಿಡುಗಡೆ ಮಾಡಿದ್ದು, ಜತೆಗೆ ಎರಡು ಕೋಟಿ ರೂ.ಶೀಘ್ರದಲ್ಲಿಯೇ ನೀಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಇಂದಿಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಸಾಹಿತ್ಯ ಸಮ್ಮೇಳನದ ಸಂಬಂಧ ಆಗುತ್ತಿರುವ ಸಿದ್ಧತೆಗಳ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಕೇಂದ್ರ ಸರಕಾರವು 500 ಮತ್ತು 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಸಿರುವ ಕಾರಣ, ಸಮ್ಮೇಳನಕ್ಕೆ ಬರುವವರ ಮೇಲೂ ಪ್ರಭಾವ ಬೀರಬಹುದು. ಜತೆಗೆ, ಪುಸ್ತಕ ಪ್ರಿಯರಿಗೂ ಇದರಿಂದ ತೊಂದರೆಯಾಗಬಹುದು. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಸಂಚಾರ ಎಟಿಎಂಗಳನ್ನು ಸ್ಥಾಪಿಸುವಂತೆ ಬ್ಯಾಂಕ್‌ಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉಳಿದ ಬ್ಯಾಂಕುಗಳು ಕೂಡ ಪೂರಕವಾಗಿ ಪ್ರತಿಕ್ರಿಯಿಸಿವೆ. ಇದಲ್ಲದೆ, ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ಹಾಕುವ ಪ್ರಕಾಶಕರು ಮತ್ತು ವ್ಯಾಪಾರಿಗಳಿಗೆ ಸ್ವೆಪಿಂಗ್ ಮೆಶಿನ್ ತರುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಊಟ, ವಸತಿ ವ್ಯವಸ್ಥೆ: ಸಮ್ಮೇಳನದಲ್ಲಿ ಮೂರು ದಿನವೂ 50 ಸಾವಿರ ಜನರಿಗೆ ಊಟ-ತಿಂಡಿಯ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಈ ಬಾರಿ 90ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಜತೆಗೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಸಮ್ಮೇಳನ ನಡೆಯುತ್ತಿರುವ ರಾಯಚೂರಿನ ಕೃಷಿ ವಿ.ವಿ. ಆವರಣದಲ್ಲಿ ಹೊಸದಾಗಿ ನಾಲ್ಕು ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ ಎಂದು ಅವರು ವಿವರಿಸಿದರು.

ಆ್ಯಂಬುಲೆನ್ಸ್, ವೈದ್ಯರ ತಂಡ, ಶೌಚಾಲಯ: ಸಮ್ಮೇಳನಕ್ಕೆ ಬರುವ ಯಾರಿಗಾದರೂ ಆರೋಗ್ಯದ ತೊಂದರೆಯಾದರೆ ವೈದ್ಯಕೀಯ ನೆರವು ನೀಡಲು ಒಟ್ಟು 80 ವೈದ್ಯರು ಇರಲಿದ್ದಾರೆ. ಜತೆಗೆ ಎರಡು ಆ್ಯಂಬುಲೆನ್ಸ್‌ಗಳನ್ನು ಕೂಡ ಸಮ್ಮೇಳನದ ಮೂರೂ ದಿನ ಸಿದ್ಧವಾಗಿ ಇಡಲಾಗಿರುತ್ತದೆ. ಜತೆಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ತಲಾ 100 ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಾರೆ ಶುಚಿತ್ವ ಕಾಪಾಡಲು 200 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲದೆ, ಊಟ-ತಿಂಡಿ ಮತ್ತಿತರ ಕೆಲಸಗಳಲ್ಲಿ ನೆರವಾಗಲು ಎರಡು ಸಾವಿರ ಜನರ ‘ಕನ್ನಡ ಸೇವಕರು’ ಪಡೆಯನ್ನು ಸಿದ್ಧಗೊಳಿಸಿ, ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಒಒಡಿ ಪ್ರಮಾಣಪತ್ರ ನಿರಾತಂಕ: ಸಮ್ಮೇಳನಕ್ಕೆ ಬರುವ ಸರಕಾರಿ ನೌಕರರಿಗೆ ಒಒಡಿ ಪ್ರಮಾಣಪತ್ರ ನೀಡುವ ವಿಚಾರಕ್ಕೆ ಸಂಬಂಸಿದಂತೆ ಎಲ್ಲ ಸಮ್ಮೇಳನಗಳಲ್ಲೂ ನೂಕುನುಗ್ಗಲು ಸಾಮಾನ್ಯ. ಆದರೆ, ಈ ಬಾರಿ ಹೀಗಾಗದಂತೆ ಎಚ್ಚರ ವಹಿಸಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಕಸಾಪ ಘಟಕಗಳ ಅಧ್ಯಕ್ಷರಿಗೇ ವಹಿಸಿದೆ. ಇದರ ಪ್ರಕಾರ ಸರಕಾರಿ ನೌಕರರಿಗೆ ಡಿ.3ರ ರಾತ್ರಿಯಿಂದ ಅಥವಾ ಡಿ.4ರ ಬೆಳಗ್ಗೆಯಿಂದ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಗೌರವ ಕಾರ್ಯದರ್ಶಿಗಳಾದ ಭೀಮನಗೌಡ ಇಟಗಿ, ಜೆ.ಎಲ್. ಈರಣ್ಣ, ವ.ಚ. ಚನ್ನೇಗೌಡ, ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮುಂತಾದವರು ಉಪಸ್ಥಿತರಿದ್ದರು. ಆ್ಯಪ್ ಬಿಡುಗಡೆ: ಕೇಂದ್ರ ಸರಕಾರದ ‘ಭಾರತವಾಣಿ’ ಯೋಜನೆಯಡಿ ದೇಶದ ಎಲ್ಲ ಭಾಷೆಗಳ ಅತ್ಯುತ್ತಮ ಗ್ರಂಥಗಳನ್ನೂ ಭಾರತೀಯ ಭಾಷಾ ಸಂಸ್ಥಾನ ಡಿಜಿಟಲೀಕರಣ ಮಾಡುತ್ತಿದೆ. ಈ ಯೋಜನೆಯ ಭಾಗವಾಗಿ ಕಸಾಪ ಹಕ್ಕುಸ್ವಾಮ್ಯ ಹೊಂದಿರುವ 200 ಗ್ರಂಥಗಳ ಡಿಜಿಟಲೀಕರಣ ಪ್ರಕ್ರಿಯೆ ನಡೆಯುತ್ತಿದೆ. ಇದರ ಅಂಗವಾಗಿ ಸಮ್ಮೇಳನದಲ್ಲಿ ಪರಿಷತ್ತು ಪ್ರಕಟಿಸಿರುವ ‘ಸಂಕ್ಷಿಪ್ತ ಕನ್ನಡ ನಿಘಂಟು’ ಕೃತಿಯ ಆ್ಯಪ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಚಾಲಕ ಸುದರ್ಶನ ಬೇಳೂರು ಇದೇ ಸಂದರ್ಭದಲ್ಲಿ ತಿಳಿಸಿದರು.

Please follow and like us:
error