ಸಾರಿಗೆ ಮತ್ತು ಸಾರಾಯಿಯಲ್ಲಿ ಸುಲಿಯಬಾರದೆಂದರೆ ಸಾಧ್ಯವೇ?

ಶರತ್ ಹೆಗ್ಡೆ

ಸರ್ಕಾರಕ್ಕೆ ದುಡ್ಡು ಕಡಿಮೆ ಆದಾಗ ಕಾಣುವುದು ಒಂದು ಸಾರಿಗೆ. ಇನ್ನೊಂದು ಸಾರಾಯಿ. ಇಬ್ಬರಿಗೂ ಟಾರ್ಗೆಟ್‌ ನೀಡಿ ಸುಲಿಗೆಯ ದಾರಿಯನ್ನು ಅದು ಕಂಡುಕೊಂಡಿದೆ. ಒಂದು ರಶೀದಿಯುಕ್ತ, ಇನ್ನೊಂದು ರಶೀದಿಮುಕ್ತ. ಹಾಗಿರುವಾಗ ವ್ಯವಸ್ಥೆ ಬದಲಾಗುವುದಿಲ್ಲ….

ಮುಂದೆ ಓದಿ…

ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಸ್ಥಗಿತಗೊಂಡು ಇಂದಿಗೆ ನಾಲ್ಕನೇ ದಿನ. ಕೆಎಸ್‌ಆರ್‌ಟಿಸಿ ಸ್ಥಗಿತಗೊಂಡಾಗ ರಾಜ್ಯ ಸರ್ಕಾರ ತಕ್ಷಣಕ್ಕೆ ಪರ್ಯಾಯವಾಗಿ ಖಾಸಗಿ ವ್ಯವಸ್ಥೆಗೆ ಅವಕಾಶ ಕೊಡುವುದು ಅನಿವಾರ್ಯ ಮತ್ತು ಸದ್ಯದ ತುರ್ತು. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟಿವಿ ಮಾಧ್ಯಮದವರಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ.
ಅವರ ಮಾತಿಗೆ ’ನನ್ನದೇ ಸರಿ‘ ಎಂಬಂತೆ ಇಡೀ ದಿನ ದೆವ್ವ ಬಂದವರಂತೆ ಒದರಾಡುವುದೂ ಉತ್ತಮ ಸಮಾಜದ ಭರವಸೆ ಕೊಡುವವರಿಗೆ ಶೋಭಿಸುವುದಿಲ್ಲ.
ಈ ನಡುವೆ ಟಿವಿ ಮಾಧ್ಯಮಗಳು ಮತ್ತು ಜನರ ಅಭಿಪ್ರಾಯ ಎರಡನ್ನೂ ಗಮನಿಸಿ ಒಂದಿಷ್ಟು ಮಾತನಾಡಬೇಕು ಅನಿಸಿತು. ಈ ಬಗ್ಗೆ ಅತಿಯಾಗಿ ಟಿವಿ ಮಾಧ್ಯಮದಲ್ಲಿ ಮಾತನಾಡುವ ಪಂಡಿತ ರಿಪೋರ್ಟರ್‌ಗಳು ದಯಮಾಡಿ ಓದಿ.
ಖಾಸಗಿ ಮತ್ತು ಸರ್ಕಾರಿ ಬಸ್‌ ವ್ಯವಸ್ಥೆಯನ್ನು ಅತ್ಯಂತ ಹತ್ತಿರದಲ್ಲಿ ಕಂಡ ಅನುಭವದಿಂದ ಈ ವಿಷಯ ಬರೆಯುತ್ತಿದ್ದೇನೆ.
ಆರೋಪ:‍
ಖಾಸಗಿಯವರು ಜನರನ್ನು ಸುಲಿಯುತ್ತಿದ್ದಾರೆ.
ಉತ್ತರ: ನೀವು ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ಆದರೆ ಅದು ತಾತ್ಕಾಲಿಕ ನೆಲೆಯಲ್ಲಿ ಬಂದ ಬಸ್‌ಗಳು, ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ಪರವಾನಗಿ ಹೊಂದಿರುವ ಡೀಲಕ್ಸ್‌, ಸೆಮಿಡೀಲಕ್ಸ್‌ ಬಸ್‌ಗಳು ಹೀಗೆ ಮಾಡುತ್ತವೆ. ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳು (ರೂಟ್‌ ಬಸ್‌ಗಳು) ಹೀಗೆ ಮಾಡಲು ಅವಕಾಶ ಇಲ್ಲ. ಏಕೆಂದರೆ ಪ್ರತಿ ಮಾರ್ಗದ ಸ್ಟೇಜ್‌ವಾರು ದರಪಟ್ಟಿಯನ್ನು ಸಾರಿಗೆ ಇಲಾಖೆ ಅವರಿಗೆ ನಿಗದಿಪಡಿಸಿರುತ್ತದೆ. ಅದರ ಪ್ರಕಾರವೇ ಅವರು ನಡೆದುಕೊಳ್ಳಬೇಕು. ಸದ್ಯ ಕೆಲವರಷ್ಟೇ ಪರಿಸ್ಥಿತಿಯ ಲಾಭ ಪಡೆದಿರಬಹುದು.
ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ನ ವ್ಯಾಖ್ಯಾನವೇ ಬೇರೆ. ಅದು ಒಂದು ಸ್ಥಳದಿಂದ (ಅಷ್ಟೂ ಸೀಟುಗಳನ್ನು ಒಂದೆ ಕಡೆ ಭರ್ತಿ ಮಾಡಿ) ಇನ್ನೊಂದು ಸ್ಥಳ (ಕೊನೆಯ ನಿಲ್ದಾಣ)ಕ್ಕೆ ಜನರನ್ನು ತಲುಪಿಸುವುದಷ್ಟೇ ಅದರ ಕೆಲಸ. ಮಾರ್ಗಮಧ್ಯೆ ಜನರನ್ನು ಹತ್ತಿಸುವಂತಿಲ್ಲ (ಇದು ನಿಯಮ ಪ್ರಕಾರ ಮಾತ್ರ). ಹಾಗಾಗಿ ಇವುಗಳಿಗೆ ಕಿಲೋಮೀಟರ್‌ವಾರು ಅಥವಾ ಸ್ಟೇಜ್‌ವಾರು ದರಪಟ್ಟಿ ಇರುವುದಿಲ್ಲ. ವಾಹನ ಮಾಲೀಕ ಮತ್ತು ಬಳಕೆದಾರನ ಮಧ್ಯೆ ನಡೆದಿರುವ ಒಪ್ಪಂದದ ದರದಷ್ಟೇ ಬಳಕೆದಾರ ಪಾವತಿಸಬೇಕು. ಆ ದರ ಎಷ್ಟೇ ಇದ್ದರೂ ಬಳಕೆದಾರ ಮತ್ತು ಮಾಲೀಕನಿಗೆ ಸಂಬಂಧಿಸಿದ್ದು. ಬೇಕಿದ್ದರೆ ಬಳಸಬಹುದು. ಇಲ್ಲವಾದರೆ ಬಿಡಬಹುದು.
ಹಾಗಿದ್ದರೂ ಸುಲಿಗೆ ತಪ್ಪು ಅಲ್ಲವೇ?
ಹೌದು. ಯಾವ ಉದ್ಯಮದಲ್ಲಿಯೂ ಇಲ್ಲದ ತೆರಿಗೆ ವ್ಯವಸ್ಥೆ ಇಲ್ಲಿರುವುದು ಇದಕ್ಕೆ ಕಾರಣ. ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ನ 30 ಸೀಟುಗಳ ಬಸ್‌ಗೆ ಪ್ರತಿ ಮೂರು ತಿಂಗಳಿಗೆ ತೆರಿಗೆ ಪಾವತಿಸುವುದು ಎಷ್ಟು ಗೊತ್ತೆ? ಸುಮಾರು 1.05 ಲಕ್ಷ ರೂಪಾಯಿ. ಬಸ್‌ ಓಡಲಿ, ಬಿಡಲಿ. ತ್ರೈಮಾಸಿಕ ತೆರಿಗೆ ಕಟ್ಟಲೇಬೇಕು. ಈ ನಿಯಮ ಒಂದು ದಿನ ಓಡಿದರೂ ಅನ್ವಯ.
ಬಸ್‌ ಓಡಿಸುವುದಿಲ್ಲ ಎಂದಿಟ್ಟುಕೊಳ್ಳಿ. ಹಾಗಿದ್ದರೂ ನೀವು ವಾಹನದ ದಾಖಲೆಯನ್ನು ಇಲಾಖೆಗೆ ಒಪ್ಪಿಸಿ ಓಡಾಟ ಸ್ಥಗಿತಗೊಳಿಸಬೇಕು. ಮತ್ತೆ ಓಡಿಸುವುದಾದರೆ ಮೂರು ತಿಂಗಳ ತೆರಿಗೆ ಪಾವತಿಸಿಯೇ ಹೊರತೆಗೆಯಬೇಕು. (ಇದು ಎಲ್ಲಾ ವಾಣಿಜ್ಯ ವಾಹನಗಳಿಗೆ ಅನ್ವಯಿಸುವ ಅತಿ ದುಬಾರಿ ನಿಯಮ) ಈ ಬಾರಿ ಅನಿವಾರ್ಯ ಎಂಬ ಕಾರಣಕ್ಕಷ್ಟೇ ಒಂದು ತಿಂಗಳ ತೆರಿಗೆ ವಿನಾಯಿತಿಯನ್ನು ತೋರಿಕೆಗಷ್ಟೇ ಕೊಟ್ಟಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಸಂಚಾರವೇ ಇಲ್ಲವಾದರೂ ತೆರಿಗೆ ಅಷ್ಟನ್ನೂ ಸುಲಿದಿಲ್ಲವೇ?
ಬೇರೆ ಉದ್ಯಮದಲ್ಲಾದರೆ ಸರಕು ಅಥವಾ ಸೇವೆ ಮಾರಾಟ ಆದರೆ ಮಾತ್ರ ತೆರಿಗೆ ಪಾವತಿಸಬೇಕು. ಇಲ್ಲಿ ಹಾಗಲ್ಲ. ನಡೆಯುವುದು ಸರ್ಕಾರದಿಂದಲೇ ಅಧಿಕೃತ ಸುಲಿಗೆ. ಸರ್ಕಾರಿ ಬಸ್‌ಗಳಿಗೆ ಕಲೆಕ್ಷನ್‌ ಆಧಾರದ ಮೇಲೆ ಶೇ ಎರಡೂವರೆ ಮಾತ್ರ ತೆರಿಗೆ. ಬಸ್‌ ಓಡದಿದ್ದರೆ ಪಾವತಿಸಬೇಕಾಗಿಲ್ಲ.
ವಾರಪೂರ್ತಿ ಓಡುವ ಬಸ್‌ ಮೂರು ದಿನ ಖಾಲಿ ಓಡಿದರೆ ಗಳಿಸಿದ್ದೆಲ್ಲವನ್ನೂ ರಸ್ತೆಗೆ ಸುರಿದಂತೆ. ಈ ಕಾರಣಕ್ಕಾಗಿಯೇ ವಾಹನ ಮಾಲೀಕರು ಅವಕಾಶ ಸಿಕ್ಕಾಗ ದುಪ್ಪಟ್ಟು ದರ, ವಾರಾಂತ್ಯದಲ್ಲಿ ದುಪ್ಪಟ್ಟು ಅಥವಾ ಮೂರುಪಟ್ಟು ಟಿಕೆಟ್‌ ದರ ವಿಧಿಸಿ ಈ ನಷ್ಟ ಭರ್ತಿ ಮಾಡಲು ಪ್ರಯತ್ನಿಸುತ್ತಾರೆ. ವಿನಃ ಈ ಸುಲಿದ ಮೊತ್ತ ಮಾಲೀಕರ ಜೇಬು ಸೇರುವುದಿಲ್ಲ.
ಇಷ್ಟು ರಸ್ತೆ ತೆರಿಗೆ ಪಾವತಿಸಿಯೂ ವಾಹನ ಸುಗಮವಾಗಿ ಸಂಚರಿಸುವಂತಿಲ್ಲ. ಹೆದ್ದಾರಿಯಲ್ಲಿ ಸಂಚರಿಸಬೇಕಾದರೆ ಒಂದು ಪ್ರವೇಶಕ್ಕೆ ಕನಿಷ್ಠ ₹ 250 ಟೋಲ್‌ ಕಟ್ಟಬೇಕು. ದಿನಕ್ಕೆ ಸರಾಸರಿ 300 ಕಿಲೋಮೀಟರ್‌ ಓಡುವ ವಾಹನ ಈ ಮಾರ್ಗದಲ್ಲಿ ಪ್ರತಿದಿನ ಕಟ್ಟುವ ಟೋಲ್‌ ಎಷ್ಟು ನೀವೇ ಲೆಕ್ಕಹಾಕಿ.
ಇನ್ನು ಬಸ್‌ ನಿರ್ವಹಣೆ, ಇಎಂಐ ವೆಚ್ಚ ಅದೆಲ್ಲಾ ಬೇರೆ.
ಸರಿ ನೀವು ಈ ಉದ್ಯಮ ಬಿಟ್ಟು ಬೇರೆ ಮಾಡಬಹುದಲ್ಲವೇ ಎಂಬುದು ಸರಳವಾದ ಪ್ರಶ್ನೆ.
ಇದು ಆವೇಶದಲ್ಲಿ ಹೇಳುವುದು ಬಹಳ ಸುಲಭ. ಸಾರಿಗೆ ಕ್ಷೇತ್ರ ಅತಿ ದೊಡ್ಡ ಅಸಂಘಟಿತ ವಲಯ. ಸಾವಿರಾರು ಜನರು ಈ ಕ್ಷೇತ್ರವನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಇಲ್ಲಿ ನೋಡಬೇಕಾದದ್ದು ಕೇವಲ ಮಾಲೀಕನೊಬ್ಬನನ್ನು ಅಲ್ಲ. ವಾಹನದ ಅವಲಂಬಿತರನ್ನೂ ನೋಡಬೇಕು. ಅದು ದೇಶಕ್ಕೆ ಕೊಡುವ ಆದಾಯ ಪ್ರಮಾಣವನ್ನೂ ಗಮನಿಸಬೇಕು. ಹೀಗೆ ಹೇಳುವವರು ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ. ನನ್ನನ್ನು ಈ ಕೆಲಸದಿಂದ ತೆಗೆದರೆ ಅಷ್ಟು ಸುಲಭವಾಗಿ ಇನ್ನೊಂದು ಉದ್ಯೋಗ ದೊರಕುವುದು ಅಥವಾ ಹೊಸ ಕೆಲಸ ಮಾಡುವುದು ಸುಲಭವೇ?
ನಿಮಗೆ ಗೊತ್ತೇ ಒಂದು ಬಸ್‌ ಅಥವಾ ಲಾರಿ ಕನಿಷ್ಠ 7 ಜನರಿಗೆ ಅನ್ನ ಕೊಡುತ್ತದೆ. ಒಬ್ಬ ಮಾಲೀಕ, ಇಬ್ಬರು ಚಾಲಕರು, ಇಬ್ಬರು ನಿರ್ವಾಹಕರು (ಲಾರಿ ಆದರೆ ಕೂಲಿಯವರು), ಕ್ಲೀನರ್‌, ಏಜೆಂಟ್‌. ಇನ್ನು ಮೆಕ್ಯಾನಿಕ್‌ಗಳು, ಪೂರಕ ಸಾಮಗ್ರಿ ಪೂರೈಸುವವರ ಲೆಕ್ಕಾಚಾರ ಬೇರೆ. ಇಷ್ಟು ಕೊಟ್ಟು ತನ್ನ ವಾಹನಕ್ಕಿಂತಲೂ ಭಾರವಾದ ತೆರಿಗೆಯನ್ನು ಬ್ಯಾಂಕ್‌ ಇಎಂಐಗಿಂತಲೂ ಹೆಚ್ಚು ಪಾವತಿಸಬೇಕಾಗುತ್ತದೆ.
ಇನ್ನು ಎಫ್‌ಸಿ, ಇನ್‌ಶ್ಯೂರೆನ್ಸ್‌…
ಪ್ರತಿ ವಾಹನದ ಅರ್ಹತಾ ಪ್ರಮಾಣ ಪತ್ರಕ್ಕೆ ವೆಚ್ಚ ಆಗುವುದು ಗರಿಷ್ಠ 1 ಸಾವಿರದಿಂದ 1,500 ರೂಪಾಯಿ. ಆದರೆ, ಎರಡು ವರ್ಷಗಳ ಹಿಂದೆ ಕನಿಷ್ಠ 4,500ರಿಂದ ಸುಲಿಗೆ ನಡೆಯುತ್ತಿದ್ದದ್ದನ್ನು ಕಣ್ಣಾರೆ ಕಂಡಿದ್ದೇನೆ. ಈಗ ಅದೂ ದುಪ್ಪಟ್ಟಾಗಿದೆ. ಇದಕ್ಕೆ ಮಧ್ಯವರ್ತಿಗಳು ಕಾರಣ ಎಂದು ಹೇಳಬಹುದು. ಆದರೆ, ಶ್ರೀಸಾಮಾನ್ಯನೊಬ್ಬ ಆರ್‌ಟಿಒ ಕಚೇರಿಗೆ ಹೋದರೆ ನೀವು ನಡೆಸಿಕೊಳ್ಳುವ ರೀತಿ ಹೇಗಿರುತ್ತದೆ? ಅದೇ ತಾನೆ ಸೈಕಲ್‌ ಕಳ್ಳನನ್ನು ಹಿಡಿದು ರುಬ್ಬುವ ಪೊಲೀಸನ ರೀತಿ ವರ್ತಿಸುತ್ತೀರಿ. ನಿಮ್ಮ ಭಾಷೆ ದೇವರಿಗೇ ಪ್ರೀತಿ. ಆರ್‌ಟಿಒ ಕಚೇರಿಗಳಲ್ಲಂತೂ ಕಂಬಕಂಬಕ್ಕೂ ಹಣ ಕೊಟ್ಟೇ ಮಾತನಾಡಿಸಬೇಕಾಗುತ್ತದೆ. ಹೀಗಿರುವಾಗ ನಿಮಗೆ ಮಧ್ಯವರ್ತಿ ಎಂಬ ಪುರೋಹಿತನ ಮೂಲಕವೇ ದುಬಾರಿ ಕಾಣಿಕೆ ಸಲ್ಲಿಸುವುದು ಮಾಲೀಕರ ಅನಿವಾರ್ಯತೆ.
ಹೀಗಾಗಿ ಪ್ರಮಾಣ ಪತ್ರ ಇದ್ದರೂ ವಾಹನ ಸುರಕ್ಷಿತ ಎಂದು ಹೇಳಲಾಗದು. ಪ್ರಮಾಣಪತ್ರ ಇಲ್ಲದ ಮಾತ್ರಕ್ಕೆ ವಾಹನಕ್ಕೆ ಬ್ರೇಕೇ ಇಲ್ಲ ಎಂದೂ ನಿರ್ಧಾರಕ್ಕೆ ಬರಲಾಗದು.
ಸಾಧ್ಯವಿದ್ದರೆ ಆ ಫಿಟ್‌ನೆಸ್‌ ಸರ್ಟಿಫಿಕೇಟ್‌ ಕೊಡಲು ನಡೆಯುವ ಪರೀಕ್ಷಾ ಪ್ರಕ್ರಿಯೆ ಅನ್ನುವ ನಾಟಕವನ್ನು ಒಮ್ಮೆಯಾದರೂ ಹತ್ತಿರದಿಂದ ನೋಡಿ. ಎಷ್ಟೋ ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಯೇ ಬ್ರೇಕ್‌ ಇನ್‌ಸ್ಪೆಕ್ಟರ್‌ ಆಗಿರುತ್ತಾನೆ. ಎರಡು ಸುತ್ತು ಹಾಕಿ. ಹೆಡ್‌ಲೈಟ್‌, ಬ್ರೇಕ್‌ಲೈಟ್‌ಗಳನ್ನು ಹಾಕಿದರೆ ಮುಗಿಯಿತು. ಫಿಟ್‌ನೆಸ್‌ ಸರ್ಟಿಫಿಕೇಟ್‌ ಸಿಕ್ಕಿದಂತೆಯೇ.
ಇಷ್ಟೆಲ್ಲಾ ಇದ್ದೂ ಒಂದು ಅಪಘಾತವಾಯಿತೆಂದಿಟ್ಟುಕೊಳ್ಳಿ ಆಗ ಆರ್‌ಟಿಒ ಅಧಿಕಾರಿಗಳಿಗೆ, ಮಧ್ಯವರ್ತಿಗಳಿಗೆ, ಪೊಲೀಸರಿಗೆ ಮತ್ತು ಕೆಲವು ಪತ್ರಕರ್ತರಿಗೂ(!) ಹಬ್ಬ.
ಸ್ಪೀಡ್‌ ಗವರ್ನರ್‌…
ಆರ್‌ಟಿಒ ಅಧಿಕಾರಿಗಳೇ ಸರಿಯಾಗಿ ಗಮನಿಸಿ. ಸ್ಪೀಡ್‌ ಗವರ್ನರ್‌ನ ವಾಸ್ತವ ಬೆಲೆ ಮೂರು ಸಾವಿರ ರೂಪಾಯಿ ದಾಟುವುದಿಲ್ಲ. ಆದರೆ ಅದನ್ನೊಂದು ಖಾಸಗಿ ಕಂಪನಿಗೆ ಗುತ್ತಿಗೆ ಕೊಟ್ಟುಬಿಟ್ಟಿರಿ. 11 ಸಾವಿರ ರೂಪಾಯಿಗಿಂತ ಕಡಿಮೆಗೆ ಆ ಯಂತ್ರ ಸಿಗುವುದೇ ಇಲ್ಲ ಎಂಬಂತೆ ಮಾಡಿಬಿಟ್ಟಿರಿ. ಅಂಥ ರಾಕೆಟ್‌ ತಂತ್ರಜ್ಞಾನವೇನೂ ಅದರಲ್ಲಿ ಇಲ್ಲ ಎನ್ನುವುದು ಸಾಮಾನ್ಯ ಮೆಕ್ಯಾನಿಕ್‌ಗೂ ಗೊತ್ತಿದೆ. ಸ್ಪೀಡ್‌ ಗವರ್ನರ್‌ ಮತ್ತು ಅದರ ಬಿಲ್‌ ಹಾಜರುಪಡಿಸಲೇಬೇಕು. ಒಂದು ವೇಳೆ ಸ್ಪೀಡ್‌ ಗವರ್ನರ್‌ ಇದ್ದು, ಬಿಲ್‌ ಇಲ್ಲ ಎಂದಾದರೆ ಅದಕ್ಕೆ ಒಂದು ಕನಿಷ್ಠ 1 ಸಾವಿರ ರೂಪಾಯಿ ‘ಮೇಲು ತೆರಿಗೆ‘ ಆರ್‌ಟಿಒ ಇನ್ಸ್ಪೆಕ್ಟರ್‌ಗಳ ಹುಂಡಿಗೆ ಹಾಕಬೇಕು.
ಇಷ್ಟೆಲ್ಲಾ ಕಸರತ್ತು ಮಾಡಿ ಅರ್ಹತೆ ಗಿಟ್ಟಿಸಿಕೊಂಡ ವಾಹನದವರು ತಪ್ಪಿಯೂ ಕೂಡಾ ಸ್ಪೀಡ್‌ ಗವರ್ನರ್‌ ಅಳವಡಿಸಿ ವಾಹನ ಓಡಿಸುವುದಿಲ್ಲ. ಹಾಗೆ ಓಡಿಸಿದರೆ ಈಗಿನ ಸಾಮಾನ್ಯ ವೇಗದಲ್ಲಿ ಗಮ್ಯ ತಲುಪವುದೂ ಅಸಾಧ್ಯ. ಇದೀಗ ಜಿಪಿಎಸ್‌ ಅಳವಡಿಕೆ ಕಡ್ಡಾಯ ಎಂದೂ ಆಗಿದೆ. ಆದರೆ, ಅದರಿಂದ ಏನು ಸಾಧಿಸಿದಿರೋ ಗೊತ್ತಿಲ್ಲ. ಟೋಲ್‌ ಪಾವತಿಗೆ ಒಂದಿಷ್ಟು ನೆರವಾದೀತು ಅಷ್ಟೇ.
ವಿಮೆ ಅಗತ್ಯ ಹೌದು. ಆದರೆ, ಅದರ ಮೇಲೂ ಶೇ 18ರಷ್ಟು ಜಿಎಸ್‌ಟಿ ಹೊರಿಸಿ ಹೈರಾಣ ಮಾಡಿಬಿಟ್ಟಿದ್ದೀರಿ.
ಹೇಳಿ ಪ್ರತಿ ಹಂತದಲ್ಲೂ ಖಾಸಗಿ ವಾಹನ ಮಾಲೀಕರನ್ನು ಸುಲಿದೂ ಸುಲಿದೂ ಪ್ರತಿ ದಿನ ಸಾಯಿಸುತ್ತೀರಿ. ಇನ್ನು ಹೊಟ್ಟೆಪಾಡಿನ ಕರ್ಮಕ್ಕೆ ವಾಹನ ಅವಲಂಬಿಸಿದ ಅವನಾದರೂ ಏನು ಮಾಡಬೇಕು ಹೇಳಿ. ನಿಮಗೆ ಶರಣಾಗಿ ಅನಿವಾರ್ಯವಾಗಿ ಸುಲಿಗೆಗೆ ಇಳಿಯಲೇಬೇಕು. ಸುಲಿಗೆ ತರಬೇತಿ ಎಲ್ಲಿಂದ ಅನ್ನುವುದು ಸ್ಪಷ್ಟವಾಯಿತು ಅಂದುಕೊಳ್ಳುತ್ತೇನೆ.
ಹೋಗಲಿ ಖಾಸಗಿಯವರಿಗೆ ನೀವು ಬದುಕಲು ಬಿಡುತ್ತಿಲ್ಲ. ಒಂದು ದಿನ ಖಾಸಗಿಯವರು ಮುಷ್ಕರ ಆರಂಭಿಸಿದರು ಅಂತಿಟ್ಟುಕೊಳ್ಳಿ. ತಕ್ಷಣವೇ ಪರವಾನಗಿ ವಾಪಸ್‌ ಪಡೆದು ಪರಿಸ್ಥಿತಿಯ ಲಾಭ ಪಡೆದು ಅಲ್ಲಿ ಸರ್ಕಾರಿ ಬಸ್‌ ಓಡಿಸುವುದಿಲ್ಲವೇ? ನೀವೂ ಪರಿಸ್ಥಿತಿಯನ್ನು ಬಳಸಿಕೊಳ್ಳುವವರು ತಾನೆ?
ಹೀಗಾಗಿ ಅದು ಸರ್ಕಾರಿಯೇ ಇರಲಿ. ಖಾಸಗಿಯೇ ಇರಲಿ. ಒಟ್ಟಾರೆ ಸಾರಿಗೆ ವ್ಯವಸ್ಥೆ ಅನ್ನುವುದೇ ಕಳ್ಳರ ಸಂತೆ. ಹಾಗಾಗಿ ಖಾಸಗಿಯವರು ಸರ್ಕಾರಿ ಬಸ್‌ಗಳನ್ನಾಗಲಿ. ಸರ್ಕಾರದವರು ಅಥವಾ ಜನಸಾಮಾನ್ಯರು ಖಾಸಗಿ ಬಸ್‌ನವರು ಸುಲಿಯುತ್ತಾರೆ ಎಂದು ದೂರುವುದರಲ್ಲಿ ಅರ್ಥವೇ ಇಲ್ಲ.
ಇನ್ನು ಸಾರಿಗೆ ವ್ಯವಸ್ಥೆ ಖಾಸಗೀಕರಣವಾಗುತ್ತದೆ ಎಂಬ ಹುಯಿಲೆಬ್ಬಿಸುತ್ತಿದ್ದೀರಿ.
ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಏಕೆಂದರೆ ಸರ್ಕಾರದ ತೆರಿಗೆ ಸುಲಿಗೆ ಸಹಿಸಲಾಗದೇ ಕರ್ನಾಟಕದ ಎರಡು ಪ್ರತಿಷ್ಠಿತ ಸಾರಿಗೆ ಸಂಸ್ಥೆಗಳು ಕಳೆದ ವರ್ಷವೇ ಕಣ್ಣುಮುಚ್ಚಿವೆ. ಚೆಂದದ ಬದುಕು ಕಟ್ಟಿಕೊಂಡಿದ್ದ ನೂರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಬ್ಯಾಂಕ್‌ನವರು ಸಂಸ್ಥೆಗಳ ಆಡಳಿತದ ಕತ್ತು ಹಿಸುಕುತ್ತಿದ್ದಾರೆ. ಅದಕ್ಕಿಂತಲೂ ಹಿಂದೆ ಶಂಕರ್‌ ವಿಠಲ್‌, ಸಿಪಿಸಿಯಂಥ ಸಂಸ್ಥೆಗಳು ಇತಿಹಾಸ ಸೇರಿವೆ.
ಒಂದು ವೇಳೆ ಖಾಸಗಿಯವರು ಬಂದರೂ ಹತ್ತಿಪ್ಪತ್ತು ಬಸ್‌ ಇರುವವರು ಈ ಕ್ಷೇತ್ರಕ್ಕೆ ಪ್ರವೇಶಿಸುವುದು ಸುಲಭ ಅಲ್ಲ. ಅದನ್ನು ಕೊಟ್ಟರೆ ದೇಶದಾದ್ಯಂತ ಈಗಾಗಲೇ ಸಾರಿಗೆ ನೆಟ್‌ವರ್ಕ್‌ ಸ್ಥಾಪಿಸಿರುವ, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ ಮೂಲದ ಬೃಹತ್‌ ಉದ್ಯಮಿಗಳಿಗೇ ಆ ಮುಕ್ತ ಪರವಾನಗಿ ಸಿಗಬಹುದು. ಅವರೂ ಕೂಡ ಇತ್ತೀಚೆಗೆ ಪೂರ್ಣ ಪ್ರಮಾಣದಲ್ಲಿ ಬಸ್‌ ಉದ್ಯಮವನ್ನು ನಂಬಿಕೊಂಡೂ ಇಲ್ಲ.
ಸರ್ಕಾರದ ನಿಲುವು ಹೇಗಿದೆ ಎಂದರೆ ಸರ್ಕಾರಿ ಬಸ್‌ನ್ನು ಒಂದು ಉದ್ಯಮದ ನೆಲೆಗಟ್ಟಿನಲ್ಲಿ ಬೆಳೆಸಲೇ ಇಲ್ಲ. ಸಾಮಾಜಿಕ ಹೊಣೆಗಾರಿಕೆ ಎಂದು ಮನುಷ್ಯ ಹೋಗದ ಕಡೆಗೆಲ್ಲಾ ಬಸ್‌ ಬಿಟ್ಟಿರಿ. ಹಳ್ಳಿಗಾಡುಗಳಲ್ಲಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಬಂದು ತುಂಬಿದ ಬಳಿಕ ನಿಮ್ಮ ಬಸ್‌ ಅಲ್ಲಿಗೆ ಹೋಯಿತು. ನಿಮ್ಮ ಬಸ್‌ ಬರುವವರೆಗೆ ಜನ ಕಾಯುವುದೂ ಇಲ್ಲ. ಆ ಪುರುಸೊತ್ತೂ ಇಲ್ಲ. ಹೀಗಾಗಿ (ಖಾಸಗಿಯೂ ಸೇರಿ) ಬಹುತೇಕ ಸ್ಟೇಜ್‌ ಕ್ಯಾರಿಯೇಜ್‌ ಬಸ್‌ಗಳು ನಷ್ಟದ ಹಾದಿಯಲ್ಲೇ ಇವೆ.
ಈ ವಿವರಣೆಯನ್ನು ಪಬ್ಲಿಕ್‌ ಟಿವಿ ರಂಗಣ್ಣ #Public Tv #Big Bulletin ತುಂಬಾ ಚೆನ್ನಾಗಿ ಕೊಟ್ಟಿದ್ದಾರೆ.
ಸರ್ಕಾರ ಏನು ಮಾಡಬಹುದು?
ಖಾಸಗಿ ವ್ಯವಸ್ಥೆಯ ಮೇಲೆ ನಿಗಾವನ್ನು ಇನ್ನಷ್ಟು ಕಠಿಣ ಮಾಡಿ. ಪರ್ಮಿಟ್‌ ವ್ಯವಸ್ಥೆಯನ್ನು ಸುಗಮಗೊಳಿಸಿ. ಕಾಂಟ್ರ್ಯಾಕ್ಟ್‌ ಕ್ಯಾರಿಯೇಜ್‌ ಹೆಸರಿನಲ್ಲಿ ಕಂಡಲ್ಲಿ ಜನ ಹತ್ತಿಸಿಕೊಂಡು ಹೇಗಿದ್ದರೂ ನಿಯಮ ಬ್ರೇಕ್‌ ಮಾಡುತ್ತಾರೆ. ಆ ಬಸ್‌ಗಳಿಗೆ ಸ್ಟೇಜ್‌ ಕ್ಯಾರಿಯೇಜ್‌ ಪರವಾನಿಗೆ ಕೊಟ್ಟು ದರ ನಿಗದಿ ಮಾಡಿ. ಸುಲಿಗೆ ತಂತಾನೇ ಇಳಿಯುತ್ತದೆ. ಲಗೇಜ್‌ ಹೇರಿಕೆಯಂಥ ಕ್ಷುಲ್ಲಕ ಕಾರಣಗಳಿಗೆ ಕೇಸ್‌ ಹಾಕುವ ಪ್ರವೃತ್ತಿ ಬಿಡಿ. ಮುಖ್ಯವಾಗಿ ತೆರಿಗೆ ಹೆಸರಿನ ಸುಲಿಗೆ ನಿಲ್ಲಿಸಿ.
ಇದೆಲ್ಲವೂ ಅಸಾಧ್ಯ.
ಆದರೆ, ಸರ್ಕಾರಕ್ಕೆ ದುಡ್ಡು ಕಡಿಮೆ ಆದಾಗ ಕಾಣುವುದು ಒಂದು ಸಾರಿಗೆ. ಇನ್ನೊಂದು ಸಾರಾಯಿ. ಇಬ್ಬರಿಗೂ ಟಾರ್ಗೆಟ್‌ ನೀಡಿ ಸುಲಿಗೆಯ ದಾರಿಯನ್ನು ಅದು ಕಂಡುಕೊಂಡಿದೆ. ಒಂದು ರಶೀದಿಯುಕ್ತ ಇನ್ನೊಂದು ರಶೀದಿಮುಕ್ತ. ಹಾಗಿರುವಾಗ ವ್ಯವಸ್ಥೆ ಬದಲಾಗುವುದಿಲ್ಲ.
ಆದರೆ, ಈ ಮಾತುಗಳು ವಿನಾ ಕಾರಣ ಖಾಸಗಿಯೋ ಅಥವಾ ಸರ್ಕಾರಿಯೋ ಯಾವುದೇ ವ್ಯವಸ್ಥೆಯನ್ನು ಬೈಯುವ ಮುನ್ನ ನನ್ನ ವೃತ್ತಿ ಬಾಂಧವರು ಮತ್ತು ಜನ ಸಾಮಾನ್ಯರು ಇಷ್ಟು ವಿಷಯ ತಿಳಿದುಕೊಂಡಿದ್ದರೆ ಸಾಕು.
ನಮಸ್ಕಾರ
ಪ್ರೀತಿಯಿಂದ
–ಶರತ್

Please follow and like us:
error