ನೋಟಿನ ಕಂತೆ ಕೂಡಿಟ್ಟ ರಾಜಕೀಯ ಪಕ್ಷಗಳಿಗೆ ಇರುವುದು ಇದೊಂದೇ ದಾರಿ

2000rs_denomination

ಹೊಸದಿಲ್ಲಿ, ನ.11:  500 ರೂಪಾಯಿ ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ದಿಢೀರ್ ಚಲಾವಣೆಯಿಂದ ಹಿಂದಕ್ಕೆ ಪಡೆದಿರುವ ಕೇಂದ್ರ ಸರಕಾರದ ಕ್ರಮದಿಂದ ರಾಜಕೀಯ ಪಕ್ಷಗಳು ದಿಕ್ಕೆಟ್ಟಿವೆ. ಮುಂದಿನ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಕೂಡಿಟ್ಟುಕೊಂಡಿದ್ದ ಭಾರಿ ಪ್ರಮಾಣದ ಇಂಥ ನೋಟುಗಳನ್ನು ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಅಂದರೆ ವಿನಿಮಯಕ್ಕೆ ನೀಡಿರುವ ಗಡುವಿನ ಒಳಗಾಗಿ ಮತದಾರರಿಗೆ ವಿತರಿಸುವುದಷ್ಟೇ ಈಗ ರಾಜಕೀಯ ಪಕ್ಷಗಳಿಗೆ ಉಳಿದಿರುವ ದಾರಿ.

ಈ ದಿಢೀರ್ ನಿರ್ಧಾರದ ಬೆನ್ನಲ್ಲೇ ಯಾವ ರಾಜಕೀಯ ಪಕ್ಷ ಮಾಡಿರುವ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ ಎಂಬ ಚರ್ಚೆ ಆರಂಭವಾಗಿತ್ತು. ಫೆಬ್ರವರಿಯಲ್ಲಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಹಾಗೂ ಗೋವಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು “ಭರ್ಜರಿ ಸಿದ್ಧತೆ” ಮಾಡಿಕೊಂಡಿದ್ದವು. ಆದರೆ ಕೇಂದ್ರದ ನಿರ್ಧಾರ ಈ ಹಣ ದಾಸ್ತಾನುದಾರರ ಪಾಲಿಗೆ ಬರಸಿಡಿಲಿನಂತೆ ಬಂದೆರಗಿದೆ.

ಸಾಮಾನ್ಯವಾಗಿ ಇಂಥ ಹಣವನ್ನು ಚುನಾವಣೆಯ ಮುನ್ನಾ ದಿನ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ವ್ಯವಸ್ಥಿತ ಜಾಲದ ಮೂಲಕ ಮತದಾರರಿಗೆ ಹಂಚಲಾಗುತ್ತದೆ. ಈ ಸಂಪ್ರದಾಯ ದಕ್ಷಿಣ ರಾಜ್ಯಗಳಲ್ಲಿ ಅಧಿಕವಾಗಿದ್ದರೂ, ಉತ್ತರ ರಾಜ್ಯಗಳಲ್ಲಿ ಕೂಡಾ ಕಡಿಮೆಯೇನಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

ಇದೀಗ ಡಿಸೆಂಬರ್ 31ಕ್ಕೆ ಈ ಎಲ್ಲ ನೋಟುಗಳೂ ರದ್ದಿಯಾಗುವುದರಿಂದ ತಮ್ಮ ಹಿಂಬಾಲಕ ಪಡೆಗೆ ಸ್ವಲ್ಪಮಟ್ಟಿಗೆ ವಿತರಿಸಲು ಪಕ್ಷಗಳು ನಿರ್ಧರಿಸಿವೆ ಎನ್ನಲಾಗಿದೆ. ತಮ್ಮ ಮತದಲ್ಲಾಳಿಗಳನ್ನು ಮುಂಚಿತವಾಗಿಯೇ ಕರೆದು ಹಣ ವಿತರಿಸಿ, ತಮ್ಮ ಮತಗಳನ್ನು ಖಾತ್ರಿಪಡಿಸಿಕೊಳ್ಳುವಂತೆ ರಾಜಕೀಯ ಪಕ್ಷಗಳು ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply