fbpx

ಜಾತಿ ವಿನಾಶ ಮತ್ತು ನಾನು- Vani Periyodi

jati_vinasha-dalit-ambedkar_brahmin vani_periyodi_jati_vinasha-dalit-ambedkar_brahmin
ಮೊದಲ ಮಾತು:
ಜಾತಿ ವಿನಾಶ ಮತ್ತು ನಾನು,ಈ ವಿಚಾರ ಕೇಳುವಾಗಲೇ ಬೆಚ್ಚಿಬೀಳುವ ಹಾಗೆ ಆಗುತ್ತದೆ. ಬೃಹದಾಕಾರವಾಗಿ ಆಗಸದಿಂದ ಪಾತಾಳದವರೆಗೂ ಆವರಿಸಿರುವ ಈ ಜಾತಿ ವ್ಯವಸ್ಥೆ ಎಲ್ಲಿ, ನಾನೆಲ್ಲಿ? ಅಷ್ಟೇ ಅಲ್ಲ, ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ನನಗೆ ಜಾತಿ ತಾರತಮ್ಯದ ಅನುಭವ ಸಹಜವಾಗಿಯೇ ಆಗಿಲ್ಲ. ಹೆಣ್ಣಾಗಿಯೂ ತೀವ್ರತರದ ತಾರತಮ್ಯಗಳನ್ನು ಅನುಭವಿಸಿಲ್ಲ. ಬ್ರಾಹ್ಮಣ ಕುಟುಂಬದಲ್ಲಿ ಇದ್ದುದಕ್ಕೆ ಮುಟ್ಟಾದಾಗ ಹೊರಗೆ ಕೂರುವ ಮೂಲಕ ಅಸ್ಪøಶ್ಯತೆಯ ಒಂದು ಅನುಭವವಿದೆ. ಅದನ್ನೂ ನಾನು ಬಹಳ ಬೇಗ ಧಿಕ್ಕರಿಸಿದ್ದರಿಂದ ಅದರ ಹಂಗೂ ಹೆಚ್ಚೇನಿಲ್ಲ. ಇಂತಹ ಹಿನ್ನೆಲೆಯಲ್ಲಿ ಜಾತಿವಿನಾಶದ ಬಗ್ಗೆ ಮಾತಾಡಲು ನನಗೆ ಏನು ಅರ್ಹತೆ ಇದೆ ಎಂಬ ಪ್ರಶ್ನೆಯೂ ನನ್ನನ್ನು ಕಾಡಿದೆ. ಅಂತರ್ಜಾತಿ ಮದುವೆ ಆಗಿದ್ದೇ ಒಂದು ಅರ್ಹತೆ ಅಂದುಕೊಳ್ಳಬೇಕಷ್ಟೆ.
ಇದರ ಜೊತೆಗೆ ಒಂದು ಆತಂಕವೂ ಇದೆ. ಜಾತಿ ತಾರತಮ್ಯದ ವಿಚಾರವಾಗಿ ಆಪ್ತವಲಯಗಳಲ್ಲಿ ಹರಟಿದ್ದು, ಒಂದಷ್ಟು ಚಿಂತನೆಗಳನ್ನು ಚರ್ಚೆ ಮಾಡಿದ್ದು ಇದೆ. ಆದರೆ, ಇಂತಹ ಸಾರ್ವಜನಿಕ ವಲಯದಲ್ಲಿ, ಎಂತೆಂತಹಾ ಚಿಂತಕರ ನಡುವೆ ಮಾತಾಡುವುದು ಇದೇ ಮೊದಲು. ಎಲ್ಲಿ ನನ್ನ ಒಳಗಿನ ಬ್ರಾಹ್ಮಣ ಹಿರಿಮೆಯ ಛಾಯೆ ನನ್ನ ಮಾತುಗಳಲ್ಲಿ ಹೆಡೆ ಎತ್ತಿ ಬಿಡಹುದೇನೋ ಎಂಬ ಅಳುಕು ಇದೆ. ಹಾಗೇನಾದರೂ ಆದರೆ ನನ್ನ ಕ್ಷಮಿಸಿ. ನಾನಿನ್ನೂ ಬದಲಾಗುವುದಕ್ಕೆ ಬೆಳೆಯುವುದಕ್ಕೆ ಇದೆ ಅಂತ ಅರ್ಥ. ಅದಕ್ಕೆ ನಾನು ಖಂಡಿತಾ ತೆರೆದುಕೊಂಡಿದ್ದೇನೆ.
ನಾನು ತೀರಾ ತೀರಾ ವೈಯಕ್ತಿಕ ನೆಲೆಯಿಂದ ಮಾತಾಡಲು ಹೊರಟಿದ್ದೇನೆ. ಹೀಗೆ ಮಾತಾಡುವಾಗ ನನ್ನ ಎರಡೂ ಕುಟುಂಬಗಳ ಬಗ್ಗೆ ನಾನು ಕೆಲವು ಕಟು ಅಂಶಗಳನ್ನು ಹೇಳಬಹುದು. ಎರಡೂ ಕುಟುಂಬಗಳಲ್ಲಿ ನನಗೆ – ಪ್ರೀತಿ, ಗೌರವ ಹಾಗೂ ಸಮೃದ್ಧ ಸ್ವಾತಂತ್ರ್ಯ – ಸಿಕ್ಕಿದೆ. ನಾನು ಏನೇ ಹೇಳಿದರೂ ಅತ್ಯಂತ ಗೌರವವಿಟ್ಟುಕೊಂಡೇ ಹೇಳುತ್ತಿದ್ದೇನೆ. ಯಾರ ಮೇಲೆಯೂ ಯಾವುದೇ ಬೇಸರ, ಕಿರಿಕಿರಿ ಇಲ್ಲ ನನಗೆ.
ಮದುವೆಗೆ ಮುನ್ನ:
ಎಳವೆಯಿಂದಲೂ ಈ ಜಾತಿ ತಾರತಮ್ಯ ಮತ್ತು ಲಿಂಗ ತಾರತಮ್ಯ ಅನ್ನುವುದು ನನಗೆ ಬಹಳ ಸಹಜವಾಗಿಯೇ ಕಾಡಿತ್ತು. ಈ ಚಿಂತನೆ ಎಲ್ಲಿಂದ ಬಂತು ಅಂತ ನಿಖರವಾಗಿ ನನಗೆ ಹೇಳುವುದಕ್ಕೆ ಆಗುವುದಿಲ್ಲ. ಕೆಲಸದ ನಿಮಿತ್ತ ನನ್ನ ಅಪ್ಪ ಅಮ್ಮ ದೂರದ ಒರಿಸ್ಸಾ ಪ್ರಾಂತ್ಯದಲ್ಲಿ ಇದ್ದರು. ನಾವು ಮಕ್ಕಳು ಬೆಳೆದಿದ್ದು ಅಜ್ಜಿ ಅಜ್ಜ ಮಾವಂದಿರ ಜೊತೆಗೆ. ಆಗಾಗ ದೂರದೂರಿನ ಪಯಣ, ಅಲ್ಲಿಯ ಬದುಕಿನ ಅನುಭವ ಕೊಡುತ್ತಿತ್ತು. ಈ ಹೊರ ಪಯಣದ ಅನುಭವ, ಒಂದಷ್ಟು ಓದು ಜೊತೆಗೆ ಮನೆಯಲ್ಲಿ ನನಗೆ ಪ್ರಶ್ನೆ ಮಾಡಲು ಸಿಕ್ಕ ಅದ್ಭುತ ಸ್ವಾತಂತ್ರ್ಯ – ನನಗೆ ನನ್ನದೇ ಚಿಂತನೆ ಬೆಳೆಯುವಲ್ಲಿ ಸಹಕರಿಸಿತ್ತು ಅನಿಸುತ್ತದೆ. ಈ ಪ್ರಶ್ನೆ ಕೇಳುವ ಸ್ವಾತಂತ್ರ್ಯ ಆ ಮನೆಯ ಸಹಜವಾದ ಸಂಸ್ಕøತಿಯಂತ ಅಲ್ಲ. ಅಪ್ಪ ಅಮ್ಮನಿಂದ ದೂರ ಇದ್ದಾರೆ ಮಕ್ಕಳು ಅನ್ನುವ ಮುದ್ದಿನಿಂದ ಸಿಕ್ಕ ಸ್ವಾತಂತ್ರ್ಯ ಇದು. ಅಷ್ಟೇ ಅಲ್ಲ ಅಪ್ಪ ಅಮ್ಮ ಕೂಡಾ ನನ್ನ ಚಿಂತನೆಗಳು ಹರಿವ ರೀತಿಗೆ ಕಡಿವಾಣ ಹಾಕಿರಲಿಲ್ಲ. ಈ ಸ್ವಾತಂತ್ರ್ಯಕ್ಕಾಗಿ ನಾನು ಸದಾ ಋಣಿ.
ಮನೆಗೆ ಕೆಲಸದವರು ಬರುತ್ತಿದ್ದರು. ಮನೆಯ ಒಳಗೆ ಅವರು ಬರುವಂತೆ ಇರಲಿಲ್ಲ. ಕೆಲವರನ್ನು ಅಂತೂ ಮುಟ್ಟುವಂತೆÀಯೂ ಇರಲಿಲ್ಲ. ಈ ಬಗ್ಗೆ ಬಹಳ ತೀವ್ರವಾದ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಹೀಗೇ ಮಕ್ಕಳಾಟಿಕೆಯಂತೆ ಅವರನ್ನು ಮುಟ್ಟಿ, ನನಗೆ ಏನೂ ಅಗಿಲ್ಲ ಅಂತ ಸವಾಲು ಹಾಕುತ್ತಿದ್ದೆ. ಕೆಲವೊಮ್ಮೆ ನನ್ನ ಮತ್ತು ಅಜ್ಜನ ಮಾತುಕತೆಗಳು ಅತಿರೇಕಕ್ಕೆ ಹೋಗಿ ನನಗೂ ಅವರಿಗೂ ಎರಡು ದಿನ ಮಾತು ಇರುತ್ತಿರಲಿಲ್ಲ. ಅಜ್ಜಿ ಅಂತೂ ಒಂದು ಸಾರಿ, “ ಎಂತ ಕತೆ ನಿನ್ನದು ಹೊಲೆಯನ ಮದುವೆ ಆವುತ್ತೆಯಾ?” ಅಂತ ಕೇಳಿದ್ದರು. “ಮದುವೆ ಮಾಡಿಕೊಡಿ, ಆಗುತ್ತೇನೆ” ಅಂದಿದ್ದೆ.
ಅಂತೂ ಕೊನೆಗೆ, ಅಂತರ್ಜಾತೀಯ ಮದುವೆÀ ಆಗಬೇಕು ಎಂಬ ಹಟದಿಂದ ಅಲ್ಲ. ನನಗೆ ಬೇಕಾದ ಸಂಗಾತಿ ಸಿಕ್ಕ ಕಾರಣಕ್ಕೆ ಕುಂಬಾರ ಜಾತಿಯ ಹುಡುಗನ ಮದುವೆಯಾದೆ. ಅವರು ನನಗೆ ಎಂ.ಎಸ್.ಡಬ್ಲ್ಯು ನಲ್ಲಿದ್ದಾಗ ಕಲಿಸಿದ್ದರು.
ಮದುವೆಯ ನಂತರ:
ನನಗೆ ಇಲ್ಲಿ ನಿಜವಾಗಿ ಹೇಳುವುದಕ್ಕೆ ಇರುವುದು ಮದುವೆ ನಂತರದ ಕಥೆಯನ್ನೇ. ಅಂತರ್ಜಾತಿ ಮದುವೆ ಆಗಿ ಜಾತಿಯನ್ನು ಮೆಟ್ಟಿನಿಂತೆ ಅಂತ ಅಂದುಕೊಂಡಿದ್ದೆ. ಆದರೆ ನೇರ ಕೆಳಜಾತಿ ಎನಿಸಿಕೊಂಡವರ ಜೊತೆ ಬದುಕು ಹಂಚಿಕೊಳ್ಳಬೇಕಾಗಿ ಬಂದಾಗ, ಮುಖಾಮುಖಿ ಆದಾಗ, ಅಬ್ಬಾ ಅದಷ್ಟು ಚಡಪಡಿಕೆಗಳು. ನನ್ನ ತೊಗಲಿಗಂಟಿದ ಜಾತಿ, ನನ್ನ ರಕ್ತದಲ್ಲಿ ಉಳಿದ ಜಾತಿ ಅವಶೇಷ ಎದ್ದೆದ್ದು ಸವಾಲು ಹಾಕಿದ್ದವು. ಅಸಮಾನತೆಯ ಎಳೆಗಳು, ಬ್ರಾಹ್ಮಣ್ಯದ ಅಹಂ ಕೆಲಸ ಮಾಡುವ ರೀತಿಯನ್ನು ನಾನೇ ಬೆರಗಾಗಿ ನೋಡುವಂತಾಯಿತು. ಈ ಎಲ್ಲಾ ಅಂಶ ಒಮ್ಮೆಯೇ ನನಗೆ ಜ್ಞಾನೋದಯ ರೀತಿಯಲ್ಲಿ ಆಗಿಲ್ಲ. ನಿಧಾನವಾಗಿ ಅನಾವರಣಗೊಳ್ಳುತ್ತಾ ಬಂತು. ನನ್ನ ಸಂಗಾತಿಯ ಜೀವನಾನುಭವ ಮತ್ತು ಬ್ರಾಹ್ಮಣ್ಯದ ವಿಮರ್ಶೆ, ಮಕ್ಕಳ ಚಿಕಿತ್ಸಕ ದೃಷಿಕೋನಗಳು, ನನ್ನದೇ ಅರಿವು ಎಲ್ಲವೂ ಈ ದಾರಿಯಲ್ಲಿ ಸಹಕರಿಸಿದವು. ಈ ಜಾತಿ ಹಿರಿಮೆಯ ಭಾವ ದಾಟಿ ಬರುವ ಅನುಭವವೇ ಒಂದು ವಿಶಿಷ್ಟವಾದುದು. ಬದುಕಿನ ಒಂದೊಂದು ವಲಯದಲ್ಲೂ ಇದರ ಅನುಭವವಾಗಿದೆ.
ನನ್ನ ಸಂಗಾತಿಯ ಮನೆ ಕೃಷಿಕರ ಮನೆ. ಬಡತನದ ಬದುಕು ಎಂದೇ ಹೇಳಬಹುದು. ಅತ್ಯಂತ ಪ್ರೀತಿಯ ಕುಟುಂಬ. ಎಲ್ಲಕ್ಕೂ ಹೆಚ್ಚಾಗಿ ಅದ್ಭುತವಾದ ಒಬ್ಬ ಅತ್ತೆ. ಶ್ರಮಜೀವಿ, ಸ್ವಾಭಿಮಾನಿ, ಸುಂದರಿ ಮತ್ತು ಖಡಕ್ ಹೆಣ್ಣುಮಗಳು. ನೋ ನಾನ್ ಸೆನ್ಸ್ – ಅಂತಾರಲ್ಲ, ಅಂತಹ ವ್ಯಕ್ತಿ. ನನ್ನ ಬದುಕಿನ ಅದೆÀಷ್ಟೋ ಪಾಠಗಳನ್ನು ಅವರಿಂದ ಕಲಿತಿದ್ದೇನೆ. ಬ್ರಾಹ್ಮಣ, ಓದಿದ ಹುಡುಗಿ, ಮದುವೆಯಾಗಿ ಮನೆಗೆ ಬಂದಿದ್ದಾಳೆ. ಮಾವ ಮೊದಲೇ “ಅವಳನ್ನು ಕಣ್ಣೀರು ಹಾಕದಂತೆ ನೋಡಿಕೊಳ್ಳಬೇಕು, ಬ್ರಾಹ್ಮಣರ ಶಾಪ ತಟ್ಟೀತು” ಅಂತ ಹೇಳಿದ್ದರಂತೆ. ಆದರೆ ಆ ಕಾರಣಕ್ಕಾಗಿ ಅಂತ ಅಲ್ಲ. ಅಲ್ಲಿ ಸಹಜವಾಗಿಯೇ ಒಂದು ಚಂದದ ಕೌಟುಂಬಿಕ ವಾತಾವರಣ ಇತ್ತು. ನನ್ನನ್ನು ಪ್ರೀತಿ, ಗೌರವದಿಂದ ಎಲ್ಲರೂ ನೋಡಿಕೊಂಡರು.
ನನ್ನ ಅತ್ತೆಯಂತೂ ನಾಲ್ಕು ವರುಷಗಳ ಹಿಂದೆ ಹಾಸಿಗೆ ಹಿಡಿಯುವವರೆಗೂ ನನ್ನನ್ನು ವಿಶೇಷ ಆದರದಿಂದಲೇ ನೋಡಿಕೊಳ್ಳುತ್ತಿದ್ದರು. ನನಗಾಗಿ ಮೀನು ಮಾಂಸ ತಿನ್ನದ ಒಂದು ಬಟ್ಟಲನ್ನು ತೆಗೆದಿರಿಸಿದ್ದರು. ಹಿಂದಿನ ದಿನದ ಅನ್ನ ಸಾರು ಉಳಿದರೆ ನನ್ನ ಮಕ್ಕಳಿಗೆ ಕೊಡುತ್ತಿದ್ದರು, ನನಗೆ ಕೊಡುತ್ತಿರಲಿಲ್ಲ. ನನ್ನ ಕೈಲಿ ಹೇಳಿ ಕೆಲಸ ಮಾಡಿಸುತ್ತಿರಲಿಲ್ಲ. (ನಾನಾಗಿ ಮಾಡಿದರೆ ಸರಿ) ಈ ವಿಶೇಷ ಸವಲತ್ತನ್ನು ನಾನು ನಿರಾಕರಿಸಲಿಲ್ಲ. ಅದು ನನಗೆ ಆರಾಮವಾಗಿಯೇ ಇತ್ತು. ಸಂಪೂರ್ಣ ಲಾಭ ಪಡೆದುಕೊಂಡೆ ಎಂದೇ ಹೇಳಬಹುದು.
ಊಟ, ತಿಂಡಿ, ರುಚಿ, ಅಭಿರುಚಿ:
ಮದುವೆ ನಂತರ ನನಗೆ ಬಂದ ಮೊದಲ ಕಷ್ಟ ಊಟ. ನನ್ನ ತವರು ಮನೆಯಲ್ಲಿ ಅಚ್ಚುಕಟ್ಟಾಗಿ ದೂರ ದೂರ ಕುಳಿತು, ಊಟ ಮಾಡುವ ಕೈಯನ್ನು ಏನಕ್ಕೂ ತಾಗಿಸದಂತೆ, ತಿನ್ನುವುದು, ಉಣ್ಣುವುದು. ಬಡಿಸುವುದು ಬೇರೆಯವರೇ.. ಎಂಜಿಲಿನ ಬಗ್ಗೆ ಅದೆಷ್ಟು ಎಚ್ಚರಿಕೆ. ಇಲ್ಲಿ ಬಂದ ಮನೆಯಲ್ಲಿ, ಎಲ್ಲಾ ಅಡುಗೆ ನಡುವೆ ಇಟ್ಟುಕೊಳ್ಳುವುದು, ಬಡಿಸುವುದು, ಜೊತೆಗೇ ಊಟ ಮಾಡುವುದು, ಮತ್ತೆ ಬಡಿಸಿಕೊಳ್ಳಲು ಎಂಜಿಲು ಕೈಯನ್ನೇ ಬಳಸುವುದು, ಇತರರ ಬಟ್ಟಲಲ್ಲಿ ಉಳಿದರೆ ಅದನ್ನೂ ಬಾಚಿಕೊಳ್ಳುವುದು, – ಓಹ್, ಅಸಹ್ಯದಿಂದ ಚಡಪಡಿಸುತ್ತಿದ್ದೆ. ನನ್ನ ಪಾಲಿಂದು ಮೊದಲೇ ಹಾಕಿಸಿಕೊಂಡು ಅವರ ಕಡೆ ನೋಡದೆ ಗಬಗಬ ಉಣ್ಣುತ್ತಿದ್ದೆ. ನೋಡಿದರೆ ಎಲ್ಲಿ ಒಂದು ಹನಿ ಎಂಜಿಲು ಪಾತ್ರೆಗೆ ಬಿತ್ತೋ ಎನ್ನುವ ಆತಂಕ. ಈ ಎಂಜಿಲಿನ ಪರಿಕ್ರಮ ಎಷ್ಟು ಆಳವಾಗಿತ್ತೆಂದರೆ ನಾನು ನನ್ನ ಮಕ್ಕಳು ಬಿಟ್ಟ ಊಟ ಕೂಡಾ ಒಂದೇ ಒಂದು ಸಾರಿ ತಿಂದಿಲ್ಲ. ಜೊತೆಗೆ ಕುಳಿತು ಹೀಗೆ ಉಣ್ಣುವ ಸೊಗಸು ಅರ್ಥವಾಗಲು ನನಗೆ ಕಾಲವೇ ಹಿಡಿದಿತ್ತು.
ಅಲ್ಲಾ, ಎಂಜಿಲಿನ ಬಗ್ಗೆ ಇಷ್ಟು ಅಸಹ್ಯ ಭಾವ ಒಂದು ಕಡೆ ಆದರೆ, ಎಂಜಿಲನ್ನೆ ಒಂದು ಜನಸಮುದಾಯ ಅಜಲಿನ ಹೆಸರಿನಲ್ಲಿ ತಿನ್ನಬೇಕಾದ ಪ್ರಮೇಯ ಇರುವುದು ಎಂತಹ ಕ್ರೂರ ವಿಪರ್ಯಾಸ.
ಇನ್ನೊಂದು ಊಟದ ರುಚಿಗೆ ಸಂಬಂಧಿಸಿದ್ದು. ಶೂದ್ರರಿಗೆ ತುಪ್ಪ ಮಾಡಲು ಬರುವುದಿಲ್ಲ, ತೆಳ್ಳಗೆ ದೋಸೆ ಮಾಡಲು ಬರುವುದಿಲ್ಲ. ಮಜ್ಜಿಗೆ ಅಬ್ಬಾ ವಾಸನೆ, ತುಪ್ಪ ನನ್ನ ಪ್ರೀತಿಯ ವಸ್ತು, ಆದರೆ ಈ ಮನೆಗಳಲ್ಲಿ ಮೊದಲೇ ಬೇಡ ಅಂದುಬಿಡುತ್ತಿದ್ದೆ. ಅದರ ಸರಿಯಾದ ರೂಪ ಸಿಗದು ಎಂಬ ಭಯದಿಂದ. ಆದರೆ ಇದರ ಜೊತೆಗೆ ಒಂದು ತಮಾಷೆಯೂ ನಡೆಯುತ್ತಿತ್ತು. ನನ್ನ ಮೈದುನ ಪಕ್ಕದ ಬ್ರಾಹ್ಮಣರ ಮನೆಯಲ್ಲಿ ದೋಸೆ ತಿಂದು ಬಂದು ಹೇಳಿದ, “ ಎರಡು ದೋಸೆ ಕೊಟ್ಟರು, ನನ್ನ ಹಲ್ಲಿನ ಎಡೆಗೂ ಸಾಲಲಿಲ್ಲ. ಯಾಕೆ ಅಷ್ಟು ತೆಳು ಮಾಡುತ್ತಾರೋ,” ನನ್ನ ಕೆಲವು ಅಡುಗೆ ನನ್ನ ಅತ್ತೆ ಬಾಯಿಗೆ ಹಿಡಿಸುತ್ತಲೇ ಇರಲಿಲ್ಲ. ನಿಧಾನವಾಗಿ ಊಟ ಅನ್ನುವುದು ಅವರವರ ಜೀವನ ಪದ್ಧತಿಗೆ ಸಂಬಂಧಿಸಿದ್ದು, ಅದರಲ್ಲಿ ಶ್ರೇಷ್ಠತೆಯ ಪ್ರಶ್ನೆಯೇ ಇಲ್ಲನ್ನುವುದು ಅರ್ಥವಾಗತೊಡಗಿತು. ಶ್ರಮಜೀವನಕ್ಕೆ ಅದರದ್ದೇ ಆದ ಊಟ ತಿಂಡಿಯ ಅಗತ್ಯವಿದೆ ಅಂತ ಕಂಡುಬಂತು. ಜೊತೆಗೆ ಈ ಶೂದ್ರರೂ ಬ್ರಾಹ್ಮಣರನ್ನು ಊಟ ತಿಂಡಿ ವಿಚಾರದಲ್ಲಿ ತಮಾಷೆ ಮಾಡುವುದೂ ಗಮನಿಸಿದೆ.
ಮುಟ್ಟುವುದು, ಮುಟ್ಟಿಸಿಕೊಳ್ಳುವುದು:
ಊರಿನಲ್ಲಿ ಪಕ್ಕದ ಮನೆಯ ಮಕ್ಕಳು ನನ್ನ ತಲೆ ಬಾಚುವುದು, ಹೇನು ತೆಗೆಯುವುದು ಮಾಡುತ್ತಿದ್ದರು. ತಲೆ ಮುಟ್ಟಿಸಿಕೊಳ್ಳುವುದು ನನಗೆ ತುಂಬಾ ಇಷ್ಟ. ನನ್ನ ಪುಟ್ಟ ಮಗಳು ಕೇಳಿದ್ದಳು, “ ಅಮ್ಮಾ, ನೀನು ಅವರಿಂದ ನಿನ್ನ ತಲೆ ಮುಟ್ಟಿಸಿಕೊಳ್ಳುತ್ತೀಯಲ್ಲಾ, ನೀನೂ ಅವರ ತಲೆ ಮುಟ್ಟಬಲ್ಲೆಯಾ?” ಅಬ್ಬಾ, ಕಣ್ಣು ತೆರೆಸಿತ್ತು ಈ ಪ್ರಶ್ನೆ. ನಿಜವಾಗಿಯೂ ನಾನು ನನ್ನ ತವರು ಮನೆಯಲ್ಲಿ ಮುಟ್ಟುವ ಮುಟ್ಟಿಸಿಕೊಳ್ಳುವ ಮಟ್ಟಿಗೆ ಈ ಮಂದಿಯನ್ನು ಮಾಡುತ್ತಿರಲಿಲ್ಲ. ಬಟ್ಟೆ ಬರೆ ವಿನಿಮಯ ಮಾಡಿಕೊಳ್ಳುತ್ತಿರಲಿಲ್ಲ. ಅದೇ ದೇಹ, ಅದೇ ರಕ್ತ – ಈ ಶುದ್ಧ ಅಶುದ್ಧ ಗಲೀಜು ಭಾವ ಎಲ್ಲಿಂದ ಬರುತ್ತದೋ ನನಗೆ ಅರ್ಥವಾಗುತ್ತಿಲ್ಲ. (ಗಂಡನಿಂದ ಮಾತ್ರ ಮುಟ್ಟಿಸಿಕೊಳ್ಳುತ್ತಿದ್ದೆ, ಅದಕ್ಕೆ ಜಾತಿ, ಧರ್ಮ ಯಾವುದರ ಹಂಗಿಲ್ಲವಲಾ ್ಲ! )
ಭಾಷೆ ಉಚ್ಛಾರ ಇತ್ಯಾದಿ:
ಮದುವೆ ಆಗಿ ಕೆಲಕಾಲ ನನಗೆ ನನ್ನ ಮಾತೃಭಾಷೆ ಹವ್ಯಕ ಮಾತಾಡಲು ಸಿಗುತ್ತಿರಲಿಲ್ಲ. ಮಗು ಹುಟ್ಟಿದಾಗ, ನನ್ನ ಬಾಯಲ್ಲಿ ಬಂದದ್ದೇ ಹವ್ಯಕ. ಮಕ್ಕಳಿಬ್ಬರೂ ನನ್ನ ಜೊತೆ ಹವ್ಯಕ ಮಾತಾಡುವಂತಾಗಿದೆ. ಇದು ತುಳು ಭಾಷೆಯನ್ನು ಪ್ರಜ್ಞಾ ಪೂರ್ವಕವಾಗಿ ದೂರ ಮಾಡಿದ್ದು ಅಲ್ಲವಾದರೂ ತುಳು ಭಾಷೆಗೆ ನಾನು ಅಂತಹ ಮಹತ್ವ ಕೊಟ್ಟಿರಲಿಲ್ಲ ಅಂತ ಅನಿಸುತ್ತದೆ.
ಉಚ್ಛಾರ ಸರಿಪಡಿಸುವ ಒಂದು ಗೀಳು ನನಗಿತ್ತು. ಕ್ರತಿ ಅಲ್ಲ ಕೃತಿ ಅಂತ ಹೇಳಿಸುವುದು, ಸಿಕ್ಕ ಸಿಕ್ಕ ಸಮಯದಲ್ಲಿ ಬಿಡದೆ ತಿದ್ದುತ್ತಿದ್ದೆ. ಇದಕ್ಕೆ ಸಂಬಂಧಿಸಿಯೂ ಒಂದು ತಮಾಷೆ ನಡೆಯಿತು. ನಮ್ಮ ಪಕ್ಕದ ಮನೆಗೆ ಯಾರೋ ಬಂದವರನ್ನು ತೋರಿಸಿ ನನ್ನ ನಾದಿನಿ , “ಅಲ್ಲಿ ನೋಡಿ ಅವರು ಇಸರಣ್ಣೆ “ ಅಂತ ತುಳುವಿನಲ್ಲಿ ಹೇಳಿದಳು. ಮತ್ತೊಂದು ಸಾರಿ ಅವರು ಬಂದಾಗ ನಾನು ಅವಳಿಗೆ “ನೋಡು ಈಶ್ವರಣ್ಣ ಬಂದಿದ್ದಾರೆ” ಅಂದೆ. ಅವಳು ಅಣಕಿಸುವಂತೆ ನಗುತ್ತಾ “ಈಶ್ವರಣ್ಣ ಅಲ್ಲಕ್ಕಾ, ಅವರು ಇಸರಣ್ಣೆ..” ಅಂದಳು. ಅದು ತುಂಬಾ ಮುಗ್ಧವಾಗಿತ್ತು. ಆದರೆ ನನಗೆ ಏನೋ ಪಾಠ ಕಲಿಸಿತ್ತು.
ಜಾತಿ ಶ್ರೇಣಿಯ ಜಾಲ:
ಗಂಡನ ಊರಿನಲ್ಲಿ ನನ್ನ ಅತ್ತೆಯನ್ನು, ನನ್ನ ಗಂಡನನ್ನು ಏಕವಚನದಲ್ಲಿ ಕರೆಯುವವರು ಕೂಡಾ ನನ್ನನ್ನು ವಾಣಿ ಅಕ್ಕ ಅನ್ನುತ್ತಿದ್ದರು ಮತ್ತು ಬಹುವಚನದಲ್ಲಿಯೇ ಮಾತಾಡಿಸುತ್ತಿದ್ದರು. ಇದನ್ನೂ ನಾನು ನಿರಾಕರಿಸಲು ಹೋಗಿರಲಿಲ್ಲ. ಕೆಲವೇ ಕೆಲವು ಹಿರಿಯ ವ್ಯಕ್ತಿಗಳು ನನ್ನನ್ನು ಹೇಗೆ ಮಾತಾಡಿಸುವುದು ಎಂದು ಮುಜುಗುರ ಪಡುತ್ತಿದ್ದಾಗ ನನ್ನ ಸಂಗಾತಿಯೇ ಅವರ ನೆರವಿಗೆ ಬಂದು ಹೆಸರು ಹೇಳುವುದು, ಏಕವಚನ ರೂಢಿ ಮಾಡಿಸಿದರು. ಇನ್ನು ಕೆಲವರು ಸ್ವಲ್ಪ ಸಲುಗೆ ತೆಗೆದುಕೊಂಡು ನನ್ನನ್ನು ವಾಣಿ ಅಂತ ಕರೆದರೆ ನನ್ನ ಅತ್ತೆ “ಅಬ್ಬಾ ಅವಳ ಸೊಕ್ಕೆ” ಅಂತ ಕಿರಿಕಿರಿ ಮಾಡುತ್ತಿದ್ದರು. ನನ್ನ ಜಾತಿ ಹಿರಿಮೆಯನ್ನು ಕಾಯುವಲ್ಲಿ ಅತ್ತೆ ಕೂಡಾ ಪರೋಕ್ಷವಾಗಿ ಸಹಕರಿಸುವುದು ನೋಡಿದಾಗ ವಿಚಿತ್ರವೆನಿಸಿತ್ತು.
ನಾನು ನನ್ನನ್ನು ಅತ್ತೆ ನೋಡಿಕೊಂಡ ರೀತಿಯನ್ನು ಹೇಳಿಕೊಂಡು ಹೆಮ್ಮೆ ಪಡುವುದು ಇದ್ದೇ ಇತ್ತು. ಇದರ ಬಗ್ಗೆ ನನ್ನ ಮಕ್ಕಳು ಬಹಳ ಮಾರ್ಮಿಕ ಪ್ರಶ್ನೆ ಎತ್ತಿದ್ದರು. “ ಅಮ್ಮಾ, ನಿನ್ನ ಬದಲಿಗೆ ಅಪ್ಪ ತೀರಾ ಕೆಳಜಾತಿ ಅನಿಸಿಕೊಂಡವರನ್ನು ಮದುವೆ ಆಗಿದ್ದರೆ, ಆಗ ಅಜ್ಜಿ ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದರು?” ಯೋಚಿಸಬೇಕಾದ ವಿಚಾರವೇ. ಅವಳಿಗೆ ಹಿಂಸೆ ಅನ್ಯಾಯ ಮಾಡುತ್ತಿರಲಿಲ್ಲ ಅಂತ ಖಂಡಿತವಾಗಿಯೇ ಹೇಳಬಲ್ಲೆ, ಆದರೆ ನನಗೆ ಸಿಕ್ಕಿದ ವಿಶೇಷ ಸ್ಥಾನಮಾನ ಸಿಗುವುದರಲ್ಲಿ ಅನುಮಾನವೇ ಇದೆ.
ಈ ಜಾತಿ ವ್ಯವಸ್ಥೆಯಲ್ಲಿ ಜಾತಿ ಶ್ರೇಣೀಕರಣ ಅನ್ನುವುದು ಅದರ ಒಂದು ವಿಶೇಷ ಜಾಲ ಅನಿಸುತ್ತದೆ ನನಗೆ.
ಮುಟ್ಟು..ಗರ್ಭಿಣಿ..ಬಾಣಂತನ..
ಎಲ್ಲೇ ಹೋಗಲಿ ಪಿತೃಪ್ರಧಾನತೆಯ ಒಂದು ಕಾರುಭಾರು ಕಂಡೇ ಕಾಣುತ್ತೇವೆ, ಸ್ವರೂಪದಲ್ಲಿ ತೀವ್ರತೆಯಲ್ಲಿ ವ್ಯತ್ಯಾಸಗಳು ಇರಬಹುದು ಅಷ್ಟೆ. ಎರಡೂ ಮನೆಗಳಲ್ಲಿ ಮುಟ್ಟು ಅನ್ನುವುದು ಒಂದು ರೀತಿಯಲ್ಲಿ ಅಸ್ಪøಶ್ಯವೇ ಆಗಿತ್ತು. ನಾನು ಬೆಳೆದ ಮನೆಯಲ್ಲಿ ಸ್ವಲ್ಪ ಜೋರಾಗಿಯೇ ಇತ್ತು. ಆದರೆ ಮೊದಲೇ ಹೇಳಿದಂತೆ ಅವನ್ನು ಮನಸ್ಸು ಒಪ್ಪಿಕೊಳ್ಳದ್ದಕ್ಕಾಗಿ ಬಹಳ ಜಾಣತನದಿಂದ ಅವನ್ನು ಆಚರಿಸಿದೆ ಉಳಿದಿದ್ದೆ. ನನ್ನ ಸಂಗಾತಿಯ ಮನೆಯಲ್ಲಿ, ನಾನು ಬರುವ ಮೊದಲೇ ನನ್ನ ಗಂಡ ಈ ಕಟ್ಟುಪಾಡುಗಳನ್ನು ಸ್ವಲ್ಪ ಸಡಿಲಗೊಳಿಸಿದ್ದರು. ಆದರೆ ಮುಟ್ಟಾದಾಗ ದೇವಸ್ಥಾನಕ್ಕೆ ಹೋಗಬಾರದು, ದೇವಿ ಮಹಾತ್ಮೆ ಯಕ್ಷಗಾನ ನೋಡಬಾರದು ಅನ್ನುವ ನಂಬಿಕೆಗಳು ಇದ್ದವು. ಗರ್ಭಿಣಿಯಾದಾಗ ಅದೊಂದು ಭೂತದ ಸ್ಥಾನದ ರಸ್ತೆಯಲ್ಲಿ ನಡೆಯಬಾರದು ಅನ್ನುವ ನಿಯಮಗಳಿದ್ದವು. ಇದೊಂದು ಪ್ರಶ್ನೆ ಮಾತ್ರ ನನ್ನ ಸದಾ ಕಾಡುತ್ತದೆ. ಈ ಪ್ರಜನನ ಕ್ರಿಯೆಗಳ ಮೇಲೆ ಒಂದು ರೀತಿಯ ನಿಯಂತ್ರಣ ಯಾಕೆ ಇದೆ?
ಬಾಣಂತನದ ಅನುಭವ ಮಾತ್ರ ಒಂದು ಬೇರೆಯೇ ರೀತಿಯದು. ನನ್ನ ಮೊದಲ ಬಾಣಂತನ ನನ್ನ ತಾಯಿ ಮಾಡಿದರು. ಒರಿಸ್ಸಾದಲ್ಲಿ ವಾಸವಾಗಿದ್ದ ನನ್ನ ತಮ್ಮನ ಮನೆಯಲ್ಲಿ ನನ್ನ ಮೊದಲ ಬಾಣಂತನ. ಹೇಗೂ ರೀತಿ ನೀತಿ ಎಲ್ಲಾ ಮೀರಿ ಓಡಿಹೋದವಳು, ಇನ್ನು ಬಾಣಂತನದಲ್ಲಿ ಯಾಕೆ ರೀತಿ ನೀತಿ ಅಂತ ನನ್ನ ಅಮ್ಮ ನನ್ನ ಮೇಲೆ ಬಾಣಂತನದ ಯಾವುದೇ ಕಟ್ಟುಪಾಡು ಹಾಕಿರಲಿಲ್ಲ. ನನಗೆ ಬೇಕಾದ ಹಾಗೆ ಇದ್ದೆ. ಅದು ತಿನ್ನ ಬಾರದು ಕುಡಿಯಬಾರದು ಓಡಾಡಬಾರದು..ಏನಿಲ್ಲ. ಅಗತ್ಯದ ವಿಶ್ರಾಂತಿ ತೆಗೆದುಕೊಂಡಿದ್ದೆ, ನಿರಾಳವಾಗಿದ್ದೆ, ಒಂದು ರೀತಿಯಲ್ಲಿ ಆ ಕಾಲಕ್ಕೆ ಅದು ಕ್ರಾಂತಿಕಾರಿ ಬಾಣಂತನವೇ.
ಎರಡನೆಯ ಬಾಣಂತನ ನನ್ನ ಅತ್ತೆ ಮಾಡಿದ್ದರು. ಅದರ ಸುಖ ಏನು ಹೇಳಲಿ. ತರತರಹದ ತಿಂಡಿ ತಿನಸುಗಳು. ಬೆಳ್ಳುಳ್ಳಿಯಲ್ಲಿ ಮಾಡಿದ್ದು, ಸಂಬಾರ ಪದಾರ್ಥಗಳನ್ನು ಹಾಕಿ ಮಾಡಿದ್ದು. ದಿನದಲ್ಲಿ ಎರಡೆರಡು ಬಾರಿ ಇಂತಹು ತಿನ್ನಲಿಕ್ಕೆ. ಮಧ್ಯಾಹ್ನದ ಊಟದ ಜೊತೆ ಬಹಳ ಚೆನ್ನಾಗಿ ಮೊಟ್ಟೆ ಕಾಯಿಸಿ ಕೊಡುತ್ತಿದ್ದರು ಮತ್ತು ಕುಡಿಯಲು ಬಾಣಂತನಕ್ಕಾಗಿಯೇ ತಯಾರಿಸಿದ ಓಮದ ಡ್ರಿಂಕ್ ಕೊಡುತ್ತಿದ್ದರು. ಓಹ್, ಅದು ಕುಡಿದ ಮೇಲೆ ಅದೆಂತಹ ಸುಖ. ನಾನಂತೂ ಫುಲ್ ಖುಶ್. ನಿಗದಿತ ದಿನಕ್ಕೆ ಎರಡು ದಿನಗಳಿಗೆ ಮೊದಲು ಈ ಡ್ರಿಂಕ್ ಮುಗಿದಿತ್ತು. ನನ್ನ ಅತ್ತೆ ,” ವಾಣಿ, ಮುಗಿದಿದೆ, ನಿನಗೆ ಇನ್ನೂ ಬೇಕಾದರೆ ತೊಟ್ಟೆ (ಪ್ಯಾಕೆಟ್ ಸಾರಾಯಿ) ತರಿಸಬೇಕಷ್ಟೆ” ಅಂದರು. ಒಂದು ಕ್ಷಣ ಮನಸ್ಸು ಹಿಂಜರಿಯಿತು. ಆಮೇಲೆ ಸಿಕ್ಕಿದ್ದೇ ಚಾನ್ಸ್, ಯಾಕೆ ಕಳೆದುಕೊಳ್ಳಬೇಕು, ಅನಿಸಿ “ತರಿಸಿಬಿಡಿ” ಅಂದೆ.
ಬಾಣಂತನ ಮುಗಿಸಿ ಏಳುವಾಗ ನಾನು ಸುಖ ಸಂಭ್ರಮದಿಂದ ಬೀಗಿಹೋಗಿದ್ದೆ. ಹೊಸಚೇತನವೇ ತುಂಬಿದ ಹಾಗೆ. ಮೂರನೆಯ ಬಾಣಂತನ ಏನಾದರೂ ಇದ್ದಿದ್ದರೆ ಅಮ್ಮನ ಬಳಿ ಹೋಗುತ್ತಿರಲಿಲ್ಲ. ಅಷ್ಟೆ.
ಅವಮಾನದ ಅನುಭವ:
ಜಾತಿ ಮತ್ತು ಬಡತನಕ್ಕಾಗಿ ಅವಮಾನ ಅನುಭವಿಸಿದ ಅದನ್ನು ಬಹಳ ಗಟ್ಟಿಯಾಗಿ ನಿಭಾಯಿಸಿದ ಅದೆಷ್ಟೋ ಘಟನೆಗಳನ್ನು ನನ್ನ ಸಂಗಾತಿ ಹೇಳುತ್ತಿದ್ದರು. ಅವೆಲ್ಲವೂ ನನಗೆ ತಾರತಮ್ಯದ ಚಿತ್ರಣ ನೀಡುತ್ತಿದ್ದವು. ಬಡತನದ ಅನುಭವ ಕೂಡಾ ಜಾತಿ ಆಧಾರದ ಮೇಲೆ ಬೇರೆ ಬೇರೆ ಇರುತ್ತದೆ ಅನ್ನುವುದು ಅರ್ಥವಾಗಿತ್ತು. ನನ್ನ ಅಜ್ಜಿ ಮನೆ ಕೂಡಾ ಬಹಳ ಶ್ರೀಮಂತಿಕೆಯಿಂದ ಕೂಡಿರಲಿಲ್ಲ. ಆದರೆ ಸಾಮಾಜಿಕ ಸ್ಥಾನಮಾನ ಖಂಡಿತವಾಗಿ ಬಡತನದಿಂದ ಕೂಡಿರಲಿಲ್ಲ. ಜಾತಿಯ ಹೆಸರಿನಲ್ಲಿ ನನ್ನ ಮಕ್ಕಳು ಕೂಡಾ ತಾರತಮ್ಯವನ್ನು ಅನುಭವಿಸಿದ್ದು ಸಂಕಟ ಪಟ್ಟಿದ್ದು ಇದೆ. ಅವರೂ ಕೂಡಾ ಅದರಿಂದ ಹೆಚ್ಚು ಕಂಗೆಡದೆ ಆ ನಿಟ್ಟಿನಲ್ಲಿ ಗಟ್ಟಿಯಾದ ಚಿಂತನೆ ಬೆಳೆಸಿಕೊಳ್ಳುತ್ತಿದ್ದಾರೆ.
ಕೊನೆಯ ಮಾತು:
ಒಂದು ಇಂತಹ ಮದುವೆ ಸಾಮಾಜಿಕವಾಗಿ ಒಂದು ಸಾಧನೆ ಅಂತ ಅಂದುಕೊಳ್ಳುತ್ತೇವೆ. ಆದರೆ ಒಂದು ಮದುವೆ ಆಗುತ್ತಿದ್ದಂತೆಯೇ ಇತರರು ಈ ದಾರಿ ತುಳಿಯದಂತೆ ಭದ್ರವಾದ ಕೋಟೆ ನಿರ್ಮಾಣವಾಗುತ್ತದೆ. ಒಂದಾಯಿತಲ್ಲ ಇನ್ನೇನು ಇನ್ನೊಂದಾದರೆ ಅನ್ನುವ ಭಾವನೆ ಹುಟ್ಟುವುದಿಲ್ಲ. ನನ್ನ ಎರಡೂ ಕುಟುಂಬಗಳಲ್ಲಿ ಇಂತಹ ಮದುವೆಗಳು ಸುಲಭವಾಗಿ ಆಗುವ ಹಾಗೆ ಕಾಣುವುದಿಲ್ಲ.
ನಾನು ತರಬೇತಿಗಳನ್ನು ಮಾಡುವಾಗ, ಒಂದು ಚರ್ಚೆ ಎತ್ತಿಕೊಳ್ಳುತ್ತೇನೆ. ಪ್ರತಿಯೊಬ್ಬರೂ ತಾವು ಅನುಭವಿಸಿದ ಒಂದು ತಾರತಮ್ಯ ಮತ್ತು ತಾವು ಎಸಗಿದ ಒಂದು ತಾರತಮ್ಯದ ವಿಚಾರ ಹೇಳಬೇಕು. ತಾವು ಅನುಭವಿಸಿದ್ದನ್ನು ಹೇಳಲು ಹೆಚ್ಚು ಕಷ್ಟ ಆಗುವುದಿಲ್ಲ. ಆದರೆ ತಾವು ಎಸಗಿದ್ದನ್ನು ಹೇಳಬೇಕೆಂದರೆ ಕಷ್ಟ ಅನಿಸುತ್ತದೆ. ಈ ಜಾತಿ ಶ್ರೇಣಿಯ ಕತೆಯಲ್ಲೂ ಇದೇ ಅಂಶ ಇದೆ. ತಾರತಮ್ಯ ಅನುಭವಿಸುತ್ತಾರೆ, ಅದರ ನೋವು ಅನುಭವಿಸುತ್ತಾರೆ ಆದರೆ ತಮ್ಮ ಕೆಳಗಿನ ಸಮುದಾಯದ ಮೇಲೆ ತಾರತಮ್ಯ ಎಸಗುತ್ತಾರೆ. ಇದರ ಅರಿವು ಬಹಳ ಮುಖ್ಯ. ಇದು ಎಲ್ಲಾದರೂ ಒಂದು ಕಡೆ ನಿಲ್ಲಬೇಕು.
ಸಮಾನತೆ ಸುಲಭವಲ್ಲ ಅಂತ ಕಂಡುಕೊಂಡೆ, ಆದರೆ ಸಮಾನತೆಯ ಸೊಗಸು ಕಂಡುಕೊಂಡರೆ ಅದಕ್ಕೆ ಮೀರಿದ ಬದುಕಿಲ್ಲ ಅಂತ ಅನಿಸಿದೆ.
ನನ್ನ ಮಗಳು ಪುಟ್ಟ ಹುಡುಗಿಯಾಗಿರುವಾಗ, “ ಅಮ್ಮಾ, ನಾನು ಬ್ರಾಹ್ಮಣಳೇ ಅಥವಾ ಶೂದ್ರಳೇ” ಅಂತ ಕೇಳಿದ್ದಳು. ಅಷ್ಟು ಸಣ್ಣದಕ್ಕೆ ಏನು ಹೇಳುವುದು. ಆದರೂ ,” ನೀನು ಬೇಕೆಂದರೂ ಬ್ರಾಹ್ಮಣರು ನಿನ್ನ ಅವರ ಜಾತಿಗೆ ಒಪ್ಪಿಕೊಳ್ಳಲ್ಲ, “ ಅಂದೆ. ಜೊತೆಗೇ, “ಮಗಳೇ, ಬ್ರಾಹ್ಮಣಳಾದರೆ ಮೀನು ತಿನ್ನುವುದಕ್ಕೆ ಆಗುವುದಿಲ್ಲ” ಅಂದೆ. “ಬೇಡಪ್ಪಾ, ನಾನು ಶೂದ್ರಳೇ,” ಅಂತ ಒಪ್ಪಿಕೊಂಡಳು. ಮೇಲು ಕೀಳಿನ ಹಂಗಿಲ್ಲದಿದ್ದರೆ ಎಲ್ಲಾ ಸಮುದಾಯದ ಸೊಗಸುಗಳನ್ನು ಹಂಚಿಕೊಳ್ಳುವ ಕದ ತೆರೆದೀತು.
ವಾಣಿ ಪೆರಿಯೋಡಿ

ನಾನು ನನ್ನ ಒಳಗೆ ಒಂದು ಹುಡುಕಾಟ ಪ್ರಾರಂಭಿಸಿದ್ದೆ, ಅದಕ್ಕೆ ಇಲ್ಲಿ ಒಂದು ಅವಕಾಶ ಸಿಕ್ಕಿತು.
ಶ್ರೇಣೀಕರಣದ ವ್ಯಸನ
ಮೇಲುಜಾತಿ ಎನಿಸಿಕೊಂಡವರು, ತಮ್ಮ ಪೊಳ್ಳು ಹಿರಿಮೆಯಿಂದ ಹೊರ ಬರಬೇಕು ಅಂತೆಯೇ ಕೆಳಜಾತಿ ಎನಿಸಿಕೊಂಡವರು ತಮ್ಮ ಕೀಳರಿಮೆಯಿಂದ ಹೊರಬರಬೇಕು.
ಅಂತರ ಜಾತಿ ಮದುವೆ ಜಾತ ವಿನಾಶದತ್ತ ಮಹಾ ಹೆಜ್ಜೆ ಎಂಬ ಸಂಪೂರ್ಣ ನಂಬಿಕೆ ಇದೆ ನನಗೆ. ಅದರ ಜೊತೆಗೆ ಇದೊಂದೆ ಸಾಕಾಗುವುದಿಲ್ಲ, ಇಂತಹ ಮದುವೆಗಳು ನಡೆಯದಂತೆ ಅದೆಷ್ಟು ಶಕ್ತಿಗಳು ಕೆಲಸ ಮಾಡುತ್ತವೆ ಎಂಬುದನ್ನೂ ನಾನು ಕಂಡಿದ್ದೇನೆ. ನನ್ನ ಮದುವೆ ಆದಮೇಲೆ, ನಮ್ಮ ಕುಟುಂಬದಲ್ಲಿ ಎಲ್ಲಾ ಹೆಣ್ಣು ಮಕ್ಕಳನ್ನೂ 20ರ ಹೊತ್ತಿಗೆ ಮದುವೆ ಮಾಡಿ ಆಗಿತ್ತು. ಯಾರೂ ನಾನು ತುಳಿದ ಹಾದಿ ತುಳಿಯದಂತೆ ವ್ಯವಸ್ಥೆ ಆಗಿತ್ತು.
ತುಪ್ಪ ಶೂದ್ರರು ಮಾಡಿದರೆ ಕಸಂಟು ವಾಸನೆ ಬರುತ್ತದೆ, ಅಬ್ಬಾ ಅದೆಷ್ಟು ಸಮಯ ಶೂದ್ರರ ಮನೆಯ ತುಪ್ಪ ತಿನ್ನದೆ ಕಾಲ ಕಳೆದಿದ್ದೆ.
ಆಹಾರ ಪದ್ಧತಿಯಲ್ಲಿ ಶ್ರೇಣಿ
ವಸತಿ
ಗಲೀಜು, ಅಶುದ್ಧತೆಯ ಭಾವನೆ..

Please follow and like us:
error

Leave a Reply

error: Content is protected !!