fbpx

ಕ್ವಾರಂಟೈನ್ ಕೇಂದ್ರದಿಂದ ಬಂದ ಪತ್ರ..ತಪ್ಪದೆ ಓದಿ

ಕ್ಷಮೆ ಇರಲಿ ಬಂಧುಗಳೇ,
ಆಗಾಗ ನೀವು ಮುಟ್ಟಿಸಿಕೊಂಡರೆ ಗಂಟೇನು ಹೋಗುತ್ತದೆ’ ಎಂದು ಹೇಳುತ್ತಿದ್ದೀರಿ. ಆದರೆ ನಾನು ಕೇಳಿಸಿಕೊಳ್ಳಲಿಲ್ಲ. ಈಗ ಒಂದು ರೋಗದ ಕಾರಣದಿಂದಾಗಿ ನಿಮ್ಮ ನೋವಿನ ಸಂಕಟದ ಪರಿಚಯ ನನಗೆ ಆಗುತ್ತಿದೆ. ಕೋಟಿಗಟ್ಟಲೆ ಸಂಪತ್ತು ಇರುವ ಸಾಹುಕಾರ ನಾನು. ಕಾರು, ಬಂಗಲೆ, ಹೆಂಡತಿ-ಮಕ್ಕಳು ಬಂಧು-ಬಳಗ ಎಲ್ಲಾ ಇದ್ದಾರೆ. ಆದರೆ ನನ್ನನ್ನು ಯಾರೂ ಮುಟ್ಟುತ್ತಿಲ್ಲ ಮಾತನಾಡಿಸುತ್ತಿಲ್ಲ ನನ್ನನ್ನು ಅಸ್ಪೃಶ್ಯ ನನ್ನಾಗಿ ನೋಡುತ್ತಿದ್ದಾರೆ. ಬರೀ 15 ದಿನಗಳ ಕ್ವಾರಂಟೈನ್ ಕಾರಣದಿಂದಾಗಿ ಸಾವಿರಾರು ವರ್ಷಗಳಿಂದ ನಿಮ್ಮನ್ನು ಮುಟ್ಟಿಸಿಕೊಳ್ಳದವರನ್ನಾಗಿಸಿದ ಅಸ್ಪೃಶ್ಯತೆಯ ಸಂಕಟ ಏನೆಂದು ನನಗೀಗ ಅರ್ಥವಾಯಿತು… ಅದು ಹೇಗೆ ಸಹಿಸಿಕೊಂಡಿರಿ ಇಷ್ಟೊಂದು ಅಪಮಾನವನ್ನು. ಯಾರು ಮಾಡಿದರು ಈ ಅಸಹ್ಯವನ್ನು. ಭೂಮಿಯ ಮೇಲೆ ಹುಟ್ಟಿದ ನಮ್ಮನ್ನು ಹೆಚ್ಚುಕಮ್ಮಿ ಎಂದು ಮಾಡಿ, ಗಾಳಿ ನೀರು ನೆಲ ಸಂಪತ್ತನ್ನು ಸಮನಾಗಿ ಹಂಚಿಕೊಳ್ಳಬೇಕಾದ ನಮ್ಮ ಹುಟ್ಟಿಗೆ ಕಳಂಕ ಹಚ್ಚಿದವರು ಯಾರೆಂದು ನನಗೆ ತಿಳಿಯದು..
ಮನುಷ್ಯನ ಜೊತೆ ಮನುಷ್ಯನು ಇಷ್ಟೊಂದು ನಿಕೃಷ್ಟವಾಗಿ ನಡೆದುಕೊಂಡಿದ್ದಾದರೂ ಹೇಗೆ?. ಹೋಟೆಲಿನಲ್ಲಿ ಚಹಾ ನೀರು ಎತ್ತಿ ಹಾಕಿದೆವು, ಊರೊಳಗಿನ ಓಣಿಗೆ ಬರಲು ವೀಸಾ ನೀಡಲಿಲ್ಲ, ಮುಖ ನೋಡಲಿಲ್ಲ, ಮುಟ್ಟಿಸಿಕೊಳ್ಳಲಿಲ್ಲ, ನಿಮ್ಮ ನೆರಳನ್ನೂ ಮುಟ್ಟದೆ, ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲೇ ಇಲ್ಲ. ಆದ್ದರಿಂದು ನನ್ನನ್ನು ನನ್ನ ರಕ್ತ ಹಂಚಿಕೊಂಡು ಹುಟ್ಟಿದವರು ಚಹಾ ನೀರು ನೀಡುತ್ತಿಲ್ಲ. ಮುಟ್ಟಿಸಿ ಕೊಳ್ಳುತ್ತಿಲ್ಲ. ಮುಖವಿಟ್ಟು ಮಾತನಾಡುತ್ತಿಲ್ಲ. ನಾನು ಮುಟ್ಟಿದ ನೀರು ವಸ್ತುಗಳು ಮಲಿನವಾಯಿತು ಎಂದು ತಿಕ್ಕಿ-ತಿಕ್ಕಿ ತೊಳೆಯುತ್ತಿದ್ದಾರೆ. ಹಿಂದಿನಿಂದಲೂ ನಮ್ಮ ಪರಂಪರೆಯಲ್ಲಿ ನಿಮ್ಮನ್ನು ಈಗಿರುವ ನನ್ನಂತೆ ನಡೆಸಿಕೊಳ್ಳಲಾಗುತ್ತಿದೆ ಅಲ್ಲವೇ?. ಆಗ ಈ ಸಾಮಾಜಿಕ ಅಂತರ ಎಷ್ಟು ಕಷ್ಟವೆಂದು ನನಗೆ ಮತ್ತು ನಮ್ಮ ಪರಂಪರೆಗೆ ಯಾಕೆ ಅರ್ಥವಾಗಲಿಲ್ಲ. ಅಯ್ಯೋ ನನ್ನ ಪ್ರೀತಿಯ ಬಂಧುಗಳೇ ಅಷ್ಟೊಂದು ಕಾಲದಿಂದ ಅದು ಹೇಗೆ ಸಹಿಸಿಕೊಂಡು ಬದುಕಿದಿರೆ ಈ ಭೂಮಿಯ ಮೇಲೆ. ನನಗೆ ಬರೀ 15 ದಿನಗಳು 15 ಶತಮಾನಗಳನ್ನು ಕಣ್ಣಮುಂದೆ ತಂದು ನಿಲ್ಲಿಸಿವೆ. ಅಂದು ನೀವು ನಡೆದುಹೋದ ನೆಲವನ್ನು ತೊಳೆದ ನೆನಪಾಯಿತು ನನಗೆ. ಈಗ ನಾ ನಡೆದ ನೆಲವನ್ನು ಮುಟ್ಟದಂತೆ ನನ್ನ ಓಣಿಯನ್ನು ಊರನ್ನು ಮುಚ್ಚಿದ್ದಾರೆ. ಹುಟ್ಟಿದ ಮನೆಗೆ ಅಸ್ಪೃಶ್ಯತೆಯ ಭಯಂಕರ ಪಿಡುಗನ್ನು ಬಳಿದಿದ್ದಾರೆ. ಅಲ್ಲದೆ ನನ್ನನ್ನು ನನ್ನ ಹುಟ್ಟಿದ ಮಕ್ಕಳೂ ಮುಟ್ಟುತ್ತಿಲ್ಲ. ಹೊರಗಿಟ್ಟ ದಿನಗಳ ಸಂಕಟ ಹೇಗೆ ಹೇಳಲಿ ನಾನು…
ನನ್ನ ಜೊತೆಗೆ ಬಂಧನದಲ್ಲಿದ್ದು ರೋಗ ಹಂಚಿಕೊಂಡು ಸತ್ತ ನನ್ನ ಗೆಳೆಯನ ಹೆಣ ಹೂಳಲು ಜಾಗ ನೀಡಲಿಲ್ಲ. ಸ್ಮಶಾನಗಳು ಖಾಲಿ ಇಲ್ಲವಂತೆ. ಸತ್ತಾಗ ನಮ್ಮ ಸ್ಮಶಾನಗಳೂ ನಮ್ಮಿಂದ ಭಯ ಪಟ್ಟುಕೊಂಡವೇಕೆ?. ಸತ್ತ ನನ್ನ ಗೆಳೆಯನ ಹೆಣ ಎತ್ತಲೂ ಯಾರೂ ಮುಂದೆ ಬರುತ್ತಿಲ್ಲ.. ಯಾರು ಮುಟ್ಟಿಸಿಕೊಳ್ಳದ ಅನಾಥ ಹೆಣವಾಗಿದ್ದಾನೆ ಅವನು. ಕಾಲ ಕಾಲದಿಂದಲೂ ನಿಮ್ಮನ್ನು ಪ್ರಾಣಿಗಳಿಗಿಂತಲೂ ಹೀನಾಯವಾಗಿಸಿದ ನಿಮ್ಮ ಸಂಕಟ ಏನೆಂದು ನನಗೀಗ ಅರ್ಥವಾಗುತ್ತಿದೆ. ನನ್ನ ಗೆಳೆಯನ ಉಪಚರಿಸಿದ ವೈದ್ಯನಿಗೂ ರೋಗದ ಸಂಚಾರವಾಯಿತಂತೆ. ವೈದ್ಯ ಸತ್ತು ಸ್ಮಶಾನಕ್ಕೆ ಹೋದಾಗ ಸ್ಮಶಾನವು ಆತನಿಗೆ ಜಾಗ ನೀಡದೆ ನಿರಾಕರಿಸಿದಂತೆ. ಪ್ರಾಣ ನೀಡಿದ ವೈದ್ಯರಿಗೂ ಈ ಗತಿಯಾದರೆ ನನ್ನಂಥವನ ಪಾಡೇನು. ಈ ಸಂಗತಿ ನನ್ನನ್ನು ಬಹುವಾಗಿ ಕಾಡಿದೆ. ಈಗಲೂ ಕೇರಿಗಳಲ್ಲಿ ಮುಟ್ಟಿಸಿಕೊಳ್ಳದ ದೂರ ಇಟ್ಟ ಇಂದಿನ ಸ್ಥಿತಿಯೇ ಅಸಹ್ಯವಾಗಿ ಇರುವಾಗ ಸಾವಿರಾರು ವರ್ಷಗಳ ಹಿಂದಿನ ಕಥೆಯನ್ನು ನೆನೆಯುತ್ತಿದ್ದರೆ ಸಂಕಟವಾಗುತ್ತಿದೆ. ಸಾವಿರ ಚೇಳು ಕುಟುಕಿದಷ್ಟು ನೋವಾಗುತ್ತಿದೆ ಬಂಧುಗಳೇ….
ಸಾವಿರಾರು ವರ್ಷಗಳಿಂದ ಸಾಮಾಜಿಕ ಅಂತರವ ನಿರ್ಮಿಸಿ ಗೋಡೆ ಕಟ್ಟಿದ ಸಮಾಜದಲ್ಲಿ ನಾವಿರುವುದರಿಂದ ಯಾರ ಮುಖದಲ್ಲಿನ ಕಷ್ಟಗಳು ಸಂಕಟಗಳು ಯಾರಿಗೂ ಅರ್ಥವಾಗುತ್ತಿಲ್ಲ.. ಜಾತಿಯ ಹೆಸರಿನ ಸ್ಮಶಾನಗಳ ನಿರ್ಮಿಸಿ ಸತ್ತನಂತರವೂ ಜಾತಿ ಆಚರಿಸಿದ ನನ್ನ ಮೇಲೆ ನನಗೆ ಅಸಹ್ಯ ಅನಿಸುತ್ತಿದೆ.. ಬಡಜೀವಿ ಶಾಸ್ತ್ರಜ್ಞರನ್ನು, ಉತ್ಪತ್ತಿ ಸೈನಿಕರನ್ನು, ಸಾಮಾಜಿಕ ವೈದ್ಯರುಗಳನ್ನು, ಅಜ್ಞಾತ ಇಂಜಿನಿಯರುಗಳನ್ನು, ಸಾಮಾಜಿಕ ಸ್ಮಗ್ಲರುಗಳು, ಧರ್ಮ ನಿಯಂತ್ರಕರು ಮತ್ತು ಪರಂಪರೆಯೊಳಗಿನ ಸೋಕಾಲ್ಡ್ ಬುದ್ಧಿಜೀವಿ ಗುಂಡಾಗಳು ಸೇರಿ ಜಾತಿ ಹೆಸರಿನಲ್ಲಿ ವಿಭಜಿಸಿ ವಂಚಿಸಿದ ಬಗೆಯನ್ನು ಗೆಳೆಯ ಜಾಜಿ ಹೇಳುತ್ತಿದ್ದರೂ ನಾನು ಕೇಳಿಸಿಕೊಳ್ಳಲಿಲ್ಲ. ಬದಲಾಗಿ ಈಗ ಎಲ್ಲಿ ಸರ್ ಇದು ಎಂದು ಹಾರಿಕೆ ಉತ್ತರ ನೀಡಿದ್ದೆ. ಈಗ ಅದು ಸತ್ಯವಾಗಿದೆ. ಸ್ಮಶಾನದಲ್ಲಿನ ಬೋರ್ಡಗಳ ನೋಡಿದರೆ ಸಾಕು ಸತ್ತಾಗಲೂ ಜಾತಿ ಆಚರಿಸುವ ಅನೀತಿ ನಮಗರಿಯದಂತೆ ಸಮಾಜದೊಳಗೆ ಎಷ್ಟೊಂದು ಬೆರೆತಿದೆ…
ಉಳಿಯಲು ಊರ ಹೊರಗಿಟ್ಟು, ಹಸಿವಿಗಾಗಿ ಸತ್ತ ದನವನ್ನು ಕಿತ್ತು ತಿಂದ ನಿಮ್ಮ ನೋವಿನ ಚಿತ್ರಗಳು ಕಣ್ಣಮುಂದೆ ಬಂದು ನನ್ನನ್ನು ಅಣಕಿಸುತ್ತಿವೆ. ದೇವರನ್ನು ನಂಬಿಸಿ ಪಾಪದ ಫಲ ನಿಮ್ಮ ಬದುಕು ಎಂದು ಆರೋಪಿಸಿದ ಆ ನಂಬಿಕೆಯ ಜಾಗಗಳಿಗೆ ಬೀಗಮುದ್ರೆ ಹಾಕಿದೆ. ಮತ್ತೆ ಮುಟ್ಟಿ ಬಂದ ನಂತರ ಕೈತೊಳೆ ಬೇಕಾಗಿದೆ.. ಯಾವಾಗಲು ದೇವರು ಒಳ್ಳೆಯದನ್ನು ಮಾತ್ರ ಮಾಡುತ್ತಾನೆ ಎಂದಾದರೆ ಸಾವಿರಾರು ವರ್ಷ ನಿಮಗೆ ಒಳ್ಳೆಯದನ್ನು ಯಾಕೆ ಮಾಡಲಿಲ್ಲ. ಒಳ್ಳೆಯದನ್ನು ಮಾಡುವವನಿಗೂ ಈ ರೋಗವೇಕೆ ತಗುಲಿತು. ದೇವರನ್ನು ಸೃಷ್ಟಿಸಿದ ಸೋಕಾಲ್ಡ್ ಬುದ್ಧಿವಂತರೇ ನಿಮ್ಮ ದೇವರಗುಡಿಗೆ ಬೀಗ ಜಡಿದ ಆ ರೋಗದ ಕುರಿತು ಯಾಕೆ ಮಾತಾಡುತ್ತಿಲ್ಲ.. ಬರೀ ಕಲ್ಪನೆ ನಂಬಿಕೆಗಳ ಮೇಲೆ ಸಮಾಜವ ಕಟ್ಟಿ ನಿಮ್ಮನ್ನು ದೂರವಿಟ್ಟ ಪರಂಪರೆಗೆ ನನ್ನ ಧಿಕ್ಕಾರವಿರಲಿ..
ಮುಟ್ಟಿಸಿಕೊಂಡರೆ ಏನು ಆಗಲ್ಲ ಎಂಬ ಸತ್ಯ ಇಷ್ಟು ದಿನಗಳ ಕಾಲ ಯಾಕೆ ಮುಚ್ಚಿಟ್ಟರು. ತಿಳಿಯದು ಬಂಧುಗಳೇ. ಆದರೆ ಅದರ ಸಂಕಟ ನನಗೆ ಅರ್ಥವಾಗುತ್ತಿದೆ. ಮುಟ್ಟಿಸಿಕೊಳ್ಳದ ಅವರ ಕಷ್ಟ ಏನೆಂದು ನೀವಾದರೂ ಅರ್ಥ ಮಾಡಿಸಲಿಲ್ಲ. ಅರ್ಥಮಾಡಿಸಲು ನೀವು ಹತ್ತಿರ ಬಂದಾಗ ನಿಮ್ಮನ್ನು ಸೇರಲಿಲ್ಲ. ಒಂದೇ ಒಂದು ತಿನ್ನುವ ಕಾಳನ್ನು ಸೃಷ್ಟಿಮಾಡದ, ಗುಲಗಂಜಿಯಷ್ಟು ಬೆವರು ಸುರಿಸದವರ ಮಾತು ಮತ್ತು ಅವರ ಕಾಲ್ಪನಿಕ ಪುಸ್ತಕಗಳು ನಮ್ಮನ್ನು ಬೇರ್ಪಡಿಸಿ ಅಂತರ ಸೃಷ್ಟಿಸಿ ಕತ್ತಲಲ್ಲಿಟ್ಟವು. ಈಗ ಅವೇ ಪುಸ್ತಕಗಳನ್ನು ಮುಟ್ಟಿ ಕೈತೊಳೆಯಬೇಕಾದ ದುರ್ದಿನ ಬಂದಿದೆ. ಈಗ ಸತ್ಯದ ಅರಿವಾಗಿದೆ. ಸುಳ್ಳುಗಳನ್ನು ನಂಬಿಸಿ ಕೊರಳಿಗೆ ಹಾಕಿ ನಮ್ಮನ್ನು ಕತ್ತಲಲ್ಲಿಟ್ಟು ನಿಮ್ಮನ್ನು ಹೊರಗಿಟ್ಟು ಮುಟ್ಟಿಸಿಕೊಳ್ಳದಂತೆ ಮಾಡಿದವರಿಗೆ ಬುದ್ಧ ಕರುಣೆ ತೋರಲಿ.. ನಿಮ್ಮನ್ನು ಇಷ್ಟು ವರ್ಷ ಮುಟ್ಟಿಸಿಕೊಳ್ಳದ ನನ್ನ ಪರಂಪರೆಯನ್ನು ಕ್ಷಮಿಸಿಬಿಡಿ ಬಂಧುಗಳೇ. ನಾವೀಗ ನಿಮ್ಮ ನೋವನ್ನು ಅನುಭವಿಸುತ್ತಿದ್ದೇವೆ. ಅಂತಹ ಸಾಮಾಜಿಕ ಮೌಢ್ಯ ಅರಿಯಲು ಕಾರಣವಾದ, ನನ್ನಿಂದ ನನ್ನ ಬಂಧುಗಳ ದೂರ ಮಾಡಿ ಸತ್ಯ ಅರಿಯಲು ಕಾರಣವಾದ ಕೊರೋನಾ ಎಂಬ ರೋಗಕ್ಕೆ ಧನ್ಯವಾದಗಳ ಹೇಳಲೇಬೇಕು. ಅದೇ ಕೊರೋನಾಗೆ ನನ್ನ ವಿನಂತಿ ಇಷ್ಟೇ ಕರುಣೆ ತೋರು. ನಿನ್ನ ಜೊತೆ ಬದುಕುವುದನ್ನು ನಾವು ಕಲಿಯಲು ಇನ್ನಷ್ಟು ಸಮಯ ಕೊಡು. ನಾವು ಅಪಮಾನಿಸಿದ ನನ್ನ ಬಂಧುಗಳ ಸಂಕಟವನ್ನು ನಮಗೂ ಸ್ವಲ್ಪ ಅನುಭವಿಸಲು ಬಿಡು. ಪ್ರಾಯಶ್ಚಿತ್ತವಿಲ್ಲದೆ ಬೇರೆ ಮಾತಿಲ್ಲ….

ಇಂತಿ ನಿಮ್ಮ

ಜಾತಿ, ಮೇಲು ಕೀಳು ಎಂಬ ಸಂಕಟ ನೀಡಿ ಅಪಮಾನಿಸಿದ ಬಂಧು ಕರೋನ ವೈರಸ್ ಸೋಂಕಿತ

#ರಮೇಶ #ಗಬ್ಬೂರ್

Please follow and like us:
error
error: Content is protected !!